ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇನಾದ್ರೂ ಇದಕ್ಕೆ ಮುಲಾಮು ಕಂಡುಹಿಡಿಯದಿದ್ರೆ ಈ ಒಂದು ಕಾರಣದಿಂದಲೇ ರಾಜ್ಯ ಸರ್ಕಾರದ ಜನಪ್ರಿಯ ಶಕ್ತಿ ಯೋಜನೆ ಹಳ್ಳ ಹಿಡಿಯುವುದಷ್ಟೇ ಅಲ್ಲ ಯೋಜನೆಯಿಂದ ಎಷ್ಟೇ ಪ್ರಯೋಜನವಿದ್ರೂ ಮಹಿಳಾ ಪ್ರಯಾಣಿಕರು ಇದರ ಬಗ್ಗೆ  ಆಸಕ್ತಿ ಕಳೆದುಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ.

ಶಕ್ತಿ ಯೊಜನೆಯನ್ವಯ ಪ್ರಯಾಣಿಕರನ್ನು ಕೊಂಡೊಯ್ಯುವ ಬಸ್ ಗಳು ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ  ದುಬಾರಿ ಹೊಟೇಲ್ ಗಳ ಮುಂದೆ ನಿಲ್ಲಿಸ್ತಿರೋದ್ರಿಂದ ಉಚಿತ ಬಸ್ ಪ್ರಯಾಣ ಮಾಡುವ ಮಹಿಳಾ ಪ್ರಯಾಣಿಕರು ಕೂಡ ದುಬಾರಿ ಹಣವನ್ನು ತೆರಬೇಕಾದ ಸನ್ನಿವೇಶವಿದೆ.ಕೆಎಸ್ ಆರ್ ಟಿಸಿ ಆಡಳಿತ ವ್ಯವಸ್ಥೆಯ ಧೋರಣೆ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತರು ಹಾಗೂ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ KSRTC ನಿಗಮವು ಕಾಂಗ್ರೆಸ್ ಪಕ್ಷದ ‘ಶಕ್ತಿ’ ಗ್ಯಾರೆಂಟಿ ಯೋಜನೆಯಿಂದಾಗಿ ಆರ್ಥಿಕವಾಗಿ ಬಲಗೊಂಡಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳುತ್ತಲೇ ಇದ್ದಾರೆ. ಪ್ರಧಾನಿಯವರ ಟೀಕೆಗೂ ಸಚಿವರು ಎದಿರೇಟು ನೀಡಿದ್ದರು. ಆದರೆ ನಿಗಮದ ಕಾರ್ಯವೈಖರಿಯನ್ನು ಗಮನಿಸಿದರೆ ನಿಗಮವು ನಷ್ಟದ ಅಂಚಿನಲ್ಲಿದೆಯೇ ಎಂಬ ಪ್ರಶ್ನೆ ಕಾಡುವಂತಿದೆ. ಅದಕ್ಕೆ ಸಾಕ್ಷಿ ಎಂಬಂತಿದೆ ಈ ಬೆಳವಣಿಗೆ.

ಪ್ರಯಾಣಿಕರಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC)ಯನ್ನು ಸ್ಥಾಪಿಸಿದೆ. ಆದರೆ ಇದೀಗ ಈ ನಿಗಮವು ಪ್ರಯಾಣಿಕರಿಗೆ ಸುಲಭ ಪ್ರಯಾಣದ ಅವಕಾಶ ಕಲ್ಪಿಸುವ ಬದಲು ಜನವಿರೋಧಿ ನಡೆ ಮೂಲಕ ಸಾರ್ವಜನಿಕರ ಹಿಡಿಶಾಪಕ್ಕೆ ಗುರಿಯಾಗುತ್ತಿದೆ. ಪ್ರಯಾಣಿಕರ ಆಹಾರದ ಹಕ್ಕನ್ನು ಕಸಿದುಕೊಳ್ಳುವುದಷ್ಟೇ ಅಲ್ಲ, ಪ್ರಯಾಣಿಕರನ್ನು ಅನಾರೋಗ್ಯಕ್ಕೂ ತಳ್ಳುತ್ತಿದೆ.

ದಶಕಗಳ ಹಿಂದೆ ಖಾಸಗಿ ಬಸ್ಸುಗಳ ಶೋಷಣೆ ತಪ್ಪಿಸುವ ಉದ್ದೇಶದಿಂದ ಸರ್ಕಾರವೇ ಸಾರಿಗೆ ಸಂಸ್ಥೆಯನ್ನು ಹುಟ್ಟುಹಾಕಿದೆ. ಆದರೆ, ಈಗ ಕಮೀಷನ್ ಆಸೆಗಾಗಿ ನಿಗಮದ

ಅಧಿಕಾರಿಗಳು ಮಾಡುವುದೇ ಬೇರೆ. ದೂರದ ಊರುಗಳಿಗೆ ತೆರಳುವ ಬಸ್ಸುಗಳನ್ನು ದುಬಾರಿ ದರದಲ್ಲಿ ಊಟ-ತಿಂಡಿ ಸಿಗುವ ಹೊಟೇಲ್ ಬಳಿಯಷ್ಟೇ ನಿಲ್ಲಿಸಲಾಗುತ್ತದೆ. ಆ ಹೊಟೇಲ್‌ಗಳು ಕುಗ್ರಾಮಗಳಲ್ಲಿದ್ದರೂ ಊಟ-ತಿಂಡಿಗೆ ಬೆಂಗಳೂರಿನ ಸ್ಟಾರ್ ಹೊಟೇಲ್‌ಗಳಿಗಿಂತಲೂ ದುಬಾರಿ ದರ ವಸೂಲಿ ಮಾಡುತ್ತಿವೆ‌.

ಈ ಬಗ್ಗೆ ಪ್ರಜ್ಞಾವಂತರೊಬ್ಬರು ಟ್ವೀಟ್ ಮಾಡಿ ಕೆಎಸ್ಸಾರ್ಟಿಸಿ ಕರ್ಮಕಾಂಡವನ್ನು ಬಯಲು ಮಾಡಿದ್ದಾರೆ. ಗುರುವಾರ ಮಧ್ಯಾಹ್ನ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಐರಾವತ ಬಸ್ಸನ್ನು ಬೆಳ್ಳೂರು ಕ್ರಾಸ್ ಸಮೀಪ ಗ್ರ್ಯಾಂಡ್ ಹರ್ಷ ಎಂಬ ಹೊಟೇಲ್ ಬಳಿ ಊಟ-ತಿಂಡಿಗೆಂದು ನಿಲ್ಲಿಸಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ 2 ಗಂಟೆ ನಡುವೆ ಊಟಕ್ಕೆ ವ್ಯವಸ್ಥೆ ಮಾಡಿದ್ದರೆ ಪರವಾಗಿಲ್ಲ ಎನ್ನಬಹುದಿತ್ತು. ಆದರೆ ಹೊತ್ತಲ್ಲದ ಹೊತ್ತಿಗೆ ಅಂದರೆ 2.30ರ ಸುಮಾರಿಗೆ ಈ ಹೊಟೇಲ್ ಮುಂದೆ ಊಟಕ್ಕೆಂದು ಬಸ್ ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಈ ಹೊಟೇಲ್‌ನಲ್ಲಿ ಊಟ, ಇಡ್ಲಿ ಹೊರತುಪಡಿಸಿ ಬೇರೆ ತಿಂಡಿ ಇಲ್ವಂತೆ. ದೋಸೆ ಮತ್ತಿತರ ತಿಂಡಿ ಸಂಜೆ ನಂತರವಷ್ಟೇ ಎಂದಿದ್ದಾರೆ ಹೊಟೇಲ್ ಸಿಬ್ಬಂದಿ. ಊಟಕ್ಕೆ ಬರೋಬ್ಬರಿ 200 ರೂಪಾಯಿ ದರ. ಒಂದು ಇಡ್ಲಿಗೆ 63 ರೂಪಾಯಿ.

ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿಸಿದ ಬಸ್ ನಿರ್ವಾಹಕರಲ್ಲಿ ಈ ಬಗ್ಗೆ ಕೇಳಿದರೆ, ಈ ಹೊಟೇಲ್‌ನಿಂದ KSRTC ನಿಗಮಕ್ಕೆ ಹಣ ಸಂದಾಯವಾಗುತ್ತೆ. ಹಾಗಾಗಿ ಇಲ್ಲೇ ಬಸ್ ನಿಲ್ಲಿಸಬೇಕೆಂದು ಅಧಿಕಾರಿಗಳ ಆದೇಶವಿದೆ ಎಂದಿದ್ದಾರಂತೆ. ಈ ಕುರಿತಂತೆ ಹೊಟೇಲ್ ಬಿಲ್ ಜೊತೆ ಟ್ವೀಟ್ ಮಾಡಿರುವ ಕೆಎಸ್ಸಾರ್ಟಿಸಿ ಪ್ರಯಾಣಿಕರೊಬ್ಬರು, ಗ್ಯಾರೆಂಟಿ ಯೋಜನೆಯಿಂದಾಗಿ ನಿಗಮವು ಭಿಕ್ಷಾಟನೆ ಹಂತ ತಲುಪಿದೆಯೇ ಎಂದು ಪ್ರಶ್ನಿಸಿದ್ದಾರೆ. ‘ಶಕ್ತಿ’ ಯೋಜನೆಯನ್ನು ಸಮರ್ಥಿಸುತ್ತಿರುವ ಸಾರಿಗೆ ಮಂತ್ರಿ ರಾಮಲಿಂಗ ರೆಡ್ಡಿಯವರನ್ನು ಕೆಣಕಿರುವ ನೆಟ್ಟಿಗರು, ‘ರಾಮಲಿಂಗ ರೆಡ್ಡಿಯವರೇ ನಿಮ್ಮ ಕೆಎಸ್ಸಾರ್ಟಿಸಿಯು ಗ್ಯಾರೆಂಟಿ ಯೋಜನೆಯಿಂದಾಗಿ ಬಲಗೊಂಡಿದೆಯೇ? ಅಥವಾ ಬರ್ಬಾದ್ ಆಗಿದೆಯೇ? ಹಾಗಾಗಿ ಈ ಭಿಕ್ಷಾಟನೆಯೇ? ಭ್ರಷ್ಟಾಚಾರವೇ?’ ಎಂದು ಪ್ರಶ್ನಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed