IPL 2021 ಈ ಬಾರಿ ಸನ್‌ರೈಸರ್ಸ್ ಕಪ್‌ ಗೆಲ್ಲೋಕೆ ಒಳ್ಳೆ ಚಾನ್ಸ್: ಬೇರ್‌ಸ್ಟೋವ್..

0

ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಜಾನಿ ಬೇರ್‌ಸ್ಟೋವ್‌ 14ನೇ ಆವೃತ್ತಿಯ ಐಪಿಎಲ್‌ ಟ್ರೋಫಿ ಗೆಲ್ಲಲು ಸನ್‌ರೈಸರ್ಸ್‌ ಹೈದರಾಬಾದ್‌ಗೆ ಒಳ್ಳೆಯ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಜಾನಿ ಬೇರ್‌ಸ್ಟೋವ್, ಎರಡನೇ ಏಕದಿನ ಪಂದ್ಯದಲ್ಲಿ ಬೇರ್‌ಸ್ಟೋವ್‌ ತಮ್ಮ ವೃತ್ತಿಜೀವನದ 11ನೇ ಏಕದಿನ ಶತಕ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಭಾರತ ನೀಡಿದ್ದ 337 ರನ್‌ಗಳ ಕಠಿಣ ಗುರಿ ಬೇರ್‌ಸ್ಟೋವ್ ಹಾಗೂ ಬೆನ್‌ ಸ್ಟೋಕ್ಸ್‌ ಜತೆಯಾಟದ ಮುಂದೆ ಮಂಜಿನಂತೆ ಕರಗಿ ಹೋಯಿತು. ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಬೇರ್‌ಸ್ಟೋವ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಮಹತ್ವದ ಪಾತ್ರ ವಹಿಸಲು ಸಾಧ್ಯತೆಯಿದೆ. ಪಂದ್ಯ ಮುಕ್ತಾಯವಾದ ಬಳಿಕ ಮಾತನಾಡಿದ ಜಾನಿ ಬೇರ್‌ಸ್ಟೋವ್‌, ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ಒಂದು ಅದ್ಭುತ ಅನುಭವ. ಜಗತ್ತಿನ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟಿಗರು ಐಪಿಎಲ್ ಆಡಲು ಬಯಸುತ್ತಾರೆ. ನಾನೂ ಕೂಡ ಸದ್ಯದಲ್ಲೇ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಕೂಡಿಕೊಳ್ಳಲಿದ್ದೇನೆ ಎಂದು ಜಾನಿ ಹೇಳಿದ್ದಾರೆ.
ಕಳೆದ ವರ್ಷ ಕೂಡಾ ನಾನು ಉತ್ತಮವಾಗಿಯೇ ಆಡಿದ್ದೇವೆ. ಈ ವರ್ಷ ನಮಗೆ ಕಪ್‌ ಗೆಲ್ಲಲು ಉತ್ತಮ ಅವಕಾಶವಿದೆ. ಕಳೆದ ವರ್ಷ ತೋರಿದ ಪ್ರದರ್ಶನವನ್ನೇ ಮುಂದುವರೆಸಿಕೊಂಡು ಹೋಗುವ ವಿಶ್ವಾಸವಿದೆ ಎಂದು ಬೇರ್‌ಸ್ಟೋವ್ ಹೇಳಿದ್ದಾರೆ. ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಡೇವಿಡ್ ವಾರ್ನರ್‌ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್‌ ಫ್ರಾಂಚೈಸಿ ಎರಡನೇ ಕ್ವಾಲಿಫೈಯರ್‌ನಲ್ಲಿ ಡೆಲ್ಲಿಗೆ ಶರಣಾಗುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಿಕೊಂಡಿತ್ತು. ಈ ಬಾರಿಯ ಆಟಗಾರರ ಹರಾಜಿನಲ್ಲಿ ಸನ್‌ರೈಸರ್ಸ್‌ ಹೈದಾರಬಾದ್‌ ಫ್ರಾಂಚೈಸಿ ಕೇದಾರ್ ಜಾಧವ್ ಹಾಗೂ ಮುಜೀಬ್‌ ಉರ್ ರೆಹಮಾನ್‌ರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದು, ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

Spread the love
Leave A Reply

Your email address will not be published.

Flash News