ಸುದ್ದಿಜಗತ್ತಿನ “ಸಾಕ್ಷಿಪ್ರಜ್ನೆ”-ಮಾದ್ಯಮ ಕ್ಷೇತ್ರದ “ಸಂತ”-ಸಾವಿರಾರು ಉದ್ಯೋಗಿಗಳ ಪಾಲಿನ “ಅನ್ನದಾತ” ರಾಮೋಜಿರಾವ್ ವಿಧಿವಶ..

ಸುದ್ದಿಜಗತ್ತಿನ “ಸಾಕ್ಷಿಪ್ರಜ್ನೆ”-ಮಾದ್ಯಮ ಕ್ಷೇತ್ರದ “ಸಂತ”-ಸಾವಿರಾರು ಉದ್ಯೋಗಿಗಳ ಪಾಲಿನ “ಅನ್ನದಾತ” ರಾಮೋಜಿರಾವ್ ವಿಧಿವಶ..

ಸುದ್ದಿಜಗತ್ತಿನ ಸಾರ್ವಕಾಲಿಕ ಸಂತ ರಾಮೋಜಿರಾವ್ ಕೊನೆಯುಸಿರೆಳೆದಿದ್ದಾರೆ.ಬಹುತೇಕ ಸತ್ತವರ ಬಗ್ಗೆ ಹೇಳುವಾಗ ಅವರ ಅಗಲಿಕೆ ತುಂಬಲಾರದ ನಷ್ಟ ಎನ್ನುವುದು ತಿರಾ ಸವಕಲಿನ ಕ್ಲೀಷೆ ಯ ಸಂತಾಪವಾಗಿ ಬಿಟ್ಟಿದೆ.ಆದರೆ ರಾಮೋಜಿರಾವ್ ಅವರಂತ ಸುದ್ದಿಜಗತ್ತಿನ ಸಾಕ್ಷಿಪ್ರಜ್ನೆಯ ದಿಗ್ಗಜನ ಅಗಲಿಕೆ ಮಾತ್ರ ಕನ್ನಡ ಮಾದ್ಯಮ ಜಗತ್ತಿನ ಮಟ್ಟಿಗೆ ತುಂಬಲಾರದ ನಷ್ಟ.ಭರಿಸಲಾಗದ ನೋವು,ತೀರದ ಶೋಕ,ಕೊನೆಯುಸಿರವರೆಗೂ ತಾವು ಕಟ್ಟಿ ಬೆಳೆಸಿದ ಸುದ್ದಿಜಗತ್ತಿನ ಆಗುಹೋಗುಗಳನ್ನೇ ಉಸಿರಾಡುತ್ತಿದ್ದ ಧೀಮಂತ ಚೇತನ ಕಳೆದುಕೊಂಡ ಮಾದ್ಯಮ ಜಗತ್ತು ರಾಮೋಜಿರಾವ್ ಅವರಂಥ ಚೇತನವನ್ನು ಪಡೆದುಕೊಳ್ಳೊಕ್ಕೆ ಸಾಧ್ಯವೇ ಇಲ್ಲ..ಎಷ್ಟೇ ಶತಮಾನ ಕಳೆದರೂ ಮತ್ತೊಬ್ಬ ರಾಮೋಜಿರಾವ್ ಹುಟ್ಟಿಬರಲಿಕ್ಕೆ ಸಾಧ್ಯವೇ ಇಲ್ಲ.ಮಾದ್ಯಮ ಲೋಕವನ್ನು ಆವರಿಸಿರುವ ಶೂನ್ಯ-ಅನಾಥಪ್ರಜ್ನೆ ಯಾವತ್ತಿಗೂ ದೂರವಾಗಲಿಕ್ಕೆ ಸಾಧ್ಯವೇ ಇಲ್ಲ.

87ರ ಇಳಿ ವಯಸ್ಸಿನಲ್ಲಿ ರಾಮೋಜಿರಾವ್ ಅಗಲಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಮಾದ್ಯಮ ಲೋಕಕ್ಕೆ ಸಿಡಿಲು ಬಡಿದ ಅನುಭವ.ಬೆಳಗ್ಗೆ 3:45ಕ್ಕೆ ಕೊನೆಯುಸಿರೆಳೆದರೆನ್ನುವ ವಿಷಯ ಕಾಡ್ಗಿಚ್ಚಿನಂತೆ ಹರಡುತ್ತಿ ದ್ದಂತೆ ಹರಿದಾಡಲಾರಂಭಿಸಿದ ಸಾವಿರಾರು ಸಂತಾಪ ಹಾಗು ಶೋಕ ಸೂಚಕ ಕಾಮೆಂಟ್ಸ್ ಗಳು ರಾಮೋಜಿರಾವ್ ಅವರ ವ್ಯಕ್ತಿತ್ವದ ಧೀಮಂತಿಕೆಯನ್ನು ಸಾರಿ ಹೇಳುತ್ತಿದ್ದವು.ನಮಗೆ ಬದುಕು ಕೊಟ್ಟ ಅನ್ನದಾತ ಎಂಬ ಕಾಮೆಂಟ್ಸ್ ನಿಂದ ಹಿಡಿದು ಮಾದ್ಯಮ ಲೋಕದ ಪರಿಭಾಷೆಯನ್ನು ಬದಲಿಸಿ ಅದಕ್ಕೊಂದು ವಿನೂತನವಾದ ಆಯಸ್ಕಾಂತೀಯ ಹೊಳಪು ಕೊಟ್ಟದ್ದರ ಬಗ್ಗೆ ಅಭಿಮಾನಪೂರ್ವಕ ಅಭಿಪ್ರಾಯಗಳು ಹರಿದಾಡಲಾ ರಂಭಿಸಿದ್ವು.ರಾಮೋಜಿರಾವ್ ಅವರ ಗರಡಿಯಲ್ಲಿ,ಮಾರ್ಗದರ್ಶನದಲ್ಲಿ,ನೆರಳಲ್ಲಿ ಬೆಳೆದು ಬದುಕನ್ನು ಹಸನುಮಾಡಿಕೊಂಡವರ ಹೇಳಿಕೆಗಳನ್ನು ಓದುವಾಗ ರಾಮೋಜಿರಾವ್ ವ್ಯಕ್ತಿತ್ವದ ಸಂಪೂರ್ಣ ಪರಿಚಯ ವಾಗುತ್ತಿತ್ತು.ಇನ್ನೂ ಒಂದಷ್ಟು ವರ್ಷ ನಮ್ಮ ಜತೆಗಿದ್ದು ಹಳಿತಪ್ಪುತ್ತಿರುವ,ನೈತಿಕವಾಗಿ ಅಧಃಪತನಗೊಳ್ಳುತ್ತಿರುವ ಮಾದ್ಯಮ ಲೋಕಕ್ಕೆ ಸೂಕ್ತ ಸಲಹೆ- ಮಾರ್ಗದರ್ಶನ ನೀಡಬಹುದಿತ್ತೇನೋ ಎಂದೆನಿಸುತ್ತಿತ್ತು.

ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿ,ಈ ನಾಡು ಸಂಸ್ಥೆಗಳೇ ರಾಮೋಜಿರಾವ್ ಅವರ ತಾಕತ್ತಿಗೆ ಸಾಕ್ಷಿಯಂತಿವೆ.ಈ ನಾಡು ಎನ್ನುವಂತ ಮಾದ್ಯಮ ಜಗತ್ತನ್ನು ಕಟ್ಟಿ ಕೆಲ ದಶಕಗಳವರೆಗೆ ಪ್ರಶ್ನಾತೀತರಾಗುಳಿದು ಅದರ ಬೆನ್ನಿಗೆ ಫಿಲ್ಮ್ ಸಿಟಿ ನಿರ್ಮಿಸಿ ಗಿನ್ನೆಸ್ ದಾಖಲೆ ಸೇರುವಂಥ ಕೆಲಸ ಮಾಡಿದ್ದು ಕಡಿಮೆ ಸಾಧನೆಯೇನಲ್ಲ.ಕೌಟುಂಬಿಕ ಕಾರಣಗಳಿಂದಾಗಿ ಮಾದ್ಯಮ ಸಂಸ್ಥೆಯ ಮಾಲೀಕತ್ವ ಹಾಗು ನಿರ್ವಹಣೆಯಲ್ಲಿ ಪಲ್ಲಟ ವಾಗಿ ರಕ್ತಬೆವರನ್ನು ಒಂದಾಗಿಸಿ ಕಟ್ಟಿದ ಈ ಟಿವಿ ಸಂಸ್ಥೆಯನ್ನು ಬಿಟ್ಟುಕೊಡುವಾಗ ಕರುಳಿನ ಸಂಬಂದ ಕಡಿದುಕೊಂಡು ಅವರು ಅನುಭವಿಸಿದ ವೇದನೆ ಅಷ್ಟಿಷ್ಟಲ್ಲವಂತೆ.ಆದರೂ ಈ ಟಿವಿ ಭಾರತ್ ಎನ್ನುವಂತ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಅದನ್ನು ಉಳಿಸಿಕೊಂಡ ಮಹಾಪುರುಷ ರಾಮೋಜಿರಾವ್.ಅತಂತ್ರ ಹಾಗು ಅಭದ್ರವಾಗಿರುವ  ಮಾದ್ಯಮ  ಕ್ಷೇತ್ರದಲ್ಲಿ ಉದ್ಯೋಗಿಗಳು ಅನುಭವಿಸುವ ತಲ್ಲಣ ಗ್ರಹಿಸಿಯೇ ಒಂದಷ್ಟು ಉದ್ಯೋಗಿಗಳಿಗೆ ಕೆಲಸ ಕೊಡಿಸಬೇಕೆನ್ನುವ ಉದ್ದೇಶದಲ್ಲಿ ಆರಂಭಿಸಿದ್ದೇ ಈಟಿವಿ ಭಾರತ್.

ಮಾದ್ಯಮ ಕ್ಷೇತ್ರದಲ್ಲಿ ಹಲವು ಪ್ರಥಮಗಳಿಗೆ ಕಾರಣವಾಗಿದ್ದ ರಾಮೋಜಿರಾವ್ ಅವರು, ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಿತ್ತು. ಏನೇ ಪ್ರಯೋಗ-ಪ್ರಯತ್ನ  ಮಾಡಿದ್ರೂ  ನಿರೀಕ್ಷೆ ಕೈಕೊಟ್ಟಿದ್ದೇ ಇಲ್ಲ.ಆದ್ರೆ ಈಟಿವಿ ಭಾರತ್ ಇದಕ್ಕೆ ಅಪವಾದಂತಿತ್ತೆನ್ನುವ ಮಾತಿದೆ.ಇದರಲ್ಲಿ ಅನುಭವಿಸಿದ ಹಿನ್ನಡೆ,ಆದ ಅವಮಾನ, ಇನ್ನೊಂದೆಡೆ ಕೌಟುಂಬಿಕ ವಿಚಾರಗಳಲ್ಲಿನ ಏರುಪೇರು, ಹೊಣೆ ಹೊರುವಂತವರ ಹಿಂದೇಟು,ಉದ್ಯಮದಲ್ಲೂ ಎದುರಾಗಲಾರಂಭಿಸಿದ ತೊಡಕುಗಳು ರಾಮೋಜಿರಾವ್ ಅವರನ್ನು ಸ್ವಲ್ಪ ಮಟ್ಟಿಗೆ ವಿಚಲಿತಗೊಳಿಸಿದ್ದವೆನ್ನುವ ಮಾತುಗಳಿವೆ.ಇದರ ನಡುವೆ ಕಾಡಲಾರಂಭಿಸಿದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಕೃಶಗೊಂಡ ರಾಮೋಜಿರಾವ್ ಇಂದು ಬೆಳಗ್ಗೆ ಕೊನೆಯುಸಿರೆಳೆದರೆಂದು ಕುಟುಂಬದ ಮೂಲಗಳು ದೃಢಪಡಿಸಿವೆ.

ರಾಮೋಜಿರಾವ್ ಅವರ ಬಗ್ಗೆ ಹೇಳೋದೆಂದ್ರೆ ಒಂದು ಮಹಾನ್ ಗ್ರಂಥವನ್ನು ಪಠಿಸಿದಂತೆ ಎನ್ನುತ್ತಾರೆ ಈಟಿವಿ ಹೈದ್ರಾಬಾದ್ ನಲ್ಲಿ ಕೆಲಸ ಮಾಡಿದ ಹಿರಿಯ ಸಹದ್ಯೋಗಿ.ಆತ ಕಸ ಗುಡಿಸುವ ಕಾರ್ಮಿಕನೇ ಆಗಿರಲಿ, ಚಾನೆಲ್ ನ ಮುಖ್ಯಸ್ಥನೇ ಆಗಲಿ ಎಲ್ಲರಿಗೂ ವೃತ್ತಿಗೌರವ-ವ್ಯಕ್ತಿ ಗೌರವ ನೀಡುತ್ತಿದ್ದ ಸರಳ ಅಪರೂಪದ ವ್ಯಕ್ತಿಯಾಗಿದ್ದರು.ಯಾರನ್ನು ಏರುಧ್ವನಿಯಲ್ಲಿ ಗದರಿಸಿದವರಲ್ಲ,ಯಾರ ಮನಸನ್ನೂ ನೋಯಿಸಿದವರಲ್ಲ. ಸುದ್ದಿ ಮಿಸ್ ಆದ್ರೂ ಅವರದೇ ಧಾಟಿಯಲ್ಲಿ ತಿಳುವಳಿಕೆ ನೀಡುತ್ತಿದ್ದವರು.ಅಂಥಾ ಇನ್ನೊಬ್ಬ ವ್ಯಕ್ತಿಯನ್ನು ಪತ್ರಿಕೋದ್ಯಮದಲ್ಲಿ ನೋಡಲಿಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ  ಈಟಿವಿಯಲ್ಹಿಲಿ ಕೆಲಸ ಮಾಡಿದ ಹಿರಿಯ ಕ್ಯಾಮೆರಾಮನ್ ಒಬ್ರು.

ಇವತ್ತಿನ ನ್ಯೂಸ್ ಚಾನೆಲ್ “ಕೂಗುಮಾರಿ” ಫಾರ್ಮೆಟ್ ಗು ಅವತ್ತಿನ ದಿನಗಳ ಈ ಟಿವಿ ನ್ಯೂಸ್ ಫಾರ್ಮ್ಯಾಟ್ ಗೂ ಇದ್ದ ವ್ಯತ್ಯಾಸಗಳ ಬಗ್ಗೆ ನೆನಪು ಮಾಡಿಕೊಂಡ ಹಿರಿಯ ಸಹದ್ಯೋಗಿಯೊಬ್ಬರು,ಸುದ್ದಿಯನ್ನು ಸುದ್ದಿಯಾಗಿ ಮಾತ್ರ ಬಿತ್ತರಿಸಿ.ಉತ್ಪ್ರೇಕ್ಷೆ ಬೇಡ,ಅತಿರೇಕ ಬೇಡವೇ ಬೇಡ.ಯಾವ ವ್ಯಕ್ತಿಯನ್ನೇ ನೋಯಿಸಬೇಕೆಂದ್ರೂ ಅದನ್ನು ಶಿಷ್ಟಾಚಾರದ ಚೌಕಟ್ಟಿನಲ್ಲೇ ನೋಯಿಸಿ,ಇನ್ನೊಬ್ಬರ ವೈಯುಕ್ತಿಕ ವಿಚಾರಗಳು, ಅನಗತ್ಯ-ಅಸಂಬದ್ಧ ಸುದ್ದಿಗಳು,ಸೆಕ್ಸ್-ಕ್ರೈಮ್ ಗಳನ್ನು ವಿಜ್ರಂಭಿಸಲೇಬೇಡಿ. ಮನೆಗಳಲ್ಲಿ ಎಲ್ಲಾ ವಯೋಮಾನದವರು ಕೂತು ಸುದ್ದಿ ನೋಡುವಂತೆ ಬುಲೆಟಿನ್ (ವಾರ್ತೆ-ನ್ಯೂಸ್) ರೂಪಿಸಿ ಎಂಬುದನ್ನೇ ಒತ್ತಿ ಒತ್ತಿ ಹೇಳುತ್ತಿದ್ದರಂತೆ.

ಆಂಕರ್ಸ್ ಗಳು  ಪರಿಣಾಮಕಾರಿಯಾಗಿ ಸುದ್ದಿ ತಲುಪಿಸುವವರಾಗಬೇಕೇ ಹೊರತು,ಆಲಂಕಾರಿಕ ಬೊಂಬೆಗಳಂತಿರಬಾರದು ಎಂಬ ಆದರ್ಶ ಅಳವಡಿಸಿಕೊಂಡು ಅದನ್ನೇ ತಮ್ಮ ಚಾನೆಲ್ ನ  ಫಾರ್ಮ್ಯಾಟ್ ಆಗಿಸಿದ್ದರು.ಹಾಗಾಗಿಯೇ ಇವತ್ತಿಗೂ ಈ ಟಿವಿ ಕನ್ನಡ ಚಾನೆಲ್ ನ ಒಂದಷ್ಟು ಸುದ್ದಿಗಳನ್ನು ಯು ಟ್ಯೂಬ್ ನಲ್ಲಿ ನೋಡುವಾಗ ಎಂಥಾ ನ್ಯೂಸ್ ಫಾರ್ಮ್ಯಾಟ್ ನ್ನು ಮಿಸ್ ಮಾಡಿಕೊಂಡ್ವಲ್ಲಾ ಎನ್ನಿಸದೆ ಇರೊಲ್ಲ..ಅದು ರಾಮೋಜಿರಾವ್ ಅವರ ತಾಕತ್ತು ಹಾಗೂ ಬದ್ಧತೆ.ಬದಲಾಗುತ್ತಿರುವ ಸುದ್ದಿಜಗತ್ತಿನ ಬೆಳವಣಿಗೆಗಳು ರಾಮೋಜಿರಾವ್ ಅವರನ್ನು ತೀವ್ರವಾಗಿ ಬೇಸರ ಹಾ್ಗು ಘಾಸಿಗೊಳಿಸಿದ್ದವೆನ್ನುತ್ತಾರೆ ಈಟಿವಿಯಲ್ಲಿ ಹಿರಿಯ ಸುದ್ದಿ ಸಂಪಾದಕರಾಗಿದ್ದ ಪತ್ರಕರ್ತರು.

ಇಂದಿನ ಮಾದ್ಯಮದಲ್ಲಿ ಸಂಬಳ ಎನ್ನೋದು ವೃತ್ತಿಯಷ್ಟೇ ಅತಂತ್ರವಾಗಿರುವ ಸನ್ನಿವೇಶದಲ್ಲಿ ರಾಮೋಜಿರಾವ್ ಅವರಿಗೆ ಉದ್ಯೋಗಿಗಳ ಬಗ್ಗೆಯಿದ್ದ ಅಪ್ಯಾಯಮಾನತೆ ಹಾಗು ಕಾಳಜಿಯನ್ನು ಈ ಟಿವಿಯಲ್ಲಿ ಕೆಲಸ ಮಾಡಿದ ಸಾವಿರಾರು ಉದ್ಯೋಗಿಗಳು ಹಾಡಿ ಹೊಗಳಿದ್ದಾರೆ.ಯಾವುದೇ ಉದ್ಯೋಗಿ ಕೆಲಸ ಬಿಟ್ಟರೂ ಆತನಿಗೆ ನ್ಯಾಯಯುತವಾಗಿ ತಲುಪಬೇಕಿರುವ ಬಾಕಿ ಸಂಬಳ-ಭತ್ಯೆ-ಸೌಲಭ್ಯಗಳನ್ನು ಚಾಚೂತಪ್ಪದೆ ತಲುಪಿಸುವಂತೆ ರಾಮೋಜಿರಾವ್ ಆಡಳಿತಕ್ಕೆ ಫರ್ಮಾನ್ ಹೊರಡಿಸಿದ್ದರಂತೆ.ಕೆಲಸ ಬಿಟ್ಟ ಅನೇಕ ವರ್ಷಗಳ ಬಳಿಕವೂ ಅದೆಷ್ಟೋ ಮಾಜಿಯಾದ  ಉದ್ಯೋಗಿಗಳ ಅಕೌಂಟ್ ಗೆ ( ಅದು ಒಂದ್ ರೂಪಾಯಿಯಿದ್ದರೂ, ಚಿಲ್ಲರೆಗಳಲ್ಲಿ ಬಾಕಿಯಿದ್ದರೂ) ಸಂದಾಯವಾಗುತ್ತಿತ್ತಂತೆ. ಅಲ್ಲದೇ ವಿನಾಕಾರಣ ಕೆಲಸದಿಂದ ಯಾರನ್ನು ತೆಗೆಯದಂತೆ ರಾಮೋಜಿ ರಾವ್ ಅವರು  ಶಾಸನವನ್ನು ರೂಪಿಸಿದ್ದರಂತೆ.ಹಾಗಾಗಿ ಉದ್ಯೋಗಭದ್ರತೆ ಎಂದ್ರೆ ಈ  ಟಿವಿ ಎನ್ನುವಂತಿತ್ತು.ಸಂಸ್ಥೆಯಿಂದ ಹೊರದಬ್ಬಿಸಿಕೊಂಡವರೇ ಇರಲಿಲ್ಲ. ಸಂಸ್ಥೆಯನ್ನು ನಾನಾ ಕಾರಣಗಳಿಗೆ  ಬಿಟ್ಟು ಹೋದ ಉದ್ಯೋಗಿಗಳೇ ಹೆಚ್ಚು ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಈಟಿವಿಯಲ್ಲಿ ಕೆಲಸ ಮಾಡಿದ  ಹಿರಿಯ ಪತ್ರಕರ್ತರು.

ಈ ಎಲ್ಲಾ ಸಂಗತಿಗಳಿಂದಲೇ ರಾಮೋಜಿರಾವ್ ಅವರಂಥ ಧೀಮಂತನ ಅಗಲಿಕೆ ಮಾದ್ಯಮ ಲೋಕದ ಮಟ್ಟಿಗೆ ತೀರದ ನಷ್ಟ ಎನ್ನುವುದಕ್ಕೆ ಕಾರಣವಾಗುತ್ತದೆ. ರಾಮೋಜಿರಾವ್ ಅವರ ಆಶ್ರಯದಲ್ಲಿದ್ದ ನಾವೇ ಪುಣ್ಯವಂತರೆಂದು ಸಾವಿರಾರು ಉದ್ಯೋಗಿಗಳು ಹೆಮ್ಮೆಯಿಂದ ಹೇಳಿಕೊಳ್ಳೊಕ್ಕೆ ಕಾರಣವೂ ಇದೇ.ಎಂಥಾ ಮಹಾತ್ಮನನ್ನು ಕಳೆದುಕೊಂಡು ಬಿಟ್ವಲ್ಲಾ..ಇಂಥಾ ಮತ್ತೊಬ್ಬ ಮಹನೀಯನನ್ನು ನಾವು ಪಡೆದು ಕೊಳ್ಳುವುದಿರಲಿ, ನೋಡಲಿಕ್ಕೂ ಸಾಧ್ಯನಾ ಎಂದು ನಿಟ್ಟುಸಿರು ಬಿಡೊಕ್ಕೆ ಕೂಡ ಇದೇ ಕಾರಣ.ಜನ್ಮಾಂತರಗಳ ಬಗ್ಗೆ ನಂಬಿಕೆ ಇಲ್ಲದಿದ್ದರೂ  ರಾಮೋಜಿರಾವ್ ಅವರ ವಿಷಯದಲ್ಲಿ  ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಹೇಳಲೇಬೇಕೆನಿಸುತ್ತಿದೆ.

“ಪ್ರಧಾನಿ ಮೋದಿ ಸಂತಾಪ: ಮಾದ್ಯಮ ದಿಗ್ಗಜ ರಾಮೋಜಿರಾವ್ ಅವರ ಅಗಲಿಕೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ಕಂಬನಿ ಮಿಡಿದಿ ದ್ದಾರೆ.ರಾಮೋಜಿರಾವ್ ಅವರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟ.ಅವರು ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ನೋಡುವಾಗಲೆಲ್ಲಾ ಮೌಲ್ಯ- ಆದರ್ಶಗಳು ನೆನಪಾಗುತ್ತವೆ.ಆ ಮೌಲ್ಯಾಧಾರಿತ ಆದರ್ಶಗಳನ್ನು ಮಾದ್ಯಮ ಲೋಕ ಗೌರವಿಸಿ ಅಳವಡಿಸಿಕೊಳ್ಳಬೇಕು.ಕೇವಲ ಮಾದ್ಯಮ ಲೋಕಕ್ಕಲ್ಲ ಸಿನೆಮಾ ಕ್ಷೇತ್ರಕ್ಕೂ ಫಿಲ್ಮ್ ಸಿಟಿ ಮೂಲಕ ದೊಡ್ಡ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.ಅವರ ಅಗಲಿಕೆ ಮೂಲಕ ಒಬ್ಬ ಮಾರ್ಗದರ್ಶಕನನ್ನು ಮಾದ್ಯಮ ಕಳೆದುಕೊಂಡಂತಾಗಿದೆ.ಅವರ ಆದರ್ಶಗಳನ್ನು ಮಾದ್ಯಮ ರಂಗ ತನ್ನ ಕಾರ್ಯವೈಖರಿಯಲ್ಲಿ ರೂಢಿಸಿಕೊಳ್ಳಬೇಕೆಂದು ಭಾವನಾತ್ಮಕ ವಾಗಿ ಹೇಳಿದ್ದಾರೆ.”

 

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *