ಬೆಂಗಳೂರು3: ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತದ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಸೂಕ್ಷತೆ ಮತ್ತು ಅದರ ಜಾಗತಿಕ ಮಹತ್ವ ಅರಿತು ಪರಿಸರ ರಕ್ಷಣೆಗಾಗಿ ಪ್ರೊ.ಮಾಧವ ಗಾಡೀಳ್ ಸಮಿತಿಯ ವರದಿ ಅನುಷ್ಠಾನಗೊಳಿಸಬೇಕು ಎಂದು ಪರಿಸರ ತಜ್ಞೆ ವಿಶಾಲಕ್ಷಿ ಒತ್ತಾಯಿಸಿದ್ದಾರೆ.
ಶುಕ್ರವಾರ ಇಲ್ಲಿನ ಕನ್ನಡ ಭವನದ ವರ್ಣ ಆರ್ಟ್ ಗ್ಯಾಲರಿಯಲ್ಲಿ ಕಥನ ಕರ್ನಾಟಕ ಬೆಂಗಳೂರು ಏರ್ಪಡಿಸಿದ್ದ ಪತ್ರಕರ್ತ ಆಶಿಕ್ ಮುಲ್ಕಿ ಅವರ “ವಯನಾಡು ಸಾವು ಬಂದ ಹೊತ್ತಿಗೆ ಹೇಳದೆ ಉಳಿದ ಸತ್ಯಗಳು’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ವಯನಾಡಿನಲ್ಲಿ ಗುಡ್ಡಗಳು ಕುಸಿದು ರಾತ್ರಿ ಬೆಳಗಾಗುವುದರೊಳಗೆ ಅಪಾರ ಪ್ರಮಾಣದ ಜೀವ, ಆಸ್ತಿಪಾಸ್ತಿ ನಷ್ಟವಾಯಿತು. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲೂ ಭೂ ಕುಸಿತಗಳಾಗಿವೆ. ಇದಕ್ಕೆ ಕಾರಣ ಪ್ರಕೃತಿಯ ಮೇಲೆ ಮಾನವನ ದಬ್ಬಾಳಿಕೆ, ಅರಣ್ಯ ಪ್ರದೇಶಗಳ ಒತ್ತುವರಿ, ಅಕ್ರಮ ಗಣಿಗಾರಿಕೆ, ರೆಸಾರ್ಟ್, ಹೋಂ ಸ್ಟೇ, ಹೋಟೆಲ್‌ಗಳ ನಿರ್ಮಾಣ ಎಂದು ಅವರು ಉಲ್ಲೇಖಿಸಿದರು.
ಪರಿಸರಕ್ಕೆ ವಿಪರೀತ ಹಾನಿ ಉಂಟುಮಾಡುವ ಇಂತಹ ಮಾರಕ ಚಟುವಟಿಕೆಗಳನ್ನು ತಡೆಗಟ್ಟಲು ಸರಕಾರ ಯಾವುದೇ ಗಂಭೀರ ಪ್ರಯತ್ನವನ್ನೂ ಮಾಡಿಲ್ಲ. ದುರಂತ ಸಂಭವಿಸಿದ ಬಳಿಕ ಪರಿಹಾರ ನೀಡಿದರೆ ಜವಾಬ್ದಾರಿ ಮುಗಿಯಿತೆಂಬ ಭಾವನೆ ಸರಕಾರಗಳಲ್ಲಿದೆ. ಆದರೆ, ಸರಕಾರ ಕೂಡಲೇ ಪರಿಸರ ರಕ್ಷಣೆಗಾಗಿ ಮಾಧವ್ ಗಾಡೀಳ್ ವರದಿ ಜಾರಿಗೊಳಿಸಲಿ ಎಂದು ಅವರು ಮನವಿ ಮಾಡಿದರು.
ಪ್ರಕೃತಿ ಮೇಲೆ ಮನುಷ್ಯನ ದೌರ್ಜನ್ಯ ಹೆಚ್ಚಾದ ಪರಿಣಾಮ ಜಾಗತಿಕ ತಾಪಮಾನ ಹೆಚ್ಚಾಗಿದೆ. ನಮ್ಮದಲ್ಲದ ವಸ್ತುವಿನ ಮೇಲೆ ನಾವೇ ದೌರ್ಜನ್ಯ ಮಾಡುವುದು ತಪ್ಪು ಎಂಬ ಬಗ್ಗೆ ಜಾಗೃತಿ ಅವಶ್ಯವಿದೆ ಎಂದ ಅವರು, ಪ್ಲಾಸ್ಟಿಕ್ ಮಹಾಮಾರಿಗೆ ಜಾಗತಿಕ ತಪಮಾನ, ಪರಿಸರ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯದಂತಹ ದುರಂತ ಸ್ಥಿತಿಯಲ್ಲಿ ನಾವಿದ್ದು ನರಳುವಂತಾಗಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಪತ್ರಕರ್ತ ಆಶಿಕ್ ಮುಲ್ಕಿ ಮಾತನಾಡಿ, ದೇವರ ನಾಡು ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಭೂ ಕುಸಿತ ಸಂಭವಿಸಿದ ಸ್ಥಳ ಸಾವು, ನೋವುಗಳು ಮತ್ತೆ ಎಲ್ಲಿಯೂ ಆಗಬಾರದು.ಮುಂದಿನ ಪೀಳಿಗೆಗೆ ಈ ಪ್ರಕೃತಿ ಊಡುಗೆರೆ ಆಗಿ ನೀಡುವ ಜವಾಬ್ದಾರಿ ನಮ್ಮ ಮೇಲಿದ್ದು, ಪರಿಸರ ಕಳಾಜಿವಹಿಸುವ ಚಟುವಟಿಕೆಗಳು ಹೆಚ್ಚಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ವಯನಾಡು ದುರಂತದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ್ದ ಸಾಹುಕಾರ್ ಅಚ್ಚು ಸೇರಿದಂತೆ ಪ್ರಮುಖರು ಇದ್ದರು.
ಲೇಖಕ ಆಶಿಕ್ ಮುಲ್ಕಿ ನ್ಯೂಸ್ 18 ವರದಿಗಾರರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸಂವೇದನಾಶೀಲ ಬರಹಗಾರ ಕೂಡ ಹೌದು. ಪ್ರಕೃತಿ, ಮಾನವ ಹಕ್ಕುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಮಾನವೀಯ ಮೌಲ್ಯಗಳು ಮತ್ತು ಪ್ರಕೃತಿ ಕುರಿತ ಅವರ ಮೊದಲ ಕೃತಿ ಇದಾಗಿದೆ.
ಇತ್ತೀಚೆಗೆ ಭೂಕುಸಿತದಿಂದ ತತ್ತರಿಸದ ಕೇರಳದ ಪ್ರವಾಸಿ ತಾಣವಾದ ವಯನಾಡುನಲ್ಲಿ ಪ್ರತ್ಯಕ್ಷ ವರದಿ ಮಾಡಿದ್ದ ಆಶಿಕ್ ಮುಲ್ಕಿ ತಮ್ಮ ಅನುಭವವನ್ನೇ ಆಧರಿಸಿ ಕೃತಿ ರಚಿಸಿದ್ದಾರೆ.