ಅರ್ಧಬಂರ್ಧ ದಾಖಲೆಗಳನ್ನು ತೋರಿಸುವುದು, ಕುಟುಂಬದವರ ಮೇಲೆ ಒತ್ತಡ ಹೇರಿ ಹೇಳಿಕೆ ಕೊಡಿಸುವ ಮೂಲಕ ಬಿಜೆಪಿ- ಜೆಡಿಎಸ್ ಪಕ್ಷಗಳು ಸೋಲಿನ ಹತಾಶೆಯಿಂದ ನನ್ನ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 40 ವರ್ಷ ಮಂತ್ರಿಯಾಗಿ ಸೇವೆ ಸಲ್ಲಿಸಿರುವ ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ. ನನ್ನ ಜೀವನ ತೆರೆದ ಪುಸ್ತಕವಾಗಿದೆ. ಆದರೂ ಮುಡಾ ಅಕ್ರಮ ನಡೆದಿದೆ ಎಂದು ಸುಳ್ಳು ದಾಖಲೆಗಳನ್ನು ತೋರಿಸಿ ನನ್ನ ತೇಜೋವಧೆಗೆ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮುಡಾದಲ್ಲಿ ನನ್ನ ಕುಟುಂಬ ಯಾವುದೇ ಅಡ್ಡ ಮಾರ್ಗದಿಂದ ಜಾಗ ಪಡೆದಿಲ್ಲ. ಅದರಲ್ಲೂ ಬಿಜೆಪಿ ಸರ್ಕಾರ ಇದ್ದಾಗ ಮಂಜೂರಾದ ಸೈಟ್ ಅದು. ಆಗ ಮೈಸೂರಿನಲ್ಲಿ ರಾಮದಾಸ್, ನಾಗೇಂದ್ರ ಮತ್ತು ಜಿಟಿ ದೇವೇಗೌಡ ಶಾಸಕರಾಗಿದ್ದರಲ್ಲಾ ಅವರು ಏನು ಮಾಡುತ್ತಿದ್ದರು? ಯಾವುದೇ ದಾಖಲೆ ಸಾಬೀತುಪಡಿಸಲು ಆಗಿಲ್ಲ ಅಂತ ಈಗ ದಲಿತರ ಜಮೀನು ಅಂತ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮುಡಾ ಅಕ್ರಮ ಕುರಿತ ಆರೋಪಗಳ ಕುರಿತು ಸಂಪೂರ್ಣ ದಾಖಲೆಗಳನ್ನು ಮಾಧ್ಯಮಗಳ ಮುಂದಿರಿಸಿದ ಸಿದ್ದರಾಮಯ್ಯ ದಲಿತರಿಗೆ ಇದು ಸರ್ಕಾರದಿಂದ ಮಂಜೂರಾದ ಜಮೀನು ಅಲ್ಲ. ಹರಾಜಿನಲ್ಲಿ ದಲಿತ ವ್ಯಕ್ತಿ ಖರೀದಿಸಿದ ಜಮೀನು. ಅವರ ಮೂಲಕ ಸಕ್ರಮವಾಗಿ ಹಸ್ತಾಂತರವಾಗಿದೆಯೇ ಹೊರತು ಅಕ್ರಮವಾಗಿ ಅಲ್ಲ ಎಂದು ಅವರು ವಿವರಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಸೋಲು ಕಂಡಿದ್ದರಿಂದ ಹತಾಶೆಯಾಗಿ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ. ಬಿಜೆಪಿ 25 ಸ್ಥಾನ ಗೆದ್ದವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೂ 17ರಲ್ಲಿ ಗೆದ್ದರೆ, ನಾವು 1 ಸ್ಥಾನದಲ್ಲಿ ಗೆದ್ದವರು ಈ ಬಾರಿ 9 ಲೋಕಸಭಾ ಸ್ಥಾನಗಳಲ್ಲಿ ಜಯ ಸಾಧಿಸಿದ್ದು ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.