28 ಕ್ಷೇತ್ರಗಳಲ್ಲಿ 16 ಬಿಜೆಪಿ-10 ಕಾಂಗ್ರೆಸ್ 2ರಲ್ಲಿ ಜೆಡಿಎಸ್ ಗೆಲುವು-ಸಾಗರ್ ಖಂಡ್ರೆ ಅತ್ಯಂತ ಕಿರಿಯ ಸಂಸದ-ಗೆದ್ದು ಬೀಗಿದ ಮಂತ್ರಿ ಕುಡಿಗಳು
ಬೆಂಗಳೂರು: ವಿಶ್ವದ ಅತ್ಯಂತ ಬಲಿಷ್ಟ ಹಾಗೂ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟಕ್ಕೆ ಭಾರೀ ಹಿನ್ನಡೆ ಉಂಟಾಗಿದ್ದು ಕಳಾಹೀನವಾಗಿದ್ದ ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿ ಕೂಟ ಗಣನೀಯ ಸಾಧನೆ ಮಾಡಿದೆ.ಇನ್ನು ಕರ್ನಾಟಕದಲ್ಲಿ ಕಳೆದ ಬಾರಿ ಕೇವಲ 1 ಸ್ಥಾನ ಪಡೆಯಲಷ್ಟೇ ಸಾಧ್ಯವಾಗಿದ್ದ ಕಾಂಗ್ರೆಸ್ 10 ಸ್ಥಾನಗಳಲ್ಲಿ ಗೆದ್ದು ಬೀಗಿದೆ.ಆದರೆ ಕಳೆದ ಬಾರಿ ಗೆದ್ದು ಮಾನ ರಾಜ್ಯ ಕಾಂಗ್ರೆಸ್ ನ ಮಾನ ಉಳಿಸಿದ್ದ ಡಿ.ಕೆ ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಸೋತು ಸುಣ್ಣವಾಗಿದ್ದಾರೆ.ಅವರ ವಿರುದ್ದ ಹೃದಯವಂತ ಡಾ.ಮಂಜುನಾಥ್ ಗೆಲುವು ಸಾಧಿಸಿದ್ದಾರೆ.
28 ಲೋಕಸಭಾ ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳ ಪಲಿತಾಂಶ ಅನೌನ್ಸ್ ಆಗಿದೆ.ಒಂದೆರೆಡು ಕ್ಷೇತ್ರಗಳಲ್ಲಿ ಹಾವು ಏಣಿಯಾಟದ ಲೆಕ್ಕಾಚಾರ ನಡೆಯುತ್ತಿದೆ ಎನ್ನುವುದನ್ನು ಬಿಟ್ಟರೆ ಬಹುತೇಕ ನಿಕ್ಕಿಯಾದಂತಿದೆ. ಅದರ ಪ್ರಕಾರ ಆಡಳಿತಾರೂಢ ಬಿಜೆಪಿ 16 ಸ್ಥಾನ ಗೆದ್ದರೆ ಅದರ ಮೈತ್ರಿ ಪಕ್ಷವಾದ ಜೆಡಿಎಸ್ 2 ಸ್ಥಾನಗಳಲ್ಲಿ ಗೆದ್ದಿದೆ.ಇನ್ನು ಕಾಂಗ್ರೆಸ್ 10 ಸ್ಥಾನಗಳಲ್ಲಿ ವಿಜಯಿಯಾಗಿದೆ.
***ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ 1,90,00 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಆರಂಭವಾದಾಗಿನಿಂದಲೂ ಒಂದೇ ಒಂದು ಸುತ್ತಿನಲ್ಲೂ ಡಿ.ಕೆ ಸುರೇಶ್ ಮುನ್ನಡೆ ಸಾಧಿಸಿರಲಿಲ್ಲ.ಕನಕಪುರದಲ್ಲಿ ಬಿಟ್ಟರೆ ಉಳಿದ ಯಾವುದೆ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ ನ ಡಿ.ಕೆ ಸುರೇಶ್ ಗೆ ಮುನ್ನಡೆ ಸಿಗಲಿಲ್ಲ ಎನ್ನುವುದು ಗಮನಾರ್ಹ
***ಬೀದರ್ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಅತ್ಯಂತ ಕಿರಿಯ ಸಂಸದ ಅಭ್ಯರ್ತಿ ಎಂದೇ ಬಿಂಬಿಸಿಕೊಂಡಿದ್ದ ಸಚಿವ ಈಶ್ವರ್ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಅವರು ತಮ್ಮ ಪ್ರತಿಸ್ಪರ್ದಿ ಬಿಜೆಪಿಯ ಹಾಲಿ ಸಚಿವ ಭಗವಂತ್ ಖೂಬಾ ಅವರನ್ನು 101852 ಮತಗಳ ಸೋಲಿಸಿದ್ದಾರೆ.ಈ ಗೆಲುವಿನ ಮೂಲಕ ಈ ಬಾರಿ ಸಂಸತ್ ನ್ನು ಪ್ರತಿನಿಧಿಸುವ ಅತ್ಯಂತ ಕಿರಿಯ ಸಂಸದ ಎನ್ನುವ ಹೆಗ್ಗಳಿಕೆ್ಗೆ ಪಾತ್ರವಾಗಲಿದ್ದಾರೆ.
***ಪೆನ್ ಡ್ರೈವ್ ಪ್ರಕರಣ ಹಾಸನದ ಮತದಾರರ ಮೇಲೆ ಒಂದಷ್ಟು ಪರಿಣಾಮ ಬೀರಿದಂತಿದೆ.ಅದರ ಪರಿಣಾಮವಾಗಿ ಜೆಡಿಎಸ್ ನ ಪ್ರಜ್ವಲ್ ರೇವಣ್ಣ ಸೋಲು ಅನುಭವಿಸಿದ್ದಾರೆ.ಕಾಂಗ್ರೆಸ್ ನ ಶ್ರೇಯಸ್ ಪಟೇಲ್ 41187 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.ವಿಶೇಷ ಹಾಗು ವಿಚಿತ್ರ ಎಂದರೆ ಶ್ರೇಯಸ್ ಪಟೇಲ್ ಅವರ ಅಜ್ಜ ಪುಟ್ಟಸ್ವಾಮಿ ಗೌಡ ಅವರು ಒಂದು ಕಾಲದಲ್ಲಿ ಪ್ರಜ್ವಲ್ ಅವರ ಅಜ್ಜ ದೇವೇಗೌಡರನ್ನು ಸೋಲಿಸಿದ್ದರು.ಬದಲಾದ ಕಾಲಘಟ್ಟದಲ್ಲಿ ಈಗ ಮೊಮ್ಮಗ ಪ್ರಜ್ವಲ್ ಅವರನ್ನು ಮತ್ತೊಬ್ಬ ಮೊಮ್ಮಗ ಶ್ರೇಯಸ್ ಪಟೇಲ್ ಸೋಲಿಸುವ ಮೂಲಕ ಇತಿಹಾಸ ಮರುಕಳಿಸಿದ್ದಾರೆ
***ತಾನು ಸ್ಪರ್ದಿಸಿದ 3 ಕ್ಷೇತ್ರಗಳ ಪೈಕಿ ಎರಡರಲ್ಲಿ ಗೆಲುವು ದಾಖಲಿಸಿದೆ. ಮಂಡ್ಯದಿಂದ ಮಾಜಿ ಸಿಎಂ ಕುಮಾರಸ್ವಾಮಿ 2,53,372 ಮತಗಳ ಅಂತರದಿಂದ ಭಾರೀ ಗೆಲುವು ಸಾಧಿಸಿದ್ದಾರೆ.ಅವರು ಕಾಂಗ್ರೆಸ್ ನ ಸ್ಟಾರ್ ಚಂದ್ರು ಅವರನ್ನು ಸೋಲಿಸಿದ್ದಾರೆ.ಇನ್ನು ಕೋಲಾರದಲ್ಲಿ ಜೆಡಿಎಸ್ ಮಲ್ಲೇಶ್ ಬಾಬು ಅವರು ಕಾಂಗ್ರೆಸ್ ನ ಗೌತಮ್ ಅವರನ್ನು ಸೋಲಿಸಿದ್ದಾರೆ.
***ದಾವಣಗೆರೆಯಲ್ಲಿ ಕಾಂಗ್ರೆಸ್ ನ ಹಿರಿಯ ಧುರೀಣ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಮತ್ತು ಸಚಿವ ಮಲ್ಲಿಕಾರ್ಜುನ್ ಅವರ ಧರ್ಮಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ಹಾಲಿ ಸಂಸದ ಸಿದ್ದೇಶ್ವರ್ ಅವರ ಧರ್ಮಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಸೋಲಿಸಿದ್ದಾರೆ.
***ಶಿವಮೊಗ್ಗದಲ್ಲಿ ಹಾಲಿ ಸಂಸದ ಬಿ.ವೈ ರಾಘವೇಂದ್ರ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ.ಅವರು ಕಾಂಗ್ರೆಸ್ ನ ಗೀತಾ ಶಿವರಾಜ್ ಕುಮಾರ್ ಅವರನ್ನು ಸೋಲಿಸಿದ್ದಾರೆ.ವಿಶೇಷ ಎಂದ್ರೆ ಇಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ತಮ್ಮ ಮಾಜಿ ಅಪ್ತ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ದ ತೊಡೆತಟ್ಟಿದ್ದ ಕೆ.ಎಸ್.ಈಶ್ವರಪ್ಪ ಠೇವಣಿ ಪಡೆದುಕೊಳ್ಳಲೂ ಸಾಧ್ಯವಾಗಿಲ್ಲ.ಏಕೆಂದರೆ ಅವರಿಗೆ ಪಡೆಯಲು ಸಾಧ್ಯವಾಗಿದ್ದು ಕೇವಲ 22 ಸಾವಿರ ಮತ ಅಷ್ಟೇ. ಸೋಲಿನ ನಂತರವೂ ಬಿಜೆಪಿ ಸೇರಬಹುದೆನ್ನುವ ಆಸೆ ಹೊತ್ತಿದ್ದ ಈಶ್ವರಪ್ಪ ಅವರ ಮಹತ್ವಾಕಾಂಕ್ಷೆಗೆ ಅವರ ಕಳಪೆ ಪ್ರದರ್ಶನ ತಣ್ಣೀರೆರಚಿದೆ ಎನ್ನಬಹುದೇನೋ
***ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಸರ್ಕಾರದ ಹಾಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಕೂಡ ಗೆಲುವು ಸಾಧಿಸಿದ್ದಾರೆ.ಅವರು ಬಿಜೆಪಿಯ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರನ್ನು ಸೋಲಿಸಿದ್ದಾರೆ.
***ಧಾರವಾಡದಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಷಿ ಅವರು ಅಸೂಟಿ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.ಇದು ಪ್ರಹ್ಲಾದ್ ಜೋಷಿ ಅವರ ದಾಖಲೆಯ ಗೆಲುವು ಇದಾಗಿದೆ.
***ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ ನ ಮನ್ಸೂರ್ ಅಲಿಖಾನ್ ಗೆಲುವು ಅವರು ಮೂರು ಬಾರಿ ಸಂಸದ ಬಿಜೆಪಿಯ ಪಿ.ಸಿ ಮೋಹನ್ ಅವರನ್ನು…ಮತಗಳ ಅಂತರದಿಂದ ಸೋಲಿಸಿದ್ದಾರೆ.
***ಬೆಂಗಳೂರು ದಕ್ಷಿಣದಲ್ಲಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ನ ಮಾಜಿ ಶಾಸಕಿ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರನ್ನು ಭಾರೀ ಮತಗಳ ಅಂತರದಿಂದ ಸೋಲಿಸಿದ್ದಾರೆ.
***ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಸ್ಥಾನ ಭದ್ರ ಮಾಡಿಕೊಂಡಿದೆ.ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ನ ಪ್ರೊ.ರಾಜೀವ್ ಗೌಡ ಅವರನ್ನು ಸೋಲಿಸಿದ್ದಾರೆ.
***ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ಅವರು ಮಾಜಿ ಸಂಸದ ಬಿ.ಎನ್ .ಚಂದ್ರಪ್ಪ ಅವರನ್ನು ಸೋಲಿಸಿ ಅಚ್ಚರಿ ಗೆಲುವು ದಾಖಲಿಸಿದ್ದಾರೆ.
***ಬಾಗಲಕೋಟೆಯಲ್ಲಿ ಶಾಸಕ ಶಿವಾನಂದ ಪಟೇಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ಅವರನ್ನು ಹಾಲಿ ಸಂಸದ ಗದ್ದಿಗೌಡರ್ ಸೋಲಿಸಿದ್ದಾರೆ.
***ಕೊಪ್ಪಳದಲ್ಲಿ ಕಾಂಗ್ರೆಸ್ ನ ಬಸವರಾಜ ಹಿಟ್ನಾಳ್ ಅವರು ವಿಜಯ ಸಾಧಿಸಿದ್ದಾರೆ.ಅವರು ತಮ್ಮ ಪ್ರತಿಸ್ಪರ್ದಿ ಡಾ.ಬಸವರಾಜ್ ಅವರನ್ನು ಸೋಲಿಸಿದ್ದಾರೆ.
***ಉತ್ತರ ಕನ್ನಡದಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡಿ ಕಾಗೇರಿ ಗೆಲುವು ಸಾಧಿಸಿದ್ದಾರೆ.ಮಾಜಿ ವಿಧಾನಸಭೆ ಸ್ಪೀಕರ್ ಹಾಗೂ ಪರಾಜಿತ ಅಭ್ಯರ್ತಿ ಕಾಗೇರಿ ಅವರು ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ದ ದಾಖಲೆ ಗೆಲುವು ಸಾಧಿಸಿದ್ದಾರೆ.
***ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ತವರು ಕ್ಷೇತ್ರ ಗುಲ್ಬರ್ಗಾದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರು ಹಾಲಿ ಸಂಸದ ಡಾ.ಉಮೇಶ್ ಜಾಧವ್ ಅವರನ್ನು ಸೋಲಿಸಿದ್ರು.ಕಳೆದ ಬಾರಿ ಗುರು ಖರ್ಗೆಯನ್ನೇ ಸೋಲಿಸಿದ್ದ ಶಿಷ್ಯ ಉಮೇಶ್ ಜಾಧವ್ ಗೆ ತಮ್ಮ ಅಳಿಯನ ಮೂಲಕವೇ ಪಾಠ ಕಲಿಸಿ ರಾಜಕೀಯ ಪ್ರತಿಕಾರ ತೀರಿಸಿಕೊಂಡಿದ್ದಾರೆ.
***ಚಾಮರಾಜನಗರದಲ್ಲಿ ಸಚಿವ ಡಾ.ಎಚ್ ಸಿ ಮಹಾದೇವಪ್ಪ ಅವರ ಪುತ್ರ ಸುನೀಲ್ ಬೋಸ್ 1,61 ಲಕ್ಷ ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.ಅವರು ಬಿಜೆಪಿಯ ಬಾಲರಾಜ್ ಅವರನ್ನು ಮತಗಳ ಅಂತರದಿಂದ ಸೋಲಿಸಿದ್ದಾರೆ.
***ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಸಂಭಾವಿತ ರಾಜಕಾರಣಿ ಎಂದೇ ಕರೆಯಿಸಿಕೊಳ್ಳುವ ಹಾಲಿ ವಿಧಾನಪರಿಷತ್ ಬಿಜೆಪಿ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅರ್ಹ ಗೆಲುವು ಸಾಧಿಸಿದ್ದಾರೆ.ಅವರು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿದ್ದಾರೆ.
***ಇನ್ನು ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾದ ಮೈಸೂರು ಕೊಡಗು ಕ್ಷೇತ್ರದಲ್ಲಿ ಮೈಸೂರು ಯುವರಾಜ ಯದುವೀರ್ ಒಡೆಯರ್ ಕಾಂಗ್ರೆಸ್ ನ ಲಕ್ಷ್ಮಣ್ ಅವರನ್ನು ಸೋಲಿಸಿದ್ದಾರೆ.
***ರಾಯಚೂರು ಕ್ಷೇತ್ರದಲ್ಲಿ ಮಾಜಿ ಐಎಎಸ್ ಕುಮಾರನಾಯ್ಕ ಅವರು ಬಿಜೆಪಿಯ ರಾಜಾ ಅಮರೇಶ್ವರ ನಾಯ್ಕ ಅವರನ್ನು ಸೋಲಿಸಿ ಲೋಕಸಭೆಯನ್ನು ಪ್ರವೇಶಿಸಿದ್ದಾ್ರೆ.
***ವಿಜಯಪುರದಲ್ಲಿ ಬಿಜೆಪಿಯ ಹಾಲಿ ಸಂಸದ ರಮೇಶ್ ಜಿಗಜಿಣಗಿ ಅವರು ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ.ಅವರು ತಮ್ಮ ಪ್ರತಿಸ್ಪರ್ದಿ ಕಾಂಗ್ರೆಸ್ ನ ರಾಜು ಅಲಗೂರು ಅವರನ್ನು ..ಮತಗಳ ಅಂತರದಿಂದ ಸೋಲಿಸಿದ್ದಾರೆ.
***ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ನ ರಕ್ಷಾ ರಾಮಯ್ಯ ಸೋಲು ಅನುಭವಿಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿಯ ಮಾಜಿ ಸಚಿವ ಡಾ.ಸುಧಾಕರ್ ಅವರು ರಕ್ಷಾ ರಾಮಯ್ಯ ಅವರನ್ನು ಸೋಲಿಸಿದ್ದಾರೆ.
***ಗಣಿನಾಡು ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.ಕಳೆದ ವಿಧಾನಸಭೆಯಲ್ಲಿ ಸೋತಿದ್ದ ಮಾಜಿ ಸಚಿವ ಬಿ.ಶ್ರಿರಾಮಲು ಲೋಕಸಭಾ ಎಲೆಕ್ಷನ್ ನಲ್ಲೂ ಸೋತಿದ್ದಾರೆ.ಸಂಡೂರಿನ ಹಾಲಿ ಶಾಸಕ ಇ.ತುಕರಾಂ ಇಲ್ಲಿ ಗೆಲುವು ಸಾಧಿಸಿದ್ದಾರೆ.ವಿಶೇಷ ಎಂದರೆ ಅನೇಕ ವರ್ಷಗಳಿಂದ ದೂರವಾಗಿದ್ದ ಶ್ರಿರಾಮಲು ಸ್ನೇಹಿತ ಗಣಿದಣಿ ಜನಾರ್ದನ ರೆಡ್ಡಿ ದ್ವೇಷ ಮರೆತು ಮಾಡಿದ ಪ್ರಚಾರವೂ ಶ್ರೀರಾಮುಲು ಪಾಲಿಗೆ ವರ್ಕೌಟ್ ಆಗಲೇ ಇಲ್ಲ.ಬಹುಷಃ ಈ ಸೋಲನ್ನು ಬಿ.ಶ್ರಿರಾಮುಲು ಹೇಗೆ ಸಹಿಸಿಕೊಳ್ಳುತ್ತಾರೋ ಗೊತ್ತಿಲ್ಲ.
***ಕಲ್ಪತರು ನಾಡು ತುಮಕೂರಿನಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಮಾಜಿ ಸಚಿವ ವಿ,.ಸೋಮಣ್ಣ ಗೆಲುವು ಸಾಧಿಸಿದ್ದಾರೆ.ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸೋಮಣ್ಣ ತಮ್ಮ ಎದುರಾಳಿ ಮಾಜಿ ಸಂಸದ ಮುದ್ದೇ ಹನುಮೇಗೌಡ ಅವರನ್ನು ಸೋಲಿಸಿದ್ದಾರೆ.