ಕಡಿಮೆ ಸಮಯದಲ್ಲಿ 170 ಬಾರಿ ಸೂರ್ಯ ನಮಸ್ಕಾರ ಮಾಡಿ ಗಿನ್ನಿಸ್ ದಾಖಲೆ ಬರೆದ ಉಡುಪಿ ಮಹಿಳೆ

0

ಉಡುಪಿ: ಯೋಗ ಮಾಡಿದರೆ ರೋಗವಿಲ್ಲ ಎಂಬ ನಾಣ್ಣುಡಿ ಇದೆ. ದೇಶದಲ್ಲಿ ಈಗ ಯೋಗ ಕೇವಲ ಯೋಗವಾಗಿ ಉಳಿದಿಲ್ಲ. ಅಂತರರಾಷ್ಟ್ರೀಯ ಮಟ್ಟದ ಜನರನ್ನು ಭಾರತದತ್ತ ಸೆಳೆಯುವ ಮಾಧ್ಯಮವಾಗಿದೆ. ಯೋಗ ಸರ್ವ ಕಾಯಿಲೆಗೆ ಮದ್ದಿದ್ದಂತೆ. ಯೋಗಾಭ್ಯಾಸದಲ್ಲಿ ನಿರಂತರ ದಾಖಲೆಗಳಾಗುತ್ತಿದ್ದು, ಉಡುಪಿಯ ಗೃಹಿಣಿ ಗಿನ್ನಿಸ್ ದಾಖಲೆ ಮಾಡಿದ್ದಾರೆ.

ಭಾರತದ ಯೋಗ ಈಗ ವಿಶ್ವ ಪ್ರಸಿದ್ಧಿಯಾಗಿದೆ. ವಿದೇಶದ ಮಂದಿ ಯೋಗಾಭ್ಯಾಸಕ್ಕೆ ಮಾರುಹೋಗಿ ಆರೋಗ್ಯ ವೃದ್ಧಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಉಡುಪಿಯ ಮಹಿಳೆಯೊಬ್ಬರು ನಿರಂತರ ಯೋಗಾಭ್ಯಾಸ ಮೂಲಕ ದಾಖಲೆ ಮಾಡಿದ್ದಾರೆ. ಮುಂಜಾನೆ ಸೂರ್ಯೋದಯ ಸೂರ್ಯಾಸ್ತದ ಸಂದರ್ಭ ಸಮುದ್ರ ತೀರದಲ್ಲಿ ನಿರಂತರ ಯೋಗಾಭ್ಯಾಸ ಮಾಡುವ ರೇಣುಕಾ ಎಂಬ ಮಹಿಳೆ ಯೋಗದಲ್ಲೊಂದು ಸಾಧನೆ ಮಾಡಬೇಕು ಎಂಬ ಕನಸಿಟ್ಟುಕೊಂಡಿದ್ದರು. ಆ ಕನಸೀಗ ನನಸಾಗಿದೆ. ನಿರಂತರ ಅಭ್ಯಾಸದ ಪರಿಶ್ರಮ ಫಲ ನೀಡಿದೆ. ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆ ಹಿನ್ನೆಲೆಯಲ್ಲಿ ರೇಣುಕಾ ಗೋಪಾಲಕೃಷ್ಣ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದರು. 170 ಸೂರ್ಯ ನಮಸ್ಕಾರವನ್ನು ಕೇವಲ 17.48 ನಿಮಿಷದಲ್ಲಿ ಮಾಡಿ ಸಾಧಿಸಿದ್ದಾರೆ.ಬಾಲ್ಯದಿಂದ ಯೋಗಾಭ್ಯಾಸದ ಮೇಲೆ ರೇಣುಕಾ ಅವರಿಗೆ ಆಸಕ್ತಿ. ನಿರಂತರ ಕಠಿಣ ಅಭ್ಯಾಸ ಮಾಡಿ ದಾಖಲೆಯನ್ನ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಯೋಗಾಭ್ಯಾಸದ ನಡುವೆ ಎಲ್ಲು ವಿರಮಿಸದೆ, ನಿಧಾನವಾಗಿ ಯೋಗದ ಭಂಗಿಗಳನ್ನು ಪ್ರದರ್ಶಿಸದೆ ಅತಿ ವೇಗವಾಗಿ ಬರೋಬ್ಬರಿ 170 ಬಾರಿ ಸೂರ್ಯ ನಮಸ್ಕಾರ ಮಾಡಿದ್ದಾರೆ. ರೇಣುಕಾ ಅವರಿಗೆ ಪೊಲೀಸ್ ಸಿಬ್ಬಂದಿಯಾಗಿರುವ ಪತಿ ಗೋಪಾಲಕೃಷ್ಣ ಸದಾ ಬೆಂಬಲವಾಗಿ ನಿಂತಿದ್ದಾರೆ.ಇಂಡಿಯಾ ಬುಕ್ ಆಫ್ ರೆಕಾರ್ಡ್ ಜೊತೆಗೆ ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ ಕೂಡಾ ರೇಣುಕಾ ಹೆಸರಲ್ಲಿದೆ. ಇದೀಗ ಸಂಸ್ಥೆ ಪ್ರಾಥಮಿಕ ಪ್ರಮಾಣ ಪತ್ರವನ್ನು ಸ್ಥಳದಲ್ಲೇ ನೀಡಿ ಗೌರವಿಸಿದೆ. ಮುಂದಿನ ತಿಂಗಳು ದಾಖಲೆ ಪತ್ರದ ಜೊತೆಗೆ ಪದಕ ತಲುಪಲಿದೆ. ಸಾಧನೆ ಮಾಡಲು ವಯಸ್ಸು ಅಡ್ಡಿ ಬರುವುದಿಲ್ಲ ಎಂಬುದನ್ನು ಗೃಹಿಣಿ ರೇಣುಕಾ ಗೋಪಾಲಕೃಷ್ಣ ಸಾಬೀತುಪಡಿಸಿದ್ದಾರೆ.

Spread the love
Leave A Reply

Your email address will not be published.

Flash News