ಮಗನ ರಾಜಕೀಯ ಅಸ್ಥಿತ್ವದ ಬಗ್ಗೆ ಕಾಡುತ್ತಿದ್ದ ಕೊರಗನ್ನು ದೂರ ಮಾಡಿದ ಸೊರಬಾ ಜನತೆ
ಯೆಸ್.. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಅಧಿಕಾರವನ್ನು ಅನುಭವಿಸಿಯಾಗಿದೆ.. ದೊಡ್ಡ ಮಗ ಕುಮಾರ ಶಾಸಕನಾಗಿ.ಸಚಿವನಾಗಿ ರಾಜಕೀಯದಲ್ಲಿ ಅಸ್ಥಿತ್ವ ಕಂಡುಕೊಂಡಿದ್ದಾನೆ.ಆದರೆ ನನ್ನ ಕೊನೇ ಮಗ ಮಧುವಿನ ಕಥೆಯೇನು..ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರಂತೆ..ಬಂಗಾರಪ್ಪರನ್ನು ಕಾಡಿದ್ದ ದೊಡ್ಡ ನೋವು-ಆತಂಕದಲ್ಲಿ ಮಧು ಅಸ್ಥಿತ್ವವೂ ಒಂದಾಗಿತ್ತಂತೆ.ಏಕೆಂದ್ರೆ ತಾನು ಹೋದ್ಮೇಲೆ ಮಧುವನ್ನು ದೊಡ್ಡಮಗ ಕುಮಾರ ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ..ಶತೃವಿನಂತೆ ನೋಡ್ತಾನೆ ಎನ್ನುವ ಸತ್ಯ ಬಂಗಾರಪ್ಪ ಅವರಿಗೆ ಸ್ಪಷ್ಟವಾಗಿ ಹೋಗಿತ್ತು…ಅದು ಸತ್ಯವೂ ಆಯ್ತು.ಬಂಗಾರಪ್ಪ ವಿಧಿವಶರಾದ ಮೇಲೆ ಮಧು-ಕುಮಾರ ನಡುವೆ ಏನೆಲ್ಲಾ ಸಂಘರ್ಷ ಏರ್ಪಟ್ಟಿತ್ತೆನ್ನುವುದನ್ನು ರಾಜ್ಯದ ಜನರೇ ನೋಡಿದ್ದಾರೆ.ಆದರೆ ತಂದೆಯ ಆತಂಕವನ್ನು ಸೊರಬಾದ ಜನತೆ ದೂರ ಮಾಡಿದ್ದಾರೆ.ಬಂಗಾರಪ್ಪ ಕನಸನ್ನು ನನಸು ಮಾಡಿದ್ದಾರೆ.ಅವರ ಕೊರಗಿಗೆ ಇತಿಶ್ರೀ ಹಾಡಿದ್ದಾರೆ.ಕೇವಲ ಶಾಸಕರಾಗಿ ಅಲ್ಲ.ತಂದೆಯ ಇಚ್ಛೆಯಂತೆ ಮಗ ಮಂತ್ರಿಯಾಗಲಿಕ್ಕೂ ಕಾರಣವಾಗಿದ್ದಾರೆ.ಈ ಮೂಲಕ ಕುಮಾರ ಬಂಗಾರಪ್ಪರ ಅಹಂನ್ನು ಮುರಿದಿದ್ದಾರೆ.
ಕಾಂಗ್ರೆಸ್ ಗೆ ಠಕ್ಕರ್ ಕೊಡಲಿಕ್ಕೇನೆ ಜನ್ಮದುದ್ದಕ್ಕೂ ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಬಂದಿದ್ದ ಬಿಜೆಪಿಗೆ ಹೋಗಿದ್ರು ಬಂಗಾರಪ್ಪ. ಇದರ ಹಿಂದೆ ಮಗ ಮಧು ಬಂಗಾರಪ್ಪ ಅವರಿಗೆ ರಾಜಕೀಯ ಶಕ್ತಿನೀಡುವ ಉದ್ದೇಶವಿತ್ತು.ಆದರೆ ಆ ಲೆಕ್ಕಾಚಾರ ಬುಡಮೇಲಾಗಿ ಮಧು ಬಂಗಾರಪ್ಪ ಸೋಲುವಂತಾಗಿತ್ತು.ಅದರಿಂದ ಬಂಗಾರಪ್ಪ ತೀವ್ರವಾಗಿ ನೊಂದಿದ್ದರು.ಆದರೆ ನಂತರ ಸೊರಬಾ ಜನತೆ ಮಧು ಅವರನ್ನು ಗೆಲ್ಲಿಸುವ ಮೂಲಕ ಬಂಗಾರಪ್ಪರಿಗೆ ಮಾಡಿದ ದ್ರೋಹಕ್ಕೆ ಪಶ್ಚಾತ್ತಾಪ ಮಾಡಿಕೊಂಡಿದ್ರು.
56 ವರ್ಷ ವಯಸ್ಸಿನ ಮಧುಬಂಗಾರಪ್ಪ ಈವರೆಗೆ ಸ್ಪರ್ದಿಸಿದ ಚುನಾವಣೆಯಲ್ಲಿ ಮೂರು ವಿಧಾನ ಸಭೆ, ಎರಡು ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.ಆದರೆ 2013 ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದರು. 2023ರಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದಾರೆ.ಸಾಕಷ್ಟು ವಿಷಯಗಳಲ್ಲಿ ತಂದೆಯ ಮಾರ್ಗದಲ್ಲಿ ನಡೆಯುತ್ತಾ ಬಂದಿರುವ ಮಧು ಬಂಗಾರಪ್ಪ ಸೈದ್ಧಾಂತಿಕ ನಿಲುವಿನೊಂದಿಗೆ ರಾಜಿ ಮಾಡಿಕೊಂಡವರಲ್ಲ.ಕೆಲವೊಮ್ಮ ಅದು ಕೆಲವರಿಗೆ ಇಷ್ಟವಾಗೊಲ್ಲ.ಇವತ್ತಿನ ರಾಜಕೀಯ ಸಂದರ್ಭಕ್ಕೆ ಅಪಥ್ಯವೂ ಎನಿಸಬಹುದು.ಆದರೆ ತಂದೆಯನ್ನು ಜೀವಮಾನದುದ್ದಕ್ಕೂ ಉಳಿಸಿ ಬೆಳೆಸಿಕೊಂಡು ಹೋಗಲು ನಿರ್ದರಿಸಿರುವ ಮಧು ನಿಲುವು ಸರಿ ಎನ್ನಿಸದೆ ಇರದು.
ಸೊರಬಾದ ಜನತೆ ಮಧು ಅವರನ್ನು ಗೆಲ್ಲಿಸುವ ಮೂಲಕ ಸಚಿವರಾಗೊಕ್ಕೆ ಕಾರಣವಾಗಿದ್ದಾರೆ.ಕ್ಷೇತ್ರದ ಜನತೆ ಕೊಟ್ಟ ಅವಕಾಶವನ್ನು ತಂದೆಯ ಸೈದ್ದಾಂತಿಕತೆ-ಆದರ್ಶಪ್ರಾಯ ಉದ್ದೇಶಗಳಿಗೆ ಬಳಸಿಕೊಳ್ಳುವ ಕೆಲಸ ಮಾಡಬೇಕಿದೆ.ರಾಜ್ಯ ಮತ್ತೊಮ್ಮೆ ಸೊರಬಾದ ಕಡೆ ತಿರುಗಿ ನೋಡುವಂತೆ ಮಾಡಬೇಕಿದೆ.