ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.
ಸಿಎಂ ಮಾಧ್ಯಮ ಕಚೇರಿಯಿಂದ ಸೋಮವಾರ ಪ್ರಕಟಿಸಲಾದ ಪ್ರಕಟಣೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದಾರೆ.
ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸಿಎಂ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎಂದು ಸಿಎಂ ಕಚೇರಿ ಸ್ಪಷ್ಟಪಡಿಸಿದೆ.
ಇದೇ ವೇಳೆ ಗೃಹ ಸಚಿವ ಜಿ.ಪರಮೇಶ್ವರ್ ಪರಪ್ಪನ ಅಗ್ರಹಾರದ 7 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ದರ್ಶನ್ ಮತ್ತು ಸಹಚರರನ್ನು ಪ್ರತ್ಯೇಕ ಜೈಲುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.