ಮುಖ್ಯಮಂತ್ರಿಗಳೇ ಇಲ್ನೋಡಿ ನಿಮ್ ಜಿಲ್ಲೆ ಪರಿಸ್ಥಿತಿ.. ಹೀಗಿರುವಾಗ ಅಕ್ರಮವನ್ನೆಲ್ಲಾ ಸಕ್ರಮ ಮಾಡ್ತೀನಿ ಅಂತೀರಲ್ಲಾ..ಇದು ನ್ಯಾಯನಾ..?

0

ಶಿವಮೊಗ್ಗ:ಇದು ನಿಜಕ್ಕೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಗೌರವ ತರುವ ವಿಚಾರ ಅಲ್ಲವೇ ಅಲ್ಲ..ಅವರ ಹೇಳಿಕೆಯೂ ಅವರ ಘನತೆಗೆ ತಕ್ಕದಾದುದಲ್ಲ..ಅಕ್ರಮ ಗಣಿಯಿಂದ ಅಗುತ್ತಿರುವ ಅಪಾರ ನಷ್ಟದ ಹೊರತಾಗ್ಯೂ ಮಾಫಿಯಾ ಪರವಾಗಿ  ನಿಲ್ಲುವಂಥ ಹೇಳಿಕೆ ಕೊಡುತ್ತಾರೆಂದ್ರೆ ಅದಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ.

ಅಕ್ರಮ ಗಣಿಯನ್ನು ಸಕ್ರಮಗೊಳಿಸುವ ಮಾತನ್ನಾಡುವ ಮೂಲಕ ಸಾರ್ವಜನಿಕವಾಗಿ ಕೆಂಗಣ್ಣಿಗೆ ಗುರಿಯಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ತಮ್ಮ ಜಿಲ್ಲೆಯಲ್ಲೇ  ಗಣಿ ಮಾಫಿಯಾಗಳು ಸರ್ಕಾರದ ಬೊಕ್ಕಸಕ್ಕೆ ಮಾಡ್ತಿರೋ ಮಹಾದೋಖಾದ ಕಲ್ಪನೆಯಾಗಲಿ,ಅಂದಾಜಾಗಲಿ ಇಲ್ಲ ಅನ್ಸುತ್ತೆ..ಜಿಲ್ಲೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಮೂಲಗಳೇ ಹೇಳುವಂತೆ ಕ್ವಾರಿ-ಕ್ರಷರ್ ಗಳು ಸರ್ಕಾರಕ್ಕೆ ಪಾವತಿಸದೆ ವಂಚಿಸಿರುವ ರಾಜಧನದ ಮೊತ್ತವೇ 137.18 ಕೋಟಿ ಎಂದ್ರೆ ನಂಬ್ತೀರಾ..

ಇದು ಕ್ವಾರಿ ಮಾಲೀಕರ ದುಂಡಾವರ್ತನೆ ಎನ್ನಬೇಕೋ,ಅಥವಾ ರಾಜಕೀಯದ ಪ್ರಭಾವ ಎನ್ನಬೇಕೋ..ಅಥವಾ ಗಣಿ-ಭೂ ವಿಜ್ಞಾನ ಇಲಾಖೆಯ ದಿವ್ಯ ಮೌನ ಎನ್ನಬೇಕೋ ಗೊತ್ತಾಗ್ತಿಲ್ಲ..ಶಿವಮೊಗ್ಗ ಜಿಲ್ಲೆಯಲ್ಲಿರುವ ಕ್ವಾರಿ-ಕ್ರಷರ್ ಗಳು ಸರ್ಕಾರದ ಬೊಕ್ಕಸಕ್ಕೆ ನೀಯತ್ತಾಗಿ ತೀರಿಸ್ಬೇಕಿರುವ ಪಾವತಿಸದೆ ನೂರಾರು ಕೋಟಿಗಳನ್ನು ವಂಚಿಸಿವೆ.ದಂಧೆಯಿಂದ ನೂರಾರು ಕೋಟಿ ಲಾಭ ಮಾಡಿಕೊಳ್ಳುವ ಗಣಿ ಕಂಪೆನಿಗಳು ಸರ್ಕಾರಕ್ಕೆ ಸಂದಾಯ ಮಾಡ್ಬೇಕಿರುವ ರಾಜಧನದ ವಿಷಯ ಬಂದ್ರೆ ತಮ್ಮ ಮನಿ,ಮಸಲ್ ಹಾಗೂ ಪೊಲಿಟಿಕಲ್ ಪ್ರೆಷರ್ ಬಳಸಿ ವಂಚನೆ ಮಾಡ್ತಿರುವುದು ದುರಂತ ಅಷ್ಟೇ ಅಲ್ಲ,ನಾಚಿಕೆಗೇಡು ಕೂಡ.

ಕನ್ನಡ ಫ್ಲಾಶ್ ನ್ಯೂಸ್ ಗೆ  ಜಿಲ್ಲಾ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಇಲಾಖೆಗೆ, 55 ಕಲ್ಲು ಕ್ವಾರಿಗಳಿಂದ ಪಾವತಿಯಾಗಬೇಕಿದ್ದ ದಂಡವೇ 131.77 ಕೋಟಿ ಅಂತೆ. 2018-19ನೇ ಸಾಲಿನ ರಾಜಧನ ಬಾಕಿ 5.41 ಕೋಟಿ ರೂ.ಇದೆಲ್ಲಾ ಸೇರಿ ಒಟ್ಟು 137.18 ಕೋಟಿ ರೂ. ಬಾಕಿ ನೀಡಬೇಕಿದೆ.ಇನ್ನು 2019 ಹಾಗೂ 2020ರ ಸಾಲಿನಲ್ಲಿ ಬರಬೇಕಿರುವ ಬಾಕಿ ಮೊತ್ತ ಎಷ್ಟಿರಬಹುದೆನ್ನುವುದನ್ನು ನೀವೇ ಊಹಿಸಿ.

ಸರ್ಕಾರಕ್ಕೆ ಆದಾಯ ತಂದುಕೊಡುವ ಇಲಾಖೆಗಳಲ್ಲಿ ಗಣಿ ಮತ್ತು ಭೂ ವಿಜ್ಞಾನವೂ ಒಂದು.ಯಾವುದೇ ಕ್ರಷರ್ ಅಥವಾ ಕ್ವಾರಿಗಳೇ ಇರಲಿ,ಅವು ತಮ್ಮ ಆದಾಯದಲ್ಲಿ ಇಂತಿಷ್ಟು ಪ್ರಮಾಣವನ್ನು ರಾಜಧಾನದ ರೂಪದಲ್ಲಿ ಸಂದಾಯ ಮಾಡಬೇಕೆನ್ನುವುದು ನಿಯಮ

.ಆದ್ರೆ ದುರಂತ ಎಂದ್ರೆ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅದೆಷ್ಟೋ ಕ್ವಾರಿ-ಕ್ರಷರ್ ಗಳು ಸಾವಿರಾರು ಕೋಟಿ ರಾಜಧನವನ್ನೇ ಪಾವತಿಸಿಲ್ಲ..ಅಕ್ರಮ ಕ್ವಾರಿಗಳಷ್ಟೇ ಅಲ್ಲ,ಸಕ್ರಮವಾಗಿರುವ ಕ್ವಾರಿಗಳು ಕೂಡ ರಾಜಧನ ಪಾವತಿಸಿಲ್ಲ.ಸ್ಥಳೀಯ ಆಡಳಿತಗಳು ಎಷ್ಟೇ ನೋಟೀಸ್ ಕೊಟ್ಟರೂ ಜಪ್ಪಯ್ಯ ಎನ್ನದ ಕಂಪೆನಿಗಳೇ ಹೆಚ್ಚು.ಇದಕ್ಕೆ ಕಾರಣ ಅಕ್ರಮ ಗಣಿಗಾರಿಕೆ ವಿರುದ್ದ ಧ್ವನಿ ಎತ್ತುವ ಬಹುತೇಕ ರಾಜಕಾರಣಿಗಳೇ ಈ ಅಕ್ರಮದಲ್ಲಿ ನೇರವಾಗಿಯೋ, ಪರೋಕ್ಷವಾಗಿಯೋ ಭಾಗಿಯಾಗಿರುವುದು.ಇದು ವಿಚಿತ್ರ ಎನಿಸಿದ್ರೂ ಸತ್ಯ.

ಶಿವಮೊಗ್ಗ ಜಿಲ್ಲೆಯ ಕಥೆಯೂ ಒಂದ್ರೀತಿ ಹೀಗೆಯೇ ಇದೆ..ರಾಜಕಾರಣಿಗಳ ಕೃಪಕಟಾಕ್ಷದಿಂದ ನಡೆಯುತ್ತಿರುವ ಕ್ರಷರ್-ಕ್ವಾರಿಗಳೇ ಹೆಚ್ಚು.ಮೇಲ್ನೋಟಕ್ಕೆ ಸಾಚಾಗಳಂತೆ ಮಾತನಾಡುವ ರಾಜಕಾರಣಿಗಳೇ ದುರಂತ ನಡೆದ ಮೇಲೆ ಅಕ್ರಮವನ್ನು ಮುಚ್ಚಾಕಿಕೊಳ್ಳಲು ಏನೇನೆಲ್ಲಾ ಕಾನೂನು ವ್ಯವಸ್ಥೆ ಮಾಡಿಕೊಳ್ಳಬೇಕೋ ಅದರ ಕಡೆ ಗಮನ ಹರಿಸಿದ್ದಾರೆನ್ನುವುದು ಗುಟ್ಟಾಗೇನು ಉಳಿದಿಲ್ಲ.

ಇದೆಲ್ಲಾ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲವೆಂದೇನಲ್ಲ.ಅವರ ಹಿಂಬಾಕರಲ್ಲೂ ಒಂದಷ್ಟು ಜನ ಕ್ವಾರಿ-ಕ್ರಷರ್ ಗಳಿಗೆ ಪ್ರತ್ಯಕ್ಷ ವಾಗಿಯೋ,.ಪರೋಕ್ಷವಾಗಿಯೋ ಶ್ರೀರಕ್ಷೆಯಾಗಿದ್ದಾರೆನ್ನುವ ಮಾತುಗಳಿವೆ.ಘಟನೆ ನಡೆದ ಮೇಲೆ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಬೇಕೆಂದುಕೊಂಡಿದ್ದ ಯಡಿಯೂರಪ್ಪ ಘಟನಾಸ್ಥಳದಲ್ಲಿ ಗಣಿಗಾರಿಕೆ ಬಗ್ಗೆ ಮೃದುಧೋರಣೆ ತಾಳೊಕ್ಕೆ ಸ್ಥಳೀಯವಾಗಿರುವ ಕೆಲವು ಆತ್ಮೀಯರು-ಆಪ್ತರ ಮನವಿ-ಬೇಡಿಕೆಯೂ ಕಾರಣವಾಗಿತ್ತೆನ್ನುವ ಮಾತಿದೆ..ಹಾಗಾಗಿನೇ ಅಕ್ರಮ-ಸಕ್ರಮದ ಬಗ್ಗೆ ಮಾತಾಡಿ ತೆರಳಿದ್ರು.

ದಂಡ ಹಾಗೂ ರಾಜಧನವನ್ನು ನೂರಾರು ಕೋಟಿಗಳಲ್ಲಿ ಬಾಕಿ ಉಳಿಸಿಕೊಂಡಿರುವ ಕ್ವಾರಿ-ಕ್ರಷರ್ ಮಾಲೀಕರ ಹೆಡೆ ಮುರಿ ಕಟ್ಟೊ ಕೆಲಸ ಮಾಡಬೇಕಿದ್ದ ಜಿಲ್ಲಾ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ತಮ್ಮಿಂದ ಅದು ಅಸಾಧ್ಯ ಎಂದು ಕೈ ಚೆಲ್ಲಿ ಕೂತಿದೆ.ಆದ್ರೆ ಕೆಲವು ಮೂಲಗಳ ಪ್ರಕಾರ ಇಲಾಖೆಯ ಕೆಲ ಭ್ರಷ್ಟರಿಗೆ ನಿಯತವಾಗಿ ಗಣಿಕಪ್ಪ ದೊರೆಯುತ್ತಿದೆಯಂತೆ.ಮಂತ್ಲಿ ಫಿಕ್ಸ್ ಮಾಡ್ಕೊಂಡು ಅಕ್ರಮವನ್ನು ವ್ಯವಸ್ಥಿತವಾಗಿ ನಡೆಸುತ್ತಾ ಬಂದಿದ್ದಾರೆನ್ನುವ ಮಾತುಗಳಿವೆ.ಆಗೊಲ್ಲ ಎಂಬ ಜಿಲ್ಲಾ ಗಣಿ ಇಲಾಖೆ ಅಧಿಕಾರಿಗಳದು ಸಬೂಬು-ನೆವ ಅಷ್ಟೇ ಎನ್ನೋದು ಇದರಿಂದ ಸಾಬೀತಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕ್ವಾರಿ-ಕ್ರಷರ್  ಮಾಲೀಕರ ದರ್ಪ-ದರ್ಬಾರ್ ಕೇವಲ ಪರಿಸರಕ್ಕಷ್ಟೇ ಹಾನಿ ಮಾಡುತ್ತಿಲ್ಲ..ಸರ್ಕಾರದ ಬೊಕ್ಕಸಕ್ಕೂ ದೊಡ್ಡ ನಷ್ಟದ ಪೆಟ್ಟು ನೀಡುತ್ತಿದೆ.ಪರಿಸ್ತಿತಿ ಹೀಗಿರುವಾಗ ಅಕ್ರಮವನ್ನು ಸಕ್ರಮ ಮಾಡುತ್ತೇವೆಂದು ಹೇಳ್ತಾರೆ ಈ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಎಂದ್ರೆ ಇದಕ್ಕಿಂತ ದೊಡ್ಡ ನಾಚಿಕೆಗೇಡು..ಹೊಣೆಗೇಡಿತನ ಮತ್ತೊಂದಿದೆಯೇ..?ತಮ್ಮ ಹೇಳಿಕೆ ಬಗ್ಗೆ ಈ  ನಾಡಿನ ದೊರೆಯೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಅಷ್ಟೆ.ಏಕೆಂದ್ರೆ ಅವರ ಹೇಳಿಕೆಯೇ ಈಗ ಅವರಿಗೆ ಮುಳುವಾಗುವ ರೀತಿಯಲ್ಲಿ ಕಾಣಿಸ್ತಿದೆ.

Spread the love
Leave A Reply

Your email address will not be published.

Flash News