ಶಿವಮೊಗ್ಗದ ಅಂದ-ಆರೋಗ್ಯವನ್ನೇ ಹಾಳುಮಾಡುತ್ತಿದೆ ಸ್ಮಾರ್ಟ್ ಸಿಟಿ..!! “ಸ್ಮಾರ್ಟ್” ಆಗ್ತಿರೋದು ನಗರನೋ,ಗುತ್ತಿಗೆದಾರನೋ..ಯೋಜನೆಯಲ್ಲಿ ಗೋಲ್ಮಾಲ್ ಶಂಕೆ

0

ಶಿವಮೊಗ್ಗ:ಎಲ್ಲೆಲ್ಲೂ ದೂಳು..ಟ್ರಾಫಿಕ್ ಜಾಮ್,,,ಸ್ವಚ್ಛತೆಯ ಸಮಸ್ಯೆ..ಇದೆಲ್ಲಾ ಇಡೀ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯ ಎಫೆಕ್ಟ್,,ಶಿವಮೊಗ್ಗ ಅಭಿವೃದ್ಧಿಯಾಗುತ್ತದೋ ಇಲ್ಲವೋ ಗೊತ್ತಿಲ್ಲ,ಆದ್ರೆ ಸ್ಮಾರ್ಟ್ ಸಿಟಿ ನೆವದಲ್ಲಿ ನಗರ ಮಾತ್ರ ಆದ್ವಾನವೆದ್ದು ಹೋಗಿದೆ.ಜನತೆ ಹಿಡಿಶಾಪ ಹಾಕ್ತಿದ್ದಾರೆ.

ಶಿವನೊಗ್ಗ ನಗರದಲ್ಲಿ ಜನರ ಜೀವನವನ್ನು ಸ್ಮಾರ್ಟ್ ಸಿಟಿ ಕಾಮಗಾರಿಗಳು ಅಸಹನೀಯಗೊಳಿಸಿವೆ.ಮನೆ ಬಿಟ್ಟು ರಸ್ತೆಗಿಳಿ ಯೊಕ್ಕೆ ಜನ ಹಿಂದೇಟು ಹಾಕುವಂತಾಗಿದೆ.ಯಾಕಂದ್ರೆ ಮಹಾನಗರಪಾಲಿಕೆಯ 35 ವಾರ್ಡ್ ಗಳಲ್ಲೆಲ್ಲಾ ರಸ್ತೆಗಳನ್ನು ಅಗೆಯ ಲಾಗಿದೆ.ದೊಡ್ಡ ದೊಡ್ಡ ಪೈಪ್ ಲೈನ್ ಗಳನ್ನು ಮನಸೋಇಚ್ಛೆ ಬಿಸಾಕಲಾಗಿದೆ.ತೋಡಿದ ಗುಂಡಿಗಳನ್ನು ಮುಚ್ಚಿಯೇ ಇಲ್ಲ..ಎಲ್ಲಿ ನೋಡಿದರೂ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ ಎಂಬ ಬ್ಯಾರಿಕೇಡ್ ಬೋರ್ಡ್ ಗಳೇ ಕಣ್ಣಿಗೆ ರಾಚುತ್ತವೆ.

ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆಯನ್ನು ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಸಂಪೂರ್ಣ ಹಾಳು ಮಾಡಿದೆ.ಎಲ್ಲಿ ಹೋದರಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ.ನಗರದ ಸೌಂದರ್ಯವೇ ಹಾಳೆದ್ದು ಹೋಗಿದೆ..ಒಂದ್ರೀತಿ ಪ್ರೇತ ಕಳೆಯನ್ನು ಹೊದ್ದು ಕೂತಂತಿರುವ ಶಿವಮೊಗ್ಗದಲ್ಲಿ ಮನೆಯಿಂದ ಜನ ಹೊರ ಬರೊಕ್ಕೆ ಹಿಂದೇಟು ಹಾಕುತ್ತಿದ್ದಾರೆ.ವಿವಿಧ ಉದ್ದೇಶಗಳಲ್ಲಿ ಮನೆಯಿಂದ ಹೊರ ಹೋದ್ರೆ ವಾಪಸ್ಸಾಗುವುದರೊಳಗೆ ಅವರೂ  ಸೇರಿದಂತೆ ವಾಹನಗಳು ಸಂಪೂರ್ಣ ಧೂಳುಮಯವಾಗಿರುತ್ತವೆ.

ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲಿ ಸಧ್ಯ ಶಿವಮೊಗ್ಗದಲ್ಲಿ ಕಾಮಗಾರಿಗಳು ವ್ಯಾಪಕವಾಗಿ ನಡೆಯುತ್ತಿವೆ.ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ.ಶಿವಮೊಗ್ಗ ನಗರವನ್ನು ಸ್ಮಾರ್ಟ್ ಮಾಡುವ ಉದ್ದೇಶದ ಕಾಮಗಾರಿಗಳೇ ಈಗ ಸಿಕ್ಕಾಪಟ್ಟೆ ಕಿರಿಕಿರಿಯನ್ನುಂಟುಮಾಡುತ್ತಿವೆ.ಆದ್ರೆ ನಗರದ ಸೌಂದರ್ಯವನ್ನು ಹಾಳು ಮಾಡುವ, ಮಾಡಿರೋ ಕಾಮಗಾರಿಯನ್ನೇ ಮತ್ತೆ ಮಾಡುವ ಅವಶ್ಯಕತೆ ನಿಜಕ್ಕೂ ಇದೆಯೇ ಎಂದು ಜನ ಪ್ರಶ್ನಿಸಲಾರಂಭಿಸಿದ್ದಾರೆ.

ಮುಖ್ಯಮಂತ್ರಿಗಳ ಜಿಲ್ಲೆ..ಕೆ.ಎಸ್.ಈಶ್ವರಪ್ಪ ಅವರ ಜಿಲ್ಲೆ ಎಂಬ ಕಾರಣಕ್ಕೆ ಬೆಂಗಳೂರನ್ನು ಬಿಟ್ಟರೆ ಅತೀ ಹೆಚ್ಚಿನ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿರುವುದೇ ಶಿವಮೊಗ್ಗದಲ್ಲಿ ಎನ್ನಲಾಗ್ತಿದೆ.ಸಾವಿರಾರು ಕೋಟಿ ಹಣವನ್ನು ಇದಕ್ಕಾಗಿ ತಂದು ಸುರಿಯಲಾಗುತ್ತಿದೆ.ನಗರ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಕಾಂಪ್ರಮೈಸ್ ಮಾಡ್ಕೋಬೇಡಿ ಎಂದು ಖುದ್ದು ಸಿಎಂ ಯಡಿಯೂರಪ್ಪ ಅವರೇ ಫರ್ಮಾನ್ ಹೊರಡಿಸಿರುವುದರಿಂದ ಎಲ್ಲಾದನ್ನು ಬಿಟ್ಟು ಸ್ಮಾರ್ಟ್ ಸಿಟಿ ಕಾಮಗಾರಿಗೇನೆ ಹೆಚ್ಚಿನ ಆದ್ಯತೆ ನೀಡಲಾಗ್ತಿದೆ.

ಇದೆಲ್ಲಾ ಓ.ಕೆ ಶಿವಮೊಗ್ಗ ಅಭಿವೃದ್ದಿಯಾಗ್ತದೆ ಎಂದ್ರೆ ಅದನ್ನು ಪ್ರಶ್ಬಿಸುವ- ಟೀಕಿಸುವ ಜಾಯಮಾನವೇ ನಾಗರಿಕರದ್ದಲ್ಲ.ಆದ್ರೆ ಆಗಿರೋ ಕಾಮಗಾರಿಗಳನ್ನೇ ಮತ್ತೆ ಮತ್ತೆ ಮಾಡಿಸುವುದು,ಅದಕ್ಕಾಗಿ ಈಗಿರೋ ವ್ಯವಸ್ಥೆಯನ್ನು ಹಾಳು ಮಾಡುವುದು ಎಷ್ಟು ಸರಿ..ಅದಲ್ಲದೇ ಹಳೇ ಕಲ್ಲು ಹೊಸ ಬಿಲ್ಲು ಎನ್ನುವಂಥ ಗೋಲ್ಮಾಲ್ ನಡೆಯುತ್ತಿಲ್ಲ ಎನ್ನುವುದಕ್ಕೇನು ಗ್ಯಾರಂಟಿ..ಆಗಿರೋ ಕಾಮಗಾರಿಯನ್ನೇ ತೋರಿಸಿ ಗುತ್ತಿಗೆದಾರರು ಎರಡರೆಡು ಬಾರಿ ಬಿಲ್ ಮಾಡಿಸಿಕೊಳ್ಳುತ್ತಿಲ್ಲ ಎಂದು ಪರಿಶೀಲಿಸುವವರ್ಯಾರು ಎಂದು ಜನ ಪ್ರಶ್ನಿಸಲಾರಂಭಿಸಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆ ನಡೆಯಲಿ,ಅಭ್ಯಂತರವಿಲ್ಲ,ಆದ್ರೆ ಅದರ ಹೆಸರಲ್ಲಿ ನಗರದ ಆರೋಗ್ಯ-ಸೌಂದರ್ಯ ಹಾಳು ಮಾಡುವುದು ಸರಿಯಲ್ಲ..ಏಕೆಂದ್ರೆ ಕಾಮಗಾರಿಯಿಂದಾಗಿ ಎದ್ದೇಳುವ ದೂಳಿನಿಂದ ಅನೇಕರಿಗೆ ಶ್ವಾಸಕೋಶ-ಉಸಿರಾಟದಂಥ ಸಮಸ್ಯೆ ಸೃಷ್ಟಿಯಾಗುತ್ತಿವೆ.ಇದಕ್ಕೆ ಹೊಣೆಯಾರು ಎಂದು ನಾಗರಿಕರು ಪ್ರಶ್ನೆ ಮಾಡುತ್ತಿದ್ದಾರೆ.ಹಾಗಾಗಿ ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲಿ ಶಿವಮೊಗ್ಗದ ಅಂದ ಹೆಚ್ಚಿಸುವ ನೆವದಲ್ಲಿ ಅದೊಂದು ಗೋಲ್ಮಾಲ್ ಗೆ ಕಾರಣವಾಗಬಾರದು ಎನ್ನುವುದಷ್ಟೇ ಶಿವಮೊಗ್ಗ ಜನರ ಆಶಯ.    

Spread the love
Leave A Reply

Your email address will not be published.

Flash News