ಪ್ರಜಾಪ್ರಭುತ್ವದಲ್ಲಿ ಮತದಾರರನ್ನು ಪ್ರಭುಗಳು ಎನ್ನಲಾಗುತ್ತದೆ.ಆದರೆ ಅಂಥಾ ಮತದಾರನ ನಾಡಿಮಿಡಿತ-ಹೃದಯ ಬಡಿತ-ಮನಸಿನ ಮಾತನ್ನು ಅರ್ಥ ಮಾಡಿಕೊಳ್ಳುವಲ್ಲಿ ಸರ್ವೆ-ಸಮೀಕ್ಷೆಗಳು ಸಂಪೂರ್ಣ ವಿಫಲವಾಗಿವೆ. ಸಮೀಕ್ಷೆ ನಡೆಸಿದ  ಬಹುತೇಕ ಸಂಸ್ಥೆಗಳು ಯಾವ ಲೆಕ್ಕಾಚಾರ ಹಾಕಿ ಅಂದಾಜು ಮಾಡಿದವೋ ಗೊತ್ತಿಲ್ಲ, ಇನ್ಮುಂದೆ ಸರ್ವೆಗಳನ್ನು ನಂಬಲೇಬಾರದು ಎನ್ನುವ ಮನಸ್ತಿತಿಗೆ ಜನ ಬರುವಂತೆ  ಆಗಿದೆ..

ಹೌದು..ಈ ಬಾರಿಯ ಲೋಕಸಭೆ ಚುನಾವಣೆಯ ಮತದಾನ ಸಂಪೂರ್ಣಗೊಂಡ ಹಿನ್ನಲೆಯಲ್ಲಿ ಎಲ್ಲರ ಕುತೂಹಲ ಇದ್ದಿದ್ದು ಸರ್ವೆಗಳ ಮೇಲೆ. ಪ್ರತಿಷ್ಟಿತ-ಗಣ್ಯ ಎನಿಸಿಕೊಂಡ ಸಂಸ್ಥೆಗಳು ನಡೆಸಿ ನೀಡಿದ ಸರ್ವೆ ಬಗ್ಗೆ ಮತದಾರನಿಗೆ ಒಂದಷ್ಟು ನಂಬಿಕೆನೂ ಇತ್ತು.ಆದರೆ ಮತದಾರ ಕೊಟ್ಟಂತ ತೀರ್ಪನ್ನು ಸರ್ವೆಗಳ್ಯಾವು ಸರಿಯಾಗಿ ಅರ್ಥ ಮಾಡಿಕೊಂಡಿಯೇ ಇಲ್ಲ ಎನ್ನುವುದು  ಹೊರಬಿದ್ದ ಫಲಿತಾಂಶಕ್ಕೂ ಸರ್ವೆಗಳು ಹೇಳಿದ್ದ ಅಂಕಿಅಂಶಕ್ಕೂ ತಾಳೆನೇ ಇಲ್ಲದ್ದನ್ನು ನೋಡಿದಾಗ ಅರ್ಥವಾಯಿತು. ಸರ್ವೆಗಳೆಲ್ಲಾ ಕೇವಲ ಬಕ್ವಾಸ್..ಸುಳ್ಳು..ಎಲ್ಲರೂ ಪೂರ್ವಾಗ್ರಹಪೀಡಿತರಾಗಿ ತಮಗಿಷ್ಟ ಬಂದಂತೆ ಅಂಕಿಸಂಖ್ಯೆಗಳನ್ನು ನೀಡಿದ್ದಾರೆನ್ನುವುದು ಕೂಡ ಫಲಿತಾಂಶದ ಬಳಿಕ ಜನ ಮಾತನಾಡಿಕೊಳ್ಳುತ್ತಿದ್ದ ರೀತಿ.

ದೇಶದ ಬಹುತೇಕ ನ್ಯೂಸ್ ಚಾನೆಲ್ ಗಳು, ಸರ್ವೆ ಏಜೆನ್ಸಿಗಳು ಪ್ರಕಟಿಸಿದ ಎಕ್ಸಿಟ್ ಪೋಲ್ ನೋಡಿ ದೇಶದ ಜನತೆಯೇ ಕಕ್ಕಾಬಿಕ್ಕಿಯಾಗಿದ್ರು.ಫಲಿತಾಂಶ ಹೀಗೆ ಬರುತ್ತಾ ಎಂದು ಶಾಕ್ ಗೆ ಒಳಗಾಗಿದ್ರು.ಏಕೆಂದರೆ ದೇಶದ ಪ್ರಧಾನಿ ಮೋದಿ ಅವರ ಆಡಳಿತದ ವಿರೋಧಿ ಅಲೆ ದೇಶಾದ್ಯಂತ ಇದ್ದರೂ ಅವರನ್ನೇ ಮೂರನೇ ಬಾರಿ ಅಧಿಕಾರಕ್ಕೆ ತರುವಷ್ಟು ನಿಖರ-ನಿಚ್ಚಳ ಪ್ರಮಾಣದಲ್ಲಿ ಮತ ಚಲಾಯಿಸಲಾಗಿದೆಯಾ ಎಂದು ಜನ ಮಾತನಾಡಿಕೊಳ್ಳುವಂತಾಗಿತ್ತು.ಬಿಜೆಪಿ ಹಾಗೂ ಅವರ ಮಿತ್ರಪಕ್ಷಗಳನ್ನು ಹೊರತುಪಡಿಸಿದ ಪಕ್ಷಗಳು ಹಾಗೂ ಮುಖಂಡರಿಗೆಲ್ಲಾ ಆತಂಕ ಶುರುವಾಗಿತ್ತು.ಏಕೆಂದರೆ 400ರ ಗಡಿ ದಾಟುವುದಾಗಿ ಮೋದಿ ಘೋಷಿಸಿಕೊಂಡಿದ್ದಕ್ಕೆ ಪೂರಕ ಎನ್ನುವ ರೀತಿಯಲ್ಲಿ ಸರ್ವೆಗಳ ಅಂಕಿಅಂಶಗಳು ಹೊರಬಿದ್ದಿದ್ದವು.

350ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯೊಕ್ಕೆ ಸಾಧ್ಯವೇ ಇಲ್ಲ ಮೋದಿ ಎನ್ನುವಂತೆ ಬಿಂಬಿಸಿದ್ವು.ಕಾಂಗ್ರೆಸ್ ಮೈತ್ರಿಯ ಇಂಡಿ ಕೂಟ ಅತ್ಯಂತ ಕಳಪೆ ಪ್ರದರ್ಶನ ತೋರಲಿದೆ ಎನ್ನುವುದನ್ನು ಸರ್ವೆಗಳು ಸಾರಿ ಹೇಳಿದ್ವು.ಇದು ಕಳೆದ ಬಾರಿಗಿಂತ ಉತ್ತಮ ರೀತಿಯ ಪ್ರದರ್ಶನ ಹಾಗು ಫಲಿತಾಂಶದ ನಿರೀಕ್ಷೆ-ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಮೈತ್ರಿಕೂಟಕ್ಕೆ ಮರ್ಮಾಘಾತ ಎನ್ನುವಂತಾಗಿತ್ತು.ಇಂಡಿ ಮೈತ್ರಿಕೂಟಕ್ಕೆ ಹೀನಾಯ ಸೋಲು..ಎನ್ ಡಿಯ ಕೂಟಕ್ಕೆ ಭರ್ಜರಿ ಗೆಲುವಿನೊಂದಿಗೆ ಅಧಿಕಾರದ ಗದ್ದುಗೆಯೂ ಸಿಗಲಿದೆ ಎನ್ನುವುದನ್ನು ಅತ್ಯಂತ ಸ್ಪಷ್ಟ ಹಾಗು ನಿಖರವಾಗಿ ಬಹಿರಂಗಪಡಿಸಿದ್ವು ಸರ್ವೆಗಳು.ಆದರೆ ಫಲಿತಾಂಶ ಇದೆಲ್ಲವನ್ನೂ ಹುಸಿಗೊಳಿಸಿದೆ. ಸರ್ವೆ-ಸಮೀಕ್ಷೆಗಳೆಲ್ಲಾ ಸುಳ್ಳು..ಮತದಾರನ ನಾಡಿಮಿಡಿತ ಅರಿಯೋದ್ರಲ್ಲಿ ವಿಫಲವಾಗಿದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ಕಳೆದ ಕೆಲ ಚುನಾವಣೆಗಳ ವಿಷಯದಲ್ಲಿ ವಿಶ್ವಸನೀಯ ಎನ್ನುವಷ್ಟರ ಮಟ್ಟಿಗೆ ನಂಬಲರ್ಹ ಅಂಕಿಸಂಖ್ಯೆಗಳನ್ನು ಸರ್ವೆಗಳು ನೀಡಿದ್ವು.ಜನ ಕೂಡ ಸರ್ವೆಗಳನ್ನು ನಂಬುತ್ತಿದ್ದರು.ಸರ್ವೆಗಳಂತೆಯೇ ಬಹುತೇಕ ಆಗುತ್ತಿತ್ತು.ಕೆಲವರು ಸರ್ವೆಗಳನ್ನು ನೋಡಿ ತಮ್ಮೊಳಗೆ ಅಭಿಪ್ರಾಯ ರೂಪಿಸಿಕೊಳ್ಳುತ್ತಿದ್ದರು.ಆದರೆ ಅದೆಲ್ಲವನ್ನೂ ಲೋಕಸಭೆ ಚುನಾವಣೆ ಸಂಬಂಧಪಟ್ಟಂತೆ ಮಾಡಲಾದ ಸರ್ವೆಗಳಲ್ಲಿ ಬುಡಮೇಲು ಮಾಡಿವೆ.ಸರ್ವೆಗಳ ಬಗ್ಗೆ ಜನ ವಿಶ್ವಾಸವನ್ನೇ ಕಳೆದುಕೊಳ್ಳುವಂತೆ ಮಾಡಿದೆ.ಸರ್ವೆ-ಸಮೀಕ್ಷೆಗಳ ಹಿಂದೆ ಬೇರೆಯ ಷಡ್ಯಂತ್ರಗಳೇನಾದ್ರೂ ಕೆಲಸ ಮಾಡ್ತವಾ..? ಹಣ-ಲಾಭಿ-ಆಮಿಷಗಳೇನಾದ್ರೂ ವರ್ಕೌಟ್ ಆಗ್ತವಾ..? ಸರ್ವೆಗಳನ್ನು ಮಾಡುವವರು ವಾಸ್ತವ ಸಂಗತಿಗಳನ್ನು ಬಿಟ್ಟು ಪೂರ್ವಾಗ್ರಹಪೀಡಿತರಾಗಿರುತ್ತಾರಾ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.

ಜನರ ನಾಡಿಮಿಡಿತವನ್ನು ಅರಿತು ಅದನ್ನು ಬಹಿರಂಗಪಡಿಸುವುದೇ ಸರ್ವೆ-ಸಮಕ್ಷೆ ಉದ್ದೇಶವಾಗಿರುತ್ತೆ.ನಿಖರವಾಗಿಯಲ್ಲದಿದ್ದರೂ ಸತ್ಯಕ್ಕೆ ಒಂದಷ್ಟು ಹತ್ತಿರವಾಗುವಂತಾದ್ರೂ ಅಂಕಿಸಂಖ್ಯೆಗಳನ್ನು ನೀಡುವಂತ  ವ್ಯವಸ್ಥೆ ಈವರೆಗೂ ಇತ್ತು.ಆದರೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸರ್ವೆಗಳು ಕೊಟ್ಟಿರುವ ಅಂಕಿಸಂಖ್ಯೆಗಳನ್ನು ಗಮನಿಸಿದಾಗ ಸರ್ವೆ-ಸಮೀಕ್ಷೆಗಳಲ್ಲಿ ಏನೋ ನಡೆಯಬಾರದ್ದು ನಡೆಯುತ್ತಿದೆ.ಅವರನ್ನು ಯಾರಾದ್ರೂ ನಿಯಂತ್ರಿಸುತ್ತಿದ್ದಾರಾ..? ಅವರು ಯಾರದಾದ್ರೂ ಪ್ರಭಾವಕ್ಕೆ ಒಳಗಾಗಿಯೇ ಹೀಗೆ ಮಾಡುತ್ತಾರಾ ಎನ್ನುವಂಥ ಶಂಕೆಗಳನ್ನೆಲ್ಲಾ ಹುಟ್ಟು ಹಾಕಿದೆ..

ಸರ್ವೆ-ಸಮೀಕ್ಷೆಗಳನ್ನು ಬುಡಮೇಲು ಮಾಡಿರುವ ಲೋಕಸಭೆಯ ಚುನಾವಣೆಯ ಫಲಿತಾಂಶದಿಂದ ಮತದಾರರು ಇನ್ಮುಂದೆ ಯಾವುದೇ ಎಕ್ಸಿಟ್ ಪೋಲ್ ಗಳನ್ನು ನಂಬದಂತಾಗಿರುವುದು ಮಾತ್ರ ಸತ್ಯ.

 

Spread the love

Leave a Reply

Your email address will not be published. Required fields are marked *

You missed