
ಮೊದಲಿಗೆ ಆ ತಾಯಿ ಸಾವಿಗೆ ಭಾವಪೂರ್ಣ ಅಶೃತರ್ಪಣ.ಆ ತಾಯಿ ಸಾವಿಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಕಂಬನಿ ಮಿಡಿಯುತ್ತದೆ.ಆ ಮಹಾತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ..ಆಕೆಯ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬದವರಿಗೆ ಹಾಗೂ ಆತ್ಮೀಯರಿಗೆ ನೀಡಲಿ..ಅಂದ್ಹಾಗೆ ಇದು ಅನ್ಯಾಯದ ಸಾವೇ ನಿಜ.ಕೆಲಸ ಮುಗಿಸಿಕೊಂಡು ಹೋಗುವಾಗ ಓಕಳಿಪುರಂ ಬಳಿ ಯಮರೂಪದಲ್ಲಿ ಬಂದ ಲಾರಿ ಆ ತಾಯಿಯನ್ನು ಆಪೋಷನ ತೆಗೆದುಕೊಂಡಿದೆ.ಸ್ಥಳದಲ್ಲೇ ಆ ತಾಯಿ ಉಸಿರು ಚೆಲ್ಲಿದ್ದಾರೆ. ಆ ತಾಯಿಯ ಸಾವು ಸುವರ್ಣ ನ್ಯೂಸ್ ಬಳಗವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.ಆ ತಾಯಿಯ ಜತೆ ಇಡೀ ತಂಡ ಎಂಥಾ ಭಾವನಾತ್ಮಕ ಸಂಬಂಧ ಹೊಂದಿತ್ತು ಎನ್ನುವುದಕ್ಕೆ ಸುದ್ದಿ ಮನೆ ಮಿತ್ರರು ತಮ್ಮ ಫೇಸ್ ಬುಕ್ ಪೇಜ್ ಗಳಲ್ಲಿ ವ್ಯಕ್ತಪಡಿಸುತ್ತಿರುವ ನೋವು-ಸಲ್ಲಿಸುತ್ತಿರುವ ಶೃದ್ಧಾಂಜಲಿ ಹಾಗೂ ಅವರ ಬಗ್ಗೆ ಹಂಚಿಕೊಳ್ಳುತ್ತಿರುವ ಅನಿಸಿಕೆ-ಅಭಿಪ್ರಾಯಗಳೇ ಸಾಕ್ಷಿ.

ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಸಂಜೆಯಿಂದಲೇ ಶೋಕದ ವಾತಾವರಣವೊಂದು ಮಡುಗಟ್ಟಿದೆ.ಮನೆಯ ತಾಯಿ ಹೃದಯವೊಂದು ಶಾಶ್ವತವಾಗಿ ಬಡಿತ ನಿಲ್ಲಿಸಿದೆ.ಇಡೀ ಕುಟುಂಬ ಸಾವಿಗೆ ಮರುಗುತ್ತಿದೆ.ಕಂಬನಿ ಮಿಡಿಯುತ್ತಿದೆ.ತಮ್ಮದೇ ಕುಟುಂಬದಲ್ಲಿ ಆತ್ಮೀಯರೊಬ್ಬರನ್ನು ಕಳೆದುಕೊಂಡ ಅನಾಥಭಾವ ಕಾಡುತ್ತಿದೆ.ಈ ನೋವಿಗೆ ಕಾರಣ ಚಾನೆಲ್ ನ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಲಲಿತಮ್ಮ ಅವರ ದುರ್ಮರಣ.ಲಲಿತಮ್ಮ ಅವರ ಸಾವು ಇಡೀ ಚಾನೆಲ್ ನಲ್ಲಿ ಶೋಕದ ವಾತಾವರಣವೊಂದನ್ನು ಮಡುಗಟ್ಟಿಸುತ್ತದೆ ಎಂದರೆ ಚಾನೆಲ್ ಹಾಗೂ ಲಲಿತಮ್ಮ ಅವರ ನಡುವಿದ್ದ ಅವಿನಾಭವ-ಆತ್ಮೀಯ ಸಂಬಂಧದ ಅಂದಾಜು ಸಿಗುತ್ತದೆ.ಲಲಿತಮ್ಮ ಅವರ ಅಗಲಿಕೆಗೆ ಚಾನೆಲ್ ಮಿಡಿದ ರೀತಿಯಿದೆಯೆಲ್ಲಾ ಅದು ಎಂಥಾ ಕಲ್ಲು ಮನಸನ್ನು ಕರಗಿಸುತ್ತದೆ ಹಾಗೂ ಮಾದರಿ ಎನಿಸುತ್ತದೆ.

ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ತಾಯಿಯಂಥ ಜೀವ ಲಲಿತಮ್ಮ ಎಂದು ತಮ್ಮ ನೋವಿನ ಪದಗಳನ್ನು ಪ್ರಾರಂಭಿಸಿದ್ದಾರೆ. ಪ್ರೀತಿ-ಕಾಳಜಿ-ಶೃದ್ಧೆ ಬರೆಸಿ ಶುದ್ಧ ಅಂತಃಕರಣದಿಂದ ಲಲಿತಮ್ಮ ಕೊಡುತ್ತಿದ್ದ ಕಾಫಿ ಎಲ್ಲಾ ಆಯಾಸವನ್ನು ಮರೆಸುತ್ತಿತ್ತು.ಇನ್ನು ಹೆಚ್ಚಿನ ಕಾಫಿಯನ್ನು ಕುಡಿಯುವಂತೆ ಪ್ರೇರೇಪಿಸುತ್ತಿತ್ತು.ಆಕೆ ಪ್ರತಿ ಬ್ರೇಕ್ ನಲ್ಲೂ ಕಾಫಿ ಹಿಡಿದುಕೊಂಡು ನಿಂತಿರುತ್ತಿದ್ದರು.ಆಯಾಸವಾಯ್ತಾ ಮಗುವೇ ಎನ್ನುವ ತಾಯಿ ಪ್ರೀತಿಯ ದೃಷ್ಟಿ ಬೀರಿ ಕೊಡುತ್ತಿದ್ದ ಆ ಕಾಫಿ ಆಕೆಯಷ್ಟೇ ಸಿಹಿಯಾಗಿತ್ತು.ದಣಿಯರಿಯದಂತೆ ದುಡಿಯುವ ಹುಮ್ಮಸ್ಸು-ಪ್ರೇರಣೆ ನೀಡುತ್ತಿತ್ತು.ಆದರೆ ಇನ್ಮುಂದೆ ಲಿಲಿತಮ್ಮನೂ ಇಲ್ಲ..ಆಕೆ ಪ್ರೀತಿ ಬೆರೆಸಿ ಕೊಡುತ್ತಿದ್ದ ಕಾಫಿಯೂ ಇರೊಲ್ಲ..ಬ್ರೇಕ್ ನ ನಡುವೆ ಅದೆಲ್ಲೋ ಕಾಫಿ ಹಿಡಿದು ನಿಲ್ಲುತ್ತಿದ್ದ ಲಲಿತಮ್ಮ ನೆನಪಿನ ಅಂಗಳಕ್ಕೆ ಶಾಶ್ವತವಾಗಿ ಸರಿದು ಹೋಗಿದ್ದಾರೆ.ಕೆಲವೊಂದು ಸಾವುಗಳ ನೋವನ್ನು ಅರಗಿಸಿಕೊಳ್ಳಲು ಆಗುವುದೇ ಇಲ್ಲ. ಅಂತದ್ದೊಂದು ನಿರ್ವಾತ-ತಬ್ಬಲಿತನವನ್ನು ಲಲಿತಮ್ಮ ಉಳಿಸಿ ಹೋಗಿಬಿಟ್ಟರು.ಲಲಿತಮ್ಮ ಇಲ್ಲದೆ ಕುಡಿದ ಕಾಫಿ ತುಂಬಾ ಕಹಿ ಎಂದು ತಮ್ಮ ನೋವನ್ನು ಅತ್ಯಂತ ಮಾರ್ಮಿಕವಾಗಿ ತೋಡಿಕೊಂಡಿದ್ದಾರೆ.

ಕೆಲಸಗಾರರನ್ನು ಗೌರವದಿಂದ ನಡೆಸಿಕೊಳ್ಳಿ..ಅವರನ್ನು ಜೀತದಾಳುಗಳಂತೆ ನಡೆಸಿಕೊಳ್ಳಬೇಡಿ.. ಹಾಗೆ ನೋಡಿದ್ರೆ ದಶಕಗಳಿಂದಲೂ ದುಡಿಯುತ್ತಿರುವ ಲಲಿತಮ್ಮ ಅವರನ್ನು ಸುವರ್ಣ ಕುಟುಂಬ ಒಬ್ಬ ಕೆಲಸದವರಂತೆ ನಡೆಸಿಕೊಳ್ಳಬಹುದಿತ್ತು.ಆದರೆ ಹಾಗೆ ಮಾಡದಿರುವುದಕ್ಕೆ ಲಲಿತಮ್ಮ ಅವರ ಕೆಲಸದಲ್ಲಿನ ಶೃದ್ಧೆ-ಪ್ರತಿಯೊಬ್ಬ ಉದ್ಯೋಗಿ ಬಗ್ಗೆ ಮಾಡುತ್ತಿದ್ದ ಕಾಳಜಿ ಕಾರಣ.ಅಂತದ್ದೊಂದು ವ್ಯಕ್ತಿತ್ವದಿಂದಲೇ ಲಲಿತಮ್ಮ ಕುಟುಂಬದಲ್ಲಿ ಹಿರಿಯವರಂತಾಗಿ ಹೋಗಿದ್ದರು.ಅವರು ಯಾವತ್ತೂ ಆ ಸಲಿಗೆಯನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ನಂಬಿಕೆಯನ್ನು ಹಾಳು ಮಾಡಿಕೊಳ್ಳಲಿಲ್ಲ.ಆ ಹೊಣೆಗಾರಿಗೆ ಕೊಂಚವೂ ಚ್ಯುತಿ ಬಾರದಂತೆ ನೋಡಿಕೊಂಡರು.ಅದನ್ನು ಜತನದಿಂದ ಕಾಯ್ದುಕೊಂಡರು.ಲಲಿತಮ್ಮ ಅವರಲ್ಲಿ ಆ ಗುಣಗಳು ಇಲ್ಲದೇ ಹೋಗಿದಿದ್ದರೆ ಇಷ್ಟೊಂದು ಪ್ರೀತಿ-ಅಭಿಮಾನ ಪಡೆಯಲಿಕ್ಕೆ ಸಾಧ್ಯವೇ ಇರುತ್ತಿರಲಿಲ್ಲ ಎನ್ನೋದು ಸತ್ಯ.. ಕೆಲಸಗಾರರ ವಿಷಯದಲ್ಲಿ ಸುವರ್ಣ ನ್ಯೂಸ್ ಎಲ್ಲರಿಗೂ ಮಾದರಿಯಾಗುತ್ತದೆ. ಎಲ್ಲಾ ಸುದ್ದಿಸಂಸ್ಥೆಗಳಲ್ಲೂ ಲಲಿತಮ್ಮ ಅವರಂಥ ವ್ಯಕ್ತಿ-ವ್ಯಕ್ತಿತ್ವಗಳೂ ಇದ್ದೇ ಇರುತ್ತವೆ.ಅವರನ್ನು ಪತ್ತೆ ಮಾಡಿ ಗೌರವ ತೋರಿಸಬೇಕಷ್ಟೇ..ಆದರೆ ಬಹುತೇಕ ಕಡೆ ಹಾಗೆ ಆಗುತ್ತಲೇ ಇಲ್ಲ.ಕೆಲಸಗಾರರನ್ನು ಕೇವಲ ಕೆಲಸಗಾರರಂತೆ ನೋಡುವ-ನಡೆಸಿಕೊಳ್ಳುವ-ದುಡಿಸಿಕೊಳ್ಳುವ ಕೆಟ್ಟ ಪ್ರವೃತ್ತಿಯಿದೆ..ಅಲ್ಲಿ ಕೆಲಸ ಮಾಡುವ ಕೆಲಸಗಾರರನ್ನು ಕೂಡ ಗೌರವದಿಂದ ನಡೆಸಿಕೊಳ್ಳಬೇಕು.ಪ್ರೀತಿ-ಕಾಳಜಿ ತೋರಬೇಕು.ಅದು ಎಲ್ಲಾ ಸುದ್ದಿ ಸಂಸ್ಥೆಗಳಲ್ಲಿ ಆರಂಭವಾಗಬೇಕು.ಆಗ ಲಲಿತಮ್ಮ ಅವರಂಥವ್ರು ಜೀವಂತವಾಗಿರುತ್ತಾರೆ..
ಚಾನೆಲ್ ನ ಹಿರಿಯ ನಿರೂಪಕಿ ಭಾವನಾ ನಾಗಯ್ಯ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಲಲಿತಮ್ಮ ಅವರ ಜತೆಗಿನ 15 ವರ್ಷಗಳ ಒಡನಾಟ ಹಾಗೂ ಭಾವನಾತ್ಮಕ ಸಂಬಂಧವನ್ನು ವಿವರಿಸಿದ್ದಾರೆ.ನೋಡಲು ಸಣ್ಣಗೆ-ಗುಂಡಗೆ ಇದ್ದುದ್ದರಿಂದ ಅವರನ್ನು ಪ್ರೀತಿಯಿಂದ ಲಿಲ್ಲಿಪುಟ್ ಹಾಗೂ ಲಲ್ಲು ಆಂಟಿ ಎಂದು ಕರೆಯುತ್ತಿದ್ದರಂತೆ. ಧೀರ್ಘ ಕಾಲದಿಂದ ಸುತ್ತಮುತ್ತಲಿದ್ದರೂ ಕೆಲವು ವ್ಯಕ್ತಿಗಳು ಮನಸ್ಸಿನಲ್ಲಿ ಉಳಿಯುವುದೇ ಇಲ್ಲ.ಅವರ ಮುಖ ಹಾಗೂ ವ್ಯಕ್ತಿತ್ವ ಎರಡೂ ಪಥ್ಯವಾಗುವುದೇ ಇಲ್ಲ.ಆದ್ರೆ ಲಲಿತಮ್ಮ ಇದಕ್ಕೆ ಅಪವಾದಂತಿದ್ದರು.ಎಷ್ಟೇ ಬೇಸರ-ಆಯಾಸ-ನೋವಿನಲ್ಲಿದ್ದರೂ ಲಲಿತಮ್ಮ ಅವರ ಮಾತಿನ ಸ್ಪರ್ಷ ಎಲ್ಲವನ್ನು ಮರೆಯಿಸಿಬಿಡುತ್ತಿತ್ತಂತೆ.ಕಾಫಿ-ಟೀ ಹಿಡಿದು ಬಂದುನಿಂತರೆ ಅದೇನೋ ಗೌರವ-ಪ್ರೀತಿ ಮೂಡಿಸಿಬಿಡುತ್ತಿತ್ತಂತೆ ಎಂದು ತಮ್ಮ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

ವಯಸ್ಸು 55-60ರ ಆಸುಪಾಸಿನಲ್ಲಿದ್ದರೂ ಕುಟುಂಬದ ನಿರ್ವಹಣೆಗಾಗಿ ಅನಿವಾರ್ಯವಾಗಿ ದುಡಿಯಬೇಕಿತ್ತಂತೆ ಲಲಿತಮ್ಮ.ವೈಯುಕ್ತಿಕವಾಗಿ ಹತ್ತಾರು ಸಮಸ್ಯೆಗಳಿದ್ದರೂ ಅದ್ಯಾವುದನ್ನೂ ಹೇಳಿಕೊಳ್ಳದೆ ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ದಶಕಗಳಿಂದಲೂ ಅದೇ ಪ್ರೀತಿ-ಅಕ್ಕರೆ,ಅಷ್ಟೇ ಶೃದ್ಧೆಯಿಂದ ಮುಖದಲ್ಲಿ ಮಂದಹಾಸವನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದರಂತೆ.ಕೊರೊನಾ ಕಾಲದಲ್ಲಿ ಲಲಿತಮ್ಮ ಎಲ್ಲರ ಪಾಲಿನ ಅಮ್ಮನೇ ಆಗೋಗಿದ್ದರಂತೆ ಎಂದು ಭಾವನಾ ನಾಗಯ್ಯ ಬರೆದುಕೊಂಡಿರುವುದನ್ನು ಗಮನಿಸಿದಾಗ ಲಲಿತಮ್ಮ ಇಡೀ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಸಂಪಾದಿಸಿದ್ದ ಪ್ರೀತಿ-ಗೌರವ ಎಂತದ್ದೆನ್ನುವುದು ಅರ್ಥವಾಗುತ್ತದೆ
ಅದೇ ಸುದ್ದಿವಾಹಿನಿಯ ಸುದ್ದಿಮಿತ್ರ ಶಶಿ ಆಲೂರ್,ಲಲಿತಮ್ಮರ ನಿಷ್ಕಲ್ಮಶ ನಗು ಇನ್ನು ನೆನಪು ಮಾತ್ರ.ಕ್ಯಾಂಟೀನ್ ನಲ್ಲಿ ಎಷ್ಟೊತ್ತಿಗೆ ಹೋದ್ರೂ ಒಂದು ಲೋಟ ನೀರನ್ನು ತಂದಿಟ್ಟು ಕಾಳಜಿ ತೋರುತ್ತಿದ್ದ ಲಲಿತಮ್ಮ ಯಾವತ್ತು ನಮಗೆ ಕೆಲಸಗಾರ್ತಿ ಎನಿಸಲೇ ಅಲ್ಲ.ಆಕೆಯಲ್ಲಿ ಹೆತ್ತ ತಾಯಿಯಲ್ಲಿರುವ ಪ್ರೀತಿ-ಮಮತೆ-ಕಾಳಜಿಯನ್ನೇ ನೋಡುತ್ತಿದ್ದೆವು.ಅಷ್ಟರ ಮಟ್ಟಿಗೆ ತಾಯಿಯಂತೆ ಎಲ್ಲರನ್ನೂ ಕಾಳಜಿ ಮಾಡುತ್ತಿದ್ದರು.ಇವತ್ತು ಆಕೆ ಕೊಟ್ಟ ಕಾಫಿಯನ್ನು ತಮಾಷೆ ಮಾಡಿಕೊಳ್ಳುತ್ತಾ ಕುಡಿದಿದ್ದೇ ನನ್ನ ಕೊನೆಯ ಕಾಫಿ ಆಗುತ್ತೆನ್ನುವ ಸಣ್ಣ ಕಲ್ಪನೆಯೂ ನನಗಿರಲಿಲ್ಲ..ಸುವರ್ಣ ಕುಟುಂಬ ಲಲಿತಮ್ಮ ಅವರಂಥ ಮಾತೃಹೃದಯಿಯನ್ನು ಶಾಶ್ವತವಾಗಿ ಕಳೆದುಕೊಂಡುಬಿಡ್ತು.ನನ್ನಂತೆ ನೂರಾರು ಮಕ್ಕಳಿಗೆ ತಬ್ಬಲಿತನ ಉಳಿಸಿ ಹೋಗಿಬಿಟ್ರು. ನನ್ನ ವೃತ್ತಿಜೀವನದಲ್ಲಿ ಇದು ಶಾಶ್ವತವಾಗಿ ಕಾಡುವ ಸಾವಾಗಿಬಿಡ್ತು ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಸುವರ್ಣ ನ್ಯೂಸ್ ನ ಸುದ್ದಿಮಿತ್ರರು ಲಲಿತಮ್ಮ ಅವರ ಅಗಲಿಕೆ ನೋವನ್ನು ಭರಿಸಲಾಗದ ಸ್ಥಿತಿಯಲ್ಲಿರುವುದನ್ನು ಗಮನಿಸಿದಾಗ ಇಡೀ ಸುವರ್ಣ ಮನೆಯಲ್ಲಿ ಯಜಮಾನತಿಯಾಗಿ ಅವರು ಗಳಿಸಿದ್ದ ಗೌರವದ ಪರಿಚಯವಾಗುತ್ತದೆ.ಅವರನ್ನು ಓರ್ವ ಕೆಲಸಗಾರ್ತಿಯಾಗಿ ಯಾವತ್ತೂ ನಡೆಸಿಕೊಂಡಿರಲಿಲ್ಲ ಎನ್ನುವುದು ಗೊತ್ತಾಗುತ್ತದೆ. ಇದರಲ್ಲೇ ಲಲಿತಮ್ಮ ಅವರದು ಎಂಥಾ ವ್ಯಕ್ತಿತ್ವ..ಅವರು ಇಡೀ ಕುಟುಂಬ ತಮ್ಮ ಮೇಲಿಟ್ಟಿದ್ದ ಪ್ರೀತಿ-ಗೌರವ-ಕಾಳಜಿಗೆ ಎಷ್ಟು ವಿನಯಪೂರ್ವಕವಾಗಿ ನಡೆದುಕೊಂಡಿದ್ದಿರಬಹುದೆನ್ನುವುದರ ಅಂದಾಜು ಸಿಕ್ಕುತ್ತದೆ.ಕೆಲವು ಸಾವುಗಳು ನೆನಪಿನಲ್ಲೇ ಇಟ್ಟುಕೊಳ್ಳದಷ್ಟು ಕ್ಷಣಿಕ ಆಗುತ್ತಿರುವ ಸನ್ನಿವೇಶದಲ್ಲಿ ಲಲಿತಮ್ಮ ಅವರ ಅಕಾಲಿಕ ಅಗಲಿಕೆಯ ಶೂನ್ಯ ಸುವರ್ಣ ಮನೆಯನ್ನು ಶಾಶ್ವತವಾಗಿ ಕಾಡಬಹುದೇನೋ ಎನ್ನಿಸುತ್ತದೆ.
ಹಾಗೆಯೇ ಹೀಗೆ ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಯೂ ಲಲಿತಮ್ಮ ಅವರ ಬಗ್ಗೆ ವ್ಯಕ್ತಿತ್ವವನ್ನು ಸ್ಮರಿಸಿಕೊಂಡಿದ್ದಾರೆ. ಅಗಲಿಕೆಗೆ ಸಂತಾಪ-ಶೋಕ ವ್ಯಕ್ತಪಡಿಸಿದ್ದಾರೆ.ಇನ್ಮುಂದೆ ಕ್ಯಾಂಟೀನ್ ನಲ್ಲಿ ಯಾರೇ ಹೋದರೂ ಹಿಂದಿನಿಂದ ಪುಟಿದುಕೊಂಡು ಬಂದು ನೀರು-ಕಾಫಿ-ಟೀ ಗ್ಲಾಸನ್ನು ಇಡೋ ಲಲಿತಮ್ಮ ಇರೊಲ್ಲ.ಕೇವಲ ಪರಿಚಾರಿಕೆಯನ್ನಷ್ಟೇ ಮಾಡದೆ ಅದರಾಚೆ ಎಲ್ಲೆರಿಗೂ ಪ್ರೀತಿ-ಕಾಳಜಿ ತೋರುತ್ತಿದ್ದ ಆ ಮಾತೃತ್ವದ ಸ್ಪರ್ಷ ಸಿಗೊಲ್ಲ.ಅಜಿತ್ ಅವರಿಗೆ ಬ್ರೇಕ್ ನ ನಡುವೆ ಮರೆಯಲ್ಲಿ ನಿಂತು ಕಾಫಿ ಕೊಡಲು ಅತ್ಯುತ್ಸಾಹದಲ್ಲಿ ಕಪ್ಪನ್ನು ಹಿಡಿದು ನಿಲ್ಲುತ್ತಿದ್ದ ಆ ಆಕೃತಿ ಗೋಚರಿಸುವುದಿಲ್ಲ.ಇಡೀ ಸುವರ್ಣ ಕುಟುಂಬಕ್ಕೆ ಲಲಿತಮ್ಮ ಅಂತದ್ದೊಂದು ಭರಿಸಲಾಗದ ದುಃಖ-ನಿರ್ವಾತ ಸೃಷ್ಟಿಸಿ ಹೋಗಿದ್ದಾರೆ.










