100 ಕೋಟಿ ಕಲೆಕ್ಷನ್: ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನನ ಅಬ್ಬರ..

0

ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು, ಚಂದನವನದ ಬಾಕ್ಸ್​ ಆಫೀಸ್​ನಲ್ಲಿ  ‘ರಾಬರ್ಟ್​’ ಸಖತ್ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ಕಲೆಕ್ಷನ್​ ಆಗಿದ್ದು, ದರ್ಶನ್​ ಅವರು ಬಾಕ್ಸ್​ ಆಫೀಸ್​ ಸುಲ್ತಾನ ಎಂಬುದು ಮತ್ತೆ ಸಾಬೀತಾಗಿದೆ. ಮಾ.11ರಂದು ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದ್ದ ರಾಬರ್ಟ್​ ಸಿನಿಮಾ ಮೊದಲ ದಿನವೇ 17.24 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಎರಡನೇ ದಿನ 12.78 ಕೋಟಿ, ಮೂರನೇ ದಿನ 14.10 ಕೋಟಿ ಹಾಗೂ ನಾಲ್ಕನೇ ದಿನ ಬರೋಬ್ಬರಿ 15.68 ಕೋಟಿ ರೂ. ಹರಿದುಬಂತು. ಒಂದು ವಾರದ ಬಳಿಕವೂ ರಾಬರ್ಟ್​ ನಾಗಾಲೋಟ ಮುಂದುವರಿದಿತ್ತು. 8 ದಿನಗಳಲ್ಲಿ ಈ ಚಿತ್ರ 78.36 ಕೋಟಿ ರೂ. ಬಾಚಿಕೊಂಡು ಗೆಲುವಿನ ಪತಾಕೆ ಹಾರಿಸಿತ್ತು. ಈಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

ರಾಬರ್ಟ್​ ಬಿಡುಗಡೆಯಾಗಿ 20 ದಿನ ಕಳೆದಿದೆ. ಒಂದು ವಾರದ ಬಳಿಕ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖ ಆಗಿದ್ದರೂ ಕೂಡ ಉತ್ತಮ ಪ್ರದರ್ಶನ ಕಾಣುತ್ತಿತ್ತು. 100 ಕೋಟಿ ಕ್ಲಬ್​ ಸೇರುವತ್ತ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ ಈ ಸಿನಿಮಾ ಕಡೆಗೂ 20ನೇ ದಿನಕ್ಕೆ 100 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಸ್ಯಾಂಡಲ್​ವುಡ್​ ಇತಿಹಾಸದಲ್ಲೇ ಇಂಥ ಸಾಥನೆ ಮಾಡಿದ ಮೊದಲ ಸಿನಿಮಾ ಎಂಬ ಖ್ಯಾತಿಗೆ ರಾಬರ್ಟ್​ ಪಾತ್ರವಾಗಿದೆ. ತರುಣ್​ ಸುಧೀರ್​ ನಿರ್ದೇಶನ ಹಾಗೂ ಉಮಾಪತಿ ಶ್ರೀನಿವಾಸ್​ ಗೌಡ ನಿರ್ಮಾಣದ ‘ರಾಬರ್ಟ್​’ಗೆ ಆಶಾ ಭಟ್​ ನಾಯಕಿ. ಚಂದನವನದಲ್ಲಿ ಆಶಾ ಭಟ್​ಗೆ ಇದು ಮೊದಲ ಸಿನಿಮಾ. ಹೀಗೆ ಅವರ ಚೊಚ್ಚಲ ಚಿತ್ರವೇ ​100 ಕೋಟಿ ರೂ. ಕ್ಲಬ್​ ಸೇರಿಕೊಂಡಿರುವುದು ಹೆಚ್ಚುಗಾರಿಕೆ. ದರ್ಶನ್​ ವೃತ್ತಿಜೀವನಕ್ಕೆ ರಾಬರ್ಟ್​ನಿಂದ ಅತಿ ದೊಡ್ಡ ಹಿಟ್​ ಸಿಕ್ಕಿದೆ. ನಿರ್ದೇಶಕ ತರುಣ್​ ಸುಧೀರ್​ ಒಬ್ಬ ಯಶಸ್ವಿ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ. ರಾಬರ್ಟ್​ಗೆ ಈ ಪರಿ ಯಶಸ್ಸು ಸಿಗುವುದಕ್ಕೆ ಕಾರಣವಾದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುವ ಸಲುವಾಗಿ ರಾಜ್ಯಾದ್ಯಂತ ವಿಜಯ ಯಾತ್ರೆ ಮಾಡಬೇಕು ಎಂದು ದರ್ಶನ್​ ಪ್ಲ್ಯಾನ್​ ಮಾಡಿಕೊಂಡಿದ್ದರು. ಆದರೆ ಕೋವಿಡ್​-19 ಎರಡನೇ ಅಲೆ ಹರಡುವ ಭೀತಿಯಿಂದಾಗಿ ಸದ್ಯಕ್ಕೆ ವಿಜಯ ಯಾತ್ರೆಯನ್ನು ಕ್ಯಾನ್ಸಲ್​ ಮಾಡಲಾಗಿದೆ. ಸೋಶಿಯಲ್​ ಮೀಡಿಯಾ ಮೂಲಕವೇ ದರ್ಶನ್​ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಕೋವಿಡ್​ ವಿಘ್ನಗಳ ನಡುವೆಯೂ ರಾಬರ್ಟ್​ 100 ಕೋಟಿ ರೂ. ಸಾಧನೆ ಮಾಡಿರುವುದಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

Spread the love
Leave A Reply

Your email address will not be published.

Flash News