ಬೆಂಗಳೂರು: ಕೆಎಸ್ ಆರ್ ಟಿಸಿ   ದೇಶದಲ್ಲೇ ನಂಬರ್ ಒನ್ ಸಾರಿಗೆ ಎನ್ನುವ ಖ್ಯಾತಿ ಗಳಿಸಿ ದೆ..ಆದರೆ ಅದೇ ಕೆಎಸ್ ಆರ್ ಟಿಸಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಒಂದಷ್ಟು ಬಸ್ ಗಳಿಂದಾಗಿ ಕೆಎಸ್ ಆರ್ ಟಿಸಿ ಮಾನವೇ ಹರಾಜಾಗುತ್ತಿರುವುದು ದುರಂತ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಗಳ ದುಸ್ತಿತಿಯ ಪರಮಾವಧಿ ಬಿಂಬಿಸುವಂತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವೀಡಿಯೋ ಎನ್ ಡಬ್ಲ್ಯೂ ಕೆಆರ್ ಟಿಸಿ(NWKSRTC)ಸಾರಿಗೆ ವಿಭಾಗಕ್ಕೆ ಸಂಬಂದಿಸಿದ್ದೆನ್ನಲಾಗುತ್ತಿದೆ.ಈ ವೀಡಿಯೋದಲ್ಲಿ ಡ್ರೈವರ್ ಕೊಡೆ ಹಿಡಿದು ಬಸ್ ನ್ನು ಚಾಲನೆ ಮಾಡುತ್ತಿದ್ದಾನೆ,ಭಾರೀ ಜೋರು ಮಳೆ ಅಬ್ಬರಿಸುತ್ತಿರುವ ಸಮಯ ಅದಾಗಿರಬಹುದು.

ಏಕೆಂದರೆ ಗಾಜಿನ ಮುಂಭಾಗದಲ್ಲಿ ಏನೂ ಕಾಣುತ್ತಿಲ್ಲ.ಸಂಪೂರ್ಣ ಮಳೆ ಆವರಿಸಿದೆ.ದುರಂತ ಎಂದ್ರೆ ಬಸ್ ಛಾವಣಿ ಸೋರುತ್ತಿದ್ದು ಚಾಲಕ ಒಂದು ಕೈಯಲ್ಲಿ ಕೊಡೆ ಹಿಡಿದು ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ಬಸ್ ಚಾಲನೆ ಮಾಡುತ್ತಿದ್ದಾನೆ.ಆದರೆ ಬಸ್ ನೊಳಗೆ ಪ್ರಯಾಣಿಕರು ಪ್ರಯಾಸ ಪಡುತ್ತಿರುವ ಯಾವುದೇ ದೃಶ್ಯಗಳು ಕಾಣಿಸುತ್ತಿಲ್ಲ.

ಚಾಲಕ ಕೊಡೆ ಹಿಡಿದು ಬಸ್ ಚಾಲನೆ ಮಾಡುತ್ತಿರುವುದರ ಹಿಂದಿನ ಉದ್ದೇಶ ಏನಿದೆಯೋ ಇಲ್ವೋ ಗೊತ್ತಿಲ್ಲ.ಆದ್ರೆ ಮೇಲ್ನೋಟಕ್ಕೆ ಬಸ್ ಮಳೆಯಿಂದಾಗಿ ಸೋರುತ್ತಿರುವುದನ್ನು ಮಾತ್ರ ಅಕ್ಷರಶಃ ಕಟ್ಟಿ ಕೊಟ್ಟಿದ್ದಾನೆ.

ಬಸ್ ಗಳ ದುಸ್ತಿತಿ ಹಾಗೂ ಸಂಸ್ಥೆಗಳ ಬಂಡವಾಳ ಪ್ರದರ್ಶಿಸುವುದು ಬಹುಷಃ ಆತನ ಉದ್ದೇಶ ಇರಲಿಕ್ಕಿಲ್ಲ.ಯಾಕಂದ್ರೆ ಅನ್ನ ಕೊಡುವ ಸಂಸ್ಥೆಗೆ ದೋಖಾ ಮಾಡುವ ಅಥವಾ ಸಾರ್ವಜನಿಕವಾಗಿ ಮಾನ ಹರಾಜು ಮಾಡುವ ಕೆಟ್ಟ ಉದ್ದೇಶ ಯಾರಿಗೂ ಇರೊಲ್ಲ.ಈತನಿಗೂ ಅದು ಇರಲಿಕ್ಕಿಲ್ಲ ಎನಿಸುತ್ತದೆ.

ಬಸ್ ಗಳು ಸೋರುತ್ತಿವೆ,ದಯವಿಟ್ಟು ಅದನ್ನು ಸರಿಪಡಿಸಿ ಎಂದು ಮೇಲಾಧಿಕಾರಿಗಳಿಗೆ ತಿಳಿಸಿದ್ರೂ ತಲೆಕೆಡಿಸಿಕೊಳ್ಳದೆ ದುಸ್ಥಿತಿಯ ಬಸ್ ಗಳನ್ನು ಕಳುಹಿಸಿಕೊಟ್ಟಿದ್ದನ್ನು ತಿಳಿಸಲು ಚಾಲಕ ಹಾಗೆ ಮಾಡಿರುವ ಸಾಧ್ಯತೆಗಳಿರಬಹುದೆನೋ..? ಅಥವಾ ಬಸ್ ನೊಳಗೆ ಇರುವ ಪ್ರಯಾಣಿಕರಲ್ಲೇ ಯಾರಾದರೊಬ್ಬರು ಚಾಲಕನ ಕಷ್ಟ ನೋಡಲಿಕ್ಕಾಗದೆ ಮೊಬೈಲ್ ನಲ್ಲಿ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ನೋಡಿ ಪಾಪ ಡ್ರೈವರ್ ಗಳು ಎಂಥಾ ಕೆಟ್ಟ ಪರಿಸ್ತಿತಿಯಲ್ಲೂ ಹೇಗೆಲ್ಲಾ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ತೋರಿಸಿಕೊಡುವ ಉದ್ದೇಶವೂ ಇರಬಹುದೇನೋ..?

ಬಹುಷಃ ಈ ವೀಡಿಯೋ ವೈರಲ್ ಆದ್ಮೇಲೆ ಚಾಲಕನ ವಿರುದ್ದ ಕ್ರಮ ಜಾರಿಯಾದ್ರೂ ಆಶ್ವರ್ಯವಿಲ್ಲ.ಏಕೆಂದರೆ ಅಂಥಾ ಹೀನಮನಸ್ತಿತಿಯ ಅಧಿಕಾರಿಗಳು ಸಾರಿಗೆ ನಿಗಮಗಳಲ್ಲಿದ್ದಾರೆ.ಇಂಥಾ ದೃಶ್ಯಗಳನ್ನು ಹಾಕುವುದರ ಹಿಂದಿನ ಉದ್ದೇಶವನ್ನೇ ತಿರುಚಿ ಇದೆಲ್ಲಾ ಡ್ರೈವರ್ ನದೇ ಕರಾಮತ್ತು-ಕಿಡಿಗೇಡಿತನ ಎಂಬ ಸಮರ್ಥನಗೆ ಬಂದು ಸಂಸ್ಥೆಯ ಮಾನ ಹರಾಹಾಕಿದ್ದಾನೆ ಎನ್ನುವ ಆರೋಪದಡಿ ಡ್ರೈವರ್ ನ್ನು ಅಮಾನತುಗೊಳಿಸಿದ್ರೂ ಆಶ್ಚರ್ಯವಿಲ್ಲ.

ಏಕೆಂದರೆ ಎಲ್ಲವೂ ಸರಿಯಾಗಿದ್ದರೆ ಅದಕ್ಕೆ ನಾವೇ ಕಾರಣ ಎಂದು ಅದರ ಕ್ರೆಡಿಟ್ ತೆಗೆದುಕೊಳ್ಳೊಕ್ಕೆ ಮುಂದಾಗುವ ಅಧಿಕಾರಿಗಳು ಸಮಸ್ಯೆಗಳಾದ್ರೆ ಅದಕ್ಕೆ ನಮ್ಮ ಹೊಣೆಗೇಡಿತನವೂ ಕಾರಣ ಎಂದು ಮನವರಿಕೆ ಮಾಡಿಕೊಂಡು ಅದರ ಹೊಣೆ ಹೊತ್ತುಕೊಳ್ಳೊಕ್ಕೆ ಮುಂದಾಗುವುದೇ ಇಲ್ಲ.ಗೆದ್ದರೆ ಆಡಕ್ಕೆ ಬಂದಿದ್ವಿ..ಸೋತ್ರೆ ನೋಡಲಿಕ್ಕೆ ಬಂದಿದ್ವಿ ಎನ್ನುವ ಮನಸ್ತಿತಿಯವರೇ ಹೆಚ್ಚಾಗಿರುವ ಸಂಸ್ಥೆಯಲ್ಲಿ ಈ ವೀಡಿಯೋದಲ್ಲಿ ಕೊಡೆ ಹಿಡಿದು ಚಾಲನೆ ಮಾಡುತ್ತಿರುವ ಡ್ರೈವರ್ ಅಮಾನತ್ತಾದ್ರೂ ಆಶ್ಚರ್ಯವಿಲ್ಲ.

  ಈ ಎಲ್ಲಾ ಸನ್ನಿವೇಶಗಳನ್ನು ಅವಲೋಕಿಸಿದ ಸಂದರ್ಭದಲ್ಲಿ ಆಗಬೇಕಿರುವುದು ಸಂಸ್ಥೆ ಮಾನ ಹರಾಜಾಕಿದ ಎನ್ನುವ ಆಕ್ರೋಶಕ್ಕೆ ಚಾಲಕನನ್ನು ಕೆಲಸದಿಂದ ಅಮಾನತುಗೊಳಿಸುವುದಲ್ಲ.ತುರ್ತಾಗಿ ಆಗಬೇಕಿರುವುದು ಬಸ್ ಗಳ ದುರವಸ್ಥೆ ಸರಿಪಡಿಸುವುದು.ಮಳೆ ಅಬ್ಬರಿಸುವ ಸಂದರ್ಭ ಮುಂದಿನ ದಿನಗಳಲ್ಲಿರುವುದರಿಂದ ಅಂಥಾ ವಾತಾವರಣದಲ್ಲಿ ಕಾರ್ಯಾಚರಣೆ ಮಾಡುವ ಬಸ್ ಗಳು ಸುಸ್ತಿತಿಯಲ್ಲಿರಬೇಕಾಗುತ್ತದೆ.

ಅದಕ್ಕಾಗಿ ಈಗಿನಿಂದಲೇ ಬಸ್ ಗಳನ್ನು ದುರಸ್ತಿಗೊಳಿಸಬೇಕಿದೆ. ಎಲ್ಲಾ ನಾಲ್ಕು ನಿಗಮಗಳಲ್ಲಿ ಇರುವ ಸಾವಿರಾರು ಸಮಸ್ಯೆ ಬಸ್ ಗಳನ್ನು ಬದಲಿಸಬೇಕಿದೆ.ಈ ನಿಟ್ಟಿನಲ್ಲಿ ಸಾರಿಗೆ ಆಡಳಿತ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆಯೇ ಹೊರತು,ವೀಡಿಯೋದಿಂದ ಸಂಸ್ಥೆ ಮಾನ ಹರಾಜಾಯ್ತು ಎನ್ನುವ ಕೋಪಕ್ಕೆ ಆ ವೀಡಿಯೋವನ್ನು ವೈರಲ್ ಮಾಡದೆ ಇರಬಹುದಾದ ಡ್ರೈವರ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವುದು ಅಮಾನವೀಯವಷ್ಟೆ ಅಲ್ಲ, ಅತಾರ್ಕಿಕವೂ ಹೌದು,.

Spread the love

Leave a Reply

Your email address will not be published. Required fields are marked *

You missed