5 ವರ್ಷ, 119 ಕೋಟಿ ಖರ್ಚು…1145 ಪ್ರಕರಣ,1143 ದಾಳಿ…ಕೇವಲ 4 “ಭ್ರಷ್ಟ”ರಿಗಷ್ಟೇ ಶಿಕ್ಷೆ..ಇದಾ ACB ಸಾಧನೆ..ಇದರ |ಅಗತ್ಯ” ನಿಜಕ್ಕೂ ಇದೆಯೇ..?

0

ಬೆಂಗಳೂರು:ಸರ್ಕಾರಗಳ ಹಣೇಬರಹವೇ ಇಷ್ಟು.. ವಿಪಕ್ಷಗಳಲ್ಲಿದ್ದಾಗ ಪ್ರದರ್ಶಿಸುವಂಥ ವೀರಾವೇಶ ಅಧಿಕಾರಕ್ಕೆ ಬರುತ್ತಿದ್ದಂತೆ ಠುಸ್ ಪಟಾಕಿಯಾಗಿಬಿಡುತ್ತೆ. ನಿರ್ವೀಯತ್ವ ಆವರಿಸಿಬಿಡುತ್ತೆ..ಲೋಕಾಯುಕ್ತ-ಎಸಿಬಿ ವಿಚಾರದಲ್ಲಿ ಸರ್ಕಾರಗಳ ಧೋರಣೆ-ಮನಸ್ಥಿತಿಯೂ ಇದನ್ನೇ ಉಲ್ಲೇಖಿಸುತ್ತದೆ.

ಲೋಕಾಯುಕ್ತವನ್ನು ನಿಷ್ಕ್ರೀಯಗೊಳಿಸಲು ಎಸಿಬಿ ಜಾರಿಗೊಳಿಸಿದ ಸಿದ್ದರಾಮಯ್ಯ ಮಾಡಿದ್ದೇನು..ಅಧಿಕಾರಕ್ಕೆ ಬರುತ್ತಿದ್ದಂತೆ ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ್ರು.. ಹಾಗೆಯೇ ಲೋಕಾಯುಕ್ತವನ್ನು ಬಲಪಡಿಸುವುದಾಗಿ ಯಡಿಯೂರಪ್ಪ ಅಧಿಕಾರಕ್ಕೆ ಬರುವ ಮುನ್ನ ಹೇಳಿದ್ರು. ಇವತ್ತು ಆ ಬಗ್ಗೆ ಪ್ರಶ್ನಿಸಿದ್ರೆ ಹೌದಾ.ಹಾಗೆ ಅಂದಿದ್ನಾ ಎಂದು  ಕೇಳೋರನ್ನೇ ಪ್ರಶ್ನಿಸುತ್ತಿದ್ದಾರೆ.ಈ ರಾಜಕೀಯ ದೊಂಬರಾಟದ ನಡುವೆ ಜನಸಾಮಾನ್ಯನ ಪಾಡು ಹೇಳತೀರದಂತಾಗಿದೆ ಅಷ್ಟೇ..

ಕರ್ನಾಟಕ ರಾಷ್ಟ್ರ ಸಮಿತಿಗೆ ಆರ್ ಟಿಐ ನಲ್ಲಿ ನೀಡಲಾದ ಮಾಹಿತಿ
ಕರ್ನಾಟಕ ರಾಷ್ಟ್ರ ಸಮಿತಿಗೆ ಆರ್ ಟಿಐ ನಲ್ಲಿ ನೀಡಲಾದ ಮಾಹಿತಿ

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಹೇಗೆ ಅಸ್ತಿತ್ವಕ್ಕೆ ಬಂತು..ಅದರ ಉದ್ದೇಶ..ಹಿನ್ನಲೆ ಬಗ್ಗೆ ಹೆಚ್ಚೇನೂ ಹೇಳದೇ ನೇರವಾಗಿ ವಿಷಯಕ್ಕೆ ಬರುತ್ತೇವೆ. ಯಾವೊಂದು ಉದ್ದೇಶವಿಟ್ಟುಕೊಂಡು ಎಸಿಬಿಯನ್ನು ಅಸ್ಥಿತ್ವಕ್ಕೆ ತರಲಾಯ್ತೋ,ಆ ಉದ್ದೇಶ ಈಡೇರಿಲ್ಲ ಎನ್ನುವುದಂತೂ ಸ್ಪಷ್ಟ.ಏಕೆಂದ್ರೆ ರವಿ ಕೃಷ್ಣಾ ರೆಡ್ಡಿ ಅವರ ಕರ್ನಾಟಕ ರಾಷ್ಟ್ರ ಸಮಿತಿಯೇ ಆರ್ ಟಿಐ ನಲ್ಲಿ ಪಡೆದಿರುವ ಮಾಹಿತಿ ಎಸಿಬಿ ಯಾವ್ ರೇಂಜ್ನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎನ್ನುವ ಪ್ರಶ್ನೆ ಹುಟ್ಟುಹಾಕುವ ಜತೆಗೆ ಜನಸಾಮಾನ್ಯರಿಗೆ ಭ್ರಷ್ಟಾಚಾರದಿಂದ ಮುಕ್ತಿ ಹಾಗೂ ನ್ಯಾಯ ದೊರಕಿಸಿಕೊಡದಿದ್ದ ಮೇಲೆ ಇಂತದ್ದೊಂದು ತನಿಖಾ ಸಂಸ್ಥೆ ಬೇಕೇ ಎನ್ನುವವರೆಗಿನ ಪ್ರಸ್ತುತತೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ.

ಕರ್ನಾಟಕ ರಾಷ್ಟ್ರ ಸಮಿತಿ ಸಂಸ್ಥಾಪಕ ರವಿಕೃಷ್ಣಾರೆಡ್ಡಿ
ಕರ್ನಾಟಕ ರಾಷ್ಟ್ರ ಸಮಿತಿ ಸಂಸ್ಥಾಪಕ ರವಿಕೃಷ್ಣಾರೆಡ್ಡಿ

ಕರ್ನಾಟಕ ರಾಷ್ಟ್ರ ಸಮಿತಿ ಎಸಿಬಿಗೆ ರಾಜ್ಯ ಸರ್ಕಾರಗಳು ಮಾಡಿರುವ ಖರ್ಚು ಹಾಗೂ ಅದರ ಕಾರ್ಯವೈಖರಿಯನ್ನು ಸಾರ್ವಜನಿಕಗೊಳಿಸುವ ಉದ್ದೇಶದಿಂದ ಆರ್ ಟಿಐ ನಲ್ಲಿ ಮಾಹಿತಿ ಕೋರಿ ಹಾಕಿದ್ದ ಅರ್ಜಿಗೆ ನೀಡಲಾಗಿರುವ ಮಾಹಿತಿಗಳು ಬೆಚ್ಚಿಬೀಳಿಸುತ್ತದೆ.ಎಸಿಬಿ ಹಲ್ಲು ಕಿತ್ತ ಹಾವಷ್ಟೇ ಅಲ್ಲ,ಯಾವುದೆ ರೀತಿಯಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡದಂಥ ನಿರ್ವೀರ್ಯ ಸಂಸ್ಥೆ ಎನ್ನೋದನ್ನು ಸಾರಿ ಹೇಳುವಂತಿದೆ ಈ ಮಾಹಿತಿಗಳು.

ಸಿದ್ದರಾಮಯ್ಯ ಅವರ ಕನಸಿನ ಕೂಸಾಗಿ ನಂತರ ಪಾಪದ ಕೂಸೆನ್ನುವ ಹಣೆಪಟ್ಟಿ ಪಡೆದುಕೊಂಡ ಭ್ರಷ್ಟಾಚಾರ ನಿಗ್ರಹ ದಳ ಅಸ್ಥಿತ್ವಕ್ಕೆ ಬಂದು ಹತ್ತಿರತ್ತಿರ ಐದು ವರ್ಷಗಳಾಗಿವೆ.ಈ ಅವಧಿಯಲ್ಲಿ ಮಾಡಲಾದ ಖರ್ಚು-ದಾಖಲಿಸಿರುವ ದೂರು-ಮಾಡಿರುವ ರೇಡ್-ನೀಡಲಾಗಿರುವ ಶಿಕ್ಷೆ ಪ್ರಮಾಣದ ಬಗ್ಗೆಯೆಲ್ಲಾ ಕರ್ನಾಟಕ ರಾಷ್ಟ್ರ ಸಮಿತಿ ಮಾಹಿತಿ ಕೇಳಿತ್ತು.ಅದರ ಹಿನ್ನಲೆಯಲ್ಲಿ ನೀಡಿರುವ ಮಾಹಿತಿ ನಮಗೆ ಎಸಿಬಿ ನಿಜಕ್ಕೂ ಬೇಕೆ ಎನ್ನುವ ಪ್ರಶ್ನೆ ಸೃಷ್ಟಿಸುತ್ತದೆ.

ಏಕೆಂದರೆ 2016 ರಿಂದ 2021ರ ಈ ಅವಧಿವರೆಗೂ ಎಸಿಬಿಗೆಂದೇ ಸರ್ಕಾರಗಳು ಮಾಡಿರುವ ಖರ್ಚು ಎಷ್ಟು ಗೊತ್ತಾ,119,97,49,495 ರೂ ಅಂದ್ರೆ 119 ಕೋಟಿ 97 ಲಕ್ಷದಷ್ಟು.ವರ್ಷವಾರು ಲೆಕ್ಕ ಹಾಕಿದ್ರೆ 2016 ರಲ್ಲಿ 17 ಕೋಟಿ,2017 ರಲ್ಲಿ 32 ಕೋಟಿ,2018 ರಲ್ಲಿ 35 ಕೋಟಿ,2019 ರಲ್ಲಿ 34 ಕೋಟಿಗಳಷ್ಟು.2021 ರ ಲೆಕ್ಕವನ್ನು ಇನ್ನೂ ನೀಡಿಲ್ಲ.ಸರಾಸರಿ ಲೆಕ್ಕ ಹಾಕಿದ್ರೆ ಅದು ಕೂಡ ಹತ್ತಿರತ್ತಿರ 5-6 ಕೋಟಿಗಳಾಗಿದ್ರೂ ಆಶ್ಚರ್ಯವಿಲ್ಲ.

ಇನ್ನು ಬೆಂಗಳೂರು ಕಚೇರಿಗೇನೆ 60,57,35,059 ಅಂದ್ರೆ ಬರೋಬ್ಬರಿ 60 ಕೋಟಿ 57 ಲಕ್ಷ ಖರ್ಚು ಮಾಡಲಾಗಿದೆಯಂತೆ. ವರ್ಷವಾರು ಲೆಕ್ಕ ಹಾಕಿದ್ರೆ 2016 ರಲ್ಲಿ 19 ಕೋಟಿ,2017 ರಲ್ಲಿ 14 ಕೋಟಿ,2018 ರಲ್ಲಿ 11 ಕೋಟಿ,2019 ರಲ್ಲಿ 15 ಕೋಟಿ ಎಂದ್ರೆ ನಂಬಲೇಬೇಕು.

ಇಷ್ಟೊಂದು ಹಣವನ್ನು ಪಡೆದು ಎಸಿಬಿ ಎಷ್ಟರ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿರಬಹುದೆನ್ನುವುದನ್ನು ನೋಡಿದ್ರೆ ಎಸಿಬಿ ಈ ಐದು ವರ್ಷಗಳ ಅವಧಿಯಲ್ಲಿ ದಾಖಲಿಸಿರುವ ಪ್ತಕರಣಗಳು ಎಷ್ಟು ಗೊತ್ತಾ ಕೇವಲ 1,445.ಇನ್ನು ಬೆಂಗಳೂರಿನ ಕಚೇರಿಯಲ್ಲಿ ಕೇವಲ 213 ಪ್ರಕರಣಗಳು ಮಾತ್ರ ದಾಖಲಾಗಿವೆಯಂತೆ. ಅಂದ್ರೆ ಈ 60 ತಿಂಗಳಲ್ಲಿ ಪ್ರತಿ ತಿಂಗಳಿಗೆ ಕೇವಲ 24-25 ರಷ್ಟು ಪ್ರಕರಣಗಳು ಎಂದಾಯ್ತು.ಕೇವಲ 24-25 ರಷ್ಟು ಪ್ರಕರಣಗಳ ಮೇಲೆ ಕೆಲಸ ಮಾಡೊಕ್ಕೆ ಇಷ್ಟೊಂದು ಕೋಟಿಗಳಷ್ಟು ಹಣವನ್ನು ನಮ್ಮ ತೆರಿಗೆ ಹಣದಿಂದ ಎಸಿಬಿಗೆ ಖರ್ಚು ಮಾಡಬೇಕಾದ ಅವಶ್ಯಕತೆ ಇದೆಯೇ ಎಂದು ಸರ್ಕಾರವನ್ನು ನೇರವಾಗಿ ಪ್ರಶ್ನಿಸ್ತಾರೆ ಕರ್ನಾಟಕ ರಾಷ್ಟ್ರ ಸಮಿತಿ ಸಂಸ್ಥಾಪಕ ಹಾಗೂ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ.

ಭ್ರಷ್ಟಾಚಾರ(ಡಿಎ)ಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನಡೆಸಲಾದ ದಾಳಿಗಳು ಈ ಐದು ವರ್ಷದಲ್ಲಿ ಕೇವಲ 186 .2016 ರಲ್ಲಿ 31,2017 ರಲ್ಲಿ 46,2018 ರಲ್ಲಿ 72,2019 ರಲ್ಲಿ 19 ಹಾಗು ಈ 2020 ರ ಎರಡು ತಿಂಗಳಲ್ಲಿ 18 ಪ್ರಕರಣಗಳಲ್ಲಿ ದಾಳಿ ನಡೆದಿದೆ ಅಂತೆ.

ಈ ದಾಳಿಗಳಿಂದ ಯಾರಿಗೆ ಏನ್ ಪ್ರಯೋಜನ (ಸಂಗ್ರಹ ಚಿತ್ರ)
ಈ ದಾಳಿಗಳಿಂದ ಯಾರಿಗೆ ಏನ್ ಪ್ರಯೋಜನ (ಸಂಗ್ರಹ ಚಿತ್ರ)
ನಾಮಾಕವಸ್ಥೆಗೆ ನಡೆಯುವ ದಾಳಿ(ಸಂಗ್ರಹ ಚಿತ್ರ)
ನಾಮಾಕವಸ್ಥೆಗೆ ನಡೆಯುವ ದಾಳಿ(ಸಂಗ್ರಹ ಚಿತ್ರ)

ಲಂಚ ಪ್ರಕರಣದಲ್ಲಿ ಹೆಚ್ಚಿನ ರೇಡ್ ಗಳು ನಡೆದಿವೆ.ಒಟ್ಟು 1143 ದಾಳಿಗಳು ನಡೆದಿದ್ದು,2016 ರಲ್ಲಿ 99,2017 ರಲ್ಲಿ 189, 2017 ರಲ್ಲಿ 231,2018 ರಲ್ಲಿ ದಾಖಲೆಯ 245,2019ರಲ್ಲಿ 184 ರೇಡ್ ಗಳು ನಡೆದಿವೆ ಎಂದು ಎಸಿಬಿನೇ ಖುದ್ದು ಮಾಹಿತಿ ನೀಡಿದೆ.

ಇದೆಲ್ಲಾ ಸರಿ…ಬಹುಮುಖ್ಯವಾದ ಸಂಗತಿಯಾದ ಶಿಕ್ಷೆ ಪ್ರಮಾಣದ ವಿಷಯಕ್ಕೆ ಬರುವುದಾದ್ರೆ ಅತ್ಯಂತ ಕಳಪೆಯ ಸಾಧನೆಯನ್ನು ಎಸಿಬಿ ಮಾಡಿದೆ.ಹತ್ತಿರತ್ತಿರ 125 ಕೋಟಿಯಷ್ಟು ಹಣವನ್ನು ಖರ್ಚು ಮಾಡುವ ಸರ್ಕಾರಕ್ಕೆ ತನ್ನ ಸಾಧನೆಯೇನು ಎನ್ನುವುದನ್ನು ತೋರಿಸ್ಬೇಕಿದ್ದ ಎಸಿಬಿ ಬಗ್ಗೆ ನಂಬಿಕೆ ಕಳೆದುಕೊಳ್ಳುವಂಥ ಅಂಕಿಅಂಶ ಹೊರಬಿದ್ದಿದೆ.ಕೇವಲ 4…ಕೇವಲ 4 ಕಳಂಕಿತರಿಗಷ್ಟೇ ಶಿಕ್ಷೆಯಾಗಿದೆಯಂತೆ.ಐದು ವರ್ಷಗಳ ಲೆಕ್ಕದಲ್ಲಿ ವರ್ಷಕ್ಕೂ ಒಬ್ಬನೂ ಅಲ್ಲ ಎನ್ನುವಂತಾಯ್ತು.

ಈ ಮಾಹಿತಿ ಕೇವಲ ಅಘಾತಕಾರಿ ಅಷ್ಟೇ ಅಲ್ಲ, ಎಸಿಬಿಯ ಅವಶ್ಯಕತೆ ನಿಜಕ್ಕೂ ಇದೆಯೇ ಎನ್ನುವ ಪ್ರಶ್ನೆ ಹುಟ್ಟುಹಾಕುತ್ತದೆ.ಅದೆಲ್ಲಕ್ಕಿಂತ ಹೆಚ್ಚಾಗಿ ಎಸಿಬಿಯನ್ನು ರಾಜಕೀಯ ಶಕ್ತಿಗಳು ತಮ್ಮ ಪ್ರಯೋಜನಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದೂ ಸ್ಪಷ್ಟವಾಗುತ್ತದೆ.ಹಾಗೆಯೇ ಎಸಿಬಿ ಎಷ್ಟು ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಅದು ಕೊಟ್ಟಿರುವ ಅಂಕಿಅಂಶಗಳೇ ಕೈಗನ್ನಡಿಯಂತಿದೆ.. 

Spread the love
Leave A Reply

Your email address will not be published.

Flash News