ಕಾಡಾನೆ ತುಳಿತಕ್ಕೆ ನಿಷ್ಪಾಪಿ ನೌಕರ ಬಲಿ: ತಿಂಗಳಲ್ಲಿ ಇದು ನಾಲ್ಕನೇ ಬಲಿ:ಕಿಂಚಿತ್ ಮನುಷ್ಯತ್ವ ನಿಮ್ಮಲ್ಲುಳಿದಿದ್ರೆ ಅರಣ್ಯ ಸಚಿವ್ರೇ..ಕಾಡಿನ ಮಕ್ಕಳ ನೋವಿಗೆ ಧ್ವನಿಯಾಗಿ..

0

ಬೆಂಗಳೂರು/ಮೈಸೂರು: ಇವರಿಗೆಲ್ಲಾ ಮನುಷ್ಯತ್ವ ಇದೆಯೇ..? ಅರಣ್ಯ ಇಲಾಖೆ ಅಧಿಕಾರಿಗಳನ್ನು ರೀತಿ ಪ್ರಶ್ನಿಸಲೇಬೇಕಿದೆ. ಇಲಾಖೆಯ ಕೆಳಹಂತದ ನೌಕರ ಕಾಡಾನೆ ತುಳಿತಕ್ಕೆ ಸಾವನ್ನಪ್ಪಿದ್ರೆ ಅದು ಸುದ್ದಿ ಯಾಗದಂತೆ ಮುಚ್ಚಿ ಹಾಕೊಕ್ಕೆ ಮೇಲಾಧಿಕಾರಿಗಳು ಪ್ರಯತ್ನಿಸ್ತಾರೆಂದ್ರೆ ಇವರಲ್ಲಿ ಮನುಷ್ಯತ್ವ ಎನ್ನೋದೇ ಸತ್ತೋಗಿದೆಯೇ ಎನ್ನುವ ಅನುಮಾನ ಕಾಡುತ್ತೆ..

ಮೈಸೂರು ಜಿಲ್ಲೆ ಹುಣಸೂರು ವನ್ಯಜೀವಿ ವಿಭಾಗದಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ವಾಚರ್ ಗುರುರಾಜ್ ಕಾಡಾನೆಯ ಕಾಲ್ತುಳಿತಕ್ಕೆ ಪ್ರಾಣವನ್ನೇ ಬಿಟ್ಟಿದ್ದಾರೆ.ಇದು ತಿಂಗಳಲ್ಲಿ ಸಂಭವಿಸಿದ ನಾಲ್ಕನೇ ಕಾಲ್ತುಳಿತ ದುರಂತ ಎನ್ನಲಾಗುತ್ತಿದೆ.ಇಂದು ಸಾವನ್ನಪ್ಪಿದ ಗುರುರಾಜ್ ಸಾವಿನ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಸಾರ್ವಜನಿಕಗೊಳಿಸಲು ಅರಣ್ಯಾಧಿಕಾರಿಗಳು ನಡೆಸಿದ ಪ್ರಯತ್ನವೇ ಸಾಕಷ್ಟು ಗುಮಾನಿಗೆ ಎಡೆಮಾಡಿಕೊಟ್ಟಿದೆ.

ಹುಣಸೂರು ವನ್ಯ ಜೀವಿ ವಿಭಾಗದಲ್ಲಿ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರನಾಗಿದ್ದ ಗುರುರಾಜ್ ಸಾವನ್ನಪ್ಪಿದ ಸಂಗತಿಯನ್ನು ಬಹಿರಂಗಗೊಳಿಸದಂತೆ ಮೇಲಾಧಿಕಾರಿಗಳು ಆತನ ಸಹದ್ಯೋಗಿಗೆ ಆರ್ಡರ್ ಮಾಡಿದರೆನ್ನುವ ಸುದ್ದಿ ಹೊರಬಿದ್ದಿದೆ.ಯಾಕ್ಹೀಗೆ ಎನ್ನುವ ಪ್ರಶ್ನೆಗೆ ಆತ ಕಾಲ್ತುಳಿತದಿಂದ ಸಾವನ್ನಪ್ಪಿರೋದ್ರ ಹಿಂದೆ ಆತನಿಗೆ ಕಲ್ಪಿಸಬೇಕಿದ್ದ ಸೂಕ್ತ ಭದ್ರತೆಯ ವೈಫಲ್ಯವೇ ಕಾರಣ ಎನ್ನುವುದು ಸಾರ್ವಜನಿಕಗೊಂಡ್ರೆ ಸಮಸ್ಯೆಯಾಗುತ್ತದೆ ಎನ್ನುವುದು ಮೇಲಾಧಿಕಾರಿಗಳ ಐಡ್ಯಾ ಎನ್ನಲಾಗುತ್ತಿದೆ.

ಮೇಲಾಧಿಕಾರಿಗಳ ಆದೇಶಕ್ಕೆ ಹೆದರಿ ಇತರೆ ನೌಕರರು ಕೂಡ ಸುದ್ದಿಯನ್ನು ಹೊರಬಿಟ್ಟಿಲ್ಲ. ಅಧಿಕಾರಿಗಳಿಗೆ ಚೇಲಾಗಿರಿ ಮಾಡ್ಕಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ನೌಕರರಿಂದಾಗಿ ಗುರುರಾಜ್ ಅವರಂಥ ನಿಷ್ಠಾವಂಥ ದಿನಗೂಲಿ ನೌಕರರ ಸಾವುಗಳಿಗೆ ನ್ಯಾಯವೇ ಸಿಗದಂತಾಗುತ್ತಿದೆ.ಒಂದೇ ತಿಂಗಳಲ್ಲಿ ನಾಲ್ಕು ನೌಕರರು ಆನೆಗಳ ತುಳಿತಕ್ಕೆ ಸಿಲುಕಿ ಸಾವನ್ನಪ್ಪುತ್ತವೆ ಎಂದ್ರೆ ಇದೇನ್ ಮಾಮೂಲ್ ಸಂಗತಿನಾ..ಮೇಲಾಧಿಕಾರಿಗಳು ಅಪಾಯಕಾರಿ ಸನ್ನಿವೇಶದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಬೇಕಿರುವ ಸುರಕ್ಷತಾ ವ್ಯವಸ್ಥೆ ಕಲ್ಪಿಸುವಲ್ಲಿ ವಿಪಲವಾಗಿರುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ..ಖಂಡಿತಾ ಇಲ್ಲ.

ಗುರುರಾಜ್ ಸಾವಿನ ಸುದ್ದಿಯನ್ನು ಗೌಪ್ಯಗೊಳಿಸಿ ಮರಣೋತ್ತರ ಪರೀಕ್ಷೆಯನ್ನು ಮೇಲಾಧಿಕಾರಿಗಳು ಅವಸರವಸರವಾಗಿ ಮಾಡಿ ಮುಗಿಸಿದ್ದರ ಹಿಂದಿನ ರಹಸ್ಯವೇನು..? ಶವವನ್ನು ಕುಟುಂಬಕ್ಕೆ ಒಪ್ಪಿಸಿದ್ರೂ ಶೀಘ್ರವೇ ಅಂತ್ಯಸಂಸ್ಕಾರ ಮಾಡಿ ಮುಗಿಸುವಂತೆ ಒತ್ತಡ ಹೇರುತ್ತಿರುವುದೇಕೆ..?

ಗುರುರಾಜ್ ಶವ ಸಿಕ್ಕರೆ ಆತ ಹಾಗೂ ಆತನಂತೆ ಸಾವನ್ನಪ್ಪಿದ ನೌಕರರ ಸಾವಿಗೆ ನ್ಯಾಯಕ್ಕೆ ಒತ್ತಾಯಿಸಿ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘ ನಿರ್ಧರಿಸಿತ್ತು.

ಆದ್ರೆ ಹಾಗೆ ಮಾಡಿದ್ರೆ ಅರಣ್ಯಾಧಿಕಾರಿಗಳ ಬಂಡವಾಳವೆಲ್ಲಿ ಬಯಲಾಗುತ್ತದೋ ಎನ್ನುವ ಕಾರಣಕ್ಕೆ ಅದಕ್ಕೆ ಅವಕಾಶವನ್ನೇ ಮಾಡಿಕೊಟ್ಟಿಲ್ಲ..ಮೇಲಾಧಿಕಾರಿಗಳ ಕ್ರಮವನ್ನು ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದ ರಾಜ್ಯಾಧ್ಯಕ್ಷ ನಾಗರಾಜ್ ತೀವ್ರವಾಗಿ ಖಂಡಿಸಿದ್ದಾರೆ.

ಮೇಲಾಧಿಕಾರಿಗಳ ನಿರ್ಲಕ್ಷ್ಯದಿಂದ ನೌಕರ ಗುರುರಾಜ್ ಸಾವನ್ನಪ್ಪಿದ..ಬದುಕಿದ್ದಾಗಲಂತೂ ನೆಮ್ಮದಿಯಿಂದ ಇರಲು ಬಿಡಲಿಲ್ಲ..ನ್ಯಾಯಯುತ ಸಂಬಳ ಪಡೆಯೊಕ್ಕೆ ಬಿಡಲಿಲ್ಲ..ಸತ್ತ ಮೇಲಾದ್ರೂ ಆತನ ಕುಟುಂಬಕ್ಕೆ 30 ಲಕ್ಷ ಪರಿಹಾರವನ್ನಾದ್ರೂ ನೀಡಿ ಎಂದು ಕನ್ನಡ ಫ್ಲಾಶ್ ನ್ಯೂಸ್ ಮೂಲಕ ಅರಣ್ಯಾಧಿಕಾರಿಗಳನ್ನು ಮನವಿ ಮಾಡಿದ್ದಾರೆ.ತಾರತಮ್ಯ ಮಾಡಿದರೆ ಹೋರಾಟ ಅನಿವರ್ಯ ಎಂದು ಎಚ್ಚರಿಸಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಇಷ್ಟೆಲ್ಲಾ ಅನ್ಯಾಯ ನಡೆಯುತ್ತಿದ್ದರೂ ಸಚಿವ ಆನಂದ್ ಸಿಂಗ್ ಅವರೇಕೋ ಇದರ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ..ಪಾಪ. ಬೇರೆಯದೆ ವಿಚಾರಗಳಲ್ಲಿಯೇ ಮಗ್ನವಾಗಿರುವ ಅವರಿಗೆ ಅರಣ್ಯ ಇಲಾಖೆಯ ಕೆಳಹಂತದ ನೌಕರ ಸಿಬ್ಬಂದಿಯ ಬವಣೆ ಹೇಗೆ ಅರ್ಥವಾಗಬೇಕು ಹೇಳಿ..ಕಾಡಿನ ಮಕ್ಕಳು ಅನುಭವಿಸುತ್ತಿರುವ ಅನ್ಯಾಯಕ್ಕೆ ಧ್ವನಿಯಾಗಲು ಪುರುಸೊತ್ತೆಲ್ಲಿದೆ ಹೇಳಿ..ಆದ್ರೆ ಇದು ಓರ್ವ ಸಚಿವರಾಗಿ ಅವರು ಮಾಡಬೇಕಿದ್ದ ಜವಾಬ್ದಾರಿಯಲ್ಲಿನ ಬೃಹತ್ ಲೋಪ ಹಾಗೂ ಅಮಾನವೀಯತೆಗೆ ಸಾಕ್ಷಿ ಎನ್ನುವುದು ಕೂಡ ಅಷ್ಟೇ ಸತ್ಯ

Spread the love
Leave A Reply

Your email address will not be published.

Flash News