ಇತಿಹಾಸದ ಪುಟ ಸೇರಲಿದೆಯೇ ಆಕಾಶವಾಣಿ..?

0

” ಆಕಾಶವಾಣಿ” ಇದು ಸ್ವತಂತ್ರ ಭಾರತದ ರೇಡಿಯೋ ವ್ಯವಸ್ಥೆಯ ಹೆಸರು. ಇಂಗ್ಲೀಷಿನಲ್ಲಿ ಇದು ಆಲ್ ಇಂಡಿಯಾ ರೇಡಿಯೋ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೆಹಲಿ, ಮುಂಬೈ, ಕಲ್ಕತ್ತಾ, ಮದ್ರಾಸು, ಮತ್ತು ತಿರುಚಿನಾಪಲ್ಲಿ ಈ ಆರು ಕೇಂದ್ರಗಳಿದ್ದವು. ಆಕಾಶವಾಣಿ ಕೇಂದ್ರಗಳನ್ನು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ವಲಯಗಳನ್ನಾಗಿ ವಿಂಗಡಿಸಲಾಗಿತ್ತು.

ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ಕೈಗಾರಿಕೆ ವಿಜ್ಞಾನ, ರಾಜಕೀಯ, ಶಿಕ್ಷಣ ಕೃಷಿ ಹೀಗೆ ಅನೇಕ ಆಸಕ್ತಿಗಳಿಗೆ ಸ್ಥಾನವಿದೆ. ಕೃಷಿಕರಿಗೆ ಅನುಕೂಲಕರವಾದ ಅನೇಕ ಅಂಶಗಳನ್ನು ಕುರಿತು ಪ್ರತಿದಿನ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಯುವಜನರು, ಮಹಿಳೆಯರು, ವಿದ್ಯಾರ್ಥಿಗಳು, ಕಾರ್ಮಿಕರು, ಹರಿಜನ-ಗಿರಿಜನರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಮನರಂಜನಾ- ಮನೋಲ್ಲಾಸ ಒದಗಿಸುವ ದೃಷ್ಠಿಯಿಂದ ಸಂಗೀತ, ನಾಟಕ, ಚಲನಚಿತ್ರ ಪ್ರಸಾರಕ್ಕೆ ಮೊದಲ ಸ್ಥಾನ ನೀಡಲಾಗುತ್ತಿತ್ತು. ಕ್ರೀಡೆಯ ವೀಕ್ಷಕ ವಿವರಣೆ ಆಕಾಶ ವಾಣಿಯ ಆಕರ್ಷಕ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಕರ್ನಾಟಕದ ಎಲ್ಲಾ ಆಕಾಶವಾಣಿ ಕೇಂದ್ರಗಳು ಅವು ಆರಂಭವಾದ ದಿನದಿಂದ ‘ಕೃಷಿರಂಗ’ ಕಾರ್ಯಕ್ರಮವನ್ನು ಪ್ರತಿನಿತ್ಯ ಮಾಡುತ್ತಿತ್ತು. ರೈತರು ಹೊಲದ ಕೆಲಸ ಮುಗಿಸಿ ಮನೆಗೆ ಬಂದು ವಿಶ್ರಮಿಸುತ್ತಾ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅನುಕೂಲಕರವಾದ ಹೊತ್ತಿನಲ್ಲಿ ಸಾಯಂಕಾಲ ಆರು ಐವತ್ತಕ್ಕೆ ಈ ಕಾರ್ಯಕ್ರಮ ಮೂಡಿ ಬರುತ್ತಿತ್ತು. ಈಗ ಬದಲಾವಣೆಯ ವೀವರು ಅದನ್ನು ಸಂಜೆ ಐದು ಮೂವತ್ತಕ್ಕೆ ನಿಗದಿ ಮಾಡಿದ್ದಾರೆ. ಆ ಹೊತ್ತಲ್ಲಿ ರೈತರು ಹೊಲದಲ್ಲಿರುತ್ತಾರೆಂಬ ಸಾಮಾನ್ಯ ಜ್ಞಾನವೂ ಇಲ್ಲದ ಅಧಿಕಾರಿಗಳು ಮಾತ್ರ ಇಂತಹ ಕೆಲಸಕ್ಕೆ ಕೈ ಹಾಕಲು ಸಾಧ್ಯ. ಇನ್ನು ಅಚ್ಚರಿ ಎಂದರೆ ಈವರೆಗೆ ಇದು ಕೃಷಿರಂಗ ಆಗಿತ್ತು. ಅದನ್ನೀಗ ರೈತನೇ ರಾಜ ಎಂದು ಬದಲಿಸಿ ರೈತನಿಗೆ ರಾಜನ ಪಟ್ಟ ಕಟ್ಟಿದ್ದಾರೆ. ಈ ಶೀರ್ಷಿಕೆ ರೈತನನ್ನು ವ್ಯಂಗ್ಯ ಮಾಡುತ್ತಿದೆಯಷ್ಟೇ ಅಲ್ಲ ಅಪಮಾನವನ್ನೂ ಮಾಡುವಂತಿದೆ. ಇನ್ನುಮುಂದೆ ಇಲ್ಲಿ ಕರಿಯತ್ತ ಕಾಳಿಂಗ ಬಿಳಿಯತ್ತ ಮಾಲಿಂಗ ಸರಕಾರದತ್ತ ಸಾರಂಗ ಎಂಬ ದೇಶಿ ದಿನಸೂಚಿ ಇರದೇ ಬೆಂಗಳೂರು ಕೇಂದ್ರದ ದಿನಸೂಚಿ ಇರುತ್ತದೆ. ಇದನ್ನೇ ಬಹುತೇಕ ಕೇಂದ್ರಗಳು ಸಹ ಪ್ರಸಾರ ಮಾಡಬೇಕು. ರಾಜ್ಯದ ಎಲ್ಲಾ ಹದಿನಾಲ್ಕು ಕೇಂದ್ರಗಳಲ್ಲೂ ಇನ್ನೂ ಬಹುತೇಕ ಕಾರ್ಯಕ್ರಮಗಳನ್ನು ಬೆಂಗಳೂರಿನಿಂದಲೇ ಸಹ ಪ್ರಸಾರ ಮಾಡಬೇಕಿದೆ. ಅದರಲ್ಲಿ ಕೆಲವೊಂದು ಕಾರ್ಯಕ್ರಮಗಳ ಹೆಸರು ಬದಲಿಸಿ ಹೊಸ ನಾಮಕರಣ ಮಾಡಿದ್ದಾರೆ. ಅವು ಕನ್ನಡ ಭಾಷೆಗೆ ಅಪಚಾರ ಮಾಡುವಂತಿದೆಯಷ್ಟೇ ಅಲ್ಲ, ನಗೆಯನ್ನು ಹುಟ್ಟಿಸುವಂತಿದೆ. ಈವರೆಗೆ ಇದ್ದ ಸಾಹಿತ್ಯ ಕಾರ್ಯಕ್ರಮ ಈಗ ‘ಲಿಟರರಿ ಗುರು’ ಎಂದಾಗಿದೆ. ಕರ್ನಾಟಕದ ಎಲ್ಲಾ ಕೇಂದ್ರಗಳ ಬಹುದೊಡ್ಡ ಕೊಡುಗೆಯಾಗಿದ್ದ ಸಂಗೀತ ಕಾರ್ಯಕ್ರಮಗಳಿಗೆ ಕೊಕ್ಕೆ ಹಾಕಿ ಅಳಿದುಳಿದ ಅಷ್ಟಿಷ್ಟು ಕಾರ್ಯಕ್ರಮಕ್ಕೆ ಈಗ ಮ್ಯೂಸಿಕ್ ಗುರು ಎಂಬ ಶೀರ್ಷಿಕೆ ದಯಪಾಲಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೇಳಿ ಮಾಡಿಸಿದ ಮಾದ್ಯಮ ಆಕಾಶವಾಣಿ ಎಂಬುದು ಮಾದ್ಯಮ ತಜ್ಞರ ಅಭಿಪ್ರಾಯ ಒಕ್ಕೂಟ ವ್ಯವಸ್ಥೆ ನಿರ್ವಾಹಣೆಯಲ್ಲಿ ಆಕಾಶವಾಣಿಯು ಮಹತ್ವದ ಪಾತ್ರ ವಹಿಸಬಲ್ಲದೆಂಬುದು ಕಳೆದ ತೊಂಬತೈದು ವರ್ಷಗಳಿಂದ ಸಾಭೀತಾಗುತ್ತಾ ಬಂದಿದೆ. ಜೊತೆಗೆ ಜಗತ್ತಿನಲ್ಲೇ ಅತ್ಯಂತ ಬೃಹತ್ತಾದ ಪ್ರಸಾರ ಜಾಲವೆಂಬ ಖ್ಯಾತಿಯನ್ನು ಪಡೆದಿದೆ. ಇಂತಹ ಮಾದ್ಯಮದ ಕುತ್ತಿಗೆ ಹಿಸುಕಿ ಅದರ ದನಿಯನ್ನೇ ಅಡಗಿಸುವ ಕ್ರರ‍್ಯ ಪಡೆದಿರುವುದು ಸಾಂಸ್ಕೃತಿಕ ಅವಾಸನದ ಸೂಚಕ. ಬಹುತ್ವವೇ ಭಾರತದ ಸೊಗಸು ಅದೇ ಅದರ ಸೌಂದರ್ಯ ಅದನ್ನೇ ಅಳಿಸಿ ಹಾಕಿದರೆ ಉಳಿಯುವುದು ವಿರೂಪಗೊಂಡ ಅಥವಾ ಮುಖವಾಡ ಧರಿಸಿದ ವಿಕೃತ ಮುಖ ಮಾತ್ರ. ಆ ಚಿತ್ರವು ಕಾಣಬಾರದೆಂದರೆ ಆಕಾಶವಾಣಿಯು ಈಗ ಇಟ್ಟಿರುವ ಕೆಟ್ಟ ಹೆಜ್ಜೆಗಳನ್ನು ಹಿಂಪಡೆಯುವುದು ಔಚಿತ್ಯ ಪೂರ್ಣ. ಇಲ್ಲದಿದ್ದರೆ, ವಿವಿಧತೆಯಲ್ಲಿ ಏಕತೆ ದೇಶದ ಘೋಷಣೆಯೇ ನಗೆಪಾಟಲಿಗೀಡಾಗುತ್ತದೆ. ಹೀಗೆ ಆದ್ರೆ ಮುಂದೊಂದು ದಿನ ‘ಆಕಾಶವಾಣಿ’ ಇತಿಹಾಸದ ಪುಟ ಸೇರೋದಂತೂ ಗ್ಯಾರಂಟಿ.

Spread the love
Leave A Reply

Your email address will not be published.

Flash News