ಭವಿಷ್ಯದ ಬೆಂಗಳೂರಿಗಾಗಿ ಬಿಡಿಎ ಮಾಸ್ಟರ್ ಪ್ಲಾನ್-2035 :ಸಿಎಂ ಸೂಚನೆ ಮೇರೆಗೆ ನಗರತಜ್ಞರೊಂದಿಗೆ ಬಿಡಿಎ ಅಧ್ಯಕ್ಷ ವಿಶ್ವನಾಥ್ ವರ್ಚುಯೆಲ್ ಸಭೆ

0

ಬೆಂಗಳೂರು: ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಸಮಗ್ರ ಮಾಸ್ಟರ್ ಪ್ಲಾನ್ -2035 ಅನ್ನು ರೂಪಿಸಲಾಗುತ್ತಿದೆ.

ಮುಂದಿನ 20-25 ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಮಾಸ್ಟರ್ ಪ್ಲಾನ್ ಸಿದ್ದಪಡಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಘಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ನಗರಾಭಿವೃದ್ಧಿ ಕ್ಷೇತ್ರದಲ್ಲಿ ತಜ್ಞರೆನಿಸಿಕೊಂಡಿರುವವರ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಪಡೆಯಲಾಗುತ್ತಿದೆ.

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ , ಬೆಂಗಳೂರು ನಗರದ ಉಸ್ತುವಾರಿಯನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವ ಹಿನ್ನಲೆಯಲ್ಲಿ ನಡೆಸಿದ ವರ್ಚುಯೆಲ್ ಸಭೆಯಲ್ಲಿ ಈ ಬಗ್ಗೆ  ನಮ್ಮ ಬೆಂಗಳೂರು ಪ್ರತಿಷ್ಠಾನದ ತಜ್ಞರೊಂದಿಗೆ ಸಂವಾದ ನಡೆಸಿದರು.

ಪ್ರಸ್ತುತ ಸಿಲಿಕಾನ್ ಸಿಟಿ ಬೆಳೆಯುತ್ತಿರುವ ವೇಗವನ್ನು ಗಮನಿಸಿದರೆ ಆತಂಕ ತರುವಂತದ್ದಾಗಿದೆ. ಅಷ್ಟೊಂದು ವೇಗವಾಗಿ ಬೆಳೆಯುತ್ತಿರುವುದರಿಂದ ನಾಗರಿಕರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಒಂದು ಬಹುದೊಡ್ಡ ಸವಾಲಿನ ಕೆಲಸವಾಗಲಿದೆ. ಬಿಬಿಎಂಪಿ ವ್ಯಾಪ್ತಿ ವಿಸ್ತಾರವಾಗುತ್ತಿದ್ದಂತೆಯೇ ಬೆಂಗಳೂರು ನಗರದ ವ್ಯಾಪ್ತಿಯೂ ಹಿಗ್ಗಲಿದೆ. ಇದರಿಂದ ಬೃಹತ್ ಬೆಂಗಳೂರಿನ ವ್ಯಾಪ್ತಿಗೆ ಹೊಸ ಹೊಸ ಪ್ರದೇಶಗಳು ಸೇರ್ಪಡೆಗೊಳ್ಳುತ್ತವೆ. ಅಂತಹ ಪ್ರದೇಶಗಳಿಗೆ ಸೂಕ್ತವಾದ ಮೂಲಸೌಕರ್ಯಗಳನ್ನು ಒದಗಿಸುವುದು ಬಿಡಿಎ, ಬಿಎಂಆರ್ ಡಿಎ, ಬಿಬಿಎಂಪಿ ಸೇರಿದಂತೆ ಇನ್ನಿತರೆ ಸಂಸ್ಥೆಗಳ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಬಿಡಿಎ ನೇತೃತ್ವದಲ್ಲಿ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.

ಈ ಹಿಂದೆ ಹಲವು ಬಾರಿ ಎಲ್ಲರೂ ಸೇರಿ ಒಂದು ಉತ್ತಮವಾದ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಿದ್ದರೂ ಅದರ ಜಾರಿಯಲ್ಲಿ ಹಿಂದೆ ಬಿದ್ದಿದ್ದೇವೆ. ಈ ಕಾರಣದಿಂದಾಗಿಯೇ ಅವೈಜ್ಞಾನಿಕ ರೀತಿಯ ಬೆಳವಣಿಗೆಯನ್ನು ಕಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ಎಚ್ಚರ ವಹಿಸಿ 2035 ಪ್ಲಾನ್ ಅನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.

ಕೆರೆ, ಉದ್ಯಾನ, ಪರಿಸರ ಸಂರಕ್ಷಣೆಗೆ ಆದ್ಯತೆ:ಮಾಸ್ಟರ್ ಪ್ಲಾನ್ 2035 ರಲ್ಲಿ ಕೆರೆ, ಉದ್ಯಾನ, ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕೆರೆಗಳ ಪುನರುಜ್ಜೀವನಕ್ಕೆ ಕಾಲಮಿತಿ ನಿಗದಿ, ಪ್ರಸ್ತುತ ಇರುವ ಉದ್ಯಾನಗಳನ್ನು ಒತ್ತುವರಿಯಿಂದ ಮುಕ್ತಗೊಳಿಸುವುದು, ಹಸಿರು ಬೆಳೆಸುವುದು ಸೇರಿದಂತೆ ಇನ್ನಿತರೆ ಪರಿಸರ ಸ್ನೇಹಿ ಕ್ರಮಗಳನ್ನು ಈ ಪ್ಲಾನ್ ನಲ್ಲಿ ಅಳವಡಿಸಲಾಗುತ್ತದೆ ಎಂದರು.

ಸಂಘಸಂಸ್ಥೆಗಳಿಂದ ಸಲಹೆ ಸೂಚನೆ ಸಂಗ್ರಹ: ಮಾಸ್ಟರ್ ಪ್ಲಾನ್ ಅನ್ನು ಸಮಗ್ರವಾಗಿಸುವ ನಿಟ್ಟಿನಲ್ಲಿ ಸಂಘಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ನಾಗರಿಕ ಸಂಸ್ಥೆಗಳು ಸೇರಿದಂತೆ ಇನ್ನಿತರೆ ಕ್ಷೇತ್ರಗಳ ಪರಿಣಿತರಿಂದ ಅಗತ್ಯ ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.

ವರ್ಚುವಲ್ ಸಂವಾದದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನದ ವಿವಿಧ ಕ್ಷೇತ್ರಗಳ ಪರಿಣಿತರಾದ ಹರೀಶ್, ಸ್ನೇಹ ನಂದಿಹಾಳ್, ಸ್ಮಿತಾ ಸಿಂಗ್, ಬೃಂದಾಶಾಸ್ತ್ರಿ, ವಿಶ್ವನಾಥ್, ಮೀನಾಕ್ಷಿ ಪ್ರಭು, ಡಾ.ಚಂಪಕ ರಾಜಗೋಪಾಲ್, ಐಐಎಸ್ಸಿಯ ಪ್ರೊಫೆಸರ್ ಆಶಿಶ್ ವರ್ಮಾ, ನಿತಿನ್ ಶೇಷಾದ್ರಿ, ರವೀಂದ್ರ ಶ್ರೀನಿವಾಸ್ ಮತ್ತು ಬಿಡಿಎ ಕಾರ್ಯದರ್ಶಿ ವಾಸಂತಿ ಅಮರ್ ಪಾಲ್ಗೊಂಡಿದ್ದರು.

ವರ್ಚುಯೆಲ್ ಸಭೆಯ ಹೈಲೈಟ್ಸ್..

  • ನಗರದ ಸರ್ವಾಂಗೀಣ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ 2035
  • ಸಾರ್ವಜನಿಕರಿಗೆ ಅಗತ್ಯ ಮೂಲ ಸೌಕರ್ಯಗಳ ಪೂರೈಕೆಗೆ ಒತ್ತು
  • ವೈಜ್ಞಾನಿಕ ರೀತಿಯಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆಗೆ ಆದ್ಯತೆ
  • ಕೆರೆ, ಉದ್ಯಾನ ಪರಿಸರ ಸಂರಕ್ಷಣೆಗೆ ಸಂಕಲ್ಪ
  • ವೈಜ್ಞಾನಿಕ ಮತ್ತು ಆಧುನಿಕ ರೀತಿಯ ಪಾರ್ಕಿಂಗ್ ವ್ಯವಸ್ಥೆ
  • ಮಾಸ್ಟರ್ ಪ್ಲಾನ್ ಅನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಹೊಸ ಕಾನೂನು
  • ಜಾರಿಯಲ್ಲಿ ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ
  • ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಸ್ಟರ್ ಪ್ಲಾನ್ ಜಾರಿಗೊಳಿಸುವ ಹೊಣೆಗಾರಿಕೆ
  • 25-30 ವರ್ಷಗಳ ಭವಿಷ್ಯದ ದೃಷ್ಟಿಯಿಂದ ಮಾಸ್ಟರ್ ಪ್ಲಾನ್ ಸಿದ್ಧತೆ
Spread the love
Leave A Reply

Your email address will not be published.

Flash News