ಕೊರೊನಾ ಎರಡನೇ ಅಲೆ ಸ್ಫೋಟ ಹಿನ್ನೆಲೆ.. 1 ರಿಂದ 9 ನೇ ತರಗತಿ ಪರೀಕ್ಷೆ ರದ್ದು ಮಾಡಿ ಮುಂದಿನ ತರಗತಿಗೆ ಪಾಸ್..

0

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ 1 ರಿಂದ 9ನೇ ತರಗತಿ ಪರೀಕ್ಷೆ ನಡೆಸೋದು ಕಷ್ಟ ಎಂಬುದಾಗಿ ತಜ್ಞರು ಅಭಿಪ್ರಾಯ ಪಟ್ಟ ಹಿನ್ನಲೆಯಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯದಲ್ಲಿ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಈ ಹಿಂದಿನ ಶೈಕ್ಷಣಿಕ ದಾಖಲೆಗೆಳ ಆಧಾರದ ಮೇಲೆ ಪರೀಕ್ಷೆ ಇಲ್ಲದೇ ಪಾಸ್ ಮಾಡುವುದಾಗಿ ತಿಳಿಸಿ ಆದೇಶಿಸಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು(ಪ್ರೌಢ ಶಿಕ್ಷಣ) ಸುತ್ತೋಲೆ ಹೊರಡಿಸಿದ್ದು, ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳಲ್ಲಿ ಶೈಕ್ಷಣಿಕ ಪ್ರಕ್ರಿಯೆ ಪ್ರತಿ ವರ್ಷದಂತೆ ನಿರ್ವಹಿಸಲು ಸಾಧ್ಯವಾಗಿರುವುದಿಲ್ಲ.

ಇಂತಹ ಕಠಿಣ ಸನ್ನಿವೇಶದಲ್ಲಿಯೂ ಕೂಡ ಮಕ್ಕಳ ಬೋಧನಾ ಕಲಿಕಾ ಪ್ರಕ್ರಿಯೆಯಿಂದ ವಂಚಿತರಾಗಬಾರದೆಂದು ವಿದ್ಯಾಗಮ ಕಾರ್ಯಕ್ರಮ, ದೂರದರ್ಶನದ ಚಂದನ ವಾಹಿನಿಯಲ್ಲಿ ( ಸಂವೇದ ಕಾರ್ಯಕ್ರಮ) ಪಾಠಪ್ರಸಾರ, ರೇಡಿಯೋ ಪಾಠ ಪ್ರಸಾರ ಮಾಡಲಾಗಿದೆ. ಹಲವಾರು ಶಾಲೆಗಳಲ್ಲಿ ಆನ್ ಲೈನ್ ವಿಧಾನದಲ್ಲಿ ತರಗತಿಗಳನ್ನು ನಡೆಸುವ, ಮಕ್ಕಳನ್ನು ತಲುಪುವ ಪ್ರಯತ್ನ ಮಾಡಲಾಗಿದೆ. ಆದ್ರೇ ಪ್ರಸಕ್ತ ಸಾಲಿನಲ್ಲಿ ಶಾಲೆಗಳಲ್ಲಿ ನಿರ್ವಹಿಸಿದ ಕೆಲವು ಬೋಧನಾ ಕಲಿಕೆ ಪ್ರಕ್ರಿಯೆಯ ಪ್ರಯತ್ನಗಳಿಗೆ ಮೌಲ್ಯಮಾಪನ ನಿರ್ವಹಿಸಿ, ವಿಶ್ಲೇಷಿಸಿ, ಮುಕ್ತಾಯಗೊಳಿಸಬೇಕೆಂದಿರುವ ಸಂದರ್ಭದಲ್ಲಿ ಪುನಹ ಕೋವಿಡ್ -19 ಸೋಂಕು ಹೆಚ್ಚಾಗಿರುವ ಹಿನ್ನಲೆಯಲ್ಲಿ, ಪ್ರಸ್ತುತ ನಡೆಯುತ್ತಿರುವ ವಿದ್ಯಾಗಮ, ಶಾಲೆಗಳಲ್ಲಿ ನಡೆಯುತ್ತಿರುವ 6 – 9ನೇ ತರಗತಿಗಳನ್ನು ದಿನಾಂಕ 20-04-2021ರವೆರೆಗೆ ಸ್ಥಗಿತಗೊಳಿಸಲಾಗಿದೆ. ಈ ಕುರಿತು ವಿವಿಧ ಸರ್ಕಾರಿ, ಖಾಸಗಿ, ಶಾಲಾ ಸಂಘಟನೆಗಳು, ಆಡಳಿತ ಮಂಡಳಿ, ಶಿಕ್ಷಕರು, ಪೋಷಕರ ಅಭಿಪ್ರಾಯದ ಸಭೆ ನಡೆಯಲಾಗಿದೆ. ಸಭೆಯಲ್ಲಿ ಭಾಗವಹಿಸಿದ ಕೆಲವರು ಸಿಬಿಎಸ್‌ಇ, ಐಸಿಎಸ್‌ಇ ಮಂಡಳಿಗಳ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ. ರಾಜ್ಯ ಪಠ್ಯಕ್ರಮದ ಕೆಲವು ಶಾಲೆಗಳಲ್ಲಿ ಈಗಾಗಲೇ ಸಂಕಲನಾತ್ಮಕ ಮೌಲ್ಯಾಂಕವನ್ನು ಪೂರ್ಣಗೊಳಿಸಲಾಗಿ. ಹಾಗೂ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. ಈ ಎಲ್ಲಾ ಹಿನ್ನಲೆಯಲ್ಲಿ 2020-21ನೇ ಸಾಲಿನ 1 ರಿಂದ 9ನೇ ತರಗತಿಯ ಮಕ್ಕಳ ಕಲಿಕಾ ಪ್ರಗತಿಯ ಮೌಲ್ಯಾಂಕನ ವಿಶ್ಲೇಷಣೆ ಹಾಗೂ ಫಲಿತಾಂಶ ಪ್ರಕಟಣೆಯ ನಿರ್ವಹಣೆಯ ಕುರಿತು, ಈ ಮುಂದಿನ ಮಾರ್ಗಸೂಚಿ ನೀಡಲಾಗಿದೆ.

ಪ್ರಸ್ತುತ ವರ್ಷ ಕೋವಿಡ್-19ರ ಹಿನ್ನಲೆಯಲ್ಲಿ 1 ರಿಂದ 5ನೇ ತರಗತಿಗಳಿಗೆ 04-08-2020ರಿಂದ 10-10-2020ರವರೆಗೆ ಈಗಾಗಲೇ ವಿದ್ಯಾಗಮ ಕಾರ್ಯಕ್ರಮ ನಡೆಸಲಾಗಿದೆ. ತದನಂತರ ಕಾರಣಾಂತರದಿಂದ ಇದನ್ನು ಸ್ಥಗಿತಗೊಳಿಸಲಾಗಿತ್ತು. ಆನಂತ್ರ ಸದರಿ ಮಕ್ಕಳಿಗೆ ಭೌತಿಕವಾಗಿ ಶಾಲೆಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಿರುವುದಿಲ್ಲ. ಆದ್ರೇ ಆನ್ ಲೈನ್ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲಾಗಿದೆ. ಹಾಗೂ 5 ರಿಂದ 10ನೇ ತರಗತಿವರೆಗೆ ದೂರದರ್ಶನದ ಚಂದನ ವಾಹಿನಿಯಲ್ಲಿ ಸಂವೇದ ಇ ಕಲಿಕಾ ಕಾರ್ಯಕ್ರಮದ ಮೂಲಕ ಪಾಠಗಳನ್ನು ಪ್ರಸಾರ ಮಾಡಲಾಗಿದೆ. 1 ರಿಂದ 4ನೇ ತರಗತಿವರೆಗೆ 11-01-2021ರಿಂದ ಕಲಿಯುತ್ತಾ ನಲಿಯೋಣ ರೇಡಿಯೋ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ. ಪ್ರಸ್ತುತ ಹಂತದಲ್ಲಿಯೂ ಕೂಡ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳು ಶಾಲೆಗಳಿಗೆ ಭೌತಿಕವಾಗಿ ಹಾಜರಾಗಲು ಕೋವಿಡ್ 19ರ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯದಂತೆ ಅವಕಾಶ ನೀಡಿರುವುದಿಲ್ಲ. ಆದ್ದರಿಂದ ಸದರಿ ವಿದ್ಯಾರ್ಥಿಗಳ ಮೌಲ್ಯಾಂಕನ ನಡೆಸುವ ಸಲುವಾಗಿ ಈ ಕೆಳಗಿನ ಮಾರ್ಗಸೂಚಿಗಳನ್ನು ನೀಡಲಾಗಿದೆ. 1 ರಿಂದ 5ನೇ ತರಗತಿಗಳ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮದಲ್ಲಿ ನಿರ್ವಹಿಸಿದ ದಾಖಲೆಗಳು, ಸಂವಹನದ ಆಧಾರದ ಮೇಲೆ ಕೆಲವು ಶಾಲೆಯವರು ಆನ್ ಲೈನ್ ನ ಮೂಲಕ ತರಗತಿ ನಿರ್ವಹಿಸಿದ್ದಲ್ಲಿ, ಆ ಸಂದರ್ಭದಲ್ಲಿ ಅವಲೋಕಿಸಿದ ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಮಕ್ಕಳಿಗೆ ನೀಡಿದ್ದ ಪ್ರಬಂಧ, ಮುಂತಾದ ಚಟುವಟಿಕೆಗಳನ್ನಾಧರಿಸಿದ ಕೃತಿ ಸಂಪುಟ, ಇತರೆ ಲಭ್ಯ ದಾಖಲೆಗಳನ್ನು ಅವಲೋಕಿಸಿ, ಈವರೆಗೆ ಪೂರೈಸಿದ ಪಠ್ಯವಸ್ತು, ಸಾಮರ್ಥ್ಯ, ಕಲಿಕಾ-ಫಲಗಳ ಸಾಧನೆ ಮತ್ತು ಕೊರತೆಗಳನ್ನು ಶಾಲಾ ಹಂತದಲ್ಲಿ ಸಿಸಿಇ ನಿಯಮಗಳಂತೆ ವಿಶ್ಲೇಷಿಸಿ ಪ್ರಗತಿ ಪತ್ರದಲ್ಲಿ ದಾಖಲಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಬಡ್ತಿ ನೀಡುವುದು. ಈ ಪ್ರಕ್ರಿಯೆಯನ್ನು ಶಾಲಾ ಹಂತದಲ್ಲಿ 30 ಏಪ್ರಿಲ್ 2021ರೊಳಗೆ ನಿರ್ವಹಿಸಿ, ಫಲಿತಾಂಶ ದಾಖಲಿಸಿ ಪೂರ್ಣಗೊಳಿಸಿವುದು.

ಪ್ರಸ್ತುತ ಸಾಲಿನಲ್ಲಿ 6 ರಿಂದ 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ನಿರ್ವಹಿಸಿದ ವಿದ್ಯಾಗಮ ಕಾರ್ಯಕ್ರಮದಲ್ಲಿ ದಾಖಲೆಗಳು, ಸಂವಹನದ ಆಧರದ ಮೇಲೆ,  ಭೌತಿಕ ಹಾಗೂ ಆನ್ ಲೈನ್ ಶಿಕ್ಷಣದ ಮೂಲಕ ತರಗತಿ ನಿರ್ವಹಿಸಿದ ಸಂದರ್ಭದಲ್ಲಿ ಅವಲೋಕಿಸಿದ ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಮಕ್ಕಳಿಗೆ ನೀಡಿದ ಕಲಿಕಾ ಪೂರಕ ಚಟುವಟಿಕೆಗಳು, ಪ್ರಾಜೆಕ್ಟ್ ಚಟುವಟಿಕೆಗಳು ಮುಂತಾದವುದುಗಳನ್ನು ಆಧರಿಸಿ ಸಂಗ್ರಹಿಸಿದ ದಾಖಲೆಗಳ ಕೃತಿ ಸಂಪುಟಗಳ ಮೇಲೆ ನಿರ್ವಹಿಸಿದ ಮೌಲ್ಯಾಂಕನ ಹಾಗೂ ಭೌತಿಕವಾಗಿ ನಿರ್ವಹಿಸಿದ, ಆನ್ ಲೈನ್ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಈಗಾಗಲೇ ಕೈಗೊಂಡಿರುವ ರೂಪಣಾತ್ಮಕ ಮೌಲ್ಯಮಾಪನ ಹಾಗೂ ಸಂಕಲನಾತ್ಮಕ ಮೌಲ್ಯಮಾಪನವನ್ನು ನಿರ್ವಹಿಸಿದ್ದಲ್ಲಿ ಅವುಗಳ ದಾಖಲೆಗಳನ್ನಾಧರಿಸಿ ಪಡೆದ ಅಂಕಗಳನ್ನು 100ಕ್ಕೆ ವೃದ್ಧಿಸಿ ಶ್ರೇಣಿ ನಮೂದಿಸುವುದು. ಒಟ್ಟಾರೆ ಈವರೆಗೆ ಪೂರೈಸಿದ ಪಠ್ಯವಸ್ತು, ಕಲಿಕಾ ಸಾಮರ್ಥ್ಯಗಳ, ಕಲಿಕಾ ಫಲಗಳ ಸಾಧನೆ ಮತ್ತು ಕೊರತೆಗಳನ್ನು ಶಾಲಾ ಹಂತದಲ್ಲಿ ಸಿಸಿಇ ನಿಯಮದಂತೆ ವಿಶ್ಲೇಷಿಸಿ, ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಬಡ್ತಿ ನೀಡುವುದು ಹಾಗೂ ಪ್ರಗತಿ ಪತ್ರದಲ್ಲಿ ದಾಖಲಿಸುವುದು ಎಂದು ತಿಳಿಸಿದ್ದಾರೆ.

Spread the love
Leave A Reply

Your email address will not be published.

Flash News