ಏಳುಬೀಳುಗಳ ನಡುವೆ ಕನ್ನಡ ಚಿತ್ರರಂಗ..

0

2020 ಕನ್ನಡ ಚಿತ್ರರಂಗ ಸಿನಿಮಾ, ಶೂಟಿಂಗ್, ಪ್ರಚಾರ ಎಲ್ಲವನ್ನೂ ಬಿಟ್ಟು ಮಕಾಡೆ ಮಲಗಿದ್ದ ವರ್ಷ. 2021 ರ ಆರಂಭದಲ್ಲಿ ಚಂದನವನದಲ್ಲಿ ಮತ್ತೆ ವಸಂತ ಮೂಡಿತ್ತು. ಸರ್ಕಾರ ಥಿಯೇಟರ್ ಗಳನ್ನು ಅನ್ ಲಾಕ್ ಮಾಡಿ ಶೇಕಡಾ 50 ರಷ್ಟು ಆಸನ ಭರ್ತಿಗಷ್ಟೇ ಅವಕಾಶ ಕೊಡ್ತು. ಆದರೆ ಸ್ಯಾಂಡಲ್ ವುಡ್ ಮಂದಿ ‘ಮಾರ್ಕೆಟ್ ನಲ್ಲಿ ಫುಲ್ ರಶ್, ಬಸ್ ಗಳಲ್ಲಿ ನೂಕುನುಗ್ಗಲು.. ಚಿತ್ರಮಂದಿಗಳಿಗ್ಯಾಕೆ 50% ಯಾಕೆ ಅಂತ ಸರ್ಕಾರದ ವಿರುದ್ಧ ಸಿಡಿದೆದ್ದರು. ನಂತರ ರಾಜ್ಯ ಸರ್ಕಾರ ಚಿತ್ರರಂಗದವರ ಒತ್ತಾಯಕ್ಕೆ ಮಣಿದು ಥಿಯೇಟರ್ ಗಳಲ್ಲಿ ಶೇಕಡ 100 ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿತ್ತು. ನಂತರ ಎಚ್ಚೆತ್ತ ಬಿಗ್ ಬಜೆಟ್ ನ ಸಿನಿಮಾ ನಿರ್ಮಾಪಕರು ಒಬ್ಬರಾದ ಮೇಲೇ ಒಬ್ಬರು ತಮ್ಮ ತಮ್ಮ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಿದರು. ಹೀಗಿರುವಾಗಲೇ ಫೆಬ್ರವರಿ 19 ರಂದು ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರ ತೆರೆಕಂಡಿತು. ಆದರೆ ಈ ಸಿನಿಮಾ ಅಂದುಕೊಂಡ ಯಶಸ್ಸನ್ನು ಕಾಣಲಿಲ್ಲವಾದ್ರೂ ವಿವಾದವನ್ನು ಮಾತ್ರ ಮೈಮೇಲೆ ತಂದುಕೊಂಡಿತು. ಮುಂದೆ ಮಾರ್ಚ್ 11 ರ ಮಹಾಶಿವರಾತ್ರಿಯಂದು ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತು. ರಾಬರ್ಟ್ ಸಿನಿಮಾದ ಸಕ್ಸಸ್ ನಿಂದ ಚಂದನವನ ನಿರಾಳವಾಯ್ತು. ಇನ್ನು ವಾರದ ಹಿಂದೆಯಷ್ಟೇ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾಗೆ ಸರ್ಕಾರವೇ ಶತ್ರುವಾಯ್ತು.. ಈ ಚಿತ್ರ ರಿಲೀಸ್ ಆದ ಎರಡೇ ದಿನಕ್ಕೆ ಸರ್ಕಾರ ಮತ್ತೆ ಥಿಯೇಟರ್ ಗಳಲ್ಲಿ 50% ಆಸನ ಭರ್ತಿಗಷ್ಟೇ ಅವಕಾಶ ಎಂದು ಘೋಷಣೆ ಮಾಡಿತ್ತು. ಆದರೆ ಪುನೀತ್ ಸೇರಿದಂತೆ ಯುವರತ್ನ ಚಿತ್ರತಂಡ, ಅಪ್ಪು ಅಭಿಮಾನಿಗಳು, ಚಿತ್ರರಂಗದ ಕಲಾವಿದರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಂಗಾಲಾದ ಸರ್ಕಾರ ಯುವರತ್ನ ಸಿನಿಮಾಗೆ ಏಪ್ರಿಲ್ 7 ರ ವರೆಗೆ ಮಾತ್ರ ಶೇಕಡಾ 100 ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿತು. ಇನ್ನು ಥಿಯೇಟರ್ ಗಳಿಗೆ 50% ಹೇರಿಕೆ ಎಲ್ಲಿಯ ವರೆಗೆ ಜಾರಿಯಲ್ಲಿರುತ್ತದೋ ಗೊತ್ತಿಲ್ಲ. ಆದ್ರೆ ಈ ಮೊದಲೇ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದ ‘ಸಲಗ’ ,’ಕೋಟಿಗೊಬ್ಬ-3’ ಇನ್ನಷ್ಟು ಚಿತ್ರಗಳ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಇನ್ನೂ 2 ತಿಂಗಳು ಚಿತ್ರಮಂದಿರಗಳಲ್ಲಿ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾಗೋದು ಡೌಟ್ ಅಂತೆ. ಹೀಗೆ ಆದ್ರೆ ಚಂದನವನದಲ್ಲಿ ಮತ್ತೆ ಕಪ್ಪು ಛಾಯೆ ಆವರಿಸಿಕೊಳ್ಳುತ್ತಾ?.. ಗೊತ್ತಿಲ್ಲ.

Spread the love
Leave A Reply

Your email address will not be published.

Flash News