ಕೊರೊನಾ 2ನೇ ಅಲೆ ತಾಳ್ಮೆ ಪರೀಕ್ಷಿಸುತ್ತಿದೆ, ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೋರಾಡೋಣ: ಪ್ರಧಾನಿ ನರೇಂದ್ರ ಮೋದಿ

0

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕೀ ಬಾತ್ ಮೂಲಕ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು. ಕೊರೊನಾ ಎರಡನೇ ಅಲೆಯಿಂದ ದೇಶ ತತ್ತರಿಸುತ್ತಿರುವ ಸಂದರ್ಭದಲ್ಲಿ ತಮ್ಮ 76ನೇ ಮನ್​​ ಕೀ ಬಾತ್​ ನಲ್ಲಿ ಕೂಡ ಕೊರೊನಾ ನಿಯಂತ್ರಣದ ಬಗ್ಗೆ ಮಾತನಾಡಿದರು. ಕೊವಿಡ್​ ಸೋಂಕು ನಮ್ಮೆಲ್ಲರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಮೊದಲನೇ ಅಲೆಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿತ್ತು. ಆದರೆ ಈಗ ನಾವು ಮತ್ತೆ ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ದೇಶವಾಸಿಗಳೇ, ಕೊರೊನಾ ಸೋಂಕಿನ ವಿರುದ್ಧ ಗೆಲ್ಲಬೇಕಾಗಿದೆ. ವೈರಸ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಾನು ವಿವಿಧ ವಲಯಗಳ ತಜ್ಞರೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದೇನೆ. ಔಷಧ ಕ್ಷೇತ್ರ, ಲಸಿಕೆ ಉತ್ಪಾದಕರು, ಆಕ್ಸಿಜನ್​ ಉತ್ಪಾದನಾ ಘಟಕ ನಡೆಸುತ್ತಿರುವವರು, ಆರೋಗ್ಯ ವಲಯದ ಬಗ್ಗೆ ತಿಳಿದವರು ಕೇಂದ್ರ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡುತ್ತಿದ್ದಾರೆ. ಈ ಬಾರಿ ತಜ್ಞರು ನೀಡುವ ವೈಜ್ಞಾನಿಕ ಸಲಹೆಗಳನ್ನು ಚಾಚೂತಪ್ಪದೆ ಪಾಲಿಸುವ ಮೂಲಕ ಕೊರೊನಾವನ್ನು ಮಣಿಸಬೇಕು. ನಮ್ಮ ಸರ್ಕಾರ ಜವಾಬ್ದಾರಿಗಳನ್ನು ನಿಭಾಯಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ನರೇಂದ್ರ ಮೋದಿ ತಿಳಿಸಿದರು. ನಮ್ಮ ದೇಶದ ವೈದ್ಯರು, ಆರೋಗ್ಯ ಸಿಬ್ಬಂದಿ, ಕೊರೊನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಅದ್ಭುತ ಹೋರಾಟ ನಡೆಸುತ್ತಿದ್ದಾರೆ. ಕಳೆದ ವರ್ಷ ಅವರು ಗಳಿಸಿದ ಎಲ್ಲ ರೀತಿಯ ಅನುಭವಗಳನ್ನೂ ಪ್ರಯೋಗಿಸುತ್ತಿದ್ದಾರೆ. ದೇಶದ ಜನರು ಕೊರೊನಾ ಬಗ್ಗೆ ಯಾವುದೇ ಗಾಳಿಸುದ್ದಿಯನ್ನೂ ನಂಬಿ ಗಾಬರಿಯಾಗಬಾರದು. ನಿಮ್ಮ ಕುಟುಂಬದ ವೈದ್ಯರು, ಹತ್ತಿರದ ಡಾಕ್ಟರ್ಸ್​ ಜತೆ ಮಾತನಾಡಿ, ಸರಿಯಾದ ಮಾಹಿತಿ ತೆಗೆದುಕೊಳ್ಳಿ. ಅಗತ್ಯವಿದ್ದರೆ ಅವರನ್ನು ಸಂಪರ್ಕಿಸಿ. ಕೊರೊನಾ ಬಂದ ತಕ್ಷಣ ಯಾವ ಕಾರಣಕ್ಕೂ ಹೆದರಬೇಡಿ ಎಂದು ಧೈರ್ಯ ತುಂಬಿದರು. ಹಾಗೇ, ಕೆಲವು ವೈದ್ಯರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ವಾಟ್ಸ್​ಆ್ಯಪ್​, ಫೋನ್​ ಕಾಲ್ ಮೂಲಕ ರೋಗಿಗಳಿಗೆ ಕೌನ್ಸಿಲಿಂಗ್​ ಮಾಡುತ್ತಿದ್ದಾರೆ. ಅನೇಕ ಆಸ್ಪತ್ರೆಗಳು ತಮ್ಮ ವೆಬ್​​ಸೈಟ್​ನಲ್ಲಿ ಕೂಡ ಕೊರೊನಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ನಿಜಕ್ಕೂ ಇದೆಲ್ಲ ಶ್ಲಾಘನೀಯ ವಿಚಾರಗಳು ಎಂದು ಹೇಳಿದರು.

Spread the love
Leave A Reply

Your email address will not be published.

Flash News