EXCLUSIVE…ಇದೆಂಥಾ ಅನ್ಯಾಯ..! ಡ್ರೈವರ್ಸ್-ಕಂಡಕ್ಟರ್ಸ್ ಲೋಪವೆಸಗಿದ್ರೆ  ಅಧಿಕಾರಿಗಳಿಂದಲೇ ವೀಡಿಯೋ ವೈರಲ್..! ಅದೇ ಅಧಿಕಾರಿಗಳಿಂದ ತಪ್ಪಾದ್ರೆ “ಸಾಕ್ಷ್ಯ”ಕ್ಕೇ ತಿಪ್ಪೆ.!?

EXCLUSIVE…ಇದೆಂಥಾ ಅನ್ಯಾಯ..! ಡ್ರೈವರ್ಸ್-ಕಂಡಕ್ಟರ್ಸ್ ಲೋಪವೆಸಗಿದ್ರೆ ಅಧಿಕಾರಿಗಳಿಂದಲೇ ವೀಡಿಯೋ ವೈರಲ್..! ಅದೇ ಅಧಿಕಾರಿಗಳಿಂದ ತಪ್ಪಾದ್ರೆ “ಸಾಕ್ಷ್ಯ”ಕ್ಕೇ ತಿಪ್ಪೆ.!?

***ಡ್ರೈವರ್ ನಿರ್ಲಕ್ಷ್ಯದ ಚಾಲನೆಯಿಂದಾದ ಸರಣಿ ಅಪಘಾತದ ವೀಡಿಯೋ ವೈರಲ್ ಮಾಡಿದ್ದೇ ಅಧಿಕಾರಿಗಳಾ..?

***ತಮ್ಮ ಇಲಾಖೆಯ ವೀಡಿಯೋವನ್ನು ಅವರ  ಅಧಿಕಾರಿಗಳೇ  ಸಾರ್ವಜನಿಕಗೊಳಿಸಬಹುದಾ..?

***ಸಿಬ್ಬಂದಿಯ ತಪ್ಪಿನ ಸಾಕ್ಷ್ಯಗಳು ವೈರಲ್ ಆಗ್ತವೆ..ಆದರೆ ಅಧಿಕಾರಿಗಳ ಭ್ರಷ್ಟಾಚಾರ ಸುದ್ದಿನೇ ಆಗೊಲ್ಲ ಏಕೆ..?

***ಡ್ರೈವರ್ಸ್-ಕಂಡಕ್ಟರ್ಸ್ ಗಳು ಮಾಹಿತಿ ಕೇಳುದ್ರೆ ಕೊಡುವಂಗಿಲ್ಲ ಎನ್ನುವ ಉತ್ತರ..ಆದ್ರೆ ಅದನ್ನು ಅಧಿಕಾರಿಗಳು ಬಹಿರಂಗಪಡಿಸುವುದು ಸೂಕ್ತನಾ..?

***“ಟೆರರ್” ರಮ್ಯಾ ಮೇಡಮ್ ನೀವು ಮಾಡಿದ ಯಡವಟ್ಟುಗಳಿಗೆ, ನೀವೇ ಆತ್ಮಾವಲೋಕನ ಮಾಡಿಕೊಳ್ಳಿ..!?

ಬೆಂಗಳೂರು:ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಎಚ್ಚೆತ್ತುಕೊಂಡು ಅಧಿಕಾರಿಗಳು ಹಾಗೂ ಸಿಬ್ಬಂದಿ ನಡುವೆ ನಡೆಯುತ್ತಿರುವ ತಾರತಮ್ಯ ಸರಿಪಡಿಸದೆ ಹೋದಲ್ಲಿ ಹೊಗೆಯಾಡು ತ್ತಿರುವ ಆಕ್ರೋಶ ಲಾವಾಗ್ನಿಯಾಗಿ ಸ್ಪೋಟಿಸುವುದರಲ್ಲಿ ಅನುಮಾನವೇ ಇಲ್ಲ..ಡ್ರೈವರ್ಸ್-ಕಂಡಕ್ಟರ್ಸ್ ಗಳನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿರುವ ಆಪಾದನೆಗೆ ತುತ್ತಾಗಿರುವ ಅಧಿಕಾರಿವರ್ಗಕ್ಕೆ ಬಿಸಿ ಮುಟ್ಟಿಸದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗೋದರಲ್ಲಿ ಶಂಕೆನೇ ಬೇಡ..ಇದನ್ನು ಹೇಳೊಕ್ಕೆ ಕಾರಣವೂ ಇದೆ.

ಡ್ರೈವರ್ ನಿಯಂತ್ರಣ ತಪ್ಪಿದ ಚಾಲನೆಯಿಂದ ಬಸ್ಸೊಂದು ಸರಣಿ ಅಪಘಾತಕ್ಕೆ ಕಾರಣವಾಗೋ ವೀಡಿಯೋವೊಂದು ಸಾಮಾಜಿಕ ಜಾಲತಾಣ-ಟಿವಿ ಚಾನೆಲ್ ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು.ಘಟನೆಗೆ ಚಾಲಕನೇ ಹೊಣೆ ಎನ್ನುವುದ ರಲ್ಲಿ ಎರಡು ಮಾತಿಲ್ಲ.

ಆತ ತಪ್ಪು ಮಾಡಿರುವುದು ಕಣ್ಣಿಗೆ ರಾಚುವಂತೆ ಕಾಣುತ್ತಿದೆ.ಅದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಖಂಡಾತುಂಡವಾಗಿ ಖಂಡಿಸುತ್ತದೆ..ಆದರೆ,..ಆದರೆ,  ವೀಡಿಯೋ ವೈರಲ್ ಮಾಡುವ ಹಿಂದಿದೆ ಎನ್ನಲಾಗಿರುವ  ಉದ್ದೇಶ ಮಾತ್ರ ಚಾಲಕರು-ನಿರ್ವಾಹಕರನ್ನು ನಖಶಿಖಾಂತ ಉರಿಸಿದೆಯಂತೆ .ಅಂದ್ಹಾಗೆ ವೀಡಿಯೋವನ್ನು ವೈರಲ್ ಮಾಡಿದವರು ಯಾರು..? ಬಿಎಂಟಿಸಿ ಮೂಲಗಳು ಹೇಳುವಂತೆ ಸ್ವತಃ ಬಿಎಂಟಿಸಿ ಅಧಿಕಾರಿಗಳಂತೆ( ಆದರೆ ಇದನ್ನು ಅಲ್ಲಗೆಳೆಯುವ ಅಧಿಕಾರಿಗಳು ಪೊಲೀಸ್ ಇಲಾಖೆಗೆ ತನಿಖೆಯ ಭಾಗವಾಗಿ ನೀಡಲಾಗಿತ್ತೇ ವಿನಃ ಅದನ್ನು ವೈರಲ್ ಮಾಡಿ ಎಂದಲ್ಲ..ಇದನ್ನು ಅವರು ವೈರಲ್ ಮಾಡಿದರೆ ಅದಕ್ಕೆ ಇಲಾಖೆ ಹೇಗೆ ಹೊಣೆ ಎಂದು ಹೇಳಲಾಗುತ್ತಿದೆಯಂತೆ) .ಭದ್ರತಾ ಇಲಾಖೆ ಮೂಲಕವೇ ಇದು ಮೀಡಿಯಾಗಳಿಗೆ ಶೇರ್ ಆಗಿದೆ ಎನ್ನುವ ಮಾತಿದೆ.ಇದೇ ಕಾರಣದಿಂದ ಬಹುತೇಕ ಸಿಬ್ಬಂದಿ ಆಡಳಿತವರ್ಗದ ಮೇಲೆ ಕೊತ ಕೊತ ಕುದಿಯುತ್ತಿದೆಯಂತೆ.ನಮ್ಮ ಡ್ರೈವರ್ಸ್-ಕಂಡಕ್ಟರ್ಸ್ ಗಳ ವೀಡಿಯೋಗಳಾದ್ರೆ ವೈರಲ್ ಆಗ್ತವೆ.. ಆದರೆ  ಅದೇ ಅಧಿಕಾರಿಗಳ ಲಂಚಗುಳಿತನ-ಸುಲಿಗೆ-ಭ್ರಷ್ಟಾಚಾರದ ವೀಡಿಯೋಗಳು ಮಾತ್ರ ಹೊರಬರುವುದೇ ಇಲ್ಲ.ಅಧಿಕಾರಿಗಳೇ ಮುಚ್ಚಿ ಹಾಕ್ತಾರೆ.ಈ ತಾರತಮ್ಯವೇಕೆ ಎನ್ನುವುದು ಅವರ ಆಕ್ರೋಶದ ಹಿಂದಿರುವ ಪ್ರಶ್ನೆ. 

ಇಲಾಖೆ ಮಾನಮರ್ಯಾದೆಯನ್ನು ಅವರೇ ತೆಗೆದುಕೊಳ್ಳೋದು ಎಷ್ಟು ಸರಿ..:!? ಪ್ರಶ್ನೆ ಉದ್ಭವವಾಗೋದೇ ಇಲ್ಲಿ.. ನಿಗಮದ ಡ್ರೈವರ್ ನಿಂದ ಆದ ಸರಣಿ ಅಪಘಾತದ ವೀಡಿಯೋವನ್ನು ಸಾರ್ವಜನಿಕಗೊಳಿಸಿದ್ದರ ಹಿಂದಿನ ಉದ್ದೇಶ ಏನಿತ್ತೆನ್ನುವುದು ಎಲ್ಲರನ್ನು ಕಾಡುತ್ತಿದೆ.ಅಧಿಕಾರಿ ವರ್ಗ ಎನ್ನೋದು ಡ್ರೈವರ್-ಕಂಡಕ್ಟರ್ಸ್ ಗಳೊಂದಿಗೆ ಅನುಚಿತವಾಗಿ-ಅಮಾನವೀಯವಾಗಿ ವರ್ತಿಸಿದ ಯಾವುದೇ ವೀಡಿಯೋಗಳು ಸಾರ್ವಜನಿಕವಾಗಿ ವೈರಲ್ ಆಗುವುದೇ ಇಲ್ಲ. ತಮ್ಮ ರಕ್ಷಣೆಗೆ  ಡ್ರೈವರ್-ಕಂಡಕ್ಟರ್ಸ್ ಗಳು ತಾವೇ ವೀಡಿಯೋ ಮಾಡಿಕೊಂಡು ಒಪ್ಪಿಸಿದ್ರೂ ಅವರಿಗೇನೆ ಮಂಗಳಾರತಿ ಆಗುತ್ತದೆಯೇ ವಿನಃ ಅಧಿಕಾರಿಗಳ ವಿರುದ್ದ ಕ್ರಮ ಆಗೋದೇ ಇಲ್ಲ. ವೈರಲ್ ಮಾಡಿದ್ರೆ ಅಂಥಾ ಡ್ರೈವರ್-ಕಂಡಕ್ಟರ್ಸ್ ಗಳ ವಿರುದ್ಧ ಇಲಾಖೆ ಮರ್ಯಾದೆ ತೆಗೆದು ಕರ್ತವ್ಯಲೋಪ ಎಸಗಿದ್ದೀರಿ ಎಂದು ಅವರನ್ನು ಕಾರಣ ಕೇಳಿ ನೊಟೀಸ್ ನೀಡಿ  ಸಸ್ಪೆಂಡ್ ಮಾಡಲಾಗುತ್ತದೆ.

ಡ್ರೈವರ್-ಕಂಡಕ್ಟರ್ಸ್  ಗಳಿಂದ  ಸಣ್ಣ ಪುಟ್ಟ ತಪ್ಪಾದ್ರೆ ವೀಡಿಯೋಗಳನ್ನು ಮಾದ್ಯಮಗಳಿಗೆ ಹರಿದುಬಿಡುವ ಆಡಳಿತ ವರ್ಗ, ಅದೇ ಅಧಿಕಾರಿಗಳು ಮಾಡೋ ತಪ್ಪಿನ ವೀಡಿಯೋಗಳನ್ನೇಕೆ ಶೇರ್ ಮಾಡುವುದಿಲ್ಲ.ಅವರ ಬಂಡವಾಳವನ್ನೇಕೆ ಬಯಲು ಮಾಡೊಲ್ಲ. ಡ್ರೈವರ್-ಕಂಡಕ್ಟರ್ಸ್ ವಿಷಯದಲ್ಲಿ ಒಂದು ರೀತಿ..ಅಧಿಕಾರಿಗಳ ವಿಷಯದಲ್ಲಿ ಇನ್ನೊಂದು ರೀತಿ ಎನ್ನುವ ತಾರತಮ್ಯ ಧೋರಣೆಯನ್ನೇಕೆ ಅನುಸರಿಸಲಾಗುತ್ತಿದೆ.ಇಂಥಾ ದ್ವಂದ್ವದ ಸ್ತಿತಿಯಲ್ಲೇಕೆ ಆಡಳಿತವಿದೆ ಎಂಬುದು ಅನೇಕ  ಡ್ರೈವರ್-ಕಂಡಕ್ಟರ್ಸ್ ಗಳ ಪ್ರಶ್ನೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವೀಡಿಯೋ ಶೇರ್ ಮಾಡುವ-ವೈರಲ್ ಮಾಡುವ ಅನುಮತಿ ಸಂಬಂಧ ಸುತ್ತೋಲೆ ಇದೆಯಾ..?ನಿಗಮಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಯಾವುದೇ ಬಂದ್ರೂ ಅದು ಅಧಿಕಾರಿಗಳಂತೆ ಕೆಳಹಂತದ ಸಿಬ್ಬಂದಿಗೂ ಒಂದೆ ರೀತಿಯಾಗಿ ಅನ್ವಯವಾಗಬೇಕಲ್ಲವೇ..?  ತಮ್ಮ ವೀಡಿಯೋಗಳನ್ನು ಮಾತ್ರ,ಇಲಾಖೆಯಿಂದಲೇ ಸಾರ್ವಜನಿಕಗೊಳಿಸುತ್ತಿರುವ ಆಡಳಿತವರ್ಗವನ್ನು ನೊಂದಂತ ಸಿಬ್ಬಂದಿ ಕೇಳುತ್ತಿರುವ ಪ್ರಶ್ನೆಯೇ ಇದು. ಅಧಿಕಾರಿಗಳಿಂದಾದ ತಪ್ಪಿಗೆ ಸಂಬಂಧಿಸಿದಂತೆ, ತನಿಖೆಯ ಭಾಗವಾಗಿ ಸಾಕ್ಷ್ಯವಾಗಿ ಅಪೇಕ್ಷಿಸಿ ಮನವಿ ಮಾಡಿದರೆ,ಆರ್ ಟಿಐ ನಲ್ಲಿ ಅರ್ಜಿ ಹಾಕ್ಕೊಂಡ್ರೆ  ಅದನ್ನು ಹತ್ತಾರು ಸಬೂಬು ನೀಡಿ  ಕೊಡೊಕ್ಕೆ ಬರೊಲ್ಲ ಎಂದು ನಿರಾಕರಿಸುತ್ತಲೇ ಬಂದಿದೆ ಆಡಳಿತ ವರ್ಗ.

ಆದರೆ ಅದೇ ಆಡಳಿತ ವರ್ಗ ಡ್ರೈವರ್ಸ್ –ಕಂಡಕ್ಟರ್ಸ್ ಗಳಿಂದಾದ ತಪ್ಪನ್ನು ಮಾದ್ಯಮಗಳಿಗೆ ತಲುಪುವಂತೆ ಮಾಡುತ್ತಿದೆ.ಡ್ರೈವರ್ಸ್-ಕಂಡಕ್ಟರ್ಸ್ ಗಳ ವಿಷಯದಲ್ಲಿ ಇಷ್ಟೊಂದು ನಿರ್ದಾಕ್ಷಿಣ್ಯವಾಗಿ ಮಾಹಿತಿ ಸಾರ್ವಜನಿಕಗೊಳಿಸುತ್ತಿರುವ ಆಡಳಿತ ವರ್ಗಕ್ಕೆ ಅಧಿಕಾರಿಗಳ ತಪ್ಪು-ಪ್ರಮಾದದ ಮಾಹಿತಿ ಬಹಿರಂಗವಾಗಲು ಅವಕಾಶವಿಲ್ಲ ಎಂದೇನಾದ್ರೂ  ಪ್ರತ್ಯೇಕ ರೂಲ್ಸ್ ಮಾಡಿಕೊಂಡಿದೆಯಾ..? ಉತ್ತರ ಸಿಗಬೇಕಾದ ಪ್ರಶ್ನೆಗಳಿವು.ಇಲ್ಲ ಹಾಗೇನಿಲ್ಲ ಎನ್ನುವುದಾದ್ರೆ ಸಾಕಷ್ಟು ಪ್ರಕರಣಗಳ ಪೈಕಿ ಎರಡು ಪ್ರಕರಣಗಳನ್ನು ಇಲ್ಲಿ ಉದಾಹರಣೆಯಾಗಿ ಉಲ್ಲೇಖಿಸಲಾಗುತ್ತಿದೆ.ಅಧಿಕಾರಿಗಳ ಡಬಲ್ ಸ್ಟ್ಯಾಂಡರ್ಡ್ ಧೋರಣೆಗೆ ಇದು ಜಸ್ಟ್ ಸ್ಯಾಂಪಲ್ ಅಷ್ಟೆ.

ಬಿಎಂಟಿಸಿ ಭದ್ರತಾ ಅಧಿಕಾರಿ ರಮ್ಯಾ
ಬಿಎಂಟಿಸಿ ಭದ್ರತಾ ಅಧಿಕಾರಿ ರಮ್ಯಾ

ಪ್ರಕರಣ-1: ಅದು 2023ರ ನವೆಂಬರ್ 6 ರಂದು ನಡೆದ ಘಟನೆ. ಶಿವಾಜಿನಗರ ರೂಟ್ ಬಸ್ ನಲ್ಲಿ ಕಂಡಕ್ಟರ್(ಹೆಸರನ್ನು ನಮೂದಿಸಿಲ್ಲ) ಒಬ್ಬ ಮಹಿಳಾ ಪ್ರಯಾಣಿಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಎನ್ನುವ ಆರೋಪದಲ್ಲಿ ಆತನನ್ನು ಅಮಾನತು ಮಾಡಲಾಯ್ತು.ಅಮಾನತು ಪ್ರಕ್ರಿಯೆ ಕೈಗೊಂಡವರು “ಟೆರರ್ ಅಧಿಕಾರಿ” ಎಂದು ಕರೆಯಿಸಿಕೊಂಡಿ ರುವ ರಮ್ಯಾ ಮೇಡಮ್. ಬಸ್ ನಲ್ಲಿ  ಅನುಚಿತವಾಗಿ ವರ್ತಿಸಿ ನಿಗಮದ ಮರ್ಯಾದೆ ತೆಗೆದ ಎನ್ನುವ ಆಪಾದನೆಗೆ ಸಾಕ್ಷಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವ ಗೋಜಿಗೂ ಹೋಗದೆ ರಮ್ಯಾ ಅವತ್ತು  ಆತನನ್ನು ಸಸ್ಪೆಂಡ್ ಮಾಡಿದ್ರು.

ಅಧಿಕಾರಿ ಎನ್ನುವ ಪದವಿಯನ್ನು ಪಕ್ಕಕ್ಕಿಟ್ಟು,ರಮ್ಯ “ತಾಯಿಹೃದಯ” ದವರಾಗಿ  ತಮ್ಮ ನಿಗಮದ ಸಿಬ್ಬಂದಿ ಮೇಲೆ ಗಂಭೀರ ಸ್ವರೂಪದ ಆರೋ ಪ ಮಾಡಿದ್ರೆ ಆತ ಹಾಗೂ ಆತನನ್ನು ನಂಬಿ ಬದುಕುತ್ತಿರುವ ಕುಟುಂಬದ ಪರಿಸ್ತಿತಿ ಏನಾಗಬಹುದೆನ್ನುವುದನ್ನು  ಅಂತಕಃರಣದಿಂದ ಆಲೋಚಿಸಿ ಸತ್ಯಾಸತ್ಯತೆ ಪರಿಶೀಲಿಸುವ ಕೆಲಸವನ್ನು ಮಾಡಬಹುದಿತ್ತು.( ನಾಲ್ಕು ಸಾರಿಗೆ ನಿಗಮಗಳ ಆಡಳಿತ ವರ್ಗದ ಮನಸ್ತಿತಿ ಹೇಗಿದೆ ಎಂದ್ರೆ ಅವರಿಗೆ ತಮ್ಮ ಸಿಬ್ಬಂದಿಯ ಬಗ್ಗೆ ನಂಬಿಕೆ-ವಿಶ್ವಾಸ-ಪ್ರೀತಿ ಇಲ್ಲವಾಗಿದೆ.ಯಾರೇ ಆರೋಪ ಮಾಡ್ಲಿ ಅದನ್ನು ಬ್ಲೈಂಡಾಗಿ ನಂಬುವಂ ಕೆಟ್ಟ ಮನಸ್ತಿತಿ ಯಲ್ಲಿದೆ.ಅವರನ್ನು  ಕಾರ್ಮಿಕರೆಂದು ನೋಡದೆ ಜೀತಕ್ಕಿರುವ ಆಳುಗಳೆ ನ್ನುವ ದೃಷ್ಟಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆಯಂತೆ.).

ಆದರೆ ಅದನೇನನ್ನು ಮಾಡದೆ ಆತ ತಪ್ಪು ಮಾಡಿದ್ದಾನೆನ್ನುವ ತೀರ್ಮಾನ ಕ್ಕೆ ಬಂದೇ ಬಿಟ್ರು. ಅಮಾನತುಗೊಳಿಸಿಯೇ ಬಿಟ್ರು.ಅವತ್ತು ರಮ್ಯ ಮೇಡಮ್ ಅವರ ಕಾರ್ಯವೈಖರಿಯನ್ನು ಕನ್ನಡ ಫ್ಲ್ಯಾಶ್ ಖಂಡಿಸಿತ್ತು. ಕಂಡಕ್ಟರ್ ನ ಬೆನ್ನಿಗೆ ನಿಂತಿತ್ತು. ಇದರಿಂದ ಬಡತನ ಹಿನ್ನಲೆಯಿದ್ರೂ  ಮಾನಕ್ಕಂಜಿ ಬದುಕುತ್ತಿದ್ದ ಆತನ ಕುಟುಂಬ ಮಾನಸಿಕ ವಾಗಿ ಅಘಾತಕ್ಕೀಡಾಯ್ತು.  ಆತನನ್ನು ಮಾದ್ಯಮಗಳು ಕಾಮುಕ  ಎಂದು ಕಿಚಾಯಿಸಿದವು. ಆತ್ಮಹತ್ಯೆ ಪ್ರಯತ್ನಕ್ಕು ಕೈ ಹಾಕಿದ ಆತನನ್ನು ಸಹದ್ಯೋಗಿಗಳು ಸಮಾಧಾನಪಡಿಸಿದ್ರು.

“ಸಿಬ್ಬಂದಿ ವಿಚಾರದಲ್ಲಿ ಗುಮಾನಿ ಬೇಡ..ವಿಶ್ವಾಸ ಬೆಳೆಸಿಕೊಳ್ಳಿ.”

“ಬಿಎಂಟಿಸಿಯಲ್ಲಿ ಉತ್ತಮ ಕೆಲಸಗಳಿಂದ ದಕ್ಷ ಅಧಿಕಾರಿ ಎನಿಸಿಕೊಂಡಿರುವ ರಮ್ಯ ಅವರಿಗೆ  ಕನ್ನಡ ಫ್ಲ್ಯಾಶ್ ನ್ಯೂಸ್ ಹೇಳೋ ಕಿವಿ ಮಾತು ಇಷ್ಟೆ..ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎನ್ನುವುದರಲ್ಲಿ ಅನುಮಾನವಿಲ್ಲ.ಆದರೆ ಅದರ ಜತೆಗೆ ನಿಮ್ಮದೇ ಇಲಾಖೆ ಸಿಬ್ಬಂದಿ ಬಗ್ಗೆ ಒಂದು ವಿಶ್ವಾಸ-ನಂಬಿಕೆಯ ಭಾವನೆ ಬೆಳೆಸಿಕೊಳ್ಳಿ..ಅಧಿಕಾರಿಗಳು ನಿಮ್ಮ ಕಿವಿ ಊದುವುದನ್ನೆಲ್ಲಾ ಕುರುಡಾಗಿ ನಂಬಬೇಡಿ.ನಿಮ್ಮ ಸುತ್ತ ನಿಮ್ಮಂತೆಯೇ ಇರುವ ಪ್ರಾಮಾಣಿಕರನ್ನು ಇಟ್ಕೊಳ್ಳಿ..ಅಧಿಕಾರಿಗಳು ಮಾಡಿದ್ದೇ ಸರಿ..ಹೇಳೋದೆಲ್ಲಾ ಸತ್ಯ ಎನ್ನುವ ತೀರ್ಮಾನಕ್ಕೆ ಬರಬೇಡಿ. ಕೆಳಹಂತದ ಸಿಬ್ಬಂದಿಯಲ್ಲೂ ಪ್ರಾಮಾಣಿಕರಿದ್ದಾರೆ.ಸಂಸ್ಥೆ ನನ್ನದೆಂದು ಕೆಲಸ ಮಾಡುವ ಒಳ್ಳೆಯವರಿದ್ದಾರೆ.

ಅಧಿಕಾರಿಗಳೆಲ್ಲಾ ಸರಿ, ಡ್ರೈವರ್ಸ್-ಕಂಡಕ್ಟರ್ಸ್ ಗಳೆಲ್ಲಾ ಸುಳ್ಳು ಎಂಬ ಆಲೋಚನೆಯನ್ನು ಬಿಟ್ಟುಬಿಡಿ.ನಿಮ್ಮ ಸಿಬ್ಬಂದಿ ಬಗ್ಗೆ ದೂರು ಬಂದಾಗ ಏಕಾಏಕಿ ರಿಯಾಕ್ಟ್ ಮಾಡುವುದನ್ನು ಬಿಟ್ಟು ಸತ್ಯಾಸತ್ಯತೆ ಪರಿಶೀಲಿಸಿದ ಮೇಲೆಯೇ ಕ್ರಮಕ್ಕೆ ಮುಂದಾಗಿ.ಸ್ವಲ್ಪ ಡ್ರೈವರ್ಸ್-ಕಂಡಕ್ಟರ್ಸ್ ಗಳ ಮನದಾಳದ ಮಾತನ್ನೂ ಕೇಳಿ..ಹಾಳೆದ್ದು ಹೋಗಿರುವ ನಿಗಮದ  ಆಡಳಿತದ ಬಗ್ಗೆ ಒಂದಷ್ಟು ನಂಬಿಕೆ ಉಳಿದಿರುವುದೇ ನಿಮ್ಮಂತ ದಕ್ಷ-ಪ್ರಾಮಾಣಿಕ ಅಧಿಕಾರಿಗಳಿಂದ..ಆ ನಂಬಿಕೆಯನ್ನು ಕಳೆದುಕೊಳ್ಳದಂತೆ ಕೆಲಸ ಮಾಡಿ. .ಡ್ರೈವರ್ಸ್-ಕಂಡಕ್ಟರ್ಸ್ ಸಮುದಾಯದ ಕೋರಿಕೆ ಇದು” 

ಆದ್ರೆ ದುರಂತವೇನು ಗೊತ್ತಾ,ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ  ಎಂದು ಆ ಕಂಡಕ್ಟರ್ ವಿರುದ್ದ ದೂರು ಕೊಟ್ಟ ಯುವತಿಯೇ ನಾಪತ್ತೆ.ಇಲಾಖೆಯಿಂದಲೂ ಆಕೆಯ ಪತ್ತೆಗಾಗಿ ಪ್ರಯತ್ನಿ ಸಲಾಯಿತಾದ್ರೂ ಸಿಗಲೇ ಇಲ್ಲ.ವಿಚಾರಣೆ ಶುರುವಾದಾಗ ಘಟನೆ ನಡೆದ ದಿನದಂದು ತನ್ನ ಮೇಲೆ ಗುರುತರ ಆಪಾದನೆ ಮಾಡಿದ ಯುವತಿಯನ್ನು ಸಂಪರ್ಕಿಸಿ ಆಕೆಯಿಂದ ಲಿಖಿತ ಹೇಳಿಕೆ ಪಡೆದು ಸಾಕ್ಷ್ಯ ಕಲೆ ಹಾಕಿರುವ ಮಾಹಿತಿ ಬೇಕು ಎಂದು 22-02-2024 ರಂದು ಅವರು ಆರ್ ಟಿಐ ನಲ್ಲಿ ಅರ್ಜಿ ಹಾಕಿಕೊಂಡ್ರು.

ತನ್ನ ಮೇಲೆ ಬಂದ ಆಪಾದನೆಗೆ ಸಂಬಂಧಿಸಿದಂತೆ ತನಿಖೆ ವೇಳೆ ಸಾಕ್ಷ್ಯ ವಾಗಿ ದಾಖಲೆಗಳು ಬೇಕಾಗಬಹುದು,ಅದನ್ನು ಒದಗಿಸಿಕೊಡಿ ಎಂದು ಮಾಡಿಕೊಂಡ ಮನವಿಗೆ ಆರ್ ಟಿ ಐ ನಲ್ಲಿ ಅಧಿಕಾರಿಗಳು ನೀಡಿದ ಉತ್ತರ ಪ್ರತಿಯಿದು.
ತನ್ನ ಮೇಲೆ ಬಂದ ಆಪಾದನೆಗೆ ಸಂಬಂಧಿಸಿದಂತೆ ತನಿಖೆ ವೇಳೆ ಸಾಕ್ಷ್ಯ ವಾಗಿ ದಾಖಲೆಗಳು ಬೇಕಾಗಬಹುದು,ಅದನ್ನು ಒದಗಿಸಿಕೊಡಿ ಎಂದು ಮಾಡಿಕೊಂಡ ಮನವಿಗೆ ಆರ್ ಟಿ ಐ ನಲ್ಲಿ ಅಧಿಕಾರಿಗಳು ನೀಡಿದ ಉತ್ತರ ಪ್ರತಿಯಿದು.

 

 

 

 

ಆದರೆ ಇದೇ ಬಿಎಂಟಿಸಿಯ ಆಡಳಿತಾಧಿಕಾರಿ (ಶಿಸ್ತು) ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ-ಕಡತ ಲಭ್ಯವಿರುವುದಿಲ್ಲ ಎಂಬ ಮಾಹಿತಿ ನೀಡಿತು. ತನ್ನ ಸಿಬ್ಬಂದಿ ವಿರುದ್ಧ ಲೈಂಗಿಕ ಕಿರುಕುಳ-ಅನುಚಿತ-ಅಸಭ್ಯ ವರ್ತನೆ ಎನ್ನುವ ಗಂಭೀರ ಆಪಾದನೆ ಮಾಡಿದ ನಿಗಮದ ಆಡಳಿತ ನ್ಯಾಯೋಚಿತವಾಗಿ ಆತನಿಗೆ ದಾಖಲೆ ಕೊಡಬಹುದಿತ್ತಲ್ಲವೇ..? ಏಕೆ ಕೊಡಲಿಲ್ಲ..ಏಕೆ ಕೊಡಲಿಲ್ಲ ಎಂದ್ರೆ ಕಂಡಕ್ಟರ್ ವಿರುದ್ದದ ಆಪಾದನೆ ಸಾಬೀತುಪಡಿಸ್ಲಿಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯ ಆಡಳಿತ ವರ್ಗದ ಬಳಿ ಇರಲಿಲ್ಲ ಎನ್ನುವುದೇ ಸತ್ಯವಂತೆ.ಹಾಗಾಗಿ ಪ್ರಕರಣದಲ್ಲಿ ಆತ ನಿರಪರಾಧಿಯಾಗಿ ಹೊರಬಂದು ಸಧ್ಯ ಬೇರೊಂದು ಡಿಪೋದಲ್ಲಿ ಕೆಲಸ ಮಾಡ್ತಿದಾನೆ. ಆದರೆ ತನ್ನ ಮೇಲೆ ಇಲ್ಲಸಲ್ಲದ ಆಪಾದನೆ ಮಾಡಿರುವ ಮೇಡಮ್ ರಮ್ಯಾ ವಿರುದ್ದ ಕಾನೂನಾತ್ಮಕ ಹೋರಾಟ ಮಾಡೊಕ್ಕೆ,ತನಗಾದ ತೇಜೋವಧೆ ಹಿನ್ನಲೆಯಲ್ಲಿ ಮಾನನಷ್ಟ ಹೂಡಲು ಕೂಡ ಸಿದ್ದತೆ ನಡೆಸುತ್ತಿದ್ದಾರೆನ್ನುವ ಮಾತಿದೆ.

 ಬಸ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ತನ್ನ ವಿರುದ್ಧದ ಆಪಾದನೆಗೆ ಸಂಬಂಧಿಸಿದ ಸಿಸಿ ಕ್ಯಾಮೆರಾ ವೀಡಿಯೋ ಕೇಳಿ ಬರೆದ ಪತ್ರಕ್ಕೆ ಆ ರೀತಿಯಾಗಿ ಸಾಕ್ಷ್ಯ ನೀಡಲು ಬರುವುದಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ನೀಡಿದ ಸ್ಪಷ್ಟನೆಯ ಪ್ರತಿ
ಬಸ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ  ಸಿಸಿ ಕ್ಯಾಮೆರಾ ವೀಡಿಯೋ ಕೇಳಿ ಬರೆದ ಪತ್ರಕ್ಕೆ ಆ ರೀತಿಯಾಗಿ ಸಾಕ್ಷ್ಯ ನೀಡಲು ಬರುವುದಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ನೀಡಿದ ಸ್ಪಷ್ಟನೆಯ ಪ್ರತಿ

 

 

ಪ್ರಕರಣ-2:ಇದು ಮತ್ತೋರ್ವ ಡ್ರೈವರ್-ಕಂಡಕ್ಟರ್ ಅವರಿಗೆ ಸಂಬಂಧಿಸಿದ ಪ್ರಕರಣ.ಅವರ ಮೇಲೆ ಕೇಳಿಬಂದ ಆರೋಪಕ್ಕೆ ಸಂಬಂಧಿಸಿದಂತೆ 29-05-2024 ರಂದು ಆರೋಪಣಾ ಪತ್ರ ನೀಡಿ ಅಮಾನತು ಮಾಡಲಾಗಿತ್ತು.ಇದಕ್ಕೆ ಸಂಬಂಧಿಸಿದಂತೆ 25-05-2024  ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಸಾಕ್ಷ್ಯವಾಗಿ ಬಿಎಂಟಿಸಿ ಬಸ್ ನಲ್ಲಿರುವ ಸಿಸಿಟಿವಿ ಫುಟೇಜ್ ಬಯಸಿ ಅರ್ಜಿ ಹಾಕ್ಕೊಂಡಿದ್ರು.

 ಆದರೆ 18-06-2024 ರಂದು ಅವರಿಗೆ ನೀಡಲಾದ ಉತ್ತರದಲ್ಲಿ standerd operating  procedure(SOP) ದಿನಾಂಕ-16-12-2023 ರ ಪ್ರಕಾರ  ವಾಹನದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ನೀಡಲು ಬರುವುದಿಲ್ಲ ಎಂಬ ಹಿಂಬರಹ ನೀಡಲಾಯ್ತು.ಘಟನೆಗೆ ಪೂರಕವಾದ ಸಾಕ್ಷ್ಯವಿದ್ದುದೇ ಆ ಸಿಸಿಟಿವಿಯಲ್ಲಿ.ಆದರೆ ಅದನ್ನೇ ನೀಡಲು ನಿರಾಕರಿಸಲಾಯಿತು. ಆತ ಒಬ್ಬ ಡ್ರೈವರ್-ಕಂಡಕ್ಟರ್ ಎನ್ನುವ ಕಾರಣಕ್ಕೆ ಮಾತ್ರ ಮಾಹಿತಿ ನಿರಾಕರಿಸಲಾಯಿತು ಎನ್ನುವುದೇ ಸತ್ಯವಂತೆ. ಇದೇ ಪರಿಸ್ತಿತಿಯಲ್ಲಿ ಒಬ್ಬ ಅಧಿಕಾರಿಯಿದಿದ್ದರೆ ಮಾಹಿತಿ ನಿರಾಕರಿಸಲಾಗುತ್ತಿತ್ತೇ..? ಖಂಡಿತಾ ಇಲ್ಲ ಎನ್ನುತ್ತಾರೆ ನಿಗಮದ  ಕೆಲ ಅಧಿಕಾರಿಗಳು.

 ಡ್ರೈವರ್ಸ್-ಕಂಡಕ್ಟರ್ಸ್ ಗಳಿಗೆ ಸಾಕ್ಷ್ಯ ಒದಗಿಸುವ ವಿಚಾರದಲ್ಲಿ ಅನ್ವಯವಾಗುವ standerd operating  procedure(SOP) ದಿನಾಂಕ-16-12-2023 ರ ನಿಯಮ ಅಧಿಕಾರಿಗಳಿಗೆ ಅನ್ವಯವಾಗುವು ದಿಲ್ಲವೇ..? ಮಾದ್ಯಮಗಳಿಗೆ ವೀಡಿಯೋ ಶೇರ್ ಆಗೊಕ್ಕೆ ಈ ನಿಯಮ ಅಡ್ಡ ಬರಲಿಲ್ಲವೇ..? ಅಥವಾ ಅದು ಅಧಿಕಾರಿಗಳ ವಿಚಾರದಲ್ಲಿ ಅನ್ವಯವಾಗುವುದಿಲ್ಲವೇ..? ಇದೆಲ್ಲಕ್ಕೂ ರಮ್ಯ ಮೇಡಮ್ ಅವರೇ ಉತ್ತರಿಸಬೇಕಿದೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *