ಕೋಳಿಗಳು ಮೊಟ್ಟೆ ಇಡುತ್ತಿಲ್ಲವೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತ..! ತಮಾಷೆ ಅಲ್ಲ..!

0

ಮುಂಬೈ: ನನ್ನ ಸಾಕಣಿಕಾ ಕೇಂದ್ರದಲ್ಲಿರುವ ಕೋಳಿಗಳು ಮೊಟ್ಟೆ ಇಡುತ್ತಿಲ್ಲ ಎಂದು ಇಲ್ಲೊಬ್ಬ ರೈತ ಪೊಲೀಸರಿಗೆ ದೂರು ನೀಡಿದ್ದಾರೆ.. ! ಇದೇನಪ್ಪಾ.. ಈ ರೈತನ ಪೌಲ್ಟ್ರಿಯಲ್ಲಿ ಕೋಳಿ ಮೊಟ್ಟೆ ಇಡದಿದ್ದರೆ ಪೊಲೀಸರೇನು ಮಾಡಬೇಕು ಎಂದು ಅನ್ನಿಸುವುದು ಸಹಜ. ಆದರೆ ಇಲ್ಲಿಯೇ ಇದೆ ನಿಜವಾದ ಟ್ವಿಸ್ಟ್​..!

ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. ಈ ರೈತರ ದೂರು ಏನೆಂದರೆ, ನಾನು ಒಂದು ಕೋಳಿ ಆಹಾರ ಉತ್ಪಾದನಾ ಘಟಕದಿಂದ ಆಹಾರ ತಂದು ನನ್ನ ಸಾಕಾಣಿಕಾ ಕೇಂದ್ರದ ಕೋಳಿಗಳಿಗೆ ನೀಡಿದ್ದೆ. ಅದನ್ನು ತಿಂದ ನಂತರ ಇಲ್ಲಿರುವ ಒಂದೂ ಹೆಣ್ಣು ಕೋಳಿಯೂ ಮೊಟ್ಟೆ ಇಟ್ಟಿಲ್ಲ ಎಂದು ಆ ನಿರ್ದಿಷ್ಟ ಆಹಾರ ಉತ್ಪಾದನಾ ಕಂಪನಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಮಸ್ಯೆ ಎದುರಾಗಿದ್ದು ಬರೀ ಈತನೊಬ್ಬನಿಗೇ ಅಲ್ಲ, ಆ ಕಂಪನಿಯ ಆಹಾರವನ್ನು ಕೋಳಿಗಳಿಗೆ ತಿನ್ನಿಸಿದ, ಅದೇ ಏರಿಯಾದ ಉಳಿದ ಮೂರ್ನಾಲ್ಕು ಕೋಳಿ ಸಾಕಣಿಕಾ ಕೇಂದ್ರದ ಮಾಲೀಕರೂ ಸಹ ಇದೇ ಸಮಸ್ಯೆಯನ್ನು ಪೊಲೀಸರ ಎದುರು ತೋಡಿಕೊಂಡಿದ್ದಾರೆ. ಇನ್ನು ಆಹಾರ ಒದಗಿಸಿದ ಉತ್ಪಾದನಾ ಕಂಪನಿ, ಎಲ್ಲ ಪೌಲ್ಟ್ರಿ ಮಾಲೀಕರಿಗೂ ಪರಿಹಾರ ನೀಡಲು ಒಪ್ಪಿಗೆ ನೀಡಿದ್ದರಿಂದ ಪೊಲೀಸರು ಯಾವುದೇ ಎಫ್​ಐಆರ್ ದಾಖಲು ಮಾಡಲಿಲ್ಲ.

ಅಹ್ಮದ್​ ನಗರದಲ್ಲಿರುವ ಕಂಪನಿಯೊಂದರಿಂದ ನಾನು ಕೋಳಿಗಳಿಗಾಗಿ ಆಹಾರ ಖರೀದಿ ಮಾಡಿದ್ದೆ. ಅದನ್ನು ತಿಂದಾಗಿನಿಂದ ನನ್ನ ಕೋಳಿಗಳು ಮೊಟ್ಟೆ ಇಟ್ಟಿಲ್ಲ ಎಂದು ರೈತ ದೂರು ನೀಡಿದ್ದ ಬೆನ್ನಲ್ಲೇ, ಪೊಲೀಸರು ಅಹ್ಮದ್​ನಗರದ ಪಶುಸಂಗೋಪನಾ ಅಧಿಕಾರಿಯನ್ನು ಭೇಟಿ ಮಾಡಿದ್ದರು. ಆ ಆಹಾರವನ್ನು ಇನ್ನೊಮ್ಮೆ ಪರೀಕ್ಷೆ ಕೂಡ ಮಾಡಲಾಗಿದೆ. ಕೆಲವು ಆಹಾರಗಳು ನಿರ್ದಿಷ್ಟ ತಳಿಯ ಕೋಳಿಗಳಿಗೆ ಹೊಂದಾಣಿಕೆ ಆಗುವುದಿಲ್ಲ. ಇದೊಂದು ಸಾಮಾನ್ಯ ವಿದ್ಯಮಾನ ಎಂದು ಪಶುಸಂಗೋಪನಾ ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಮೊದಲು ಯಾವ ಆಹಾರ ಕೊಡುತ್ತಿದ್ದೀರೋ, ಅದನ್ನೇ ಕೊಟ್ಟರೆ ಮತ್ತೆ ಮೊಟ್ಟೆ ಇಡುತ್ತವೆ ಎಂದೂ ಸ್ಪಷ್ಟವಾಗಿ ವಿವರಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಪಟ್ಟಂತೆ ಕಂಪನಿಯ ಮಾಲೀಕನನ್ನು ಸಂಪರ್ಕಿಸಿದಾಗ, ಅವರೂ ಸಹ ಒಪ್ಪಿಕೊಂಡಿದ್ದಾರೆ. ಹಲವು ಕೋಳಿಸಾಕಾಣಿಕಾ ಕೇಂದ್ರದ ಮಾಲೀಕರು ದೂರು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗೇ ರೈತರಿಗಾದ ನಷ್ಟ ಪರಿಹಾರ ನೀಡಲೂ ಒಪ್ಪಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಳ್ಳಲಿಲ್ಲ.

Spread the love
Leave A Reply

Your email address will not be published.

Flash News