“ಆ” ಸ್ಟೋರಿಗಾಗಿ  ಟಿವಿ-9 ಕನ್ನಡದ  ವರದಿಗಾರ ಹೀಗೆಲ್ಲಾ ಮಾಡಿದ್ನಾ…? ಹ್ಯಾಟ್ಸಾಫ್ ಟಿವಿ-9 ಕನ್ನಡ…”16 ಕೋಟಿ ಇಂಜೆಕ್ಷನ್” ಸ್ಟೋರಿಗೆ  ನೆರವಿನ ಮಹಾಪೂರ ಎಷ್ಟು ಗೊತ್ತಾ..?

0

ಬೆಂಗಳೂರು:ಮಾದ್ಯಮ ಉದ್ದಿಮೆಯಾಗಿದೆ ಎನ್ನೋ ಅಪವಾದ ದ ನಡುವೆಯೂ ಸಾಮಾಜಿಕ ಕಳಕಳಿ-ನೈತಿಕ ಹೊಣೆ ಯನ್ನು ಅಷ್ಟೇ ಪ್ರಾಮಾಣಿಕವಾಗಿ ನಿಭಾಯಿ ಸುತ್ತಿದೆ ಎನ್ನುವುದು ಕೂಡ ಅಷ್ಟೇ ಸತ್ಯ.ಹಾಗಾಗಿನೇ ಇವತ್ತಿಗೂ ಜನ ಮಾದ್ಯಮಗಳ ಬಗ್ಗೆ ಸಕಾರಾತ್ಮಕವಾದ ದೃಷ್ಟಿಕೋನವನ್ನೇ ಹೊಂದಿದ್ದಾರೆ.

ಪೊಲೀಸ್, ಕೋರ್ಟ್ ಗಳ ಮೇಲಿಲ್ಲದಷ್ಟು ನಂಬಿಕೆ ಹಾಗೂ ವಿಶ್ವಾಸವನ್ನು ಮಾದ್ಯಮಗಳ ಬಗ್ಗೆ ಇಟ್ಟುಕೊಂಡಿದ್ದಾರೆ (ಕೆಲವೊಮ್ಮೆ ಮಾದ್ಯಮಗಳ ವರದಿಗಳೇ, ಸರಿಯಾಗಬಹುದಾದ ಎಷ್ಟೋ ಸಂಗತಿಗಳನ್ನು ಮತ್ತಷ್ಟು ಆದ್ವಾನಗೊಳಿಸಿ ಹಲವರ ಬದುಕುಗಳನ್ನು ಬೀದಿಗೆ ತಂದಿ ನಿಲ್ಲಿಸಿರುವಂತದ್ದು ಕೂಡ ಇದೆ.)

ಅದೇನೇ ಇರಲಿ,ಒಂದು ಮಾದ್ಯಮ ಇವತ್ತು ನಿರ್ವಹಿಸಿರುವ ಆ ಕಾರ್ಯ, ಮಾದ್ಯಮಗಳ ಬಗ್ಗೆ ಜನರ ನಂಬಿಕೆ ಮತ್ತಷ್ಟು ಸದೃಢಗೊಳ್ಳುವಂತೆ ಮಾಡಿರುವಂತದ್ದಂತೂ ಸತ್ಯ.ಆ ಒಂದು ಸಕಾರಾತ್ಮಕ ವಿಷಯವನ್ನು ಸಾರ್ವಜನಿಕಗೊಳಿಸಲೇಬೇಕಾದ ಬದ್ಧತೆಯನ್ನು ಎಲ್ಲಾ ಮಾದ್ಯಮಗಳ ಪರವಾಗಿ ಕನ್ನಡ ಫ್ಲಾಶ್ ನ್ಯೂಸ್ ಮಾಡುತ್ತಿದೆ ಎನ್ನುವುದೇ ಸಮಾಧಾನ.

“ಉತ್ತಮ ಸಮಾಜಕ್ಕಾಗಿ..ಶೀರ್ಷಿಕೆಯಲ್ಲಿ ಒಂದೂವರೆ ದಶಕಗಳ ಹಿಂದೆ ಜನರ ನಡುವೆ ಬಂದ ಟಿವಿ-9 ಕನ್ನಡ ಇವತ್ತಿಗೂ ಕನ್ನಡ ದೃಶ್ಯ ಮಾದ್ಯಮದಲ್ಲಿ ನಂಬರ್ 1 ನ್ಯೂಸ್ ಚಾನೆಲ್.ನಂಬರ್ 1 ಸ್ಥಾನವನ್ನು ದಶಕದವರೆಗೂ ಖಾಯಂಗೊಳಿಸಿಟ್ಟುಕೊಳ್ಳುವುದು ಸಾಮಾನ್ಯವಾದ ಸಂಗತಿಯೇನಲ್ಲ.ಅಂತದ್ದೊಂದು ಯಶಸ್ಸು ಸಾಧ್ಯವಾಗಿದೆ ಎನ್ನುವುದಾದ್ರೆ ಅದಕ್ಕೆ ಆ ಬದ್ಧತೆಯೇ ಸಾಕ್ಷಿ ಎನ್ನುವುದನ್ನೂ ಒಪ್ಪಬೇಕು.(ನಾವಿಲ್ಲದೆ ಚಾನೆಲ್ ನಡೆಯೋದೇ ಇಲ್ಲ ಎಂದು ಸೆಡ್ಡು ಹೊಡೆದು ಹೊರ ಬಂದವರ ಹೊರತಾಗ್ಯೂ ಚಾನೆಲ್ ತನ್ನ ನಂಬರ್ 1 ಸ್ಥಾನವನ್ನು ಹಾಗೆಯೇ ಉಳಿಸಿಕೊಂಡು ಬಂದಿದೆ.ಇನ್ನೂ ಒಂದಷ್ಟು ಬೃಹಸ್ಪತಿಗಳು ಹೊರ ಹೋದ್ರೂ ಚಾನೆಲ್ ಸ್ಥಾನಮಾನಕ್ಕೇನು ಧಕ್ಕೆ ಉಂಟಾಗೊಲ್ಲ ಎನಿಸುತ್ತೆ).

ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಈ ಕಾರಣಕ್ಕೇನೆ ಮೇಲ್ಕಂಡ ಸ್ಟೋರಿ ಹೇಳಲೇಬೇಕಾದ ಅಗತ್ಯತೆ ಇದೆ.ಆ ಕಾರಣವೇ, 16 ಕೋಟಿ ಇಂಜೆಕ್ಷನ್ ಕಾರ್ಯಕ್ರಮದ ಮೂಲಕ ಚಾನೆಲ್ ತೋರಿದ ಸಾಮಾಜಿಕ ಹೊಣೆಗಾರಿಕೆ ಹಾಗೂ ಮಾನವೀಯ ಕಳಕಳಿ.ಫೆಬ್ರವರಿ 5 ರಂದು ದಿನವಿಡೀ ಬಿತ್ತರವಾಗಿ ರಾಜ್ಯದ ಜನತೆಯ ಮನಸನ್ನು ಕಲಕಿದ ಆ ಸ್ಟೋರಿ ಯಿಂದಾಗಿ ಸಂತ್ರಸ್ಥ ಮಗುವಿನ ಕುಟುಂಬಕ್ಕೆ ಹತ್ತಿರತ್ತಿರ 4 ಕೋಟಿಯಷ್ಟು ಧನಸಹಾಯದ ಮಹಾ ಪೂರವೇ ಹರಿದುಬಂದಿದೆ ಎನ್ನುವ ಮಾತುಗಳಿವೆ. ಮಗುವಿನ ಮನಕಲಕುವ ಸ್ಟೋರಿಗೆ ಇಡೀ ಕರ್ನಾಟಕವೇ ಒಕ್ಕೊರಲಿಂದ ಸ್ಪಂದಿಸಿದ್ದು ಟಿವಿ9 ನ ಹೆಗ್ಗಳಿಕೆ ಕೂಡ. ಬಹುಷಃ ಇಷ್ಟೊಂದು ಮೊತ್ತದ ಹಣ ಇತ್ತೀಚೆಗೆ ವರ್ಷಗಳಲ್ಲಿ ಯಾವುದೇ ಸಮಸ್ಯೆಗೂ ಪರಿಹಾರದ ರೂಪದಲ್ಲಿ ಹರಿದುಬಂದಿರಬಹುದಾದ ಉದಾಹರಣೆಗಳು ಇರಲಿಕ್ಕಿಲ್ಲವೇನೋ.

ಇದು ಇಡೀ ಮನುಕುಲದ ಹೃದಯ ಹಿಂಡುವಂಥ ಭಾವನಾತ್ಮಕ ಸ್ಟೋರಿ.. ಭೂಮಿಗೆ ಬಂದ ಮುದ್ದ ಕಂದಮ್ಮನ ಬಾಳಲ್ಲಿ ಬಿರುಗಾಳಿ ಎದ್ದಿರುವ ಕರುಣಾಜನಕ ಕಥೆ..ಅಪರೂಪದಲ್ಲಿ ಅಪರೂಪವಾಗಿರೋ ರೋಗಕ್ಕೆ ಇಂದು ಇಡೀ ಕರುನಾಡೇ ಕೈ ಜೋಡಿಸಿ ಕಾಪಾಡಬೇಕಿದೆ. ಟಿವಿ ನೈನ್ ತೆರದಿಡ್ತದೆ ಮನಕಲಕುವ ಸ್ಟೋರಿಯೊಂದು ಎನ್ನುವ ವಾಕ್ಯಗಳ ಮೂಲಕ ಬೆಳಗ್ಗೆಯಿಂದ ಸುದ್ದಿ ಪ್ರಸಾರ ಆರಂಭಿಸಿದ ಟಿವಿ 9 ಮಗುವಿನ ಕರುಣಾಜನಕ ಕಥೆಯನ್ನು ಬಿತ್ತರಿಸಿದ ರೀತಿ, ರಂಗನಾಥ ಭಾರದ್ವಜ್ ನಿರೂಪಿಸಿದ ರೀತಿ ಎರಡೂ ಮನಮಿಡಿಯುವಂತಿತ್ತು.

ಆ ಕಂದಮ್ಮನ  ಹೆಸರು ಜನೀಶ್. ಅತ್ಯಂತ ವಿಚಿತ್ರ-ವಿರಳಾತೀವಿರಳ-ದುಬಾರಿ ಮೊತ್ತದ ಆರೋಗ್ಯ ಸಮಸ್ಯೆಯನ್ನುಇಟ್ಟುಕೊಂಡು ಹುಟ್ಟಿದ ಜನೀಷ್, ಜೀನ್ ಸಮಸ್ಯೆಯಿಂದ ಬಳಲುತ್ತಿತ್ತು.ಮಗುವನ್ನು ಉಳಿಸಿಕೊಳ್ಳಲು ಅವರಿವರು ಹೇಳಿದ ಎಲ್ಲಾ ದೇವರು-ಜ್ಯೋತಿಷಿಗಳ ಬಳಿ ಅಲೆದರೂ ಯಾವುದೇ ಪ್ರಯೋಜನವಾಗಲಿಲ್ಲ.ವೈದ್ಯರು ಕೂಡ ಕೈ ಚೆಲ್ಲಿದರು..ಇಡೀ ವೈದ್ಯ ಲೋಕ ಕೈ ಚೆಲ್ಲೊಕ್ಕೆ ಕಾರಣವೇ  ಆ  16 ಕೋಟಿಯ ದುಬಾರಿ ಮೆಡಿಸಿನ್.ಅಂದ್ಹಾಗೆ ವೈದ್ಯರು ಹೆಸರಿಸಿದ ಆ ಕಾಯಿಲೆಯೇ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ.

ದೇಹದ ಯಾವುದೇ ಅಂಗಾಗ ಕೆಲಸ ಮಾಡದೇ, ಉಸಿರಾಡದೇ, ಕೈ ಕಾಲು ಕದಲಿಸದೆ, ಊಟ ತಿನ್ನೋಕು ಆಗದೇ..ಎಲ್ಲಕ್ಕಿಂತ ಹೆಚ್ಚಾಗಿ  ತುಟಿ ಬಿಚ್ಚಿ ಅಮ್ಮ ಅಂತಾ ತೊದಲು ನುಡಿಯೋಕು ಆಗದಂಥ ಸ್ತಿತಿಗೆ ತಂದಿಟ್ಟ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿಗೆ ಚಿಕಿತ್ಸೆ ಹಾಗೂ ಮದ್ದು ಭಾರತದಲ್ಲೇ ಇಲ್ಲ ಎಂದಾಗ ಪೋಷಕರಿಗೆ ಆಕಾಶವೇ ಕಳಚಿಬಿದ್ದ ಅನುಭವ. ಅದಕ್ಕೆ ಅಮೆರಿಕಾದಲ್ಲೇ ಮದ್ದು ಸಿಗೋದು..ಅದರ ಮೊತ್ತ 16 ಕೋಟಿ ಎಂದು ಹೇಳಿದಾಗಲೂ ಮಗುವನ್ನ ಉಳಿಸಿಕೊಳ್ಳಲೇಬೇಕೆನ್ನುವ ಹಠದಲ್ಲಿ ಸಹಾಯಕ್ಕಾಗಿ ಅವರಿವರ ಮುಂದೆ ಅಂಗಲಾಚುತ್ತಿದ್ದಾರೆ ತಂದೆ ಸಂಜೀವಿನಿ ನಗರದ ನವೀನ್ ಕುಮಾರ್ ಹಾಗು ಜ್ಯೋತಿ ದಂಪತಿ.

ಲಕ್ಷಾಂತರ ಮಕ್ಕಳಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುವ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಗೆ ಮದ್ದು ಅಮೇರಿಕಾದಿಂದಲೇ ತರಲೇಬೇಕಿದೆ. ತಾತ್ಕಾಲಿಕವಾಗಿ ಮಗುವನ್ನ ಬೆಂಗಳೂರಿನ ಬ್ಯಾಪ್ಟಿಸ್ಟ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು… ನನ್ನ ತಮ್ಮನನ್ನ ಉಳಿಸಿಕೊಡಿ ಎಂದು 6 ವರ್ಷದ ಅಕ್ಕ ಅಂಗಲಾಚುತ್ತಿದ್ದಳು.ಎಲ್ಲಾ ಕಡೆ ತಿರುಗಿದ  ಮೇಲೆ ಅವರಿಗೆ ಕೊನೆಯ ಆಶಾಕಿರಣವಾಗಿ ಗೋಚರಿಸಿದ್ದೇ ಮಾದ್ಯಮ.ಒಂದ್ ಕೈ ನೋಡೇ ಬಿಡೋಣ ಎನ್ನುವ ಆತ್ಮವಿಶ್ವಾಸದಲ್ಲಿ ಮೊದಲು ಕಾಂಟ್ಯಾಕ್ಟ್ ಮಾಡಿದ್ದು ಹೆಲ್ತ್ ಬೀಟ್ ರಿಪೋರ್ಟರ್ ಶಿವರಾಜ್ ಕುಮಾರ್ ನನ್ನು.

ಟಿವಿ9 ನಲ್ಲಿ ಹೆಲ್ತ್ ಬೀಟ್ ನೋಡಿಕೊಳ್ಳುತ್ತಿರುವ ಶಿವರಾಜ್ ಕುಮಾರ್ ಅವರದು ಹೆಂಗರುಳು.ಕಷ್ಟಕ್ಕೆ ಮರಗುವ ಮನಸು.ಬೀಟ್ ನಲ್ಲಿ ಯಾರಿಗೇ ಕಷ್ಟವಿರಲಿ,ಅದಕ್ಕೆ ತನ್ನ ಕೈಯಿಂದಾಗುವಷ್ಟು ರೀತಿಯಲ್ಲಿ ಸ್ಪಂದಿಸುವಂಥ ಮನುಷ್ಯತ್ವ ಈ ವರದಿಗಾರನಲ್ಲಿದೆ ಎನ್ನೋದು ನಮ್ಮ ಹೆಮ್ಮೆ. ಪೋಷಕರು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದಾಗ ತಮ್ಮ ಮುಖ್ಯಸ್ಥರ ಜೊತೆ ಮಾತನಾಡಿ ಅದಕ್ಕೆ ಒಪ್ಪಿಗೆ ಪಡೆದು ಸ್ಟೋರಿ ಮಾಡಿಕೊಂಡು ಬಂದು ನೀಡಿದ್ದಾರೆ.

ಸ್ಟೋರಿಯಲ್ಲಿರುವ ಸಂಗತಿಗಳನ್ನು ತೂಗಿ ಅಳೆದು ಓ.ಕೆ ಎಂದ ಮೇಲೆ ಸ್ಟೋರಿಯನ್ನು ತೆರೆಯ ಮೇಲೆ ಅಚ್ಚುಕಟ್ಟಾಗಿ ನಿರೂಪಿಸಿದವ್ರು ರಂಗನಾಥ ಭಾರದ್ವಜ್.ಈ ಸ್ಟೋರಿಯನ್ನು ಅದ್ಭುತವಾಗಿ ಜನರಿಗರ್ಪಿಸಿದ್ದು ಅವರ ಹೆಗ್ಗಳಿಕೆ.ದಿನವಿಡೀ ಎಷ್ಟೇ ಪ್ರಮುಖ ವಿದ್ಯಾಮಾನ ನಡೆದರೂ ಈ ಸ್ಟೋರಿಗೆ ನೀಡಿದ್ದ ಪ್ರಾಮುಖ್ಯತೆಯನ್ನೆಲ್ಲೂ ಕಡಿಮೆ ಮಾಡದೆ ಸ್ಟೋರಿಗೆ ಸಿಗಬೇಕಾದ ನ್ಯಾಯ ಒದಗಿಸಿದ್ರು.

ಶಿವರಾಜ್ಕುಮಾರ್ ಬಗ್ಗೆ ಹೇಳಲೇಬೇಕಾದದ್ದು: ಶಿವರಾಜ್ ಕಸ್ತೂರಿ ನ್ಯೂಸ್  ಚಾನೆಲ್  ನಿಂದ ವೃತ್ತಿ ಆರಂಭಿಸಿದ್ರು.ಅವರ ಟ್ಯಾಲೆಂಟ್ ಟಿವಿ9 ನಂಥ ಚಾನೆಲ್ ನ್ನು ಅರಸಿಕೊಂಡು ಬಂತು. ಅಲ್ಲಿಗೆ ಹೋದ ಮೇಲೆ ಎಲ್ಲಾ ಬೀಟ್ ಗಳ ಜತೆಗೆ ಪ್ರಮುಖವಾಗಿ ಬಿಡಿಎ ಬೀಟ್ ನೀಡಲಾಯ್ತು.ಬಿಡಿಎನ ಹಲವಾರು ಅಕ್ರಮಗಳನ್ನು ಬಯಲಿಗೆಳೆದ ಹೆಗ್ಗಳಿಕೆ ಇವರದು.

ಇನ್ನು ಅನಿರೀಕ್ಷಿತ ಬೆಳವಣಿಗೆಗಳಲ್ಲಿ  ಹೆಲ್ತ್ ಬೀಟ್ ಗೆ ಬಂದ ಶಿವರಾಜ್,ಅಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದು ವಿಶೇಷ.ಸಾಕಷ್ಟು ಸುದ್ದಿ ಮಾಡಿ ಚಾನೆಲ್ ಗೆ ಹೆಸರು ತಂದುಕೊಟ್ಟರು. ಅಸಹಾಯಕರನ್ನೇ ಸಾಕಷ್ಟು ಸಂಖ್ಯೆಯಲ್ಲಿ ಕಾಣುವಂಥ ಹೆಲ್ತ್ ಬೀಟ್ ನಲ್ಲಿ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಲಾರಂಭಿಸಿದ್ರು.ಸಾಕಷ್ಟು ವೈದ್ಯರು ಬಡ ರೋಗಿಗಳನ್ನು ಮುಫತ್ತಾಗಿ ಆರೈಕೆ ಮಾಡುವಂಥ ವ್ಯವಸ್ಥೆಯನ್ನು ಶಿವರಾಜ್ ಇಂದು ಸೃಷ್ಟಿಸಿದ್ದಾರೆಂದರೆ ಅವರ ಬದ್ಧತೆ ಮೆಚ್ಚಲೇಬೇಕು.

ಮಣಿಪಾಲ್ ಆಸ್ಪತ್ರೆಯ ಕರ್ಮಕಾಂಡವನ್ನು ಬಯಲಿಗೆಳೆದದ್ದು ಶಿವರಾಜ್ ಹೆಗ್ಗಳಿಕೆ.ವೆಂಟಿಲೇಟರ್ ನಲ್ಲೇ ಮಹಿಳೆಯನ್ನಿಟ್ಟು 6 ಕೋಟಿ ಬಿಲ್ ಮಾಡಿದ ಆಸ್ಪತ್ರೆಯ ಕರ್ಮಕಾಂಡವನ್ನು ಬಯಲಿಗೆಳೆದಿದ್ದರು.ಸಣ್ಣ ಹೊಟ್ಟೆ ನೋವು ಎಂದು ಬಂದ ಮಹಿಳೆಯನ್ನು ಸತತ 5ವರೆ ವರ್ಷಗಳ ಕಾಲ ವೆಂಟಿಲೇಟರ್ ನಲ್ಲಿಟ್ಟು ಆಟೋಮೀಟರ್ ಓಡಿದಂತೆ 6 ಕೋಟಿ ಬಿಲ್ ಮಾಡಿದ ಆಸ್ಪತ್ರೆಯ ಅಮಾನವೀಯ ಪ್ರವೃತ್ತಿಯನ್ನು ಬಯಲಿಗೆಳೆದು ಮಹಿಳೆಯ ಕುಟುಂಬಕ್ಕೆ ನ್ಯಾಯ ಒದಗಿಸಿ ಪತ್ರಿಕೋದ್ಯಮದ ವೃತ್ತಿ ಘನತೆ ಎತ್ತಿಹಿಡಿದು,ಪತ್ರಿಕೋದ್ಯಮದ ಬಗ್ಗೆ ಗೌರವ ಹೆಚ್ಚುವಂತೆ ಮಾಡಿದ್ದು ಕಡಿಮೆ ಮಾತಾ..ಖಂಡಿತಾ ಇಲ್ಲ..

ಕಷ್ಟಪಟ್ಟು-ಶೃದ್ಧೆ ಹಾಗು ಪ್ರಾಮಾಣಿಕತೆಯಿಂದ ಮಾಡೋ ಕೆಲಸಕ್ಕೆ ಮನ್ನಣೆ-ಗೌರವ ಹಾಗು ಪ್ರತಿಫಲ ಸಿಕ್ಕೇ ಸಿಗುತ್ತೆ ಎನ್ನುವಂತೆ ಸ್ಟೋರಿ ನೋಡಿವದರೆಲ್ಲರೂ ತಮ್ಮ ಕೈಲಾದ ಸಹಾಯ ಮಾಡಿ ಸೈ ಎನಿಸಿಕೊಂಡಿದ್ದಾರೆ.ಈ ಕ್ಷಣಕ್ಕೂ ಅನೇಕ ಕಡೆಯಿಂದ ಪರಿಹಾರ ಹರಿದುಬರುತ್ತಲೇ ಇದೆ.ಅದೇನೇ ಆಗಲಿ,ಟಿವಿ 9 ತನ್ನಸಮಾಜಮುಖಿ ಕಾರ್ಯವನ್ನು ಹೀಗೆಯೇ ಮುನ್ನಡೆಸಿಕೊಂಡು ಹೋಗಲಿ,ಇನ್ನೂ ಒಂದಷ್ಟು ಸಂತ್ರಸ್ಥರಿಗೂ ನ್ಯಾಯ ಸಿಗುವಂತಾಗಲಿ ಎನ್ನುವುದು “ಕನ್ನಡ ಫ್ಲಾಶ್ ನ್ಯೂಸ್” ಹಾರೈಕೆ.

ನೆರವು ನೀಡಲು ಇಚ್ಛಿಸುವವರಿಗೆ ಇನ್ನೂ ಕಾಲಾವಕಾಶವಿದೆ..ಸಹಾಯ ನೀಡಲು ಇಚ್ಛಿಸುವವರು  ಮಗುವಿನ ಪೋಷಕರ ಅಕೌಂಟ್ ನಂಬರ್ IFSC :IOBA0003742 BRANCH:SAHAKAARANAGARA BENGALURU-92 ಗೆ ತಮ್ಮ ನೆರವಿನ ಹಸ್ತ ಚಾಚಬಹುದು..ಮಗುವಿನ ಪ್ರಾಣ ಉಳಿಸುವ  ಕಾರ್ಯದಲ್ಲಿ ಒಂದಾಗಬಹುದು.

Spread the love
Leave A Reply

Your email address will not be published.

Flash News