ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಚಿವೆ ಎಚ್.ಡಿ. ರೇವಣ್ಣ ಪತ್ನಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣ ಅವರಿಗೆ ಮಂಜೂರು ಮಾಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದಲ್ಲಿ ಭವಾನಿ ರೇವಣ್ಣಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.

ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಎಸ್‌ ಐಟಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ನೇತೃತ್ವದ ವಿಭಾಗೀಯ ಪೀಠ, ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ ಮನವಿಯನ್ನು ವಜಾಗೊಳಿಸಿದೆ.

ಪ್ರಕರಣದಲ್ಲಿ ಈಗಾಗಲೇ ಚಾರ್ಜ್​ಶೀಟ್ ಸಲ್ಲಿಸಲಾಗಿದೆ. ರಾಜಕೀಯ ಕುಟುಂಬ ಎಂದು ಜಾಮೀನು ನಿರಾಕರಿಸಲು ಸಾಧ್ಯವಿಲ್ಲ. ಕೆಲ ರಾಜಕಾರಣಿಗಳು ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಹುದು. ಈ ಪ್ರಕರಣದಲ್ಲಿ ತನಿಖೆ ದಾರಿ ತಪ್ಪಿದೆಯಾ? ತಪ್ಪಿದ್ದರೆ ನಿಮ್ಮ ನೆರವಿಗೆ ಬರಬಹುದು. ಆದರೆ ಇಲ್ಲಿ ಯಾವುದೂ ಆ ರೀತಿ ಕಾಣುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೊಳಗಾದ ಮೈಸೂರು ಜಿಲ್ಲೆಯ ಕೆಆರ್ ನಗರದ ಸಂತ್ರಸ್ತೆಯನ್ನು ಅಪಹರಿಸಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು ಮತ್ತು ಇದಕ್ಕೆ ಭವಾನಿ ರೇವಣ್ಣ ನಿರ್ದೇಶನ ನೀಡಿದ್ದರು. ಪ್ರಕರಣದ ಹಿಂದೆ ಪ್ರಮುಖ ಪಾತ್ರ ವಹಿಸಿರುವ ಭವಾನಿ ರೇವಣ್ಣಗೆ ಜಾಮೀನು ನೀಡಬಾರದು ಎಂದು ಎಸ್​ಐಟಿ ಪರ ವಕೀಲರು ವಾದ ಮಂಡಿಸಿದ್ದರು.

ಆರೋಪಿ ಮಹಿಳೆ ಪ್ರಕರಣದಲ್ಲಿ ನೇರವಾಗಿ ಸಂಬಂಧ ಹೊಂದಿದ್ದಾರೆ. ಅತ್ಯಾಚಾರ ಎಸಗಿದ ಆರೋಪಿಯ ತಾಯಿ ಕೂಡ ಆಗಿದ್ದಾರೆ. ಆರೋಪಿಗಳು ಪ್ರತಿಷ್ಠಿತ ರಾಜಕೀಯ ಕುಟುಂಬಕ್ಕೆ ಸಂಬಂಧಿಸಿದವರು. ಹೀಗಾಗಿ ಹೈಕೋರ್ಟ್ ನೀಡಿರುವ ನಿರಿಕ್ಷಣಾ ಜಾಮೀನು ರದ್ದು ಮಾಡಬೇಕು ಎಂದು ಸುಪ್ರೀಂ ಕೋರ್ಟ್​ನಲ್ಲಿ ಎಸ್​ಐಟಿ ಅಧಿಕಾರಿಗಳ ಪರ ವಕೀಲರು ವಾದಿಸಿದ್ದರು.

Spread the love

Leave a Reply

Your email address will not be published. Required fields are marked *