ಬಿಬಿಎಂಪಿ ಶಾಲೆಗಳೆಂದ್ರೆ ಮೂಗು ಮುರಿಯುವ, ಹಿಂದೇಟು ಹಾಕುವ ಸ್ಥಿತಿಯಿದೆ.ಅಂತದ್ದರ ನಡುವೆ ಬಿಬಿಎಂಪಿ ಶಾಲೆಗಳನ್ನು ಇತರೆ ಶಾಲೆಗಳ ಜತೆಗೆ ಸ್ಪರ್ದೆಗೆ ಇಳಿಸಲು ಬೇಕಿರುವುದು ನುರಿತ ಶಿಕ್ಷಕರು ಹಾಗೂ ಗುಣಮಟ್ಟದ ಶಿಕ್ಷಣ.ಇದು ಸಿಗೊಕ್ಕೆ ಸಾಧ್ಯವೇ ಇಲ್ಲವೆಂದೇನಲ್ಲ.
ಆದ್ರೆ ಆ ವ್ಯವಸ್ಥೆ ಮಾಡುವ ಬದ್ಧತೆ ನಮ್ಮ ಬಿಬಿಎಂಪಿ ಆಡಳಿತಕ್ಕೆ ಇಲ್ಲ ಎನಿಸುತ್ತದೆ.ಹಾಗಾಗಿಯೇ ಬೆಂಕಿಯಿಂದ ಬಾಣಲೆಗೆ ಎನ್ನುವಂಥ ಸ್ಥಿತಿಯನ್ನು ನಿರ್ಮಿಸಲು ಮತ್ತೆ ಹೊರಟಿದೆ ಬಿಬಿಎಂಪಿ.ನೇರವಾಗಿ ಶಿಕ್ಷಕರ ಆಯ್ಕೆಯನ್ನು ಬಿಬಿಎಂಪಿಯಿಂದಲೇ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದ ಬಿಬಿಎಂಪಿ ವಿದ್ಯಾಇಲಾಖೆ ಮಾತು ತಪ್ಪಿದೆ.ಶಿಕ್ಷಕರನ್ನು ಪೂರೈಸಲು ಮೂರು ಹೊರಗುತ್ತಿಗೆ ಏಜೆನ್ಸಿಗೆ ಟೆಂಡರ್ ನೀಡೊಕ್ಕೆ ಹೊರಟಿದೆ.ಇದಕ್ಕೆ ವ್ಯಾಪಕ ಖಂಡನೆ ಜತೆಗೆ ವಿದ್ಯಾಇಲಾಖೆ ಧೋರಣೆ ಬಗ್ಗೆನೇ ಅನುಮೂನ ಮೂಡುವಂತಾಗಿದೆ.
ಬಿಬಿಎಂಪಿ ಶಾಲೆ-ಕಾಲೇಜುಗಳ ಬಗ್ಗೆ ಇರುವ ಅಪವಾದವನ್ನು ದೂರ ಮಾಡಬೇಕಾದ ಆಡಳಿತವೇ ಗುಣಮಟ್ಟದ ಶಿಕ್ಷಣ ಹಾಗೂ ನುರಿತ-ನಿಷ್ಣಾತ ಶಿಕ್ಷಕರ ಆಯ್ಕೆಗೆ ಎಲ್ಲೋ ಒಂದೆಡೆ ಹಿಂದೇಟು ಹಾಕುತ್ತಿದೆಯೇ ಎನಿಸುತ್ತದೆ.ಏಕೆಂದರೆ ಅದೇ ಹಳೇ ವ್ಯವಸ್ಥೆಯಾದ ಹೊರಗುತ್ತಿಗೆ ಏಜೆನ್ಸಿಗಳ ಮೂಲಕವೇ ಶಿಕ್ಷಕರನ್ನು ನೇಮಿಸಿಕೊಳ್ಳುವ ಕೆಟ್ಟ ಸಂಪ್ರದಾಯಕ್ಕೆ ಕೈ ಹಾಕಿದೆ.ಎಲ್ಲವೂ ಸರಿಯಾಗಲಿದೆ..ಎಲ್ಲವನ್ನೂ ಸರಿಮಾಡಲಿದ್ದೇವೆ ಎಂದೆಲ್ಲಾ ಹೇಳಿದ್ದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಮತ್ತೆ ಮೂರು ಏಜೆನ್ಸಿಗಳ ಹೆಗಲಿಗೆ ಶಿಕ್ಷಕರನ್ನು ಪೂರೈಸುವ ಹೊಣೆಗಾರಿಕೆ ನೀಡಿದ್ದಾರೆ.
ಬಿಬಿಎಂಪಿಯ ದಕ್ಷಿಣ ವಲಯ ಮತ್ತು ಆರ್.ಆರ್ ನಗರ ವಲಯಕ್ಕೆ ಅಪ್ಪು ಡಿಟೆಕ್ಟಿವ್ ಆಂಡ್ ಸೆಕ್ಯೂರಿಟಿ ಸರ್ವೀಸ್.ಪೂರ್ವ ವಲಯಕ್ಕೆ ಡಿಟೆಕ್ಷವೆಲ್ ಅಂಡ್ ಸೆಕ್ಯೂರಿಟಿ ಸರ್ವಿಸಸ್ ಪ್ರೈ ಲಿ. ಹಾ್ಊ ಪಶ್ಚಿಮ ವಲಯಕ್ಕೆ ಶಾರ್ಪ್ ವಾಚ್ ಇನ್ ವೆಸ್ಟಿಂಗ್ ಸೆಕ್ಯೂರಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟಿಡ್ ಎನ್ನುವಂತ ಹೊರಗುತ್ತಿಗೆ ಏಜೆನ್ಸಿಗಳಿಗೆ ಶಿಕ್ಷಕರನ್ನು ಪೂರೈಸುವ ಹೊಣೆಗಾರಿಕೆ ನೀಡಿದೆ.
“ಭದ್ರತಾ ಸಿಬ್ಬಂದಿ ಪೂರೈಸುವ ಏಜೆನ್ಸಿಗೆ ಹೋಗಿ ಶಿಕ್ಷಕರನ್ನು ಪೂರೈಸು ವ ಟೆಂಡರ್ ನ್ನು ನೀಡಿರುವ ಬಿಬಿಎಂಪಿ ವಿದ್ಯಾಇಲಾಖೆಯ ಯಡವಟ್ಟಿಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ವ್ಯಾಪಕ ಖಂಡನೆ-ಟೀಕೆ ವ್ಯಕ್ತಪಡಿಸಿದ್ದಾರೆ.ಬಿಬಿಎಂಪಿ ವಿದ್ಯಾಇಲಾಖೆಯ ಸ್ಥಿತಿ ಇಷ್ಟು ಪ್ರಪಾತಕ್ಕೆ ಇಳಿದು ಹೋಯ್ತಾ..? ಈ ವಿಷಯದ ಬಗ್ಗೆ ತಮಗೆ ಹಿಂದೆಯೇ ಶಂಕೆ ವ್ಯಕ್ತವಾದಾಗ ನಾನು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಗಮನಕ್ಕೆ ತಂದಿದ್ದೆ.ಸಮಸ್ಯೆ ಸರಿಪಡಿಸುವುದಾಗಿ ಅವರು ಹೇಳಿದ್ದರು.ಆದರೆ ಅದು ಆಗಿಲ್ಲ ಎನ್ನುವುದು ಈಗ ನಡೆದಿರುವ ಯಡವಟ್ಟಿನಿಂದಲೇ ಗೊತ್ತಾಗುತ್ತದೆ.ಯಾಕೆ ನಮ್ಮ ಬಿಬಿಎಂಪಿ ವಿದ್ಯಾಇಲಾಖೆ ಇಷ್ಟೊಂದು ಸಂವೇದನಾಶೂನ್ಯವಾಯಿತೋ ಗೊತ್ತಿಲ್ಲ” -ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್
ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಶಿಕ್ಷಕರ ನೇಮಕಾತಿ ಮತ್ತು ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ಗುತ್ತಿಗೆ ನೀಡುವಂಥ ಸ್ಥಿತಿ ತಲುಪಿತಾ ಎಂದು ಪ್ರಶ್ನಿಸಲಾರಂಭಿಸಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕರನ್ನು ಪೂರೈಸುವ ಟೆಂಡರ್ ಪಡೆದಿರುವ ಮೂರು ಏಜೆನ್ಸಿಗಳ ಅರ್ಹತೆ-ಸಾಮರ್ಥ್ಯ ಕೂಡ ಸರಿಯಾಗಿಲ್ಲ.ಏಕೆಂದ್ರೆ ಭದ್ರತಾ ಸಿಬ್ಬಂದಿ ನೇಮಿಸುವ ಮೂರು ಸೆಕ್ಯೂರಿಟಿ ಏಜೆನ್ಸಿಗಳಿಗೆ ಶಿಕ್ಷಕರ ಪೂರೈಕೆ ಹೊಣೆ ನೀಡಲಾಗಿದೆ. ಯಾವ ಮಾನದಂಡ ಅನುಸಾರ ಗುತ್ತಿಗೆ ನೀಡಿದರು ಎಂಬುದು ಅನೇಕರ ಪ್ರಶ್ನೆ.ಶಿಕ್ಷಕರು ನೇಮಿಸಿಕೊಳ್ಳಲು ಸೇವೆ ಒದಗಿಸಲು ಶಿಕ್ಷಣ ಕ್ಷೇತ್ರದ ಅರಿವು ಇರುವವರು ಮತ್ತು ನುರಿತ ಏಜೆನ್ಸಿರವರಿಗೆ ನೀಡಬೇಕು. ಅದರೆ ಶಿಕ್ಷಕ ಸೇವಾ ಪೂರೈಕೆ ಮಾಡುವ ಹೊಣೆಯನ್ನು ಸೆಕ್ಯೂರಿಟಿ ಏಜೆನ್ಸಿಗೆ ನೀಡಿರುವುದು ಬಿಬಿಎಂಪಿಗೆ ಶಿಕ್ಷಣ ಕ್ಷೇತ್ರದ ಕುರಿತು ಇರುವ ಅಸಡ್ಡೆಯನ್ನು ಎತ್ತಿ ತೋರಿಸುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಮಾನ್ಯ ವಿಶೇಷ ಆಯುಕ್ತರು,ಈ ಹಿಂದೆ ಸೆಕ್ಯೂರಿಟಿ ಏಜೆನ್ಸಿಗೆ ಗುತ್ತಿಗೆ ನೀಡುವುದಿಲ್ಲ ಎಂದು ಹೇಳಿದ್ದರು ಅದರೆ ಇಂದು ತರಾತುರಿಯಲ್ಲಿ ಅನುಮತಿ ನೀಡಿರುವುದು ಅಧಿಕಾರಿಗಳ ಬೇಜವಾದ್ದಾರಿ ಎದ್ದು ಕಾಣುತ್ತದೆ. ಸೆಕ್ಯೂರಿಟಿ ಸರ್ವಿಸಸ್ ಸಂಸ್ಥೆಗಳು ಶಿಕ್ಷಕರ ಅರ್ಹತೆ ಮತ್ತು ಶಿಕ್ಷಕರು ಶಾಲೆಯಲ್ಲಿ ಪಾಠ ಮಾಡುವುದು ಮತ್ತು ನಡವಳಿಕೆ ಮಾಪನ ಮಾಡಲು ಸಾಧ್ಯವೇ..?
ಈ ಹಿಂದೆ ರಾಜ್ಯ ಶಿಕ್ಷಣ ಇಲಾಖೆಯ ವತಿಯಿಂದ ಹೊರಗುತ್ತಿಗೆ ಮೇಲೆ ಶಿಕ್ಷಕರನ್ನ ನೇಮಿಸಿಕೊಳ್ಳಲಾಗುವುದು ಎಂದು ಹೇಳಿದ್ದರು ಅದರೆ ಅದು ನಡೆಯಲಿಲ್ಲ. ಸೆಕ್ಯೂರಿಟಿ ಏಜೆನ್ಸಿಗೂ ಶಿಕ್ಷಕರ ಸೇವಾ ಪೂರೈಕೆಗೂ ಎಲ್ಲೆಂದೆಲ್ಲಿಯ ಸಂಬಂಧ ಎನ್ನುವುದು ಮೂಲಭೂತವಾದ ಪ್ರಶ್ನೆ.
ರಸ್ತೆ ಕಾಮಗಾರಿ ಮಾಡಲು ಮತ್ತು ಕ್ರೀಡಾ ಸಲಕರಣೆ ಸರಬರಾಜು ಮಾಡಲು ನಿರ್ದಿಷ್ಟ ಗುತ್ತಿಗೆದಾರರಿಗೆ ನೀಡುತ್ತಾರೆ. ಅದರೆ ಶಿಕ್ಷಕರ ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ನೀಡಲು ಯಾವ ಮಾನದಂಡ ಉಪಯೋಗಿಸಿದರು ಎಂಬುದು ನಿಗೂಢವಾಗಿದೆ.ಈ ಹಿಂದೆ ಗುತ್ತಿಗೆ ಪಡೆದ ಕ್ರಿಸ್ಟಲ್ ಸಂಸ್ಥೆಯಲ್ಲಿರುವ ಶಿಕ್ಷಕರನ್ನ ಮುಂದು ವರಿಸಲು ಹೊಸದಾಗಿ ಗುತ್ತಿಗೆ ಪಡೆದ ಸೆಕ್ಯೂರಿಟಿ ಅರ್ಜಿ ಆಹ್ವಾನ ಮಾಡಿದ್ದಾರೆ. ಮತ್ತು ಹೊಸ ಶಿಕ್ಷಕರನ್ನ ನೇಮಿಸಿಕೊಳ್ಳಲು ಸೆಕ್ಯೂರಿಟಿ ಏಜೆನ್ಸಿಗಳಿಗೆ ಶಿಕ್ಷಣ ಕ್ಷೇತ್ರ ಕುರಿತು ಅನುಭವವಿರಬೇಕು ಈ ಏಜೆನ್ಸಿಗಳಿಗೆ ಇದೆಯಾ ಎಂದು ನೋಡಿಲ್ಲ.
ಇನ್ನು ಶಾರ್ಪ್ ವಾಚ್ ಇನ್ ವೆಸ್ಟಿಂಗ್ ಸೆಕ್ಯೂರಿಟಿ ಸರ್ವಿಸಸ್ ಪ್ರೈ ಲಿಮಿಟಿಡ್ ಮೈಸೂರುನಗರದಲ್ಲಿ ಕಛೇರಿ ಹೊಂದಿದೆ ಶಿಕ್ಷಕರು ಇ.ಎಸ್.ಐ.ಮತ್ತು ಪಿ.ಎಫ್ ಏನಾದರು ಸಹಿ, ಸಮಸ್ಯೆ ಬಗೆಹರಿಸಲು ಮೈಸೂರಿಗೆ ಹೋಗುವ ಪರಿಸ್ಥಿತಿ ಬರುತ್ತದೆ ಇದು ಸಾಧ್ಯವೇ..?
ಬಹುಷಃ ಪಾಲಿಕೆಯಲ್ಲಿ ಕಾರ್ಪೊರೇಟರ್ಸ್ ಗಳೆನ್ನುವವರು ಇದ್ದರೆ ಈ ರೀತಿಯ ಪರಿಸ್ತಿತಿ ನಿರ್ಮಾಣವಾಗುತ್ತಿತ್ತೇ..? ಶಾಸಕರು ಕೂಡ ಇದರ ಬಗ್ಗೆ ಪ್ರಶ್ನಿಸುತ್ತಿಲ್ಲ. ಕಾರ್ಪೊರೇಟರ್ಸ್ ಇಲ್ಲದಿರುವುದರಿಂದಲೇ ಅಧಿಕಾರಿಗಳು ತಮಗೆ ಇಷ್ಟಬಂದಂತೆ ಮಾಡುತ್ತಿದ್ದಾರೆ.ತಮ್ಮದೇ ರೂಲ್ಸ್ ರೂಪಿಸುತ್ತಿದ್ದಾರೆ.ಆದರೆ ಪ್ರೀತಿ ಗೆಹ್ಲೋಟ್ ಅವರಂಥ ಐಎಎಸ್ ಅಧಿಕಾರಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಟೆಂಡರ್ ನ್ನು ಯಾಕೆ..ಯಾವ ಮಾನದಂಡದ ಮೇಲೆ ಭದ್ರತಾ ಸಿಬ್ಬಂದಿ ಪೂರೈಸುವ ಏಜೆನ್ಸಿಗೆ ಕೊಟ್ಟರೆನ್ನೋದೇ ಕುತೂಹಲಕಾರಿ ಹಾಗೆಯೇ ಅನುಮಾನಕಾರಿ ಕೂಡ.