ಭಾರತದ ಬತ್ತಳಿಕೆಗೆ ಮತ್ತೊಂದು ಪರಮಾಣು ಸಾಮರ್ಥ್ಯದ ಸಬ್ ಮೇರಿನ್ (ಜಲಾಂತರ್ಗಾಮಿ) ಐಎನ್ ಎಸ್ ಅರಿಘಾಟ್ ಸೇರ್ಪಡೆಯಾಗಿದೆ. ಈ ಮೂಲಕ ಭಾರತೀಯ ನೌಕಾಪಡೆ ಸಾಮರ್ಥ್ಯ ಮತ್ತಷ್ಟು ಹೆಚ್ಚಿದಂತಾಗಿದೆ.
ಐಎನ್ ಎಸ್ ಅರಿಗಾಟ್ ಗುರುವಾರ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಿಯೋಜಿಸಲಾಗಿದೆ. ಅರಿಹಂತ್ ನಂತರ ಭಾರತದ ನೌಕಾಪಡೆಗೆ ಸೇರ್ಪಡೆಯಾದ ಎರಡನೇ ದೇಶದ ಎರಡನೇ ಜಲಾಂತರ್ಗಾಮಿ ನೌಕೆ ಇದಾಗಿದೆ. ಈ ಮೂಲಕ ಭಾರತ ರಕ್ಷಣಾಪಡೆ ಮೂರು ವಿಭಾಗಗಳಲ್ಲೂ ಪರಮಾಣು ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದೆ.
ವಿಶಾಖಪಟ್ಟಣದಲ್ಲಿ ಗುರುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಐಎನ್ ಎಸ್ ಅರಿಘಾಟ್ ಸಬ್ ಮೇರಿನ್ ಅನ್ನು ನೌಕಾಪಡೆಗೆ ನಿಯೋಜಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಬೆಳೆಯುತ್ತಿದ್ದು, ಈ ಸಂದರ್ಭದಲ್ಲಿ ರಕ್ಷಣೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಬಲಶಾಲಿ ಆಗುವ ಅಗತ್ಯವಿದೆ ಎಂದರು.
ಐಎನ್‌ಎಸ್ ಅರಿಘಾಟ್ ನಿರ್ಮಾಣ ಸುಧಾರಿತ ವಿನ್ಯಾಸ ಮತ್ತು ಉತ್ಪಾದನಾ ತಂತ್ರಜ್ಞಾನದ ಬಳಕೆ, ವಿವರವಾದ ಸಂಶೋಧನೆ ಮತ್ತು ಅಭಿವೃದ್ಧಿ, ವಿಶೇಷ ವಸ್ತುಗಳ ಬಳಕೆ, ಸಂಕೀರ್ಣ ಎಂಜಿನಿಯರಿಂಗ್ ಮತ್ತು ಹೆಚ್ಚು ನುರಿತ ಕೆಲಸಗಾರಿಕೆಯನ್ನು ಒಳಗೊಂಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಐಎನ್ ಎಸ್ ಅರಿಘಾಟ್ ಕೆ-15 ಖಂಡಾಂತರ ಕ್ಷಿಪಣಿಯೊಂದಿಗೆ ಶಸ್ತ್ರಸಜ್ಜಿತವಾಗಿದೆ. ಇದು 750 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದ್ದು, ಇದರ ನಿರ್ಮಾಣ ಕಾರ್ಯ 2017ರಿಂದ ಆರಂಭಗೊಂಡಿತ್ತು
ಐಎನ್ ಎಸ್ ಅರಿಘಾಟ್ ಪ್ರತಿದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದು, ಹಡಗು, ಸಬ್ ಮರ್ಸಿಬಲ್, ಖಂಡಾಂತರ, ಪರಮಾಣು ಸೇರಿದಂತೆ ವೈವಿಧ್ಯಮಯ ಸಾಮರ್ಥ್ಯ ಹೊಂದಿದೆ. ಇದು ಐಎನ್ ಎಸ್ ಅರಿಘಾಟ್ ರಣತಂತ್ರ ಪಡೆಯ ಕಮಾಂಡ್ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ.
ಭಾರತದ ಮೊದಲ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಅರಿಹಂತ್ 2016ರಿಂದ ಸೇರ್ಪಡೆಯಾಗಿದೆ. ಇನ್ನೂ ಎರಡು ಜಲಾಂತರ್ಗಾಮಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಭಾರತದ ನೌಕಾಪಡೆಗೆ ಸೇರಲಿವೆ.
ಐಎನ್ ಎಸ್ ಅರಿಘಾಟ್ ನೀರಿನ ಮೇಲೆ 12ರಿಂದ 15 ನಾಟ್ ಅಂದರೆ 22ರಿಂದ 28 ಕಿ.ಮೀ. ವೇಗವಾಗಿ ಸಂಚರಿಸಲಿದೆ. ನೀರಿನಾಳದಲ್ಲಿ 24 ನಾಟ್ ಅಂದರೆ 44 ಕಿ.ಮೀ. ವೇಗವಾಗಿ ಪ್ರಯಾಣಿಸಲಿದೆ. 3 ಕ್ಷಿಪಣಿ ಉಡಾವಣಾ ಟ್ಯೂಬ್ ಗಳನ್ನು ಹೊಂದಿದ್ದು, ಒಂದೇ ವೇಗದಲ್ಲಿ 3500 ಕಿ.ಮೀ. ದೂರದವರೆಗೆ ಸಾಗಬಹುದು.ಕೆ4 ಜಲಾಂತರ್ಗಾಮಿ ಉಡಾವಣಾ ಖಂಡಾಂತರ ಕ್ಷಿಪಣಿಗಳನ್ನು ಹೊತ್ತೊಯ್ಯಲಿದೆ. ಕೆ-15 ಕ್ಷಿಪಣಿಯನ್ನು ಕಾರ್ಯತಂತ್ರದ ಪರಮಾಣು ಸಿಡಿತಲೆಯೊಂದಿಗೆ ಅಳವಡಿಸಬಹುದಾಗಿದೆ.