ಶಾಂತ್ ಎ ತಿಮ್ಮಯ್ಯ
ಶಾಂತ್ ಎ ತಿಮ್ಮಯ್ಯ

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ   ಅವರಿಗೆ ತೀವ್ರ ಮುಖಭಂಗವಾಗಿದೆ.ಸರ್ಕಾರದ ಜತೆ ನೇರ ಸಂಘರ್ಷಕ್ಕಿಳಿದಿದ್ದ ಶಾಂತ್ ಎ ತಿಮ್ಮಯ್ಯ ಅವರನ್ನು ತತ್ ಕ್ಷಣಕ್ಕೆ ಜಾರಿಗೆ ಬರುವಂತೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಸರ್ಕಾರ ಆದೇಶ ಹೊರಡಿಸಿದೆ.ಅವರ ಸ್ಥಾನದಲ್ಲಿ ಪರಿಸರ-ಅರಣ್ಯ-ಸೂಕ್ಷ್ಮಜೀವಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಪಿ ರವಿ ಅವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ಸರ್ಕಾರದ ಜತೆ ಸಂಘರ್ಷಕ್ಕಿಳಿದು ಕೆಂಗಣ್ಣಿಗೆ ಗುರಿಯಾಗಿದ್ದ  ಶಾಂತ್ ಎ ತಿಮ್ಮಯ್ಯ ಅವರನ್ನು ಸರ್ಕಾರ ಒಂದು ಸಣ್ಣ ಸುಳಿವು ಕೊಡದೆ ಮೇ.31 ರ ಸಂಜೆ ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳಿಸಿದೆ.ತನ್ನ ಆದೇಶ ಸಂಖ್ಯೆ: ಅಪಜೀ 169 ಇಪಿಪಿ 2023, ದಿನಾಂಕ: 31:05:2024 ರಲ್ಲಿ ಜಲ( ಮಾಲಿನ್ಯನಿವಾರಣೆ ಮತ್ತು ನಿಯಂತ್ರಣ) ಅಧಿನಿಯಮ1974ರ ಪ್ರಕರಣ (1) ಜಿ ರಡಿ  ಪ್ರದತ್ತವಾದ ಅಧಿಕಾರ ಚಲಾಯಿಸಿ ಶಾಂತ್ ಎ ತಿಮ್ಮಯ್ಯ ಅವರನ್ನು ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳಿಸುತ್ತಿರುವುದಾಗಿ ಅಧಿಸೂಚನೆ ಹೊರಡಿಸಿದೆ. ಮುಂದಿನ ಅಧ್ಯಕ್ಷ ಆಯ್ಕೆ ಆಗುವವರೆಗೂ ಅವರ ಸ್ಥಾನದಲ್ಲಿ  ಪರಿಸರ-ಅರಣ್ಯ-ಸೂಕ್ಷ್ಮಜೀವಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಪಿ ರವಿ ಅವರನ್ನು ಅಧ್ಯಕ್ಷರನ್ನಾಗಿಸಿ ನೇಮಿಸಿ ಆದೇಶ ಹೊರಡಿಸಿದೆ.

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶಾಂತ್ ಎ ತಿಮ್ಮಯ್ಯ ಅವರನ್ನು ಅಧ್ಯಕ್ಷಸ್ಥಾನದಿಂದ ಕೆಳಗಿಳಿಸಿ ಆದೇಶ ಹೊರಡಿಸಿತ್ತು.ಅವರ ಸ್ಥಾನದಲ್ಲಿ ಅವರಷ್ಟೇ ಅನುಭವಿಯಾಗಿರುವ ಸೂರಿ ಪಯಾಲ್ ಅವರನ್ನು ಅಧ್ಯಕ್ಷರನ್ನಾಗಿಸಿ ಆದೇಶ ಹೊರಡಿಸಿತ್ತು.ಆದರೆ ಇದರಿಂದ ತೀವ್ರ ಮುಜುಗರ ಹಾಗೂ ಅಪಮಾನಕ್ಕೀಡಾದ ಶಾಂತ್ ಎ ತಿಮ್ಮಯ್ಯ ಅವರು ಸರ್ಕಾರದ ವಿರುದ್ಧವೇ ಕಾನೂನಾತ್ಮಕ ಸಮರ ಸಾರಿದರು.ಸುಪ್ರಿಂ ಕೋರ್ಟ್ ನಲ್ಲೇ ತಮ್ಮ ಪರ ತೀರ್ಪು ಹೊರಬೀಳುವಂತೆ ಮಾಡಿದ್ದರು.ಆಗಲೇ ಸರ್ಕಾರ  ಶಾಂತ್ ಎ ತಿಮ್ಮಯ್ಯ ಅವರನ್ನು ಆಡಳಿತಾತ್ಮಕ ಹಾಗೂ ತಾಂತ್ರಿಕ ಕಾರಣಗಳನ್ನೊಡ್ಡಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಲೇ ಇತ್ತು.ಆ ಪ್ರಯತ್ನಗಳ ಭಾಗವಾಗಿಯೇ ಇಂದು ಶಾಂತ್ ಎ ತಿಮ್ಮಯ್ಯ ಅವರನ್ನು ಅನರ್ಹಗೊಳಿಸಿ ನೂತನ ಅಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಆದರೆ ಶಾಂತ್ ಎ ತಿಮ್ಮಯ್ಯ ಅವರ ವಾದವೇ ಬೇರೆಯಾಗಿದೆ.ತಮ್ಮ ಅಧಿಕಾರವಧಿ ನವೆಂಬರ್ 2024 ರವರೆಗೆ ವಿಸ್ತರಣೆಯಾಗಿದ್ದು ಅಲ್ಲಿವರೆಗೆ ತಮ್ಮ ಸ್ಥಾನಕ್ಕೆ ಧಕ್ಕೆ ಉಂಟು ಮಾಡದಂತೆ ಸರ್ಕಾರಕ್ಕೆ ಸುಪ್ರಿಂ ಕೋರ್ಟ್  ಆದೇಶ ನೀಡಿರುವುದಾಗಿ ಹೇಳಿದ್ದಾರೆ.ಈ ಹಿನ್ನಲೆಯಲ್ಲಿ ಇದೇ ನವೆಂಬರ್ 2024 ವರೆಗೂ ತಮ್ಮ ಅಧಿಕಾರವಧಿ ಇದ್ದು ಸರ್ಕಾರ ತಮ್ಮ ಸ್ಥಾನ ಅಭದ್ರಗೊಳಿಸಿದ್ರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ  ಯಾರಾಗಲಿದ್ದಾರೆ ಮುಂದಿನ ಅಧ್ಯಕ್ಷ

“ಶಾಂತ್ ಎ ತಿಮ್ಮಯ್ಯ ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳ್ಳುತ್ತಿದ್ದಂತೆ ಮುಂದಿನ ಅಧ್ಯಕ್ಷರು ಯಾರಾಗಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.ಅದಕ್ಕೆ ಉತ್ತರ ಎನ್ನುವಂತೆ ಹಲವರ ಹೆಸರುಗಳು ಕೇಳಿಬರುತ್ತಿವೆ.ಆದರೆ ಆ ಪೈಕಿ ಮುಂಚೂಣಿಯಲ್ಲಿ ಕೇಳಿಬರುತ್ತಿರುವುದು ಮಳವಳ್ಳಿ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಅವರದು.ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಹಲವರು ನೇಮಕವಾದಾಗಲೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಸ್ಥಾನದಲ್ಲಿ ನರೇಂದ್ರಸ್ವಾಮಿ ಅವರ ಹೆಸರು ಕೇಳಿಬಂದಿತ್ತು.ನೇರವಾಗಿ ಇದನ್ನು ಸಿದ್ದರಾಮಯ್ಯ ಅವರೇ ಮಾಡಿದ್ದರೆನ್ನುವುದು ವಿಶೇಷ. ಆದರೆ ಶಾಂತ್ ಎ ತಿಮ್ಮಯ್ಯ ಅವರ ಅಧ್ಯಕ್ಷಗಾಧಿ ವಿಷಯ ಕಾನೂನಾತ್ಮಕ ಸಂಘರ್ಷಕ್ಕೆ ಸೀಮಿತವಾಗಿರುವ ಹಿನ್ನಲೆಯಲ್ಲಿ ಕೊನೇ ಕ್ಷಣದಲ್ಲಿ ನರೇಂದ್ರಸ್ವಾಮಿ ಅವರ ಹೆಸರನ್ನು ಕೈಬಿಡಲಾಗಿತ್ತು.ಆದ್ರೆ ಯಾವತ್ತಿದ್ರೂ ನೀನೇ ಅಧ್ಯಕ್ಷ ತಲೆಕೆಡಿಸಿಕೊಳ್ಳಬೇಡ  ಎಂದು ಸಿದ್ದರಾಮಯ್ಯ ಅವರೇ ಭರವಸೆ ಕೊಟ್ಟಿದ್ದರು..ಹಾಗಾಗಿ ಅವರೇ ಮುಂದಿನ ಅಧ್ಯಕ್ಷರಾಗುವ ಸಾಧ್ಯತೆ ಬಹುತೇಕ ದಟ್ಟವಾಗಿದೆ ಎನ್ನಲಾಗುತ್ತಿದೆ”

ಈ ವಾದಗಳು ಏನೇ ಇರಲಿ, ಸರ್ಕಾರ ಮಾತ್ರ ಶಾಂತ್ ಎ ತಿಮ್ಮಯ್ಯ ಅವರ ವಿಷಯದಲ್ಲಿ ಸ್ಪಷ್ಟವಾದ ನಿಲುವು ಹೊಂದಿದೆ.ತನ್ನ ವಿರುದ್ಧವೇ ಕಾನೂನಾತ್ಮಕ ಸಮರ ಸಾರಿದ್ದಕ್ಕೆ ಪ್ರತೀಕಾರ ಎನ್ನುವಂತೆ ದಿಢೀರ್ ಬೆಳವಣಿಗೆಯಲ್ಲಿ ಶಾಂತ್ ಎ ತಿಮ್ಮಯ್ಯ ಅವರ ಅಧ್ಯಕ್ಷಸ್ಥಾನವನ್ನೇ ಅಲುಗಾಡಿಸಿ ಮರ್ಮಾಘಾತ ನೀಡಿದೆ.ಆದರೆ ಇದನ್ನು ಪ್ರಶ್ನಿಸಿ ಮತ್ತೊಂದು ಕಾನೂನಾತ್ಮಕ ಸಮರಕ್ಕೆ ಶಾಂತ್ ಎ ತಿಮ್ಮಯ್ಯ ಅವರು ಮುಂದಾಗುತ್ತಾರೆನ್ನುವ ಮಾತುಗಳಿವೆ.

 

Spread the love

Leave a Reply

Your email address will not be published. Required fields are marked *

You missed