ಏನಿದು ಅರಣ್ಯ ಸಚಿವ್ರೇ..ಯಾಮಾರಿದ್ರೆ ನಿಮಗೂ ಬಿದ್ದೀತು ಮಕ್ಮಲ್ ಟೋಪಿ-ಮಂಡ್ಯ DCF ವೆಂಕಟೇಶ್ ಕರಾಮತ್ತಿಗೆ ಅಡ್ರಸ್ಸೇ ಇಲ್ಲದವರಿಗೂ ಪ್ರತಿ ತಿಂಗಳು ಸಂಬಳ- ಸಾಮಾಜಿಕ ಅರಣ್ಯ ವಿಭಾಗದಲ್ಲಿ ನಿತ್ಯಲೂಟಿ

0

ಮಂಡ್ಯ: ಅರಣ್ಯ ಸಚಿವ ಆನಂದ್ ಸಿಂಗ್ ಎಚ್ಚೆತ್ತುಕೊಂಡು ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟದೇ ಹೋದರೆ ಇಲಾಖೆಯಲ್ಲಿರುವ ಖತರ್ನಾಕ್ ಹಾಗೂ ಲಜ್ಜೆಗೇಡಿ ಅಧಿಕಾರಿಗಳು ಸಚಿವರ ಹೆಸರಿನಲ್ಲೂ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಹಣ ಲೂಟಿ ಮಾಡಬಲ್ಲರೇನೋ..ಏಕಂದ್ರೆ ಮಂಡ್ಯ ಸಾಮಾಜಿಕ ಅರಣ್ಯ ವಿಭಾಗದಲ್ಲಿ ವರ್ಷಗಳಿಂದಲೂ ನಡೆಯುತ್ತಿರುವುದು ಇದೇ ಅಕ್ರಮ..ಆದ್ರೆ ಮೇಲಾಧಿಕಾರಿಗಳ ನಿಷ್ಕಾಳಜಿಯಿಂದ ಅಕ್ರಮಕ್ಕೆ ಬ್ರೇಕ್ ಬೀಳಲೇ ಇಲ್ಲ..

ಉಪಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ್
ಉಪಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ್
ಸಾಮಾಜಿಕ ಅರಣ್ಯ ವಿಭಾಗದಲ್ಲಿ ಸಂಬಳ ಡ್ರಾ ಮಾಡಿಕೊಳ್ಳುತ್ತಿದ್ದಾರೆನ್ನುವ ಅಡ್ರಸ್ಸೇ ಇಲ್ಲದವರ ವಿವರ
ಸಾಮಾಜಿಕ ಅರಣ್ಯ ವಿಭಾಗದಲ್ಲಿ ಸಂಬಳ ಡ್ರಾ ಮಾಡಿಕೊಳ್ಳುತ್ತಿದ್ದಾರೆನ್ನುವ ಅಡ್ರಸ್ಸೇ ಇಲ್ಲದವರ ವಿವರ

ಇದು ಮಂಡ್ಯ ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ(ಸೋಶಿಯಲ್ ಫಾರೆಸ್ಟ್) ವಿಭಾಗದಲ್ಲಿ ನಿತ್ಯ ನಡೆಯುತ್ತಿರುವ ಶೋಷಣೆ-ದೌರ್ಜನ್ಯ ಹಾಗೂ ಅವರ ಬೆವರಿನ ಹಣದ ಲೂಟಿ ಕಹಾನಿ.. ಇಲ್ಲಿ ಬೆವರು ಸುರಿಸಿ ಕೆಲಸ ಮಾಡುವ ಅರಣ್ಯ ಇಲಾಖೆ ದಿನಗೂಲಿ ನೌಕರರ ಪಾಡು ಹೇಳತೀರದಷ್ಟಾಗಿದೆ .ಅವರ ಶ್ರಮದ ದುಡಿಮೆಯ ಬಹುಪಾಲನ್ನು ನುಂಗಿ ನೊಣೆದು ದರ್ಬಾರ್ ಮಾಡುತ್ತಿರುವ ಅಧಿಕಾರಿಗಳು ನೌಕರರ ಪಾಲಿನ ಹಿಟ್ಲರ್ ನಂತೆ ಸರ್ವಾಧಿಕಾರಿಗಳಂತೆ ಭಾಸವಾಗುತ್ತಿದ್ದಾರೆ.ನೌಕರರಿಗೆ ಸಿಗಬೇಕಾದ ಸವಲತ್ತನ್ನೇ ಕಬಳಿಸುತ್ತಿರುವ ಅಧಿಕಾರಿಗಳು ದುಂಡಗಾಗುತ್ತಿದ್ದರೂ ಅವರು ನಡೆಸುತ್ತಿರುವ ಅಕ್ರಮ ಮಾತ್ರ ಮೇಲಾಧಿಕಾರಿಗಳಿಗೆ ಅರ್ಥವಾಗುತ್ತಲೇ ಇಲ್ಲ..ಇಂತದ್ದೇ ನುಂಗಬಾಕ ಅರಣ್ಯಾಧಿಕಾರಿಯ ಶೋಷಣೆಗೆ ದಿನಗೂಲಿ ನೌಕರರು ಬಸವಳಿಯತ್ತಿದ್ದಾರೆ..ಎಲ್ಲಾ ಅಸ್ತ್ರ ಪ್ರಯೋಗಿಸಿದ ಬಳಿಕ ಇದೀಗ ಪ್ರತಿಭಟನೆಯ ಹಾದಿ ತುಳಿದಿದ್ದಾರೆ.

ಸಾಮಾಜಿಕ ಅರಣ್ಯ ವಿಭಾಗ ಎನ್ನೋದು ಗ್ರಾಮೀಣಾಭಿವೃದ್ದಿ-ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಬಂದ್ರೂ ಅದರ ನಿರ್ವಹಣೆ ಅರಣ್ಯ ಇಲಾಖೆ ಮಾಡುತ್ತಿದೆ..ಇದೇ ಅಧಿಕಾರಿಗಳು ಕೂತಲ್ಲೇ ಲಕ್ಷ ಲಕ್ಷಗಟ್ಟಲೇ ಕಾಸು ಕಮಾಯಿಸೊಕ್ಕೆ ರಾಜಮಾರ್ಗ ಹಾಕಿಕೊಡಲು ಕಾರಣವಾಗಿದೆ ಎನ್ನುವುದು ದುರಾದೃಷ್ಟಕರ.ಮಂಡ್ಯದ ಸಾಮಾಜಿಕ ಅರಣ್ಯ ವಿಭಾಗದಲ್ಲಿ ನಡೆಯುತ್ತಿರುವ ಅಕ್ರಮ-ಭ್ರಷ್ಟಾಚಾರ ಮಾತ್ರ ಹೇಳತೀರದಷ್ಟು ಅಸಹನೀಯವಾಗಿದೆ.ಇದರ ಉಸ್ತುವಾರಿ ಉಪಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ್ ವಿರುದ್ಧ ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.

ಕಳೆದ 15-20 ವರ್ಷಗಳಿಂದ ನೀಯತ್ತಾಗಿ ಕೆಲಸ ಮಾಡುತ್ತಾ ಬಂದಿರುವ ದಿನಗೂಲಿ,ಪಿಸಿಪಿ ನೌಕರರಿಗೆ ಕಳೆದ 8 ತಿಂಗಳಿಂದ್ಲೂ ವೇತನವನ್ನೇ ಪಾವತಿಸಿಲ್ಲ.ಇದಕ್ಕೆ ಕಾರಣವೇ ವೆಂಕಟೇಶ್,ತಮ್ಮ ವಲಯಾಧಿಕಾರಿಗಳ ಜೊತೆ ಸೇರಿಕೊಂಡು ನೌಕರರನ್ನು ಕಡೆಗಣಿಸಿದ್ದಾರೆನ್ನುವ ಆರೋಪಕ್ಕೆ ತುತ್ತಾಗಿದ್ದಾರೆ.ಮಾಡಿದ ಕೆಲಸಕ್ಕೆ ಕೂಲಿ ಕೇಳಿದ್ರೆ ನೀವ್ಯಾರು ಗೊತ್ತೇ ಇಲ್ಲ ಎನ್ನುವ ಉಡಾಫೆಯ ಉತ್ತರ ಕೊಡ್ತಿದ್ದಾರಂತೆ ವೆಂಕಟೇಶ್,

ವೆಂಕಟೇಶ್ ವಿರುದ್ಧ ಕೇಳಿಬಂದಿರುವ ಅನೇಕ ಆರೋಪಗಳಲ್ಲಿ ಗಂಭೀರವಾದ ಆಪಾದನೆ 2020-21ನೇ ಸಾಲಿನಲ್ಲಿ ಬಿಡುಗಡೆಯಾಗಿದೆ ಎನ್ನಲಾದ 185.30 ಲಕ್ಷ ಅಂದ್ರೆ 1.8 ಕೋಟಿ ಮೊತ್ತದ ಕಾಮಗಾರಿಗಳ ಲೆಕ್ಕ..ಈ ಎಲ್ಲಾ ಕೆಲಸಗಳನ್ನು ಗುತ್ತಿಗೆದಾರರಿಂದ ಮಾಡಿಸಲಾಗಿದೆ ಎನ್ನುವ ಉತ್ತರ ಕೊಡುವ ವೆಂಕಟೇಶ್ ಆ ಗುತ್ತಿಗೆದಾರರ ಮಾಹಿತಿ ಕೊಡಿ ಎಂದ್ರೆ ಬ್ಬೆಬ್ಬೆಬ್ಬೆ..ಎಂದು ಆಕಾಶ ನೋಡ್ತಾರೆ.ಕೆಲಸಗಳು ಸರಿಯಾಗಿ ನಡೆದಿದ್ರೆ ಈ ರೀತಿ ಮೀನಾಮೇಷ ಎಣಿಸುವ ಅಗತ್ಯವಿತ್ತೇ ಎನ್ನುವುದು ನೌಕರರ ಪ್ರಶ್ನೆ.ಆದ್ರೆ ವಾಸ್ತವ ಏನಂದ್ರೆ ಈ ಎಲ್ಲಾ ಕೆಲಸಗಳನ್ನು ಮಾಡಿಸಿರೋದು ದಿನಗೂಲಿ ನೌಕರರಿಂದ್ಲೇ..ಇಲಾಖೆಯಲ್ಲೇ ದಿನಗೂಲಿ ನೌಕರರಿರುವಾಗ ಗುತ್ತಿಗೆದಾರರ ಮೂಲಕ ಇಷ್ಟೊಂದು ಲೆಕ್ಕ ಮಾಡಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ ಎನ್ನುತ್ತಾರೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ಹಾಗೂ ಕ್ಷೇಮಾಭಿವೃದ್ದಿ ನೌಕರರ ಸಂಘದ ರಾಜ್ಯಾಧ್ಯಕ್ಷ ನಾಗರಾಜ್.

ವೆಂಕಟೇಶ್ ವಿರುದ್ಧ ಇರುವ ಕರ್ಮಕಾಂಡದ ಆರೋಪ ಇಷ್ಟಕ್ಕೆ ಮುಗಿಯೊಲ್ಲ,1.8 ಕೋಟಿ ಮೊತ್ತದ ಕೆಲಸಗಳನ್ನು ಮಾಡಿದ್ದಾ ರೆಂದು ಬೋಗಸ್ ಗುತ್ತಿಗೆದಾರರ ಬಿಲ್ ಕ್ರಿಯೇಟ್ ಮಾಡಿದ್ದಾರಂತೆ.ಅಷ್ಟೇ ಅಲ್ಲ,ಸತ್ತವರು ಹಾಗೂ ಬೇನಾಮಿಗಳ ಹೆಸ ರಿನ ಲ್ಲೂ ಬಿಲ್ ಕ್ರಿಯೇಟ್ ಆಗಿದೆ.ಅಡ್ರಸ್ ಗೇ ಇರದ ವ್ಯಕ್ತಿಗಳನ್ನು ದಿನಗೂಲಿ ನೌಕರರೆಂದು ಬಿಂಬಿಸಿ ವರ್ಷಾನುಗಟ್ಟಲೇ ಅವರ ಹೆಸರಿನಲ್ಲಿ ವೋಚರ್ ಕ್ರಿಯೇಟ್ ಮಾಡಿಕೊಂಡು ಹಣವನ್ನು ನುಂಗಿ ಹಾಕಿದ್ದಾರೆನ್ನುವುದು ವೆಂಕಟೇಶ್ ವಿರುದ್ಧದ ನಾಗರಾಜ್ ಆರೋಪ.

ವಲಯ ಅಧಿಕಾರಿಗಳೊಂದಿಗೆ ಸೇರಿಕೊಂಡು ವೆಂಕಟೇಶ್ ಮಾಡಿದ್ದಾರೆನ್ನುವ ಭ್ರಷ್ಟಾಚಾರಕ್ಕೆ ಪೂರಕವಾ ದಾಖಲೆಗಳನ್ನು ನೌಕರರ ಸಂಘದ ಮುಖಂಡರು ಆರ್ ಟಿಐ ನಲ್ಲಿ ತೆಗೆದುಕೊಂಡಿದ್ದಾರೆ ಸಹ.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನೀಡಿರುವ ದಾಖಲೆಗಳಲ್ಲಿಯೇ ಇದು ಸ್ಪಷ್ಟವಾಗಿದೆ.ವೆಂಕಟೇಶ್ ಎಂಡ್ ಟೀಮ್ ಯಾರನ್ನೆಲ್ಲಾ ನೌಕರರು ಎಂದು ಬಿಂಬಿಸಿ ಪ್ರತಿ ತಿಂಗಳು 8 ಸಾವಿರದಿಂದ 14 ಸಾವಿರದವರೆಗೆ ವೋಚರ್ ಗಳಲ್ಲಿ ಸಂಬಳ ಡ್ರಾ ಮಾಡಿಕೊಳ್ಳುತ್ತಿತ್ತೋ ಅಸಲಿಗೆ ಆ 24  ವ್ಯಕ್ತಿಗಳು ಬದುಕಿಯೇ  ಇಲ್ಲ ಎನ್ನುವ ಮಾಹಿತಿಯನ್ನು ದೃಢೀಕರಿಸಿ ನೀಡಿರುವ ಪ್ರತಿಗಳು ಕನ್ನಡ ಫ್ಲಾಶ್ ನ್ಯೂಸ್ ಗೆ ಲಭ್ಯವಾಗಿವೆ.

ಸರ್ಕಾರದ ಸಂಬಳ-ಭತ್ಯೆಯನ್ನು ತಿಂದು ತೇಗುತ್ತಾ,ವಾಹನದಲ್ಲಿ ಝೂಮ್ ಝಾಮ್ ಆಗಿ ಅಡ್ಡಾಡುತ್ತಾ ಎಲ್ಲಾ ಸೌಲಭ್ಯಗಳನ್ನು ಎಂಜಾಯ್ ಮಾಡುತ್ತಿರುವ ವೆಂಕಟೇಶ್ ಅವರಂಥ ಭ್ರಷ್ಟ ಅಧಿಕಾರಿಗಳು ನೀಯತ್ತಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಂಬಳ ಕೊಡದೆ ಬೋಗಸ್ ನೌಕರರ ಹೆಸರಲ್ಲಿ ಹಣ ಡ್ರಾ ಮಾಡಿಕೊಂಡು ಲೂಟ್ ಮಾಡುತ್ತಿದ್ದರೂ ಮೇಲಾಧಿಕಾರಿಗಳಿಗೆ ಮಾತ್ರ ಇದು ಗಂಭೀರ ಅಕ್ರಮ ಎನಿಸದಿರುವುದು ಮಾತ್ರ ದೌರ್ಭಾಗ್ಯಪೂರ್ಣ..ವೆಂಕಟೇಶ್ ವಿರುದ್ಧ ಮೇಲಾದಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದ್ರೆ,ವೆಂಕಟೇಶ್ ಲೂಟಿ ಮಾಡುತ್ತಿರುವ ಹಡಬೆ ಕಮಾಯಿಯಲ್ಲಿ ಇವರಿಗೂ ಪರ್ಸಂಟೇಜ್ ಸಂದಾಯವಾಗುತ್ತಿದೆಯೇನೋ ಎನ್ನುವ ಅನುಮಾನ ಕಾಡ್ದೆ ಇರೊಲ್ಲ ಎನ್ನೋದು   ನಾಗರಾಜ್ ಆರೋಪ.

ಸಾಮಾಜಿಕ ಅರಣ್ಯ ವಿಭಾಗವನ್ನು ತನ್ನ ಅಕ್ರಮದ ಅಡ್ಡೆಯನ್ನಾಗಿಸಿಕೊಂಡಿರುವ ವೆಂಕಟೇಶ್ ಮಾಡುತ್ತಿರುವ ಅನ್ಯಾಯ-ಅಕ್ರಮಗಳ ವಿರುದ್ಧ ಇದೀಗ ನೌಕರರು ಸಿಡಿದೆದ್ದಿದ್ದಾರೆ.ಇಂದು ಮಂಡ್ಯದಲ್ಲಿ ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದಾರೆ. ಎಚ್ಚೆತ್ತುಕೊಳ್ಳದಿದ್ದರೆ ಅರಣ್ಯಭವನ ಮುತ್ತಿಗೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸ್ಲಿಕ್ಕೂ ನಿರ್ಧರಿಸಿದ್ದಾರೆ. ಅರಣ್ಯ ಸಚಿವ ಆನಂದ್ ಸಿಂಗ್ ಅವರಿಗೂ ಇದ್ಯಾವುದು ಗಮನಕ್ಕೆ ಬಾರದಿರುವುದು ಮಾತ್ರ ದುರಾದೃಷ್ಟಕರವೇ ಸರಿ.. 

Spread the love
Leave A Reply

Your email address will not be published.

Flash News