18 ಲಕ್ಷ ಬಿಲ್ ಗೆ 16 ಪರ್ಸೇಂಟ್ ಕಮಿಷನ್ ಕೇಳಿದ್ರಂತೆ ಡಿಸಿಎಫ್ ಸ್ವಾಮಿ..! ಮಾಡದ ಕೆಲಸಕ್ಕೆ ಬೋಗಸ್ ಬಿಲ್ ಮಾಡಿಕೊಂಡು ಬಂದಿದ್ರಂತೆ ಶ್ರೀನಿವಾಸ್..!?

ಬೆಂಗಳೂರು:ಬಿಬಿಎಂಪಿ ಅರಣ್ಯ ಘಟಕದಲ್ಲಿ ಕಮಿಷನ್ ಸುದ್ದಿ ಸದ್ದು ಮಾಡಿದೆ. ಮಳೆಗಾಲದಲ್ಲಿ ಮಾಡಿದ ಕೆಲಸದ ಬಿಲ್ ಕೇಳಲು ಹೋದರೆ ಉಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಎಲ್.ಜಿ. ಸ್ವಾಮಿ ಅವರು ಶೇಕಡಾ 15 ರಷ್ಟು ಕಿಕ್ ಬ್ಯಾಕ್ ಕೇಳುತ್ತಿದ್ದಾರೆ ಎಂದು ಅರಣ್ಯ ಗುತ್ತಿಗೆದಾರ ಶ್ರೀನಿವಾಸ್ ಆಪಾದಿಸಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ದೂರು ನೀಡಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಅವರಿಗೆ ಆದೇಶಿಸಿದ್ದಾರೆನ್ನುವ ಮಾತುಗಳಿವೆ. ಸ್ವಾಮಿ ಅವರ ವಿರುದ್ದ ಬರೆದಿರುವ ದೂರಿನ ಪತ್ರದ ಪ್ರತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.

ಬಿಬಿಎಂಪಿ ಕ್ಯಾಂಪಸ್ ನಲ್ಲಿ ಪರ್ಸಂಟೇಜ್ ವ್ಯವಹಾರದ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ.ಸಿವಿಲ್ ಕಾಮಗಾರಿಗಳು, ಕಸದ ಗುತ್ತಿಗೆ ನಡೆಸಿದ ಗುತ್ತಿಗೆದಾರರು ಬಿಲ್ ಮಾಡಿಕೊಳ್ಳಲು ಇಂತಿಷ್ಟು ಎಂದು ಕಿಕ್ ಬ್ಯಾಕ್ ಕೊಡುತ್ತಿದ್ದ ಸುದ್ದಿ ಮಾಮೂಲಾಗಿತ್ತು.ಆದರೆ ಅತಿಯಾದ ದುರಾಸೆಗೆ ಬಿದ್ದ ಆಡಳಿತ ಗುತ್ತಿಗೆದಾರರ ಸಹನೆ ಕೆಣಕಿದಾಗಲಷ್ಟೇ ಬಹಿರಂಗವಾಗಿ ಅಸಮಾಧಾನ ಸ್ಪೋಟಿಸಿ ಮಾದ್ಯಮಗಳ ಮುಂದೆ ಅದನ್ನು ಜಗಜ್ಜಾಹೀರುಗೊಳಿಸಿದ್ದರು.
ಈ ಆರೋಪಗಳ ನಡುವೆಯೇ ಅರಣ್ಯ ಘಟಕದಲ್ಲಿ ಉಪಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆಗಿರುವ ಬಿಎಲ್ ಜಿ ಸ್ವಾಮಿ ಅವರು ಬಿಲ್ ಮಾಡಿಕೊಡಲು ಕಿಕ್ ಬ್ಯಾಕ್ ನ್ನು ಕೇಳುತ್ತಿದ್ದಾರೆಂದು ಗುತ್ತಿಗೆದಾರರು ಆಪಾದನೆ ಮಾಡುತ್ತಿದ್ದಾರೆ. ಅರಣ್ಯ ಗುತ್ತಿಗೆದಾರರಲ್ಲಿ ಒಬ್ಬರಾದ ಶ್ರೀನಿವಾಸ್ ಅವರೇ ಇಂತದ್ದೊಂದು ಆಪಾದನೆ ಮಾಡಿದ್ದು, ಸ್ವಾಮಿ ಅವರು ಕೇಳುತ್ತಿದ್ದಾರೆನ್ನಲಾದ ಕಿಕ್ ಬ್ಯಾಕ್ ಬಗ್ಗೆ ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ಅವರಿಗೆ ಪತ್ರವನ್ನೂ ಬರೆದಿದ್ದಾರೆ.
“2024 ರ ಮಳೆಗಾಲದಲ್ಲಿ ಸಾಕಷ್ಟು ಕಡೆ ಮಳೆಯಿಂದಾಗಿ ರೆಂಬೆ ಕೊಂಬೆಗಳು ಬಿದ್ದು ಆವಾಂತರ ಸೃಷ್ಟಿಯಾಗಿತ್ತು.ಆ ವೇಳೆ ಹೆಬ್ಬಾಳ, ಯಲಹಂಕ ಮತ್ತು ಶಿವಾಜಿನಗರ ವಿಭಾಗಗಳಲ್ಲಿ ತುರ್ತು ಕೆಲಸ ಮಾಡಿದ್ದೆವು. ಪ್ರತಿಯೊಂದು ವಿಭಾಗದಲ್ಲಿ 6 ಲಕ್ಷದಂತೆ 18 ಲಕ್ಷ ರೂ ನನಗೆ ಬರಬೇಕಿತ್ತು.ಈ ಬಗ್ಗೆ ಬಿಲ್ ಕೇಳಲು ಹೋದರೆ ಶೇಕಡಾ 10 ರಿಂದ ಶೇ.16 ರಷ್ಟು ಕಿಕ್ ಬ್ಯಾಕ್ ಕೇಳಿದ್ರು.ನಾನು ಕೊಡಲು ಆಗೊಲ್ಲ ಎಂದಿದ್ದಕ್ಕೆ ಗಲಾಟೆ ಮಾಡಿದರು.ನಾನು ಏರುದ್ವನಿಯಲ್ಲಿ ಮಾತನಾಡಿದ್ದಕ್ಕೆ ನನ್ನ ವಿರುದ್ದವೇ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದರು..ಏನೂ ಮಾಡದ ನನ್ನ ಮೇಲೆ ಮಾಡಿದ ಆರೋಪಕ್ಕೆ ಕಾನೂನಾತ್ಮಕ ವಾಗಿ ರಕ್ಷಣೆ ಪಡೆದಿದ್ದೇನೆ..ಆದರೆ ನನಗಾದ ಅನ್ಯಾಯಕ್ಕೆ ನ್ಯಾಯ ಕೋರಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ದೂರು ನೀಡಿದ್ದೇನೆ.ಅವರು ಸೂಕ್ತ ಕ್ರಮಕ್ಕಾಗಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ”. ಎನ್ನುವುದು ದೂರುದಾರ ಶ್ರೀನಿವಾಸ್ ವಿವರಣೆ.

ಶ್ರೀನಿವಾಸ್ ಹೇಳುವಂತೆ “ಸೂಕ್ತ ಕ್ರಮಕ್ಕೆ ಡಿಕೆ ಶಿವಕುಮಾರ್ ಅವರು ಸೂಕ್ತ ಕ್ರಮಕ್ಕಾಗಿ ಸೂಚಿಸಿರುವುದು ಸತ್ಯ.ಇದರ ಬಗ್ಗೆ ಸ್ಪಷ್ಟನೆ ಕೇಳಿದಾಗ ಉಪಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ವಾಮಿ ಅವರು ಪ್ರತಿಕ್ರಯಿಸಿದ್ದು ಹೀಗಿತ್ತು..ನನ್ನ ವಿರುದ್ದ ಆಪಾದನೆ ಮಾಡಿರುವ ಶ್ರೀನಿವಾಸ್ ಕೆಲಸವನ್ನೇ ಮಾಡಿಲ್ಲ.ಕೆಲಸವನ್ನೇ ಮಾಡದೆ ಬೋಗಸ್ ಬಿಲ್ ಸೃಷ್ಟಿಸಿ ನನ್ನ ಮೇಲೆ ಒತ್ತಡ ಹೇರುತ್ತಿದ್ದರು.ಆದರೆ ಇದನ್ನು ನಿರಾಕರಿಸಿದ್ದಕ್ಕೆ ನನ್ನ ಮೇಲೆ ಗಲಾಟೆ ಕೂಡ ಮಾಡಿದ್ರು.ಅದರ ಸಿಸಿ ಟಿವಿ ಫುಟೇಜಸ್ ಕೂಡ ನನ್ನ ಬಳಿ ಇದ್ದವು.ಆಧಾರ ಸಮೇತ ಪೊಲೀಸ್ ಠಾಣೆಗೆ ದೂರು ನೀಡಿದ್ದೆ.ತನಗಾಗ ಹಿನ್ನಡೆಯಿಂದ ಕುಪಿತರಾಗಿ ಹೀಗೆಲ್ಲಾ ಆಪಾದನೆ ಮಾಡುತ್ತಿದ್ದಾರೆ.ಆದರೆ ಕೆಲಸವನ್ನೇ ಮಾಡದೆ ಬಿಲ್ ಕೊಡಿ ಎಂದರೆ ಕೊಡಲಿಕ್ಕೆ ಆಗುತ್ತಾ ಸಾಧ್ಯವೇ ಇಲ್ಲ..ನನ್ನ ವಿರುದ್ಧ ನೀಡಿರುವ ದೂರಿಗೆ ಸಂಬಂಧಿಸಿದಂತೆ ಯಾರಿಗೆ ವಿವರಣೆ ಕೊಡಬೇಕೋ ಅವರಿಗೆ ಕೊಟ್ಟಿದ್ದೇನೆ” ಎಂದರು.

ಬಿಬಿಎಂಪಿ ಕ್ಯಾಂಪಸ್ ನಲ್ಲಿ ಕೇಳಿಬಂದಿರುವ ಮತ್ತೊಂದು ಪರ್ಸಂಟೇಜ್ ಆಪಾದನೆ ಸಧ್ಯಕ್ಕೆ ದೊಡ್ಡ ಸದ್ದು ಮಾಡಿದೆ.ಆದರೆ ಇದರ ಸತ್ಯಾಸತ್ಯತೆ ಹೊರಬರಬೇಕಾದರೆ ಇನ್ನೊಂದಷ್ಟು ದಿನ ಕಾಯಬೇಕಾಗುತ್ತದೆ. ಶ್ರೀನಿವಾಸ್ ಅವರಂತೆ ಇನ್ನ್ಯಾವ ಗುತ್ತಿಗೆದಾರರು ಇಂತದ್ದೇ ಆಪಾದನೆ ಮಾಡಿದರೆ ಅದು ಗಂಭೀರವಾಗಬಹುದು.ಆದರೆ ಶ್ರೀನಿವಾಸ್ ಮಾಡಿದ ಆಪಾದನೆಗೆ ಕೌಂಟರ್ ಆಗಿ ಸ್ವಾಮಿ ಅವರು ಕೂಡ ಕಾನೂನಾತ್ಮಕ ಹೋರಾಟಕ್ಕೆ ಸಜ್ಜಾಗಿರುವುದಾಗಿ ಹೇಳಿದ್ದಾರೆ.ಕಾದು ನೋಡಬೇಕು, ಈ ಸಂಘರ್ಷ ಯಾವ ಹಂತ ತಲುಪುತ್ತೆ ಎಂದು.