ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿ ಅರ್ಧದಷ್ಟು ಪೂರ್ಣ-ತ್ವರಿತ ಅಭಿವೃದ್ಧಿಗೆ BDA ಅಧ್ಯಕ್ಷ ವಿಶ್ವನಾಥ್ ಸೂಚನೆ

0

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಿಡಿಎ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ ಅವರು,  ಬಡಾವಣೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು.ಬಡಾವಣೆಯಲ್ಲಿ ಈಗಾಗಲೇ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿಗೆ ಅನುದಾನದ ಅಗತ್ಯವಿದೆ ಎಂದು ಅಧಿಕಾರಿಗಳು ಅಧ್ಯಕ್ಷರು ಮತ್ತು ಆಯುಕ್ತರ ಗಮನಕ್ಕೆ ತಂದರು.

ನಾಡಪ್ರಭು ಕೆಂಪೇಗೌಡ ಬಡಾವಣೆ ಕುರಿತು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಆಯುಕ್ತ ಡಾ. ಮಹದೇವ್ ಮತ್ತು ಕಾರ್ಯದರ್ಶಿ ವಾಸಂತಿ ಅಮರ್ ಸೇರಿದಂತೆ ಮೊದಲಾದ ಅಧಿಕಾರಿಗಳು ಇದ್ದರು.
ನಾಡಪ್ರಭು ಕೆಂಪೇಗೌಡ ಬಡಾವಣೆ ಕುರಿತು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಆಯುಕ್ತ ಡಾ. ಮಹದೇವ್ ಮತ್ತು ಕಾರ್ಯದರ್ಶಿ ವಾಸಂತಿ ಅಮರ್ ಸೇರಿದಂತೆ ಮೊದಲಾದ ಅಧಿಕಾರಿಗಳು ಇದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು ಕೂಡಲೇ ಬಾಕಿ ಇರುವ ಕಾಮಗಾರಿ ಮತ್ತು ಅದಕ್ಕೆ ಆಗಬಹುದಾದ ವೆಚ್ಚದ ಬಗ್ಗೆ ವರದಿ ನೀಡಬೇಕು. ಈ ವರದಿ ಆಧಾರದಲ್ಲಿ ಅನುದಾನವನ್ನು ಬಿಡುಗಡೆ ಮಾಡಲು ಕ್ರಮವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಬಡಾವಣೆ  ನಿರ್ಮಾಣಕ್ಕೆ ಭೂಮಿಯನ್ನು ನೀಡಿರುವ ರೈತರಿಗೆ 40:60 ಅನುಪಾತದಲ್ಲಿ  10,297 ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲಾಗಿದೆ. ಅದೇ ರೀತಿ ಅರ್ಕಾವತಿಯಲ್ಲಿ ಮಂಜೂರಾಗಿದ್ದ ನಿವೇಶನಗಳು ನಾನಾ ಕಾರಣಗಳಿಂದ ರದ್ದುಗೊಂಡಿದ್ದ ಹಿನ್ನೆಲೆಯಲ್ಲಿ ನಿವೇಶನಾದಾರರಿಗೆ 1000 ಕ್ಕೂ ಹೆಚ್ಚು ನಿವೇಶನಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಈಗ ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿರುವ ಭೂಮಿಯನ್ನು ಹೊರತುಪಡಿಸಿ ಉಳಿದಿರುವ ಜಾಗದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಆದಷ್ಟೂ ಬೇಗ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ ಅವರು, ಈ ಮೂಲಕ ಕೆಂಪೇಗೌಡ ಬಡಾವಣೆಯನ್ನು ಒಂದು ಮಾದರಿ ಬಡಾವಣೆಯನ್ನಾಗಿ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು,

ಬಡಾವಣೆಗೆ ಭೂಮಿ ನೀಡಿ ಪರಿಹಾರ ಅಥವಾ ನಿವೇಶನಕ್ಕೆ ಬೇಡಿಕೆ ಸೇರಿದಂತೆ ಇನ್ನಿತರೆ ಕಾರಣಗಳಿಂದ ನ್ಯಾಯಾಲಯದಲ್ಲಿ 600 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕೆಂದು ಕಾನೂನು ವಿಭಾಗದ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದರು.

ನ್ಯಾಯಾಲಯದಿಂದ ಹೊರಗೆ ಇತ್ಯರ್ಥಕ್ಕೆ ಯತ್ನ:ಈ ನಡುವೆ ನಗದು ಪರಿಹಾರದ ಬದಲು 40:60 ಅನುಪಾತದಡಿ ಅಭಿವೃದ್ಧಿಪಡಿಸಿದ ನಿವೇಶನಕ್ಕೆ ಬೇಡಿಕೆ ಇಟ್ಟಿರುವ ಮತ್ತು ನಗದು ಪರಿಹಾರದ ಬಗ್ಗೆ ತಕರಾರು ಅರ್ಜಿಗಳನ್ನು ಸಲ್ಲಿಸಿರುವ ರೈತರು ಮತ್ತು ಭೂಮಾಲೀಕರೊಂದಿಗೆ ತಾವೇ ಖುದ್ದಾಗಿ ಮಾತುಕತೆ ನಡೆಸುವುದಾಗಿ ತಿಳಿಸಿದ ಅವರು, ಬಿಡಿಎ ಅಧ್ಯಕ್ಷ ಸಮ್ಮುಖದಲ್ಲಿ ಮಾತುಕತೆಗೆ ಮುಂದಾಗುವ ಎಲ್ಲರೊಂದಿಗೆ ಸಭೆ ನಡೆಸಿ ನ್ಯಾಯಾಲಯದಿಂದ ಹೊರಗೇ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಯತ್ನಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂಬಂಧ ಕೆಂಪೇಗೌಡ ಬಡಾವಣೆಯ ವ್ಯಾಪ್ತಿಯಲ್ಲಿಯೇ ಸದ್ಯದಲ್ಲಿ ಸಭೆಯನ್ನು ಆಯೋಜಿಸಲಾಗುತ್ತಿದ್ದು, ಈ ಸಭೆಯಲ್ಲಿ ಬಿಡಿಎ ಉನ್ನತಾಧಿಕಾರಿಗಳು ಹಾಜರಿರಲಿದ್ದಾರೆ. ಮಾತುಕತೆ ಮೂಲಕ ಬಗೆಹರಿಸಿಕೊಂಡರೆ ನಿವೇಶನಗಳ ಲಭ್ಯತೆ ಆಧಾರದಲ್ಲಿ ಅವರಿಗೆ ನಿವೇಶನ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.ಇದೇ ವೇಳೆಯಲ್ಲಿ, ಭೂಮಿ ಕಳೆದುಕೊಂಡಿರುವ ರೈತರ ಮನವೊಲಿಕೆಗೆ ಅಧಿಕಾರಿಗಳು ಯತ್ನಿಸಬೇಕು ಮತ್ತು ಬಿಡಿಎ ನೀಡಲಿರುವ ನಿವೇಶನ ಸಂಪೂರ್ಣ ಅಭಿವೃದ್ಧಿ ಹೊಂದಿದ ನಿವೇಶನವಾಗಿರಲಿದೆ ಎಂಬ ಭರವಸೆಯನ್ನು ಅವರಿಗೆ ನೀಡಬೇಕೆಂದು ಅಧಿಕಾರಿಗಳು ನಿರ್ದೇಶನ ನೀಡಿದರು.

Spread the love
Leave A Reply

Your email address will not be published.

Flash News