`ತುರಹಳ್ಳಿ ಟ್ರೀ ಪಾರ್ಕ್’ನಿರ್ಮಾಣಕ್ಕೇಕೆ ತರಾತುರಿ..ಇದ್ರ ಹಿಂದಿರೋದು ಬಹುದೊಡ್ಡ ಭೂ ಕಬಳಿಕೆ ಪ್ಲ್ಯಾನಾ..?!.

0

ಬೆಂಗಳೂರು: ಇದು ದುರಂತ..ದೌರ್ಭಾಗ್ಯಪೂರ್ಣ..ವಿಪರ್ಯಾಸ…ಖಂಡನೀಯ…ಹೇಗೆಲ್ಲಾ ಖಂಡಾತುಂಡವಾಗಿ ಖಂಡಿಸಿದ್ರೂ ಅದು ಕಡಿಮೆಯೇ..?ಏಕೆಂದ್ರೆ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಂತದ್ದೊಂದು ವಿನಾಶಕಾರಿ ಪ್ರವೃತ್ತಿಗೆ ಮುಂದಾಗಿದೆ..ಇರೋ ಬರೋ ನಗರ ಪ್ರದೇಶವನ್ನೆಲ್ಲಾ ನುಂಗಿ ನೀರು ಕುಡಿದ ಮೇಲೆ, ಇದೀಗ ಸರ್ಕಾರದ ಕಣ್ಣು ಅರಣ್ಯದ ಮೇಲೆ ಬಿದ್ದಿರುವುದು ನಿಜಕ್ಕೂ ದುರಾದೃಷ್ಟಕರ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆಯೇ, ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಏಕೈಕ ಅರಣ್ಯ ಪ್ರದೇಶ ತುರಹಳ್ಳಿ ಅರಣ್ಯದ ನಾಶಕ್ಕೆ ಮಾಡಿಕೊಂಡಿರುವ ಮತ್ತೊಂದು ಪ್ಲ್ಯಾನ್.

ಒಂದು ಕಾಲಕ್ಕೆ ಬಿ.ಎಂ.ಕಾವಲ್, ತುರಹಳ್ಳಿ, ಬನ್ನೇರುಘಟ್ಟ ಅರಣ್ಯ ಪ್ರದೇಶಗಳು ಬೆಂಗಳೂರಿಗೆ ಕಿರೀಟ ಪ್ರಾಯವಾಗಿದ್ದವು. ಬೆಂಗಳೂರಿನ ವಾತಾವರಣ ಹಸಿರಿನಿಂದ ನಳನಳಿಸಲು ಕಾರಣವಾಗಿದ್ದವು. ಆದರೆ ರಾಜಕಾರಣಿಗಳ ಭೂ ದಾಹ ಹಾಗೂ ಸರ್ಕಾರಗಳ ಲಾಭಬಡುಕತನ ಹಾಗೂ ಅವೈಜ್ಞಾನಿಕ ಯೋಜನೆಗಳಿಂದ ನೂರಾರು ಎಕರೆಯಲ್ಲಿ ಮೈಚಾಚಿಕೊಂಡಿದ್ದ ಅದೇ ಅರಣ್ಯ ಇವತ್ತು ಕೇವಲ ಒಂದಷ್ಟು ನೂರು ಎಕರೆಗಳಿಗೆ ಸವರಿ ಹೋಗಿರುವುದು ದುರಂತ ಎನ್ನುತ್ತಾರೆ ಪರಿಸರವಾದಿ ಜೋಸೆಫ್ ಹೂವರ್.

ಬಿ.ಎಂ.ಕಾವಲ್, ಬನ್ನೇರುಘಟ್ಟ ಅರಣ್ಯ ಪ್ರದೇಶ ಈಗಾಗಲೇ ಮಾನವನ ಹಸ್ತಕ್ಷೇಪದಿಂದಾಗಿ ಬಹುತೇಕ ನಶಿಸಿಹೋಗಿವೆ. ಅಳಿದುಳಿದಿರುವ ಅರಣ್ಯದಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ, ಇದರ ಮಾಹಿತಿಯೇ ಇಲ್ಲದಂತೆ ಕೂತಿದೆ ಸರ್ಕಾರ. ಇನ್ನು ಉಳಿದಿರುವುದರಲ್ಲೇ ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ ಅರಣ್ಯವೆಂದರೆ ಅದು ತುರಹಳ್ಳಿ, ಬಿ.ಎಂ.ಕಾವಲ್ ಅರಣ್ಯಕ್ಕೆ ಹೊಂದಿಕೊಂಡಂತೆ ಬನಶಂಕರಿ ೬ನೇ ಹಂತದ ವ್ಯಾಪ್ತಿಯಲ್ಲಿ ಈಗಾಗಲೇ ೪೦ ಎಕರೆ ವಿಸ್ತೀರ್ಣದ ಟ್ರೀ ಪಾರ್ಕ್ ನಿರ್ಮಾಣವಾಗಿದೆ.

ಪರಿಸ್ಥಿತಿ ಹೀಗಿರುವಾಗ ತುರಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಮತ್ತೊಂದು ಟ್ರೀ ಪಾರ್ಕ್‌ನ ಅವಶ್ಯಕತೆ ಇದೆಯೇ? ಎನ್ನುವುದು ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಕರ ವಾದ. ಶೆಡ್ಯೂಲ್-೧, ೨, ೩ಗೆ ಸೇರಿದ ವನ್ಯಜೀವಿಗಳ ಆವಾಸಸ್ಥಾನವಾಗಿರುವ ತುರಹಳ್ಳಿ ಅರಣ್ಯದಲ್ಲಿ ನವಿಲು ಸಂತತಿ ಹೆಚ್ಚಾಗಿರುವುದರಿಂದ ಅದನ್ನು ಸಂರಕ್ಷಿತ ನವಿಲು ಧಾಮವನ್ನಾಗಿ ಘೋಷಿಸಬೇಕೆಂಬ ಪ್ರಸ್ತಾವನೆಯನ್ನು ವನ್ಯಜೀವಿ ಸಂರಕ್ಷಕ ಕುಮಾರ್ ಈ ಹಿಂದೆ ಸರ್ಕಾರ ಮತ್ತು ಅರಣ್ಯ ಇಲಾಖೆ ಮುಂದಿಟ್ಟಿದ್ದರು.

ಅದಕ್ಕೆ ಹಸಿರು ನಿಶಾನೆ ತೋರುವ ನಿಟ್ಟಿನಲ್ಲೂ ಬೆಳವಣಿಗೆಗಳಾಗಿದ್ದವು. ಆದರೆ ಈಗ ಇದ್ದಕ್ಕಿದ್ದಂತೆ ಅರಣ್ಯ ಇಲಾಖೆಯೇ ಅವೈಜ್ಞಾನಿಕ ಟ್ರೀ ಪಾರ್ಕ್ ನಿರ್ಮಿಸುವ ಆಲೋಚನೆಗೆ ಬಂದಿರುವಂತಹದ್ದು ಸಾಕಷ್ಟು ಅನುಮಾನ ಮೂಡಿಸುತ್ತದೆ ಎನ್ನುತ್ತಾರೆ ಗ್ರೀನ್ ಆರ್ಮಿ ಫೋರ್ಸ್ ನ ಸಂಸ್ಥಾಪಕ ಕಿರಣ್ ಕುಮಾರ್.

ಬೆಂಗಳೂರಿನ ತುರಹಳ್ಳಿ ಅರಣ್ಯ ಪ್ರದೇಶವನ್ನು ಸಂರಕ್ಷಿತ ನವಿಲುಧಾಮವನ್ನಾಗಿ ಘೋಷಿಸಬೇಕೆಂದು ವನ್ಯಜೀವಿ ಸ್ವಯಂಸೇವಕ ಕುಮಾರ್ ಅರಣ್ಯ ಇಲಾಖೆಗೆ ಸಲ್ಲಿಸಿದ್ದ ಪ್ರಸ್ತಾವನೆಯ ಪ್ರತಿ.
ಬೆಂಗಳೂರಿನ ತುರಹಳ್ಳಿ ಅರಣ್ಯ ಪ್ರದೇಶವನ್ನು ಸಂರಕ್ಷಿತ ನವಿಲು ಧಾಮವನ್ನಾಗಿ ಘೋಷಿಸಬೇಕೆಂದು ವನ್ಯಜೀವಿ ಸ್ವಯಂಸೇವಕ ಕುಮಾರ್ ಅರಣ್ಯ ಇಲಾಖೆಗೆ ಸಲ್ಲಿಸಿದ್ದ ಪ್ರಸ್ತಾವನೆಯ ಪ್ರತಿ.

ಕೆಲವು ಮೂಲಗಳ ಪ್ರಕಾರ ತುರಹಳ್ಳಿ ಅರಣ್ಯ ಪ್ರದೇಶ ಬೆಂಗಳೂರು ದಕ್ಷಿಣ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುತ್ತದೆ. ಹಲವು ರಾಜಕಾರಣಿಗಳು ರಿಯಲ್ ಎಸ್ಟೇಟ್ ಮಾಫಿಯಾಗಳು ಈಗಾಗಲೇ ತುರಹಳ್ಳಿ ಅರಣ್ಯವನ್ನು ನುಂಗಿ ನೀರು ಕುಡಿದಿವೆ. ಉಳಿದಿರುವ ಅಷ್ಟೋ ಇಷ್ಟೋ ಅರಣ್ಯವನ್ನು ರಕ್ಷಿಸಿ ಅಪಾರ ವನ್ಯ ಸಂಪತ್ತು ಹಾಗೂ ವನ್ಯಜೀವಿಗಳ ಬದುಕಿಗೆ ಅವಕಾಶ ಕಲ್ಪಿಸಿಕೊಡುವುದನ್ನು ಬಿಟ್ಟು ಅವುಗಳ ಬದುಕಿಗೇ ಕೊಡಲಿ ಇಡಲು ಹೊರಟಿರುವುದು ಯಾವ ನ್ಯಾಯ?

ಅಪಾರ ವನ್ಯ ಸಂಪತ್ತನ್ನು ರಕ್ಷಿಸಬೇಕಾದ ಹೊಣೆಗಾರಿಕೆ ಇರುವ ಅರಣ್ಯ ಇಲಾಖೆಯೇ ಟ್ರೀ ಪಾರ್ಕ್ ಯೋಜನೆಯ ಪ್ರಸ್ತಾಪವನ್ನು ಮಾಡುತ್ತದೆಯೆಂದರೆ, ಅದರ ಹಿಂದೆ ದೊಡ್ಡ ಮಾಫಿಯಾದ ಕುಮ್ಮಕ್ಕಿರುವುದು ಸ್ಪಷ್ಟ. ಅರಣ್ಯ ಇಲಾಖೆಯ ಪ್ರಸ್ತಾಪದ ಬಗ್ಗೆ ಈಗಾಗಲೇ ದೊಡ್ಡ ಆಕ್ರೋಶ ವ್ಯಕ್ತವಾಗಿದೆ.

ಅದು ಜನಾಂದೋಲನದ ಸ್ವರೂಪವನ್ನೂ ಪಡೆದಿದೆ. ಜೋಸೆಫ್ ಹೂವೆರ್, ಪರಿಸರವಾದಿ ಯಲ್ಲಪ್ಪರೆಡ್ಡಿ, ಚಿತ್ರನಟರಾದ ಸುರೇಶ್ ಹೆಬ್ಳೀಕರ್, ಅನಿರುದ್ಧ್, ಚೇತನ್, ಗೌರಿಶಂಕರ್, ಗ್ರೀನ್ ಆರ್ಮಿ ಫೋರ್ಸ್‌ನ ಕಿರಣ್‌ಕುಮಾರ್ ಅವರಂತಹವರು ಬೃಹತ್ ಹೋರಾಟಕ್ಕೆ ವೇದಿಕೆಯನ್ನು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ.

ಅವೈಜ್ಞಾನಿಕ ಮತ್ತು ಪರಿಸರ ವಿರೋಧಿಯಂತಹ ಟ್ರೀ ಪಾರ್ಕ್ ಯೋಜನೆಯ ಪ್ರಸ್ತಾಪದಿಂದ ತೀವ್ರ ಮುಖಭಂಗ ಅನುಭವಿಸುವ ಮುನ್ನ ಅರಣ್ಯ ಇಲಾಖೆ ಮತ್ತು ಸರ್ಕಾರ ತನ್ನ ನಿಲುವನ್ನು ವಾಪಸ್ ಪಡೆಯುವುದು ಎಲ್ಲಾ ರೀತಿಯಲ್ಲಿಯೂ ಸೂಕ್ತ.ಇಲ್ಲವಾದಲ್ಲಿ ಘನಘೋರ ದುರಂತವೊಂದಕ್ಕೆ ಮುನ್ನುಡಿ ಬರೆದಂತಾಗುತ್ತದೆ. 

Spread the love
Leave A Reply

Your email address will not be published.

Flash News