ಭಾರತದ ಕುಸ್ತಿಪಟು ಅಮನ್ ಶೆರಾವತ್ ಚೊಚ್ಚಲ ಪ್ರವೇಶದಲ್ಲೇ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ.
ಶುಕ್ರವಾರ ನಡೆದ ಪುರುಷರ 57 ಕೆಜಿ ವಿಭಾಗದಲ್ಲಿ ಅಮನ್ ಶೆರಾವತ್ 13-5 ಅಂಕಗಳಿಂದ ಪ್ಯೂಟ್ರೊ ರಿಕೊದ ಡೇರಿಯನ್ ಟೊಯ್ ಕ್ರೂಜ್ ಅವರನ್ನು ಸೋಲಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟರು. ಈ ಮೂಲಕ ಭಾರತ ಒಲಿಂಪಿಕ್ಸ್ ನಲ್ಲಿ 1 ಬೆಳ್ಳಿ ಮತ್ತು 5 ಕಂಚು ಸೇರಿದಂತೆ 6 ಪದಕ ಗೆದ್ದ ಸಾಧನೆ ಮಾಡಿತು.
ಅಮನ್ ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಇತಿಹಾಸ ನಿರ್ಮಿಸಿದರು. ಅಮತ್ 21 ವರ್ಷ, 24 ದಿನದ ವಯಸ್ಸಿನವರಾಗಿದ್ದು, ಈ ಹಿಂದೆ ಪಿವಿ ಸಿಂಧು ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.
ವಿಶೇಷ ಅಂದರೆ ಅಮನ್ ಕಂಚಿನ ಪದಕದ ಪಂದ್ಯಕ್ಕೂ ಮುನ್ನ ನಿಗದಿಗಿಂತ 4.6 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಇದರಿಂದ ಸುಮಾರು 10 ಗಂಟೆಗಳ ಕಾಲ ಶ್ರಮ ವಹಿಸಿ ತೂಕ ಇಳಿಸಿಕೊಂಡು ಸ್ಪರ್ಧೆಗೆ ಅರ್ಹತೆ ಪಡೆದರು.
ವಿನೇಶ್ ಪೊಗಟ್ 100 ಗ್ರಾಂ ತೂಕ ಹೆಚ್ಚಾಗಿದ್ದರಿಂದ ಫೈನಲ್ ನಲ್ಲಿ ಆಡಲು ಅನರ್ಹಗೊಂಡು ಕನಿಷ್ಠ ಬೆಳ್ಳಿ ಪದಕದಿಂದ ವಂಚಿತರಾಗಿದ್ದು ಇಡೀ ದೇಶವೇ ಆಘಾತಕ್ಕೆ ಒಳಗಾಗಿತ್ತು. ಇದರಿಂದ ಭಾರತದ ಒಲಿಂಪಿಕ್ಸ್ ತಂಡ ಶ್ರಮ ವಹಿಸಿ ಅಮನ್ ವಿಷಯದಲ್ಲಿ ತಪ್ಪಾಗದಂತೆ ನೋಡಿಕೊಂಡರು.