ಭಾರತದ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಅತೀ ಹೆಚ್ಚು ಪದಕ ಗೆದ್ದ ದಾಖಲೆ ಬರೆದಿದ್ದಾರೆ.
ಭಾರತ ಪ್ಯಾರಾಲಿಂಪಿಕ್ಸ್ ನಲ್ಲಿ 20 ಪದಕ ಗೆದ್ದಿದೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಗರಿಷ್ಠ ಪದಕದ ದಾಖಲೆ ಬರೆದಿದೆ. ಟೊಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ 19 ಪದಕ ಗೆದ್ದಿದ್ದು ಇದುವರೆಗಿನ ಶ್ರೇಷ್ಠ ಸಾಧನೆ ಆಗಿತ್ತು.
ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನ 6ನೇ ದಿನವಾದ ಮಂಗಳವಾರ ಭಾರತ 2 ಬೆಳ್ಳಿ ಹಾಗೂ 3 ಕಂಚು ಸೇರಿದಂತೆ 5 ಪದಕ ಗೆದ್ದುಕೊಂಡಿತು. ಇದಕ್ಕೂ ಮುನ್ನ ಸೋಮವಾರ ಒಂದೇ ದಿನ 10 ಪದಕ ಗೆದ್ದು ಪ್ರಾಬಲ್ಯ ಮೆರೆದಿತ್ತು.
ಭಾರತ ತಂಡ ಇದೀಗ 3 ಚಿನ್ನ, 7 ಬೆಳ್ಳಿ ಹಾಗೂ 10 ಕಂಚು ಸೇರಿದಂತೆ 20 ಪದಕಗಳನ್ನು ಕೊಳ್ಳೆ ಹೊಡೆದು ಪದಕ ಪಟ್ಟಿಯಲ್ಲಿ 19ನೇ ಸ್ಥಾನ ಗಳಿಸಿದೆ.
ಮಂಗಳವಾರ ನಡೆದ ಪುರುಷರ ಟಿ63 ವಿಭಾಗದಲ್ಲಿ ಭಾರತದ ಶರದ್ ಕುಮಾರ್ ಬೆಳ್ಳಿ ಪದಕ ಗೆದ್ದ ಸಾಧನೆ ಮರಿಯಪ್ಪನ್ ತಂಗವೇಲು ಕಂಚು ಗಳಿಸಿದರು. ಈ ಮೂಲಕ ಭಾರತ ಹೈಜಂಪ್ ವಿಭಾಗದಲ್ಲಿ 2 ಪದಕ ಕೊಳ್ಳೆ ಹೊಡೆಯಿತು. ವಿಶೇಷ ಅಂದರೆ ಭಾರತದ ಮೂವರು ಸ್ಪರ್ಧಿಗಳು ಫೈನಲ್ ಪ್ರವೇಶಿದ್ದು, ಶೈಲೇಶ್ ಕುಮಾರ್ ಪದಕ ಹೊಸ್ತಿಲಲ್ಲಿ ಎಡವಿದರು.
ಎಫ್ 46 ವಿಭಾಗದ ಜಾವೆಲಿನ್ ವಿಭಾಗದಲ್ಲಿ ಅಜಿತ್ ಸಿಂಗ್ ಮತ್ತು ಸುಂದರ್ ಸಿಂಗ್ ಗುಜ್ಜಾರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು.
ಇದಕ್ಕೂ ಮುನ್ನ ಮಹಿಳೆಯರ 400 ಮೀ. ಓಟದ ಸ್ಪರ್ಧೆಯಲ್ಲಿ ದೀಪ್ತಿ ಕಂಚಿನ ಪದಕ ಗೆದ್ದು ಶುಭಾರಂಭ ಮಾಡಿದರು.
ಆದರೆ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದ ಅವಾನಿ 50 ಮೀ. ತ್ರಿ ಪೊಜಿಷನ್ ವಿಭಾಗದ ಶೂಟಿಂಗ್ ವಿಭಾಗದಲ್ಲಿ 5 ನೇ ಸ್ಥಾನಕ್ಕೆ ಕುಸಿದು ನಿರಾಸೆ ಮೂಡಿಸಿದರು. ಶಾಟ್ ಪುಟ್ ನಲ್ಲಿ ಭಾಗ್ಯಶ್ರಿ ಕೂಡ ನಿರಾಸೆಗೊಳಿಸಿದರು.