ಬಾ ಗುರು ಇಂದಿನಿಂದ ಐಪಿಎಲ್ T20 ಕಮಾಲ್ ಶುರು..

0

ರೋಹಿತ್‌ ಶರ್ಮಾ ತಮ್ಮ ದಾಖಲೆ ಮುಂದುವರಿಸುವ ತವಕದಲ್ಲಿದ್ದರೆ, ವಿರಾಟ್‌ ಕೊಹ್ಲಿ ದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ. ಎಂ.ಎಸ್‌.ಧೋನಿ ಹೊಸ ಅಸ್ತ್ರಗಳನ್ನು ಪ್ರಯೋಗಿಸಿ ಕಪ್‌ ಗೆಲ್ಲುವ ಗುರಿ ಹೊಂದಿದ್ದಾರೆ. ಬಹು ನಿರೀಕ್ಷಿತ 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ಗೆ ಶುಕ್ರವಾರ ಚಾಲನೆ ದೊರೆಯಲಿದ್ದು, ಬಯೋ ಬಬಲ್‌, ಕೊರೋನಾ ಆತಂಕ, ಖಾಲಿ ಕ್ರೀಡಾಂಗಣಗಳು,ಸಿಗದ ತವರಿನ ಲಾಭ ಹೀಗೆ ಹಲವು ಸವಾಲುಗಳನ್ನು ಮೀರಿ ಪ್ರಶಸ್ತಿ ಜಯಿಸಲು 8 ತಂಡಗಳು ಸಜ್ಜಾಗಿವೆ.  5 ತಿಂಗಳ ಅಂತರದಲ್ಲಿ ನಡೆಯುತ್ತಿರುವ 2ನೇ ಐಪಿಎಲ್‌ ಟೂರ್ನಿ ಇದು. ಕೊರೋನಾದಿಂದಾಗಿ ವಿಳಂಬಗೊಂಡಿದ್ದ 2020ರ ಐಪಿಎಲ್‌, ಸೆಪ್ಟೆಂಬರ್‌ನಿಂದ ನವೆಂಬರ್‌ ವರೆಗೂ ಯುಎಇನಲ್ಲಿ ನಡೆದಿತ್ತು. ಈ ಬಾರಿ ಟೂರ್ನಿ ಭಾರತದಲ್ಲೇ ನಡೆಯುತ್ತಿದೆಯಾದರೂ, ಪ್ರತಿ ತಂಡಗಳು ತಟಸ್ಥ ತಾಣಗಳಲ್ಲಿ ತಮ್ಮ ಪಂದ್ಯಗಳನ್ನು ಆಡಲಿವೆ.

6 ನಗರಗಳು: ಟೂರ್ನಿಗೆ ಒಟ್ಟು 6 ನಗರಗಳು ಆತಿಥ್ಯ ನೀಡಲಿವೆ. ಮೊದಲಿಗೆ ಚೆನ್ನೈ ಹಾಗೂ ಮುಂಬೈ, ಬಳಿಕ ಅಹಮದಾಬಾದ್‌ ಹಾಗೂ ಡೆಲ್ಲಿ ಹಾಗೂ ಕೊನೆಯದಾಗಿ ಬೆಂಗಳೂರು ಹಾಗೂ ಕೋಲ್ಕತಾ ನಗರಗಳು ಲೀಗ್‌ ಹಂತದ ಪಂದ್ಯಗಳಿಗೆ ಆತಿಥ್ಯ ನೀಡಲಿವೆ. 56 ಲೀಗ್‌ ಪಂದ್ಯಗಳು ಮುಕ್ತಾಯಗೊಂಡ ಬಳಿಕ ಪ್ಲೇ-ಆಫ್‌ ಹಂತದ 4 ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿವೆ. ಫೈನಲ್‌ ಪಂದ್ಯ ಮೇ 30ಕ್ಕೆ ನಿಗದಿಯಾಗಿದೆ. ಒಟ್ಟು 52 ದಿನಗಳ ಕಾಲ ಟೂರ್ನಿ ನಡೆಯಲಿದೆ.
5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಸತತ 3ನೇ ಬಾರಿಗೆ ಟ್ರೋಫಿ ಜಯಿಸುವ ಮೂಲಕ, 6ನೇ ಬಾರಿಗೆ ಚಾಂಪಿಯನ್‌ ಆಗಲು ಕಾತರಿಸುತ್ತಿದೆ. ಮೇಲ್ನೋಟಕ್ಕೆ ರೋಹಿತ್‌ ಪಡೆಯೇ ಚಾಂಪಿಯನ್‌ ಆಗುವ ಲಕ್ಷಣಗಳು ಗೋಚರಿಸಿವೆ. ಈ ವರೆಗೂ ಒಮ್ಮೆಯೂ ಚಾಂಪಿಯನ್‌ ಆಗದ ಆರ್‌ಸಿಬಿ, ಪಂಜಾಬ್‌ ಕಿಂಗ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿವೆ. 60 ಪಂದ್ಯ: ಟೂರ್ನಿಯಲ್ಲಿ ಫೈನಲ್‌ ಸೇರಿ ಒಟ್ಟು 60 ಪಂದ್ಯಗಳು ನಡೆಯಲಿವೆ. 52 ದಿನ: ಏ.9ರಿಂದ ಮೇ 30ರ ವರೆಗೂ ಒಟ್ಟು 52 ದಿನಗಳ ಕಾಲ ಟೂರ್ನಿ ನಡೆಯಲಿದೆ.

Spread the love
Leave A Reply

Your email address will not be published.

Flash News