ಏರೋ ಇಂಡಿಯಾಕ್ಕೆ ಕೌಂಟ್ ಡೌನ್ :ನಾಳೆಯಿಂದ ಫೆಬ್ರವರಿ 5ರವರೆಗೂ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ..

0

ಬೆಂಗಳೂರು:  ಏರೋ ಇಂಡಿಯಾದ 13 ನೇ ಆವೃತ್ತಿಯ ಅಂತರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ.  ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 3 ರಿಂದ 5 ರ ವರೆಗೂ ಏರ್ ಶೋ ನಡೆಯಲಿದೆ. ಇಡೀ ಮಾನವ ಸಂಕುಲವನ್ನೇ ಬೆನ್ನು ಬಿಡದೇ ಕಾಡುತ್ತಿರುವ ಕೊರೊನಾ ಸಾಂಕ್ರಾಮಿಕ ರೋಗದ ನಡುವೆಯೂ ಏರ್ ಶೋ ಪ್ರದರ್ಶನಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.

ಕಳೆದ ವರ್ಷ ಪ್ರದರ್ಶನದ ತಾಲೀಮು ವೇಳೆ ನಡೆದ “ಸೂರ್ಯ ಕಿರಣ್” ವಿಮಾನ ದುರಂತ ಹಾಗೂ ವಾಹನ ನಿಲುಗಡೆಯ ಸ್ಥಳದಲ್ಲಿ ಸಂಭವಿಸಿದ್ದ ಅಗ್ನಿ ದುರಂತದ ಭೀಕರ ದೃಶ್ಯ ಇನ್ನೂ ಮಾಸಿಲ್ಲ.ಕಳೆದ ಬಾರಿ ನಡೆದ ಅಗ್ನಿ ಅವಘಡದಿಂದ ಎಚ್ಚೆತ್ತುಕೊಂಡಿರುವ ಭಾರತೀಯ ರಕ್ಷಣಾಲಯ ಈ ಸಲ ಭಾರೀ ಭದ್ರತೆಯನ್ನು ಮಾಡಿಕೊಂಡಿದ್ದು. ಏರ್ ಶೋ ನಡೆಯುವ ಸ್ಥಳ ಹಾಗೂ ಅಕ್ಕ ಪಕ್ಕದ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ಕಾಯ್ದುಕೊಳ್ಳಲಾಗಿದೆ.

ವೈಮಾನಿಕ ಪ್ರದರ್ಶನ ನಡೆಯುವ ಆವರಣ ಮಾತ್ರವಲ್ಲದೇ ಅದರ ಸುತ್ತಮುತ್ತಲಿನ 45 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹದ್ದಿನ ಕಣ್ಣಿಡಲಾಗಿದ್ದು, ಯಾವುದೇ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರದಿಂದ ಹೊಸ  ಕಾರ್ಯತಂತ್ರ  ಮಾಡಿಕೊಂಡಿದೆ.ಭೌಗೋಳಿಕ ಮಾಹಿತಿ ವ್ಯವಸ್ಥೆಯ ನಕ್ಷೆಯನ್ನು ಸಿದ್ಧಪಡಿಸಿ, ಭದ್ರತೆಯನ್ನು ರಾಜ್ಯ ವಿಪತ್ತು ನಿರ್ವಾಹಣಾ ಪ್ರಾಧಿಕಾರ ಪರಿಶೀಲಿಸಲಿದ್ದು, 45 ಚದರ ಕಿ.ಮೀ. ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ.

ಅಕಸ್ಮಾತ್ ಏನಾದರೂ ಅನಾಹುತಗಳು ಜರುಗಿದ್ರೆ ತಕ್ಷಣ ಕಾರ್ಯ ಪ್ರವೃತ್ತರಾಗಿ ಘಟನಾ ಸ್ಥಳಕ್ಕೆ ತಲುಪಿ ಹಾನಿ ಪ್ರಮಾಣ ಕಡಿಮೆ ಮಾಡಲು 45 ಚದರ ಕಿ.ಮೀ ವ್ಯಾಪ್ತಿಯನ್ನು ಗ್ರೀಡ್, ಸಬ್ ಗ್ರೀಡ್, ಮೈಕ್ರೋಗ್ರೀಡ್ ಗಳಾಗಿ ವಿಂಗಡಣೆ ಮಾಡಿಕೊಳ್ಳಲಾಗುತ್ತದೆ.

ಸಹಾಯಕ ಕಮಾಂಡಿಂಗ್ ಅಧಿಕಾರಿಗಳನ್ನಾಗಿ ಸಂಚಾರಿ ಪೊಲೀಸ್, ಬಿ.ಬಿ.ಎಮ್.ಪಿ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಅಗ್ನಿಶಾಮಕದಳ, ಪೊಲೀಸ್ ಹಾಗೂ ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ನೇಮಕವಾಗಿದೆ. ಕೊರೊನಾ ನಡುವೆಯೂ ಈ ಬಾರಿಯ ‘ಏರ್ ಶೋ’ ಪ್ರದರ್ಶನ ವಿಜೃಂಭಿಸುತ್ತಾ? ಅಥವಾ ಕಳೆದ ಬಾರಿ ಸಂಭವಿಸಿದ್ದ ಭೀಕರ ಅವಘಡದ ಭೀತಿಯಿಂದ ಈ ಸಲದ ವೈಮಾನಿಕ ಪ್ರದರ್ಶನಕ್ಕೆ ಮುಸುಕು ಕವಿಯುತ್ತಾ? ಇಲ್ಲಾ  ‘ಏರ್ ಶೋ’ ನ  ದೃಶ್ಯ ವೈಭವವೆಲ್ಲವೂ  ಮತ್ತೊಮ್ಮೆ ಮರುಕಳಿಸಿ ಇತಿಹಾಸದ ಪುಟ ಸೇರುತ್ತಾ? ಎಂಬುದನ್ನು ಕಾದುನೋಡಬೇಕಿದೆ.

Spread the love
Leave A Reply

Your email address will not be published.

Flash News