ಬೆಂಗಳೂರು:ಸ್ವಲ್ಪ..ಸ್ವಲ್ಪ ಯಾಮಾರಿದ್ರೂ ಇವತ್ತು(20-06-2024) ಆ ನ್ಯೂಸ್ ಚಾನೆಲ್ ನ ಕ್ಯಾಮೆರಾಮನ್ ಸಾವಿನ ಮನೆ ಸೇರಿ ಹೋಗುತ್ತಿದ್ದನೇನೋ.ಆತನನ್ನು ನಂಬಿದವ್ರು ಅನಾಥವಾಗುತ್ತಿದ್ದರೇನೋ..? ಅಕಾಲಿಕ ನಿಧನಕ್ಕೆ ಪತ್ರಿಕಾರಂಗ ಒಂದಿಷ್ಟು ಸಾಂತ್ವನ-ಸಹಾನುಭೂತಿಯನ್ನು ವ್ಯಕ್ತಪಡಿಸುತ್ತಿತ್ತೇನೋ..ಆದ್ರೆ ಜೀವ..ಹೋದ ಜೀವ ಮತ್ತೆ ಬರುತ್ತಿತ್ತೇ..? ನೆವರ್..ಇದನ್ನು ಏಕೆ ಹೇಳುತ್ತಿದ್ದೇವೆ ಎಂದರೆ ಒಂದು ಕ್ಷಣ ಮೈಮರೆತರೆ ಏನಾಗುತ್ತದೆ ಎಂದ್ರೆ ಡಿ ಗ್ಯಾಂಗ್ ಚೇಸಿಂಗ್ ವೇಳೆ ನಡೆದ ಆ ಅನಾಹುತ. ಆತನ ಅದೃಷ್ಟ-ಆಯಸ್ಸು ಎರಡೂ ಗಟ್ಟಿಯಾಗಿತ್ತು ಅನ್ಸುತ್ತೆ,..ಹಾಗಾಗಿ ಸಾವು ಆತನ ಕಣ್ಮುಂದೆ ಸುಳಿದು ಹೋಯ್ತು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಹಾಗೂ ತಂಡವನ್ನು ಪೊಲೀಸ್ ಕಸ್ಟಡಿ ಮುಗಿಸಿ ಕೋರ್ಟ್ ಗೆ ಹಾಜರಾಗುವ ಸನ್ನಿವೇಶವನ್ನು ಸೆರೆ ಹಿಡಿಯೊಕ್ಕೆ ಕ್ಯಾಮೆರಾಮನ್ ಗಳು ಸ್ಪರ್ದೆಗೆ ಬಿದ್ದ ವೇಳೆ ಪವರ್ ಟಿವಿ ಕ್ಯಾಮೆರಾಮನ್ ನವಾಜ್ ಎಂಬಾತ ವಿಭಿನ್ನ ಆಂಗಲ್ ನಲ್ಲಿ ದರ್ಶನ್ ನ್ನು ಸೆರೆ ಹಿಡಿಯೊಕ್ಕೆ ಎಲ್ಲಿಲ್ಲದ ಸರ್ಕಸ್ ಮಾಡಿದ್ದಾನೆ. ವಾಹನ ದಟ್ಟಣೆ ಇರುವ ರಸ್ತೆಯ ನಡುವೆ ತೂರಿಕೊಂಡು ದರ್ಶನ್ ಇದ್ದ ಪೊಲೀಸ್ ವಾಹನವನ್ನು ಝೂಮ್ ಮಾಡುವ ಆತುರದಲ್ಲಿ ಹಿಂದೆ ಬರುತ್ತಿದ್ದ ವಾಹನವನ್ನು ನೋಡಿಲ್ಲ..ಕ್ಯಾಮೆರಾ ಹಿಡಿಯುತ್ತಿದ್ದಂತೆ ಪೊಲೀಸ್ ವಾಹನ ಸಹಜವಾಗೆ ವೇಗ ಹೆಚ್ಚಿಸಿದೆ.ಆದರೆ ಅದನ್ನು ಗಮನಿಸಿದೆ ಕ್ಯಾಮೆರಾಮನ್ ನವಾಜ್ ಕೆಲಸದಲ್ಲಿ ತಲ್ಲೀನನಾಗಿದ್ದಾಗ ಮುಂದಿದ್ದ ವಾಹನದ ಭಾಗ ಎದೆಗೆ ತಾಕಿದೆ.ಆ ವೇಗಕ್ಕೆ ಆತ ಕೆಳಕ್ಕೆ ಬಿದ್ದಿದ್ದಾನೆ.
ಆತನ ಅದೃಷ್ಟ ಚೆನ್ನಾಗಿತ್ತು ಅನ್ನಿಸುತ್ತೆ..ಹಿಂದಿದ್ದ ವಾಹನಗಳು ತಮ್ಮ ವೇಗವನ್ನು ಕಡಿಮೆ ಮಾಡಿಕೊಂಡಿದ್ವು.ಬಿದ್ದ ಆತನಿಂದ ವಾಹನಗಳು ಸ್ವಲ್ಪ ಅಂತರದಲ್ಲಿದ್ದವು.ಒಂದ್ವೇಳೆ ಹಿಂದಿದ್ದ ವಾಹನಗಳ ವೇಗ ಹೆಚ್ಚಾಗಿದಿದ್ದೇ ಆದಲ್ಲಿ ಇವತ್ತು ಆತ ವಾಹನದ ಚಕ್ರದ ಕೆಳಕ್ಕೆ ಸಿಲುಕಿ ಜೀವವನ್ನೇ ಕಳೆದುಕೊಂಡುಬಿಡುತ್ತಿದ್ದನೇನೋ..ಆತ ಶೂಟ್ ಮಾಡುವಾಗ ಕೆಳಕ್ಕೆ ಬಿದ್ದ ದೃಶ್ಯಗಳು ಒಂದ್ ಕ್ಷಣ ಎದೆಯನ್ನೇ ಝಲ್ಲೆನ್ನಿಸಿದ್ದು ಸುಳ್ಳಲ್ಲ.ಈ ಘಟನೆಗೆ ನ್ಯೂಸ್ ಚಾನೆಲ್ ಗಳ ಕ್ಯಾಮೆರಾಮನ್ ಗಳು ಅಘಾತ ವ್ಯಕ್ತಪಡಿಸಿದ್ದಾರೆ.
ದರ್ಶನ್ ಹಾಗೂ ತಂಡವನ್ನು ವಿವಿಧ ಭಾವಭಂಗಿಗಳಲ್ಲಿ ಇತರೆ ಚಾನೆಲ್ ಗಳಿಗಿಂತ ವಿಭಿನ್ನವಾಗಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಬೇಕೆನ್ನುವ ಆಸೆ-ಉಮೇದು ಎಲ್ಲರಲ್ಲಿ ಇರುತ್ತೆ..ದರ್ಶನ್ ಘಟನೆ ಆದ ಮೇಲೆ ಅಂಥ ಅತ್ಯದ್ಭುತ ಹಾಗೂ ವಿಶಿಷ್ಟ ಕೆಲಸವನ್ನು ನಮ್ ಕ್ಯಾಮೆರಾಮನ್ ಗಳು ಮಾಡಿದ್ದಾರೆ ಕೂಡ.ಅಂತದ್ದೊಂದು ಪ್ರೆಷರ್ ಚಾನೆಲ್ ಕಚೇರಿಗಳಿಂದಲೂ ಇರುತ್ತದೆ.ಹಾಗಂತ ಯಾವ ಮ್ಯಾನೇಜ್ಮೆಂಟ್ ಗಳು ಕೂಡ ಲೈಫನ್ನು ನವಾಜ್ ಎನ್ನುವ ಕ್ಯಾಮೆರಾಮನ್ ನಂತೆ ರಿಸ್ಕ್ ಹಾಕ್ಕೊಂಡು ಕೆಲಸ ಮಾಡಿ ಎಂದು ಫರ್ಮಾನ್ ಹೊರಡಿಸಿರುವುದಿಲ್ಲ ಎನ್ನುವುದು ಕೂಡ ಸತ್ಯ. ಎಂತದ್ದೇ ಕಠಿಣ ಹಾಗೂ ಸವಾಲಿನ ಕೆಲಸವನ್ನು ಸೂಕ್ಷ್ಮ ಹಾಗೂ ಜಾಗರೂಕತೆಯಿಂದ ಮಾಡಬೇಕಿರುವುದು ಕ್ಯಾಮೆರಾಮನ್ ಗಳ ಕ್ರಿಯೇಟಿವ್ ಕೆಲಸವಾಗಿರುತ್ತೆ.ಅದನ್ನು ಬಿಟ್ಟು ಹೀಗೆಲ್ಲಾ ಹುಚ್ಚಾಟ ಆಡುವುದನ್ನು ಯಾರು ಸಹಿಸೊಲ್ಲ..ಯಾವ ಚಾನೆಲ್ ಗಳು ಹೀಗೆ ಕೆಲಸ ಮಾಡಿ ಎಂದು ಆಶಿಸುವುದೂ ಇಲ್ಲ..ಹಾಗೆಯೇ ಆದೇಶಿಸುವುದೂ ಇಲ್ಲ..ಇದು ಕ್ಯಾಮೆರಾಮನ್ ನವಾಜ್ ನ ಸ್ವಯಂಕೃತಾಪರಾಧವಲ್ಲದೆ ಇನ್ನೇನು ಎಂದು ಅನೇಕ ಕ್ಯಾಮೆರಾಮನ್ ಗಳೇ ಅಭಿಪ್ರಾಯಿಸಿದ್ದಾರೆ.
ಕ್ಯಾಮೆರಾಮನ್ ಗಳ ಕೆಲಸ ಕ್ಲಿಷ್ಟಕರವಾಗಿಯಷ್ಟೇ ಅಲ್ಲ ಅಪಾಯಕರವಾಗಿಯು ಇರುತ್ತೆ.ಅದರಲ್ಲೂ ದರ್ಶನ್ ಪ್ರಕರಣದಂಥ ಸೂಕ್ಷ್ಮ ಸಂದರ್ಭಗಳಲ್ಲಿಯಂತೂ ಅತ್ಯಂತ ಅಪಾಯಕಾರಿಯಾಗಿರುತ್ತದೆ.ಆದ್ರೆ ಇಂಥಾ ಸನ್ನಿವೇಶಗಳನ್ನು ಹೇಗೆ ಫೇಸ್ ಮಾಡಬೇಕು..ಹೇಗೆಲ್ಲಾ ಕೆಲಸ ಮಾಡಬೇಕು..ಅದಕ್ಕೆ ಏನೆಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆನ್ನುವುದರ ಅರಿವು ಕ್ಯಾಮೆರಾಮನ್ ಗಳಲ್ಲಿ ಇರಬೇಕಾಗುತ್ತದೆ.ಅನುಭವದ ಕೊರತೆ ಹಾಗೂ ಆತುರದ ಬುದ್ದಿಯಿಂದ ಇಂಥದೊಂದಿಷ್ಟು ಯಡವಟ್ಟುಗಳನ್ನು ನಮ್ಮ ಕ್ಯಾಮೆರಾಮನ್ ಸ್ನೇಹಿತರು ಮಾಡಿಕೊಳ್ಳುತ್ತಿದ್ದಾರೆ.ಆದರೆ ಇದು ತಪ್ಪು..ಅತ್ಯಂತ ಸೂಕ್ಷ್ಮ ಹಾಗೂ ಕ್ಲಿಷ್ಟಕರವಾದ ಸನ್ನಿವೇಶಗಳಲ್ಲಿ ದಯವಿಟ್ಟು ಎಚ್ಚರಿಕೆಯಿಂದ ಕೆಲಸ ಮಾಡಿ,ನಿಮ್ಮ ಪ್ರಾಣದ ಬಗ್ಗೆ ನಿಮಗೆ ಕಾಳಜಿ ಇರಲಿ..ಎಲ್ಲಕ್ಕಿಂತ ಹೆಚ್ಚಾಗಿ ರಿಸ್ಕ್ ತೆಗೆದುಕೊಳ್ಳುವ ಮುನ್ನ ನಿಮ್ಮನ್ನು ನಂಬಿದ ಪ್ರೀತಿಪಾತ್ರರ ಜೀವ-ಜೀವನಗಳ ಬಗ್ಗೆ ಒಂದಷ್ಟು ಅರಿವಿರಲಿ..ಆಗ ಮಾತ್ರ ನಿಮ್ಮಲ್ಲೊಂದು ಎಚ್ಚರಿಕೆ ಮೂಡಬಹುದೇನೋ..ಕ್ಯಾಮರಾಮನ್ ಸ್ನೇಹಿತರಿಗೆ ಎಚ್ಚೆತ್ತುಕೊಳ್ಳೊಕ್ಕೆ ಪವರ್ ಟಿವಿ ಕ್ಯಾಮೆರಾಮನ್ ನವಾಜ್ ಪ್ರಕರಣವೊಂದೇ ಎಚ್ಚರಿಕೆ ಕರೆಗಂಟೆಯಾಗಬಹುದೆನಿಸುತ್ತೆ..ಅಲ್ವಾ,..