ಪ್ರೊ.ಎಂ.ಎ.ಹೆಗಡೆ ನಿಧನಕ್ಕೆ ಸಚಿವ ಅರವಿಂದಲಿಂಬಾವಳಿ, ಡಿಸಿಎಂ ಸವದಿ ತೀವ್ರ ಸಂತಾಪ

0

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ, ಹಿರಿಯ ವಿದ್ವಾಂಸ ಪ್ರೊಫೆಸರ್ ಎಂ.ಎ.ಹೆಗಡೆ ಅವರ ನಿಧನಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ನಾಡು ಕಂಡ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರಾಗಿದ್ದ ಎಂ.ಎ.ಹೆಗಡೆ ಅವರು ಕರೋನಾ ಸೋಂಕಿನಿಂದ ನಿಧನರಾಗಿದ್ದು ದುರಾದೃಷ್ಟಕರ. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದರು, ಅವರು ರೂಪಿಸಿದ್ದ ಮಾತಿನ ಮಂಟಪ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು. ಅವರ ಅಕಾಲಿಕ ನಿಧನದಿಂದ ನಿಜಕ್ಕೂ ಸಾಂಸ್ಕೃತಿಕ ಲೋಕ ಒಂದು ದಿಗ್ಗಜ ವ್ಯಕ್ತಿತ್ವವನ್ನು ಕಳೆದುಕೊಂಡಂತಾಗಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜು ಮತ್ತು ಪಿಸಿ ಜಬಿನ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. ಸಂಸ್ಕೃತದಲ್ಲಿಯೂ ಅಪಾರ ಪಾಂಡಿತ್ಯ ಹೊಂದಿದ್ದ ಅವರು ಆನಂತರ ಸಂಸ್ಕೃತ ಉಪನ್ಯಾಸಕರಾಗಿಯೂ ಸಹ ಸೇವೆ ಸಲ್ಲಿಸಿದ್ದ ಹೆಗಡೆ ಅವರು ಯಕ್ಷಗಾನದ ಬಗ್ಗೆ ವಿಶೇಷ ಒಲವು ಹೊಂದಿದ್ದರು, ಸ್ವತಹ ಪಾತ್ರಧಾರಿಯು ಆಗಿದ್ದ ಹೆಗಡೆಯವರು 15ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ಸೀತ ವಿಯೋಗ ,ತ್ರಿಶಂಕು ಚರಿತೆ ,ರಾಜಾ ಕಂದಾಮ ಮುಂತಾದವು ಅವರ ಜನಪ್ರಿಯ ಪ್ರಸಂಗಗಳು ಎಂದು ನೆನೆದರು. ಅಲಂಕಾರ ತತ್ವ, ಭಾರತೀಯ ತತ್ವಶಾಸ್ತ್ರ ಪರಿಚಯ, ಬ್ರಹ್ಮಸೂತ್ರ ಚತು; ಸೂತ್ರಿ, ಮತ್ತು ಸಿದ್ಧಾಂತ ಬಿಂದು ಮುಂತಾದ ಗ್ರಂಥಗಳನ್ನು ರಚಿಸಿದ್ದಾರೆ. ಅತ್ಯಂತ ಪ್ರಚಾರ ಚಿಂತನೆಯ ವಿದ್ವಾಂಸರಾಗಿದ್ದ ಎಂ.ಎ.ಹೆಗಡೆ ತಮ್ಮ ಚಿಂತನೆಯನ್ನು ನಿಷ್ಠುರವಾಗಿ ಪ್ರತಿಪಾದಿಸುತ್ತಿದ್ದರು ಎಂದು ಸ್ಮರಿಸಿದ್ದಾರೆ.  ಸರಳ ಹಾಗೂ ನೇರ ನಡವಳಿಕೆಗೆ ಹೆಸರಾಗಿದ್ದರು. ಅವರ ನಿಧನ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ನಷ್ಟ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಇನ್ನು ಎಂ.ಎ. ಹೆಗಡೆ ನಿಧನಕ್ಕೆ ಡಿಸಿಎಂ ಸವದಿ ಸಂತಾಪ ಸೂಚಿಸಿದ್ದು, “ಪ್ರಸಿದ್ಧ ಯಕ್ಷಗಾನ ಕಲಾವಿದರು ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊಫೆಸರ್ ಎಂ.ಎ. ಹೆಗಡೆ, ದಂಟಕಲ್ ಅವರು ಇಂದು ನಿಧನರಾದ ಸುದ್ದಿ ಕೇಳಿ ನನಗೆ ದಿಗ್ಭ್ರಮೆಯಾಯಿತು. ದಿವಂಗತ ಹೆಗಡೆಯವರು ಉತ್ತಮ ವಾಗ್ಮಿಗಳು, ಕನ್ನಡ ಮತ್ತು ಸಂಸ್ಕೃತದ ಪಂಡಿತರು, ಸ್ವತಃ ಯಕ್ಷಗಾನ ಕಲಾವಿದರಾಗಿ ಕನ್ನಡ ನಾಡು-ನುಡಿಗೆ ಅಪಾರ ಕೊಡುಗೆ ನೀಡಿದ್ದರು.
ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಹಲವು ಹೊಸತನದ ಅರ್ಥಪೂರ್ಣ ಕಲಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದು, ಹಲವು ಅಭಿಜಾತ ಕಲಾವಿದರಿಗೆ ಪ್ರೋತ್ಸಾಹ ಮಾರ್ಗದರ್ಶನ ನೀಡಿದ್ದರು.
ಶ್ರೀ ಹೆಗಡೆ ಅವರ ಅಗಲಿಕೆ ನಿಜಕ್ಕೂ ಕನ್ನಡದ ಸೃಜನಶೀಲ ಕ್ಷೇತ್ರಕ್ಕೆ ದೊಡ್ಡ ನಷ್ಟವೇ ಸರಿ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತಾ, ಅವರ ಕುಟುಂಬದವರಿಗೆ ನನ್ನ ಸಾಂತ್ವನ ಗಳನ್ನು ತಿಳಿಸಬಯಸುತ್ತೇನೆ” ಎಂದರು.

Spread the love
Leave A Reply

Your email address will not be published.

Flash News