• ಕೊನೆಗೂ ಬಯಲಾಯ್ತು ಸಂತೋಷ್‌ ಜೀ “ಮುಖವಾಡ”..!-ಯಡಿಯೂರಪ್ಪ‌ ಬಗ್ಗೆ “ಅಸಹನೆ” ಬಹಿರಂಗ..!
  • ಯಡಿಯೂರಪ್ಪ‌ ವಿರುದ್ದ “ಮಸಲತ್ತ”ನ್ನೇ ಮಾಡುತ್ತಾ ಬಂದಿದ್ದ‌ ಸಂತೋಷ್  “ಮನದಾಳ” ಅನಾವರಣ
  • ಇಷ್ಟೆಲ್ಲಾ “ಅಪಮಾನ”ದ ನಂತರ ಯಡಿಯೂರಪ್ಪ ಸುಮ್ಮನಿರ್ತಾರಾ..?! “ಸ್ವಾಭಿಮಾನ”ವಿದ್ದರೆ ಬಿಜೆಪಿ ಬಿಟ್ಟು ಬನ್ನಿ
  • ಚುನಾವಣೆಯಲ್ಲಿ”ತಾಕತ್ತು” ತೋರಿಸೊಕ್ಕೆ ಮುಂದಾದ ಲಿಂಗಾಯಿತರು-“ಪ್ರತೀಕಾರ” ತೀರಿಸಿಕೊಳ್ಳಲು ಪ್ರತಿಜ್ಞೆ.

ಬೆಂಗಳೂರು: ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಅವರ ಅಸಲೀಯತ್ತು ಹೊರಬಿದ್ದಿದೆ.ಅವರ ಧೋರಣೆ-ನಿಲುವುಗಳೆಲ್ಲವೂ ಹಿಟ್ಲರ್‌ ನ ಸರ್ವಾಧಿಕಾರಿತನದಂತಿದೆಯಾ ಎನ್ನುವ ಶಂಕೆ ಹೇಳಿಕೆಗಳಿಂದ ವ್ಯಕ್ತವಾಗಿದೆ.ಕರ್ನಾಟಕದಲ್ಲಿ ನಾಮಾವಶೇಷವಿಲ್ಲದಂತಿದ್ದ ಬಿಜೆಪಿಯನ್ನು ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಾಡಿ ಅಧಿಕಾರಕ್ಕೆ ತರುವಲ್ಲಿ ಕಾರಣಕರ್ತರಾದ ಯಡಿಯೂರಪ್ಪ ಅವರಂಥ ನಾಯಕನನ್ನು ಇಡೀ ರಾಜ್ಯವೇ ಪಕ್ಷಾತೀತವಾಗಿ ಒಪ್ಪಿಕೊಂಡಿದ್ರೆ ಬಿ.ಎಲ್‌ ಸಂತೋಷ್‌ ಅವರಂಥವರಿಗೆ ಮಾತ್ರ ಯಡಿಯೂರಪ್ಪ ಶೂನ್ಯ ವ್ಯಕ್ತಿತ್ವ ಎಂದೆನಿಸಿಬಿಡ್ತಾರೆ.

ಯಡಿಯೂರಪ್ಪ ಇಲ್ಲದಿದ್ದರೂ ಪಕ್ಷ ನಡೆಯುತ್ತೆ.ಅವರನ್ನು ನೆಚ್ಚಿಕೊಂಡೇನು ಪಕ್ಷವಿಲ್ಲ..ನಮ್ಮದು ಹಿಂದುತ್ವದ ಮೇಲೆ ಸ್ಥಾಪಿತವಾಗಿರುವ ಪಕ್ಷವೇ ಹೊರತು ವ್ಯಕ್ತಿ ನಂಬಿಕೊಂಡಂತದ್ದಲ್ಲ ಎಂದ್ಹೇಳುವ ಮೂಲಕ ಯಡಿಯೂರಪ್ಪ ರಿಗೆ  ಬಿ.ಎಲ್‌ ಸಂತೋಷ್‌ ಅಪಮಾನ ಮಾಡಿದ್ದಾರೆ.ಅವರ ಹೇಳಿಕೆಗೆ ಪಕ್ಷದೊಳಗೇ ವ್ಯಾಪಕ ಆಕ್ರೋಶ-ಅಸಮಾಧಾನ ವ್ಯಕ್ತವಾಗುತ್ತಿದೆ.ಎಲ್ಲಾ ಮುನಿಸು ಮರೆತು ಪಕ್ಷ ಸಂಘಟನೆ ಮತ್ತು ಪ್ರಚಾರದಲ್ಲಿ ತೊಡಗಿದ್ದ ಯಡಿಯೂರಪ್ಪ ಮತ್ತೆ ತಟಸ್ಥರಾಗೊಕ್ಕೆ ಸಂತೋಷ್‌ ಅವರ ಹೇಳಿಕೆ ಕಾರಣವಾಗುತ್ತದಾ ಎನ್ನುವ ಸನ್ನಿವೇಶ ನಿರ್ಮಾಣವಾಗಿದೆ.

ಬೆಂಗಳೂರಿನ ಖಾಸಗಿ ಹೊಟೇಲ್‌ ಒಂದರಲ್ಲಿ ನಡೆದ ಪಕ್ಷದ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಬಾಯಿಗೆ ಬಂದಂತೆ ನಾಲಿಗೆ ಹರಿಬಿಟ್ಟಿರುವುದು ಯಡಿಯೂರಪ್ಪ ಅವರನ್ನು ನಖಶಿಖಾಂತ ಉರಿಸಿಬಿಟ್ಟಿದೆ.ಅವರ ಬೆಂಬಲಿಗರಲ್ಲಂತೂ ಪಕ್ಷದ ಬಗ್ಗೆ ಅಸಹನೆ ಮೂಡಿಸಿದೆ.ಇಷ್ಟ್‌ ವರ್ಷ ಪಕ್ಷಕ್ಕಾಗಿ ಪಟ್ಟ ಶ್ರಮಕ್ಕೆ ಸಿಕ್ಕಂತ ಪ್ರತಿಫಲಕ್ಕೆ ಕೆಂಡಾಮಂಡಲವಾಗಿದ್ದಾರೆ.ಇಷ್ಟೆಲ್ಲಾ ಅನ್ನಿಸಿಕೊಂಡ ಮೇಲೂ ತಾಳ್ಮೆಯಿಂದ ಇದ್ದರೆ ನಮ್ಮನ್ನು ಕೈಲಾಗದವರು ಎಂದುಕೊಳ್ಳುತ್ತಾರೆ.ತತ್‌ ಕ್ಷಣ ಇದನ್ನು ಹೈಕಮಾಂಡ್‌ ಗಮನಕ್ಕೆ ತರಬೇಕು.ಯಡಿಯೂರಪ್ಪ‌ ದೊಡ್ಡ ಶಕ್ತಿ ಎಂದು ಮೋದಿ,ಅಮಿತ್‌ ಶಾರವರೇ ಒಪ್ಪಿಕೊಂಡ ಮೇಲೆ ಸಂತೋಷ್‌ ಯಾವ್‌ ಸೀಮೆಯ ದೊಣ್ಣೆನಾಯಕ ನೀವು ಮನಸು ಮಾಡಿದ್ರೆ..ಹ್ಞೂಂ ಅಂದ್ರೆ ಯಡಿಯೂರಪ್ಪ ತಾಕತ್ತೇನು ಎನ್ನುವುದನ್ನು ಪ್ರೂವ್‌ ಮಾಡ್ತೇವೆ ಎಂದು ಯಡಿಯೂರಪ್ಪ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆನ್ನುವುದು ಅಷ್ಟೇ ಸತ್ಯ.

ಆರಂಭದಿಂದಲೂ ಯಡಿಯೂರಪ್ಪ ಮತ್ತು ಸಂತೋಷ್‌ ಜೀ ಸಂಬಂಧ ಅಷ್ಟೇನು ಸೌಹಾರ್ದಯುತವಾಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಯಡಿಯೂರಪ್ಪ ಏನೇ ಮಾಡಿದ್ರೂ ಅದಕ್ಕೆ ಪಕ್ಷದೊಳಗಿರುವ ತಮ್ಮ ಬೆಂಬಲಿಗರ ಮೂಲಕ ಚೆಕ್ ಮೇಟ್‌ ಇಡಿಸುತ್ತಲೇ ಬಂದ ಆಪಾದನೆ ಸಂತೋಷ್‌ ಮೇಲಿದೆ.ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನಗಳಲ್ಲಿ ಒಂದು ದಿನವೂ ನೆಮ್ಮದಿಯಾಗಿ ಆಡಳಿತ ಮಾಡೊಕ್ಕೆ ಸಂತೋಷ್‌ ಬಿಡಲಿಲ್ಲ.ಎಲ್ಲದರಲ್ಲೂ ಕಡ್ಡಿ ಅಲ್ಲಾಡಿಸುವ ಕೆಲಸವನ್ನು ಬಹುತೇಕ ಬಾರಿ ಪರೋಕ್ಷವಾಗಿ,ಕೆಲವೊಮ್ಮೆ ನೇರವಾಗಿ ಮಾಡಿರುವ ಆಪಾದನೆಗಳಿವೆ.ಆದರೆ ಯಡಿಯೂರಪ್ಪ ಅವರದು ವಿಶಾಲ ಹೃದಯ-ದೊಡ್ಡ ಮನಸ್ಸಾಗಿದ್ದರಿಂದಲೇನೋ ಯಾವುದನ್ನೂ ಬಹಿರಂಗಪಡಿಸದೆ ಮೌನವಾಗಿ ಸಹಿಸಿಕೊಂಡಿದ್ದರು.

ಆದರೆ ತಂಟೆ ತಕರಾರುಗಳಿಲ್ಲದೆ ಹೇಗೋ ಸರ್ಕಾರವನ್ನು ನಿಭಾಯಿಸಿಕೊಂಡು ಹೋಗುತ್ತಿರುವಾಗಲೇ ಸರ್ಕಾರವನ್ನು ಅಸ್ಥಿರಗೊಳಿಸುವಂಥ ದಾಳವನ್ನು ಪ್ರಯೋಗಿಸಿ   ಯಡಿಯೂರಪ್ಪ ಅವರನ್ನು ಸಿಎಂ ಗಾಧಿಯಿಂದ ಕೆಳಗಿಳಿಸಿದ್ದೇ ಸಂತೋಷ್‌ ಎನ್ನುವ ಮಾತುಗಳಿವೆ.ಸಿಎಂಗಾಧಿಯಿಂದ ಕೆಳಗಿಳಿದ ಮೇಲೆ ಯಡಿಯೂರಪ್ಪ ಬಹುತೇಕ ನೇಪಥ್ಯಕ್ಕೆ ಸರಿದೋಗಿದ್ದರು.ಹೈಕಮಾಂಡ್‌ ದೃಷ್ಟಿಯಲ್ಲಿ ಯಡಿಯೂರಪ್ಪರನ್ನು ಡಮ್ಮಿ ಮಾಡಿದ್ದೇ ಸಂತೋಷ್‌ ಎನ್ನುವ ಮಾತನ್ನು ಪಕ್ಷದಲ್ಲಿ ಈಗಲೂ ಹೇಳುವವರುಂಟು.ಆದರೆ ಎಲೆಕ್ಷನ್‌ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿದ್ರೆ ಅದರಿಂದ ಪಕ್ಷಕ್ಕೆ ಆಗುವ ನಷ್ಟವನ್ನು ತಿಳಿದು ವರಿಷ್ಟರು ಸಂತೋಷ್‌ ಗೆ ಮನಸಿಲ್ಲದಿದ್ದರೂ ಆಯಕಟ್ಟಿನ ಹುದ್ದೆ ಕೊಟ್ಟರು.ಪಾಪ..! ಯಡಿಯೂರಪ್ಪ ಇಷ್ಟವಿಲ್ಲದಿದ್ದರೂ ಅದನ್ನು ಒಪ್ಪಿಕೊಂಡು ಕೆಲಸ ಮಾಡಲಾರಂಭಿಸಿದರು.

ಅಷ್ಟಕ್ಕೂ ಸಂತೋಷ್‌ ಹೇಳಿದ್ದೇನು ಗೊತ್ತಾ..?

“ಮಾತಿನ ಲಹರಿಯಲ್ಲಿ ನಾಲಿಗೆ ಹರಿಬಿಟ್ಟ ಸಂತೋಷ್‌,ನಾವು ಹಿಂದುತ್ವದಲ್ಲಿ ಮುಂದುವರೆಯುತ್ತೇವೆ.ಬಿಜೆಪಿ ನಂಬಿಕೆ ಇಟ್ಟಿರುವುದೇ ಹಿಂದುತ್ವದಲ್ಲಿಯೇ ಹೊರತು ಯಾವುದೇ ಜಾತಿ ಮೇಲಲ್ಲ.ಹಾಗೂ ವ್ಯಕ್ತಿ ಮೇಲಲ್ಲ.ಲಿಂಗಾಯಿತರ ಮತಗಳು ಕೈ ತಪ್ಪಿ ಹೋದರೆ ನಮಗೇನೂ ತೊಂದರೆಯಿಲ್ಲ.ಬಿಜೆಪಿಗೆ ಲಿಂಗಾಯಿತರ ಅಗತ್ಯವಿಲ್ಲ.ಇಲ್ಲಿ ಯಾರೂ ಚಿರಂಜೀವಿಗಳಲ್ಲ.ಇಬ್ಬರು ಮಕ್ಕಳನ್ನು ಬೆಳೆಸಿದರೆ ಒಂದು ಸಮುದಾಯ ಬೆಳೆಯುತ್ತದೆಯೇ ಹೊರತು ಪಕ್ಷ ಬೆಳೆಯುವುದಿಲ್ಲ ಎಂದು ಹೇಳಿರುವುದು ಸಭೆಯಲ್ಲಿದ್ದವರಲ್ಲೇ ಆಕ್ರೋಶ ಮೂಡಲು ಕಾರಣವಾಯಿತೆನ್ನಲಾಗಿದೆ.”

ಆದರೆ ಯಡಿಯೂರಪ್ಪ‌ ಸಂಪೂರ್ಣ ಮೂಲೆಗುಂಪಾಗಿದ್ದು ಈ ಬಾರಿಯ ಚುನಾವಣೆಯಲ್ಲಿ.ಪ್ರತಿ ಬಾರಿಯ ಚುನಾವಣೆಯಲ್ಲಿ ಟಿಕೆಟ್‌ ಹಂಚುವ ಪ್ರಕ್ರಿಯೆಯಿಂದ ಹಿಡಿದು ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವವರೆಗಿನ ಎಲ್ಲಾ ಕೆಲಸಗಳನ್ನು ಬಹುತೇಕ ಏಕಮೇವಾದ್ವಿತೀಯರಾಗಿ ಮಾಡುತ್ತಿದ್ದುದೇ ಯಡಿಯೂರಪ್ಪ.ಆದರೆ ಈ ಬಾರಿ ಹಾಗಾಗಲಿಲ್ಲ.ತನ್ನ ಮಗ ವಿಜಯೇಂದ್ರಗೆ ಹೊಡೆದಾಡಿ ಟಿಕೆಟ್‌ ಕೊಡಿಸುವಂತಾಗಿತ್ತು.ತನ್ನನ್ನು ನಂಬಿಕೊಂಡಿದ್ದ ಅನೇಕರಿಗೆ ಟಿಕೆಟ್‌ ಕೊಡಿಸಲಾಗಲಿಲ್ಲ ಎನ್ನುವುದನ್ನು ಯಡಿಯೂರಪ್ಪ ಅನೇಕ ಕಡೆ ಹೇಳಿಕೊಂಡಿರುವುದುಂಟು.ಇದಕ್ಕೆ ಕಾರಣ ಒನ್ಸ್‌ ಎಗೈನ್‌ ಇದೇ ಸಂತೋಷ್‌ ಎನ್ನಲಾಗುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಸಂತೋಷ್‌,ಯಡಿಯೂರಪ್ಪ ಅವರನ್ನು ಎಲ್ಲೆಡೆ ಡಮ್ಮಿ ಮಾಡುತ್ತಲೇ ಬಂದಿದ್ದಾರೆ.ಎಲ್ಲವೂ ನನ್ನ ಮೂಗಿನ ನೇರದಲ್ಲೇ ನಡೆಯಬೇಕೆನ್ನುವ ಫರ್ಮಾನ್‌ ಹೊರಡಿಸಿದ್ದಾರಂತೆ.ಎಲ್ಲವೂ ಅವರು ಹೇಳಿದಂತೆಯೇ ನಡೆಯುತ್ತಿರುವುದರಿಂದ ಯಡಿಯೂರಪ್ಪ ಬಗ್ಗೆ ಅಷ್ಟೊಂದು ಕ್ಷುಲ್ಲಕವಾಗಿ,ಲಘುವಾಗಿ,ಉಡಾಫೆತನದಿಂದ ಮಾತನಾಡುತ್ತಿದ್ದಾರೆನ್ನುವುದು ಪಕ್ಷದೊಳಗಿನ ಮಾತು.

ಯಾರು ಕೈ ಕೊಟ್ಟರೂ ಬಿಜೆಪಿಯನ್ನು ಅತೀ ಹೆಚ್ಚು ಕೈ ಹಿಡಿಯುತ್ತಾ ಬಂದಿದ್ದು ಈ ರಾಜ್ಯದಲ್ಲಿ ಲಿಂಗಾಯಿತರು.ಅದಕ್ಕೆ ಮುಖ್ಯ ಕಾರಣ ಬಿ.ಎಸ್.ಯಡಿ ಯೂರಪ್ಪ.‌ಬಹುಷಃ ಅವರು ಅಖಾಡಕ್ಕಿಳಿದ ಮೇಲೆಯೇ ಏನೋ ವೀರಶೈವ ಲಿಂಗಾಯಿತ ಮತಗಳು ಬಿಜೆಪಿಯಲ್ಲಿ ಕ್ರೋಢೀಕೃತಗೊಂಡವು.ಇವತ್ತಿಗೂ ಯಡಿಯೂರಪ್ಪ ಅವರೇ ಲಿಂಗಾಯಿತ ಸಮುದಾಯದ ಪ್ರಶ್ನಾತೀತ ಮತ್ತು ಸರ್ವೋಚ್ಛ ನಾಯಕ. ಇದನ್ನು ಬಿಜೆಪಿಯಲ್ಲ ಇತರೆ ಪಕ್ಷಗಳು ಒಪ್ಪುತ್ತವೆ.

ಯಡಿಯೂರಪ್ಪ ಈ ಬಾರಿ ಚುನಾವಣೆ ಅಖಾಡಕ್ಕಿಳಿಯದಿದ್ದರೆ ಲಿಂಗಾಯಿತರು ಗೊಂದಲಕ್ಕೆ ಈಡಾಗುತ್ತಿದ್ದರು.ಆದರೆ ತನಗಾದ ಅನ್ಯಾಯ-ನೋವು ಮರೆತು ಲಿಂಗಾಯಿತರು ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ಅಡ್ಡಾಡುತ್ತಿದ್ದಾರೆ.ಇಂತದ್ದರ ನಡುವೆ ಯಡಿಯೂರಪ್ಪರನ್ನು ಅವಮಾನಿಸುವಂಥ,ಅವರನ್ನು ಕೈ ಹಿಡಿದುಕೊಂಡು ಬಂದಿರುವ ಲಿಂಗಾಯಿತ ಸಮುದಾಯವನ್ನು ಕ್ಷುಲ್ಲಕವಾಗಿ ಕಂಡಿರುವುದು ರಾಜಕೀಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಯಡಿಯೂರಪ್ಪ ಅವರಿಗಾದ ಅಪಮಾನ ಪ್ರತಿಯೊಬ್ಬ ಲಿಂಗಾಯಿತನಿಗೆ ಆದ ಅಪಮಾನ ಎಂದು ವೈಯುಕ್ತಿಕವಾಗಿ ಭಾವಿಸಲಾರಂಭಿಸಿದ್ದಾರೆ.

ಇದ್ದದ್ದನ್ನು ಇದ್ದಂಗೆ ಬಿಟ್ಟು ಹೊರಗೆ ಬನ್ನಿ…ಇಷ್ಟೊಂದು ಅಪಮಾನ ಸಹಿಸಿಕೊಂಡು ಇರಬೇಕಾದ ಅವಶ್ಯಕತೆ ಇಲ್ಲ.ನೀವು ಹೊರಗೆ ಬನ್ನಿ ಯಾರು ದೊಡ್ಡವರು..ಶಕ್ತಿವಂತರು..ಪ್ರಭಾವಿಗಳು ಎಂದು ತೋರಿಸುತ್ತೇವೆ.ಲಿಂಗಾಯಿತರ ಅವಶ್ಯಕತೆಯೇ ನಮಗಿಲ್ಲ.ಹೆಸರೇಳದೆ ಯಾರೂ ಚಿರಂಜೀವಿಯಲ್ಲ ಎಂದು ಹಗುರವಾಗಿ ಮಾತನಾಡಿರುವುದರ ಎಫೆಕ್ಟ್‌ ಪಕ್ಷದ ಮೇಲೆ ಎಷ್ಟಾಗುತ್ತದೆ…ಪಕ್ಷವನ್ನು ಕೈ ಹಿಡಿಯುವವರು ಯಾವ್‌ ಸಮುದಾಯದವರು ಎನ್ನುವುದನ್ನ ಪರೀಕ್ಷಿಸಿಯೇ ಬಿಡೋ ಎಂದು ಯಡಿಯೂರಪ್ಪ ಬೆಂಬಲಿಗರು ರಚ್ಚೆ ಹಿಡಿದಿದ್ದಾರೆ.

ಬಿ.ಎಲ್‌ ಸಂತೋಷ್‌ ಲಿಂಗಾಯಿತರು ಮತ್ತು ಯಡಿಯೂರಪ್ಪ ಬಗ್ಗೆ ಮಾತನಾಡಿರುವ ರೀತಿ ಹಾಗೂ ಸಂದರ್ಭ ಎರಡೂ ಅವರ ವ್ಯಕ್ತಿತ್ವಕ್ಕೆ ಘನತೆ ತಂದುಕೊಡುವಂತದ್ದಲ್ಲ.ವ್ಯಕ್ತಿಗತವಾಗಿ ಅವರಿಗೆ ಇರುವ ದ್ವೇಷ-ಅಸೂಯೆ-ತಾತ್ಸಾರವನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಅವಶ್ಯಕತೆ ಖಂಡಿತಾ ಇರಲಿಲ್ಲ.ಯಡಿಯೂರಪ್ಪ ಕೆಪಾಸಿಟಿ ಏನು.? ಮನಸು ಮಾಡಿದ್ರೆ ಏನ್‌ ಮಾಡಬಲ್ಲರು ಎನ್ನುವುದು ಈಗಾಗಲೇ ಪ್ರೂವ್‌ ಆಗಿದೆ.ಅದೇನು ಎನ್ನುವುದು ಸಂತೋಷ್‌ ಗೂ ಗೊತ್ತಿದೆ.

ಹೀಗಿರುವಲ್ಲಿ ಬಿಜೆಪಿ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರದು ಏನೂ ಪಾತ್ರವಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿರುವುದು ರಾಜ್ಯದ ಜನತೆಯನ್ನು ಅಸಮಾಧಾನಗೊಳಿಸಿದೆ.ಪಕ್ಷಾತೀತವಾಗಿ ಯಡಿಯೂರಪ್ಪ ಅವರನ್ನು ಒಪ್ಪಿಕೊಳ್ಳುವವರಿಗೂ ಬೇಸರ ತರಿಸಿದೆ.ಎಲ್ಲಕ್ಕಿಂತ ಹೆಚ್ಚಾಗಿ ಸಂತೋಷ್‌ ಅವರ ವಿವಾದಾತ್ಮಕ ಹೇಳಿಕೆ ಈ   ಬಾರಿಯ ಚುನಾವಣೆಯಲ್ಲಿ ಭಾರೀ ಅಡ್ಡ ಪರಿಣಾಮ ಉಂಟು ಮಾಡುವ ಆತಂಕವಿದೆ ಎನ್ನಲಾಗ್ತಿದೆ.ತನ್ನನ್ನು ಹಾಗೂ ತನ್ನ ಸಮುದಾಯವನ್ನು ಸಂತೋಷ್‌ ಜೀ ಇಷ್ಟೆಲ್ಲಾ ಅಪಮಾನಿಸಿದ ಮೇಲೂ   ಯಡಿಯೂರಪ್ಪ ಮೌನಿಯಾಗಿರುತ್ತಾರೋ ಅಥವಾ ಮೌನಿಯಾಗಿದ್ದುಕೊಂಡೇ ಏನ್‌ ಮಾಡ್ಬೇಕೋ ಅದನ್ನು ಮಾಡ್ತಾರೋ…ಮಾಡಿಸ್ತಾರೋ ಕಾದು ನೋಡಬೇಕಿದೆ.

Spread the love

Leave a Reply

Your email address will not be published. Required fields are marked *

You missed

Flash News