ಬೆಂಗಳೂರು:ಸಾರ್ವಜನಿಕರ ಪ್ರವೇಶದಿಂದ ದೂರವೇ ಉಳಿದಿರುವ ರಾಜಭವನವನ್ನು ಜನಭವನವನ್ನಾಗಿ ಪರಿವರ್ತಿಸುವ ಕೂಗು ಶುರುವಾಗಿದೆ.ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಇಂತದ್ದೊಂದು ಬೇಡಿಕೆ ಮುಂದಿಟ್ಟುಕೊಂಡು ಸರ್ಕಾರಕ್ಕೆ ಮನವಿ ಮಾಡಿದೆ.
ವಿಧಾನ ಮಂಡಲದ ಅರ್ಜಿಗಳ ಸಮಿತಿ ಅಧ್ಯಕ್ಷರಿಗೆ ಈ ಬಗ್ಗೆ ಪತ್ರವನ್ನೂ ಬರೆದಿರುವ ವೇದಿಕೆ ರಮಾದೇವಿ ರಾಜ್ಯಪಾಲರಾಗಿದ್ದ ವೇಳೆ ರಾಜಭವನದೊಳಗೆ ಸಾರ್ವನಿಕರ ಪ್ರವೇಶ ಮುಕ್ತವಾಗಿತ್ತು.ಅದೊಂದು ಪ್ರೇಕ್ಷಣೀಯ ಸ್ಥಳವಾಗಿತ್ತು.ರಾಜಭವನದ ಇತಿಹಾಸ-ಪರಂಪರೆ ಹಾಗೂ ಅದರ ಹಿನ್ನಲೆ ಸಾರ್ವಜನಿಕರಿಗೆ ತಿಳಿಯುವಂತಾಗಿತ್ತು.ಆದರೆ ಆನಂತರ ರಾಜಭವನ ಸಾರ್ವಜನಿಕರಿಂದ ದೂರವಾಗಿ ದ್ವೀಪವಾಗಿಬಿಡ್ತು.ಆದರೆ ರಾಜಭವನ ಸ್ಥಾಪಿಸಿದವರ ಉದ್ದೇಶ ಇದಾಗಿರಲಿಲ್ಲ ಎಂದು ವೇದಿಕೆಯ ಅಧ್ಯಕ್ಷ ಚಾಮುಂಡಿ ಶಿವಕುಮಾರ್ ತಿಳಿಸಿದ್ದಾರೆ.
ಮೈಸೂರು ಅರಮನೆಗಿಂತ 6 ದಶಕಗಳ ಹಿಂದೆಯೇ ಬ್ರಿಟಿಷ್ ಆಳ್ವಿಕೆ ವೇಳೆ ಸರ್ ಮಾರ್ಕ್ ಕಬ್ಬನ್ ಅವರಿಂದ ನಿರ್ಮಾಣವಾಯ್ತು.ಜನರ ಪ್ರವೇಶಕ್ಕೆ ರಾಜಭವನ ಮುಕ್ತವಾಗಬೇಕು.ರಾಜಭವನ ಎಂದಾಕ್ಷಣ ಅದರಲ್ಲಿರುವವರು ರಾಜರಾಗಬೇಕೆಂದೇನಿಲ್ಲ.ಅಥವಾ ಅಂಥಾ ಮನಸ್ತಿತಿ ಇರಿಸಿಕೊಳ್ಳಬೇಕೆಂದೇನಿಲ್ಲ. ಅವರು ಜನಪರವಾಗಿರಬೇಕು.ರಾಜಭವನ ಜನಭವನವಾಗಬೇಕು ಎನ್ನುವ ಆಶಯ ಅವರದ್ದಾಗಿತ್ತು.
ಅಷ್ಟೇ ಅಲ್ಲ, ಗ್ರಾಮದಿಂದ ಹಿಡಿದು ಅಠಾರಹಃ ಕಚೇರಿವರೆಗೂ ಕನ್ನಡದಲ್ಲೇ ಎಲ್ಲವೂ ವ್ಯವಹಾರ ನಡೆಯಬೇಕು.ಕನ್ನಡ ಆಡಳಿತ ಭಾಷೆಯಾಗಬೇಕು.ಹೃದಯದ ಭಾಷೆಯಾಗಬೇಕು. ಕನ್ನಡ ವನ್ನು ಬಿಟ್ಟು ಬೇರ್ಯಾವುದೇ ಭಾಷೆಯಲ್ಲಿ ಮನವಿ ಪತ್ರ ಬರೆದರೂ ಅದನ್ನು ಸ್ವೀಕರಿಸದಂತೆ ಫರ್ಮಾನ್ ಹೊರಡಿಸಿದ್ದ ಸರ್ ಮಾರ್ಕ ಕಬ್ಬನ್ ಅವರ ಆಶಯವನ್ನು ರಾಜಭವನದ ಆಡಳಿತ ಸಂಪೂರ್ಣವಾಗಿ ಗಾಳಿಗೆ ತೂರಿದೆ.ರಾಜಭವನ ಸಾರ್ವಜನಿಕರ ಪ್ರವೇಶಕ್ಕೆ ಮುಚ್ಚಲ್ಪಟ್ಟಿರುತ್ತದೆ.ದೂರು-ಅಹವಾಲು ಕೊಡುವವರು ಹೊರಗೆ ನೀಡುವಂತ ಪರಿಸ್ತಿತಿಯಿದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಜನಸಾಮಾನ್ಯರು ಹಾಗು ಎಂಜಿನಿಯರಿಂಗ್ ವಿದ್ಯಾರ್ಥಿಗಳು ರಾಜಭವನ ನೋಡಲು ಬಂದಾಗ ಆಗಿನ ರಾಜ್ಯಪಾಲರಾಗಿದ್ದ ರಮಾದೇವಿ ಅವರೇ ಖುದ್ದಾಗಿ ರಾಜಭವನದ ಇತಿಹಾಸ ವಿವರಿಸಿದ್ದಿದೆ.ಆದರೆ ಅವರ ನಂತರ ಯಾವೊಬ್ಬ ರಾಜ್ಯಪಾಲರು ರಾಜಭವವನ್ನು ಅಷ್ಟೊಂದು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದಿಲ್ಲ ಎಂದು ಇತಿಹಾಸವನ್ನು ಮೆಲುಕಾಕಿರುವ ಅವರು,ಜನಸಾಮಾನ್ಯರ ತೆರಿಗೆ ಹಣದಿಂದ ನಡೆಯುತ್ತಿರುವ ರಾಜಭವನವನ್ನು ನೋಡಲು ಸಾರ್ವಜನಿಕರಿಗೇನೆ ಅವಕಾಶ ನೀಡದಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮ ತೆರಿಗೆ ಹಣದಿಂದ ನಡೆಯುತ್ತಿರುವ ರಾಜಭವನವನ್ನು ಸಾರ್ವಜನಿಕರ ಪ್ರವೇಶ ಹಾಗೂ ವೀಕ್ಷಣೆಗೆ ಮುಕ್ತಮಾಡಬೇಕೆಂದು ಮನವಿ ಮಾಡಿರುವ ಅವರು,ಈ ಬೆಳವಣಿಗೆಯಿಂದ ರಾಜ್ಯಪಾಲರಿಗೇನಾದ್ರೂ ಕಿರಿಕಿರಿ ಉಂಟಾಗುತ್ತಿದೆ ಎನ್ನುವುದಾದ್ರೆ ಅವರನ್ನೇ ಅಲ್ಲಿಂದ ಸ್ಥಳಾಂತರ ಮಾಡಿ,ಬೆಂಗಳೂರಿನಲ್ಲಿರುವ ಯಾವುದಾದ್ರೂ ಸರ್ಕಾರಿ ಬಂಗಲೆಗೆ ಶಿಫ್ಟ್ ಮಾಡಿ ಅದನ್ನೇ ರಾಜಭವನವನ್ನಾಗಿ ಮಾಡುವಂತೆ ಸರ್ಕಾರಕ್ಕೆ ಅವಕಾಶವಿದ್ದರೆ ಆ ನಿಟ್ಟಿನಲ್ಲಿ ಪರಿಶೀಲಿಸಿ ಎಂದು ಸಲಹೆ ಕೂಡ ಶಿವಕುಮಾರ್ ನೀಡಿದ್ದಾರೆ.
ಶಿವಕುಮಾರ್ ಅವರು ಸರ್ಕಾರಕ್ಕೆ ಬರೆದಿರುವ ಪತ್ರದ ಬಗ್ಗೆ ಅನೇಕ ಸಾಮಾಜಿಕ ಕಾರ್ಯಕರ್ತರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.ರಾಜ್ಯಪಾಲರೆನಿಸಿಕೊಂಡವರು ಎಲ್ಲರಿಂದ ದೂರವಾಗಿ ದ್ವೀಪದಂತೆ ಜೀವನ ನಡೆಸುವುದು ಎಷ್ಟು ಸರಿ..ಜನರ ನಡುವೆ ಬದುಕುವ ವ್ಯವಸ್ಥೆ ನಿರ್ಮಾಣವಾಗಬೇಕು.ಈ ನಿಟ್ಟಿನಲ್ಲಿ ಬದಲಾವಣೆ ನಡೆಯಬೇಕಿದೆ ಎಂದು ತಿಳಿಸಿದ್ದಾರೆ.ಬಹುಷಃ ಈ ಪತ್ರದ ಮೂಲಕವಾದ್ರೂ ರಾಜಭವನ ಜನ ಭವನವಾಗಿ ಪರಿವರ್ತಿತವಾಗಲಿ ಎನ್ನುವುದು ಎಲ್ಲರ ಆರೈಕೆ ಕೂಡ.