ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಆದೇಶ ಖಂಡಿಸಿ ಸುದ್ದಿಗೋಷ್ಠಿ ನಡೆಯುತ್ತಿದ್ದಾಗಲೇ ಕಾಂಗ್ರೆಸ್ ಕಾರ್ಯಕರ್ತ ಹೃದಯಾಘಾತದಿಂದ ಮೃತಪಟ್ಟ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜ್ಯಪಾಲರ ನಿರ್ಣಯ ಖಂಡಿಸಿ ಸೋಮವಾರ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಇದೇ ವೇಳೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆಯುತ್ತಿದ್ದ ಸುದ್ದಿಗೋಷ್ಠಿ ಮಧ್ಯದಲ್ಲೇ ಹೃದಯಾಘಾತಕ್ಕೆ ಒಳಗಾದ ಕಾಂಗ್ರೆಸ್ ಕಾರ್ಯಕರ್ತ ಸಿ.ಕೆ. ರವಿಚಂದ್ರನ್ ಮೃತಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಸಂಘದಿಂದ ಸುದ್ದಿಗೋಷ್ಠಿ ಮಧ್ಯದಲ್ಲೇ ಹೃದಯಾಘಾತದಿಂದ ಕುಸಿದುಬಿದ್ದ ರವಿಚಂದ್ರನ್ ಅವರನ್ನು ಕೂಡಲೇ ಸಮೀಪದ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ವಿಚಾರ ವಿರೋಧಿಸಿ ಯಾದಗಿರಿಯಲ್ಲಿ ಸುಭಾಷ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕದ ಸಿದ್ದರಾಮಯ್ಯ ಅಭಿಮಾನಿ ಬ್ರಿಗೇಡ್ ರಾಜ್ಯಾಧ್ಯಕ್ಷ ರಾಜಕುಮಾರ್ ಗಣೇಶ್ ಸತ್ಯಾಗ್ರಹ ನಿರತವಾಗಿರುವಾಗಲೇ ಅಸ್ವಸ್ಥಗೊಂಡಿದ್ದರು.
ಸೋಮವಾರ ನಸುಕಿನ ಜಾವದಿಂದಲೇ ರಾಜಕುಮಾರ್ ಏಕಾಂಗಿ ಹೋರಾಟ ನಡೆಸಿದ್ದರು. ಹಾಗಾಗಿ ನಿತ್ರಾಣಗೊಂಡು ಅಸ್ವಸ್ಥಗೊಂಡಿದ್ದರು. ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಘಟನೆ ಬೆನ್ನಲ್ಲೇ ರವಿಚಂದ್ರನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.