ಕೊರೊನಾ: ಮತ್ತೆ “ಲಾಕ್ ಡೌನ್” ಪಕ್ಕಾನಾ..?

0

ಸತತ ಒಂದು ವರ್ಷದಿಂದ ಇಡೀ ಮಾನವ ಸಂಕುಲವನ್ನೇ ಆರ್ಥಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ ರಣಹದ್ದಿನಂತೆ ಕಿತ್ತು ತಿನ್ನುತ್ತಿರುವ ಕೊರೊನಾ ಮಹಾಮಾರಿ ಇದೀಗ ಮತ್ತೊದು ಜನ್ಮ ಪಡೆದುಕೊಂಡು ಎರಡನೇ ಅಲೆಯ ರೂಪದಲ್ಲಿ ರಣಕೇಕೆ ಹಾಕುತ್ತಿದೆ. 2020 ರ ಮಾರ್ಚ್ 23 ರಂದು ಭಾರತ ಸರ್ಕಾರ ಕೋವಿಡ್ ಹರಡುವುದನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ 21 ದಿನಗಳ ಕಾಲ ಲಾಕ್ ಡೌನ್ ಆದೇಶಿಸಿತ್ತು. ಆದರೆ 21 ದಿನಗಳ ಬಳಿಕವೂ ಕೊರೊನಾ ನಿಯಂತ್ರಿಸಲು ಸಾಧ್ಯವಾಗದ ಕಾರಣ ಲಾಕ್ ಡೌನ್ ಅನ್ನು ವಿಸ್ತರಿಸಿ ಸುಮಾರು 4 ತಿಂಗಳ ಕಾಲ ಬೀಗ ಜಡಿದು ಎಲ್ಲರನ್ನ ತೆಪ್ಪಗೆ ಮನೇಲಿ ಕೂರುವಂತೆ ಮಾಡಿತ್ತು ಕೊರೊನಾ ಎಂಬ ಮಹಾಮಾರಿ. ಈ ನಾಲ್ಕು ತಿಂಗಳ ಲಾಕ್ ಡೌನ್ ನಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿಬಿಟ್ಟಿತ್ತು. ನಗರಗಳಲ್ಲಿ ಕೂಲಿನಾಲಿ ಮಾಡ್ಕೊಂಡು ಹೇಗೂ ಬದುಕು ನಡೆಸುತ್ತಿದ್ದ ಜನ, ಲಾಕ್ ಡೌನ್ ನಿಂದ ಕೆಲಸ ಕಾರ್ಯ ಇಲ್ದೇ ಕೊರೊನಾ ಆತಂಕದಿಂದ ಸಾಕಪ್ಪಾ ಸಾಕು ಇಲ್ಲಿಯ ಸಹವಾಸ. ವ್ಯವಸಾಯನೋ, ಮತ್ತೊಂದೇನೋ ಮಾಡಿಕೊಂಡು ತಮ್ಮ ತಮ್ಮ ಹಳ್ಳಿಲೇ ಜೀವನ ಸಾಗಿಸಬಹುದು ಅಂತ ನಗರಗಳಿಂದ ಜಾಗ ಕಾಲಿ ಮಾಡಿದರು. ಅಂದು ಹೋದವರಲ್ಲಿ ಸಾಕಷ್ಟು ಜನ ಇನ್ನೂ ನಗರದತ್ತ ತಲೆ ಹಾಕಿಯೇ ಇಲ್ಲ. ಹೊಟ್ಟೆ ಬಟ್ಟೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದ ಜನರ ಹೊಟ್ಟೆಗೆ ಲಾಕ್ ಡೌನ್ ನಿಂದ ತಣ್ಣೀರು ಬಟ್ಟೆಯೇ ಗತಿ ಎನ್ನುವಂತಾಗಿತ್ತು. ಇನ್ನು ಸುಖದ ಸುಪ್ಪತಿಗೆ ಮೇಲೆ ಬದುಕುತ್ತಿರುವ ಜನ ಆರಾಮಾಗಿ ಅವರವರ ಫ್ಯಾಮಿಲಿಯೊಂದಿಗೆ ಟೈಮ್ ಸ್ಪೆಂಡ್ ಮಾಡಿದ್ರು. ಇನ್ನು ಕೆಲವರಿಗೆ ರಾಮೇಶ್ವರಕ್ಕೆ ಹೋದ್ರೂ ಶನೇಶ್ವರನ ಕಾಟ ತಪ್ಪಲಿಲ್ಲ ಅನ್ನೋ ಹಾಗೆ ‘ವರ್ಕ್ ಫ್ರಂ ಹೋಂ’ ಶನಿ ಹೆಗಲೇರಿತು. ವೀಕ್ ಆಫ್ ಗಳಲ್ಲಿ ಪಾರ್ಟಿ, ಪಬ್ಬು, ಸಿನಿಮಾ ಅಂತ ಸುತ್ತಾಡುತ್ತಿದ್ದ ಜನ ಕೈ ಕಟ್ಟಿ, ಬಾಯ್ ಮುಚ್ಚಿಕೊಂಡು ಮನೆಯಿಂದ ಹೊರಗೇ ಬರದೇ ತೆಪ್ಪಗಿದ್ರು. ಮಕ್ಕಳಿಗಂತೂ ಸ್ಕೂಲು ಇಲ್ಲ ಕಾಲೇಜೂ ಇಲ್ಲ, ಆದ್ರೆ ಆನ್ ಲೈನ್ ಕ್ಲಾಸ್ ಅಂತೂ ಮಿಸ್ ಆಗ್ಲೇ ಇಲ್ಲ. ಕೆಲವರು ಹೊಟ್ಟೆಗೆ ಹಿಟ್ಟಿಲ್ಲದೇ ಒದ್ದಾಡುತ್ತಿದ್ರು, ಇನ್ನೂ ಕೆಲವರು ಕುಡಿಯೋಕೆ ಎಣ್ಣೆ ಸಿಗದೇ ಪರದಾಡುತ್ತಿದ್ರು. ಇಷ್ಟೆಲ್ಲಾ ಆದ ಮೇಲೆ ಜೂನ್ 8 ರಿಂದ ಹಂತ ಹಂತವಾಗಿ ದೇಶ ಅನ್ ಲಾಕ್ ಆಯ್ತು, ಜನ ಮತ್ತೆ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ಮರಳಿದರು, ವ್ಯಾಕ್ಸಿನ್ ಕೂಡ ಬಂತು. ಇನ್ನೇನು ಕೊರೊನಾ ಹಾವಳಿ ಕಡಿಮೆಯಾಗ್ತಿದೆ. ಎಲ್ಲಾ ಮತ್ತೆ ಮೊದಲಿನಂತಾಗುತ್ತಿದೆ ಅನ್ನೋ ಅಷ್ಟರಲ್ಲೇ ಕೊರೊನಾ ಎರಡನೇ ಅಲೆ ವಕ್ಕರಿಸಿದೆ. ದಿನೇ ದಿನೇ ಕೊರೊನಾ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಹೀಗೆ ಆದ್ರೆ ಮುಂದೇನು ಗತಿ? ಮತ್ತೆ ಲಾಕ್ ಡೌನ್ ಪಕ್ಕಾನಾ? ಅಕಸ್ಮಾತ್ ಲಾಕ್ ಡೌನ್ ಆಗೇ ಬಿಟ್ರೆ ಮುಂದೆ ಜನರ ಜೀವನ ಹೇಗೆ? ಕಳೆದ ಬಾರಿಯ ಲಾಕ್ ಡೌನ್ ನಿಂದ ಅದೆಷ್ಟೋ ಜನರಿಗೆ ಭಾರಿ ಹೊಡೆತ ಬಿದ್ದಿದೆ. ಇನ್ನು ಮತ್ತೊಂದು ಲಾಕ್ ಡೌನ್ ಆದ್ರೆ ಜನಜೀವನ ಅಲ್ಲೋಲ ಕಲ್ಲೋಲವಾಗೋದಂತೂ ಗ್ಯಾರಂಟಿ..

Spread the love
Leave A Reply

Your email address will not be published.

Flash News