ತುಮಕೂರು ಪೊಲೀಸ್ರ ತಾಕತ್ತಿಗೆ ಸರಗಳ್ಳರು ಸವಾಲಾಗಿದ್ದಾರಾ..? ಹಣ ಕಳಕೊಂಡವರಿಂದ ತುಮಕೂರು ಪೊಲೀಸರಿಗೆ ಹಿಡಿಶಾಪ …

0

ತುಮಕೂರು: ಕಾನೂನು ಸುವ್ಯವಸ್ಥೆ ಕಾಪಾಡೋದಷ್ಟೇ ಅಲ್ಲ..ಸಾರ್ವಜನಿಕರ ನೆಮ್ಮದಿಯನ್ನೂ ಕಾಯ್ದುಕೊಳ್ಳಬೇಕಿರೋದು ಕೂಡ ನಿಮ್ ಜವಾಬ್ದಾರಿ..ಸಾರ್ವಜನಿಕರಿಗೆ ಸೇರಿದ ಹಣ-ಆಭರಣಗಳು ಕಳುವಾದಾಗ ಅದನ್ನು ಪತ್ತೆ ಮಾಡಿಕೊಡುವ ಹೊಣೆಯೂ ನಿಮ್ಮ ಮೇಲಿದೆ..ಎಂದು ತುಮಕೂರು ಪೊಲೀಸರಿಗೇನೆ ಅವರ  ಜವಾಬ್ದಾರಿ ನೆನಪಿಸಿಕೊಡಬೇಕಾದ ಸ್ಥಿತಿ ಎದುರಾಗಿದೆ.

ಹೌದು..ಹೀಗೆ ಹೇಳೊಕ್ಕೆ ಕಾರಣವಿದೆ..ತುಮಕೂರು ನಗರದಲ್ಲಿ ಇತ್ತೀಚೆಗೆ ಹಣ ದೋಚುವ ಹಾಗೂ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿಬಿಟ್ಟಿದೆ.ಎಷ್ಟರ ಮಟ್ಟಿಗೆ ಎಂದ್ರೆ ಜನ ಮನೆಯಿಂದ ಆಭರಣ ಹಾಕ್ಕೊಂಡು ಅಡ್ಡಾಡದಷ್ಟು.ದುರಂತ ಎಂದ್ರೆ, ಹಣ ದೋಚುವ ಹಾಗೂ ಸರಗಳ್ಳತನ ನಡೆಸುವ ಗ್ಯಾಂಗ್ ಗಳನ್ನು ಹಿಡಿಯುವಲ್ಲಿ ತುಮಕೂರು ನಗರ ವಿಭಾಗದ ಪೊಲೀಸರು ವಿಫಲರಾಗಿದ್ದಾರೆ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಇದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.

ಕಳೆದ ಡಿಸೆಂಬರ್ ಕೊನೆಯ ವಾರವಂತೂ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಮಂಡಿಪೇಟೆಯಲ್ಲಿ ಹಣ ದೋಚುವ ಪ್ರಕರಣಗಳು ಮೇಲಿಂದ ಮೇಲೆ ನಡೆದವು. ಬೆಳ್ಳಂಬೆಳಗ್ಗೆಯೇ ನಡು ರಸ್ತೆಯಲ್ಲಿಯೇ ಬ್ಯಾಗ್ ಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಪ್ರಕರಣಗಳು ನಡೆದವು. ಮಂಡಿಪೇಟೆ ಯಲ್ಲಿ ಅಷ್ಟೇ ಅಲ್ಲದೇ ಎಂ.ಜಿ.ರಸ್ತೆ ಹಾಗೂ ಬಾರ್ ಲೈನ್ ರಸ್ತೆಗಳಲ್ಲಿಯೂ ಇಂತಹ ಘಟನೆಗಳು ಮರುಕಳುಹಿಸಿದವು. ಇದರಿಂದ ಸೇಲ್ಸ್ ಮನ್ಸ್ ಹಾಗೂ ಸಾರ್ವಜನಿಕರು ಹಣ ಇಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮಂಡಿಪೇಟೆಯಲ್ಲಿ ವರ್ತಕರು ವ್ಯಾಪಾರ ಮಾಡದಂತಹ ಸ್ಥಿತಿಗೆ ತಲುಪಿದ್ದಾರೆ. ಯಾವಾಗ ..ಯಾರ.. ಹಣವನ್ನಾದರೂ ದೋಚಬಹುದು ಎಂಬ ಆತಂಕದಲ್ಲಿದ್ದಾರೆ. ಇನ್ನೂ ವಿತರಕರ ಬಳಿ ಕೆಲಸ ಮಾಡುವ ಸೇಲ್ಸ್ ಮನ್ಸ್ ಅಂತೂ ವರ್ತಕರ ಬಳಿ ಹೋಗಿ ಹಣ ತೆಗೆದುಕೊಳ್ಳಲು  ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪೊಲೀಸರಿಗೆ ಸಾಕಷ್ಟು ದೂರುಗಳನ್ನೂ ನೀಡಲಾಗಿದೆ. ಆದರೂ ಇದುವರೆವಿಗೂ ಹಣ ದೋಚಿದ ಪ್ರಕರಣದಲ್ಲಿ ಒಬ್ಬನೇ ಒಬ್ಬ ಆರೋಪಿಯನ್ನೂ ಬಂಧಿಸಿಲ್ಲ. ಇದು ವರ್ತಕರ ಆತಂಕಕ್ಕೆ ಕಾರಣವಾಗಿದೆ.

ಪೊಲೀಸರಿಗೆ ಹಣ ದೋಚಿರುವ ಬಗ್ಗೆ ಮಾಹಿತಿ ಹಾಗೂ ದೂರುಗಳನ್ನೂ ನೀಡಲಾಗಿದೆ. ಮಂಡಿಪೇಟೆ ಹಾಗೂ ಎಂ.ಜಿ.ರಸ್ತೆ ಗಳಿಗೆ ಸುತ್ತಮುತ್ತಲು ಗ್ರಾಮೀಣ ಪ್ರದೇಶಗಳಿಂದ ವ್ಯಾಪಾರ ವಹಿವಾಟು ನಡೆಸಲು ಸಾರ್ವಜನಿಕರು ಬರದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಸೇಲ್ಸ್ ಮನ್ಸ್ ಗಳೂ ಕೂಡ ಹಣ ವಸೂಲಿಗೆ ತೆರಳದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಶಾಸಕರ ಗಮನಕ್ಕೂ ಕೂಡ ತರಲಾಗಿದೆ ಎನ್ನುತ್ತಾರೆ ವರ್ತಕ ನಂದೀಶ್.

ತುಮಕೂರು ನಗರ ಉಪ ವಿಭಾಗದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿ ಹಾಗೂ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಳೆದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಸರಗಳ್ಳತನ ಪ್ರಕರಣಗಳು ನಡೆದವು. ಎಲ್ಲೆಂದರಲ್ಲಿ ಸರಗಳ್ಳರು ಮಹಿಳೆಯರ ಕತ್ತುಗಳಲ್ಲಿನ ಸರಗಳನ್ನು ಕಿತ್ತು ಪರಾರಿಯಾಗಿದ್ದರು. ಈಗಲೂ, ಅಲ್ಲಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಪೊಲೀಸ್ ಠಾಣೆಗಳಲ್ಲಿಯೂ ಪ್ರಕರಣಗಳು ದಾಖಲಾಗಿವೆ. ಆದರೂ ಪೊಲೀಸರು ಮಾತ್ರ ಮೌನವಾಗಿದ್ದಾರೆ.

ಎರಡು ತಿಂಗಳು ಕಳೆದರೂ ಇದುವರೆವಿಗೂ ಸರಗಳ್ಳತನ ನಡೆಸಿದ ಆರೋಪಿಗಳನ್ನು ಬಂಧಿಸುವಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಇದರಿಂದ ಮಹಿಳೆಯರು ಬೆಳ್ಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ವಾಯುವಿಹಾರಕ್ಕೂ ತೆರಳದಂತಹ ಸ್ಥಿತಿ ನಿರ್ಮಾಣವಾಗಿದೆ.

ಹಣದೋಚುವ ಹಾಗೂ ಸರಗಳ್ಳತನ ನಡೆಸುವ ತಂಡಗಳು ತುಮಕೂರು ನಗರದಲ್ಲಿ ಸಕ್ರೀಯವಾಗಿವೆ. ಆದರೆ ಪೊಲೀಸರು ಮಾತ್ರ ಇಂತಹ ಪ್ರಕರಣಗಳನ್ನು ಭೇದಿಸುವಲ್ಲಿ ಮಾತ್ರ ವಿಫಲರಾಗಿದ್ದಾರೆ. ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಹಣ ತೆಗೆದುಕೊಂಡು ಮನೆಯಿಂದ ಹೊರಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆಲ್ಲಾ ಪೊಲೀಸರ ನಿರ್ಲಕ್ಷ್ಯವೇ ಕಾರಣವಾಗಿದೆ ಎನ್ನುತ್ತಾರೆ ಮಹಿಳಾ ಸಂಘಟನೆಯ ಮುಖಂಡೆ ಮಂಜುಳಮ್ಮ. ಪೊಲೀಸ್ ಇಲಾಖೆಯಲ್ಲಿ ಹೊಸ, ಹೊಸ ತಂತ್ರಜ್ಜಾನಗಳನ್ನು ಬಳಸಲಾಗುತ್ತಿದೆ. ಆದರೂ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂತಹ ಪ್ರಕರಣಗಳನ್ನು ಪತ್ತೆ ಮಾಡದಿದ್ದರೆ ಮುದೊಂದು ದಿನ ಸಾರ್ವಜನಿಕರು ಬೀದಿಗಿಳಿದದೂ ಆಶ್ವರ್ಯಪಡಬೇಕಿಲ್ಲ. 

Spread the love
Leave A Reply

Your email address will not be published.

Flash News