ಬೆಂಗಳೂರು/ಧಾರವಾಡ: ಕನ್ನಡ ಫ್ಲ್ಯಾಶ್ ನ್ಯೂಸ್ ಭವಿಷ್ಯ ನುಡಿದಿದ್ದಂತೆಯೇ ಆಗ್ಹೋಗಿದೆ. ಸಾರಿಗೆ ಅಧಿಕಾರಿಗಳು ಹೀಗೆಯೇ ಮಾಡುತ್ತಾರೆ ಎಂದು ಹೇಳಿದ ರೀತಿಯೇ ನಡೆದುಕೊಂಡಿದ್ದಾರೆ.ಸಮಸ್ಯೆ ಬಗೆಹರಿಸೋದನ್ನು ಬಿಟ್ಟು ಚಾಲಕ-ನಿರ್ವಾಹಕರು ಮಾಡಬಾರದ ತಪ್ಪನ್ನೇನೋ ಮಾಡಿದ್ದಾರೆ..? ಸಂಸ್ಥೆಯ ಮಾನ ಹರಾಜಾಕಿದ್ದಾರೆ ಎನ್ನುವ ಧೋರಣೆಯಲ್ಲಿ ಬಸ್ ನ ಚಾಲಕ-ನಿರ್ವಾಹಕರಿಬ್ಬರನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಈ ಮೂಲಕ ಸೇಡಿನ ಕ್ರಮ ಪ್ರದರ್ಶಿಸಿದ್ದಾರೆ.
ದಿನಾಂಕ 23-05-2024 ರಂದು ಕೆಎ-31ಎಫ್ 1336 ಕ್ರಮ ಸಂಖ್ಯೆಯ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನೊಳಗೆ ಚಾಲಕ ಕೈಲಿ ಛತ್ರಿ ಹಿಡಿದು ಬಸ್ ನ ಚಾಲನೆ ಮಾಡುತ್ತಿದ್ದ ಸನ್ನಿವೇಶ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಇದು ಯಾವ ಮಟ್ಟಿಗೆ ಎಂದ್ರೆ ರಾಜ್ಯದ ಜನತೆ ಕೆಎಸ್ ಆರ್ ಟಿಸಿಗೆ ಹಿಡಿಶಾಪ ಹಾಕಿತ್ತು.ಇದರಿಂದ ತೀವ್ರ ಮುಜುಗರಗೊಂಡ ಸಾರಿಗೆ ಆಡಳಿತ ವ್ಯವಸ್ಥೆ ಇದನ್ನು ಸಂಸ್ಥೆಯ ಗಮನಕ್ಕೆ ತರೋದನ್ನು ಬಿಟ್ಟು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಟ್ಟಿದ್ದಾರೆ.ಇದು ಪ್ರಜ್ಞಾಪೂರ್ವಕ ಕರ್ತವ್ಯಲೋಪ ಎಂದು ಪರಿಗಣಿಸಿ ಚಾಲಕ ಹಣಮಂತ ಕಿಲ್ಲೇದಾರ( ಬಿಲ್ಲೆ ಸಂಖ್ಯೆ 1203-ಧಾರವಾಡ ಘಟಕ) ಹಾಗೂ ನಿರ್ವಾಹಕಿ ಎಚ್ ಅನಿತಾ (ಬಿಲ್ಲೆ ಸಂಖ್ಯೆ 396-ಧಾರವಾಡ ಘಟಕ) ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಕೈಲಿ ಛತ್ರಿ ಹಿಡಿದು ವಾಹನ ಚಾಲನೆ ಮಾಡುವುದನ್ನು ಚಿತ್ರೀಕರಿಸೊಕ್ಕೆ ನಿರ್ವಾಹಕಿ ಸಾಥ್ ಕೊಟ್ಟಿದ್ದಾರೆ.ಇದೆಲ್ಲದರ ಹಿಂದೆ ಸಮಸ್ಯೆ ತೋರಿಸುವುದಕ್ಕಿಂತ ಹೆಚ್ಚಾಗಿ ಸಂಸ್ಥೆ ಮಾನ ಹರಾಜು ಹಾಕುವ ದುರುದ್ದೇಶ ಅಡಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.ಇದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ( ನಡತೆ ಮತ್ತು ಶಿಸ್ತು) ನಿಬಂಧನೆಗಳು-1971 ರ 18ನೆ ನಿಬಂಧನೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತೆ ಎಂದು ವಿಭಾಗಿಯ ನಿಯಂತ್ರಣಾಧಿಕಾರಿ( ಶಿಸ್ತು ಪಾಲನಾಧಿಕಾರಿ) ತಿಳಿಸಿರುವುದಲ್ಲದೇ ತತ್ ಕ್ಷಣಕ್ಕೆ ಅನ್ವಯವಾಗುವಂತೆ ಇಬ್ಬರನ್ನೂ ಕರ್ತವ್ಯಲೋಪದ ಆಪಾದನೆ ಮೇರೆಗೆ ಅಮಾನತುಪಡಿಸಿದ್ದಾರೆ.
ಡ್ರೈವರ್ ಹಾಗೂ ಕಂಡಕ್ಟರ್ ಅವರಿಬ್ಬರ ಉದ್ದೇಶ ಸಂಸ್ಥೆ ಮಾನ ತೆಗೆಯುವುದೇ ಆಗಿದ್ದಲ್ಲಿ ಸಂಸ್ಥೆ ಅವರ ವಿರುದ್ಧ ತೆಗೆದುಕೊಂಡ ಕ್ರಮ ಸರಿಯಾಗಿದೆ.ಆದರೆ ವಾಸ್ತವ ಬಿಂಬಿಸಿದ್ದಕ್ಕೆ ಸೇಡಿನ ಕ್ರಮವಾಗಿ ಅವರಿಬ್ಬರನ್ನು ಅಮಾನತುಗೊಳಿಸಿದ್ದರೆ ಅದು ಖಂಡನೀಯ.ಆದರೆ ಬಸ್ ಓಡಿಸುವ ಸನ್ನಿವೇಶ ಹಾಗೂ ಜೋರು ಮಳೆಯ ಚಿತ್ರಣವನ್ನು ಗಮನಿಸಿದಾಗ ಅದು ಸಮಸ್ಯೆಯ ಗಂಭೀರತೆ ತೋರಿಸುವ ಉದ್ದೇಶದಂತಿತ್ತು ಎನಿಸುತ್ತದೆ.ಅದನ್ನು ತೋರಿಸಿದ್ದಕ್ಕೆ ತೀವ್ರ ಮುಜುಗರಕ್ಕೆ ಒಳಗಾಗಿ ಸಂಸ್ಥೆ ಅವರಿಬ್ಬರ ವಿರುದ್ದ ಶಿಸ್ತುಕ್ರಮ ಕೈಗೊಂಡಿದ್ದರೆ ಅದು ಅಕ್ಷಮ್ಯ.ಸಂಸ್ಥೆಯ ಬಹುತೇಕ ಸಿಬ್ಬಂದಿ ಹೇಳುವ ಪ್ರಕಾರ ಸಮಸ್ಯೆಯನ್ನು ಅವರಿಬ್ಬರು ಬಹಳಷ್ಟು ಬಾರಿ ಘಟಕದ ಅಧಿಕಾರಿಗಳಿಗೆ ತಿಳಿಸಿದ್ದರು.ಬಸ್ ನ್ನು ಕಾರ್ಯಾಚರಣೆಗೆ ತೆಗೆಯುವ ದಿನವೂ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಆದರೆ ಅದಕ್ಕೆ ತಲೆ ಕೆಡಿಸಿಕೊಳ್ಳದೆ ಹಾಳಾದ ಬಸ್ಸನ್ನು ನೀಡಲಾಗಿತ್ತು.ಅಧಿಕಾರಿಗಳ ನಿರ್ಲಕ್ಷ್ಯ-ಅಮಾನವೀಯ ನಡೆಗೆ ಬೇಸತ್ತು ವಾಸ್ತವ ತೋರಿಸುವ ಪ್ರಯತ್ನ ಮಾಡಿದ್ರೆ ಹೊರತು ಅನ್ನ ಕೊಡುವ ಸಂಸ್ಥೆ ಮಾನ ತೆಗೆಯುವ ಅಥವಾ ದ್ರೋಹ ಎಸಗುವ ಕೆಲಸಕ್ಕೆ ಕೈ ಹಾಕಿಲ್ಲ.ಇದೆಲ್ಲಾ ಅಧಿಕಾರಿಗಳು ತಮ್ಮ ಕರ್ಮಕಾಂಡ ಮುಚ್ಚಿಕೊಳ್ಳುವ ಪ್ರಯತ್ನದ ಭಾಗವಾಗಿ ನಡೆದ ಕೆಲಸ ಎನಿಸುತ್ತೆ ಎನ್ನುವಾಗ ಡ್ರೈವರ್-ಕಂಡಕ್ಟರ್ ಗಳ ಮೇಲೆ ಆದಂಥ ಶಿಸ್ತುಕ್ರಮ ಪ್ರಶ್ನಾರ್ಹ ಎನಿಸುತ್ತೆ.ಏಕೆಂದ್ರೆ ಶಿಕ್ಷೆ ಆಗಿರಬೇಕಿರುವುದು ಕೇವಲ ಅವರಿಬ್ಬರಿಗೆ ಮಾತ್ರನಾ..? ಸೋರುವಂಥ ಬಸ್ ಗಳನ್ನು ಕಾರ್ಯಾಚರಣೆಗೆ ಅಂಥ ಕೊಟ್ಟ ಘಟಕದ ಮೇಲಾಧಿಕಾರಿಗಳದು ತಪ್ಪೇ ಇಲ್ವಾ..ಏಕೆಂದ್ರೆ ನೈಜವಾಗಿ ನೋಡುವುದಾದ್ರೆ ಮೊದಲುಶಿಕ್ಷೆ ಆಗಬೇಕಿರುವುದು ಅಧಿಕಾರಿಗಳಿಗೆ..ಆದ್ರೆ ಸಾರಿಗೆ ನಿಗಮಗಳಲ್ಲಿ ಶಿಕ್ಷೆ ಆಗೋದೆಲ್ಲಾ ಸಿಬ್ಬಂದಿಗಲ್ವೇ..? ಅಧಿಕಾರಿಗಳು ಇರೋದೇ ಅಂದಾದದರ್ಬಾರ್ ಗೆ ಎನ್ನುವಂತಾಗಿರುವಾಗ ನ್ಯಾಯ ತೀರಿಸುವಲ್ಲಿ ಪಾರದರ್ಶಕತೆ ಹೇಗೆ ಬರೊಕ್ಕೆ ಸಾಧ್ಯವೇಳಿ..?!