MoreScroll

Queen of all Languages ಎಂದು ಗೂಗಲ್​ ಸರ್ಚ್​ ಮಾಡಿದರೆ ಉತ್ತರವೇನು ಗೊತ್ತಾ?

ಗೂಗಲ್​ ಸರ್ಚ್​ ಎಂಜಿನ್​ನಲ್ಲಿ ಅಗ್ಲಿಯೆಸ್ಟ್ ಲಾಂಗ್ವೇಜ್ ಇನ್​ ಇಂಡಿಯಾ (ಭಾರತದಲ್ಲೇ ಅತ್ಯಂತ ಕೊಳಕು ಭಾಷೆ) ಎಂದು ಹುಡುಕಿದರೆ ಕನ್ನಡ ಎಂಬ ಉತ್ತರ ತೋರಿಕೆಯಾಗಿರುವುದು ಕನ್ನಡಿಗರ ಆಕ್ರೋಶಕ್ಕೆ ತುತ್ತಾದ ಬೆನ್ನಲ್ಲೇ ಅದಕ್ಕೆ ಕಾರಣವಾದ ವೆಬ್​ಸೈಟ್​ ಪುಟವನ್ನು ತೆಗೆದು ಹಾಕಲಾಗಿದೆ.

ಈ ವಿಷಯ ದೊಡ್ಡ ಚರ್ಚೆಗೆ ಒಳಗಾದ ನಂತರ ಜನರು ಕ್ವೀನ್​ ಆಫ್ ಆಲ್​ ಲಾಂಗ್ವೇಜಸ್​ (ಭಾಷೆಗಳ ರಾಣಿ) ಎಂದು ಹುಡುಕಲು ಶುರು ಮಾಡಿದ್ದು ಅದಕ್ಕೂ ಕನ್ನಡ ಎಂಬ ಉತ್ತರವೇ ಸಿಗುತ್ತಿದೆ. ಸದ್ಯ ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಜನರು ಕನ್ನಡ ಹಾಗೂ ಕನ್ನಡಿಗರ ವಿರುದ್ಧ ಹುನ್ನಾರ ಮಾಡುವವರು ಎಷ್ಟೇ ಪ್ರಯತ್ನಿಸಿದರೂ ಸತ್ಯ ಸಂಗತಿಯನ್ನು ಮರೆ ಮಾಡುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಭಾಷೆಗಳ ರಾಣಿ (Queen of all Languages) ಎಂದು ಹುಡುಕಿದರೆ ಕನ್ನಡ ಎಂಬ ಉತ್ತರವೇ ಮೇಲ್ಭಾಗದಲ್ಲಿ ಕಾಣಿಸುತ್ತಿದ್ದು, ಕನ್ನಡವನ್ನು Queen of World Scripts ಎಂದು ಕರೆಯಲಾಗುತ್ತದೆ ಎನ್ನುವುದು ಕಾಣಸಿಗುತ್ತದೆ. ವಿನೋಭಾ ಭಾವೆಯವರು ಕನ್ನಡವನ್ನು ವಿಶ್ವ ಲಿಪಿಗಳ ರಾಣಿ ಎಂದು ಕರೆದಿದ್ದಾರೆ ಎಂಬ ಸಂಗತಿಯೂ ಅದರೊಟ್ಟಿಗೆ ಪ್ರದರ್ಶಿತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡವನ್ನು ನಿಂದಿಸಿದವರ ವಿರುದ್ಧ ಆಕ್ರೋಶ ಹೊರಬಂದ ನಂತರ ಈ ಸಂಗತಿಯೂ ಹರಿದಾಡಲಾರಂಭಿಸಿದ್ದು, ಭಾಷಾ ಪ್ರೇಮಿಗಳು ಇದನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.

ಕನ್ನಡವನ್ನು ಅಪಮಾನಿಸುವ debtconsolidationsquad.com ಎಂಬ ಜಾಲತಾಣದ ಲೇಖನವನ್ನು ಗೂಗಲ್​ನಿಂದ ತೆಗೆಯಲಾಗಿದೆ. ಅದನ್ನು ಹಾಕಿದ ವ್ಯಕ್ತಿ ನಿಖಿಲ್​ ಸೊನ್ನದ್ ಎನ್ನಲಾಗುತ್ತಿದ್ದು ಆತನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅನಾವಶ್ಯಕವಾಗಿ ಕನ್ನಡಿಗರನ್ನು, ಕನ್ನಡ ಭಾಷೆಯನ್ನು ಕೀಳೆಂದು ಬಿಂಬಿಸುವ ಯತ್ನದ ವಿರುದ್ಧ ಧ್ವನಿ ಎತ್ತಲಾಗುತ್ತಿದ್ದು, ಗೂಗಲ್​ನಂತಹ ದೊಡ್ಡ ಸಂಸ್ಥೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕನ್ನಡಿಗರು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

 ಇನ್ನು ಕೆಲವರು ಈ ಎರಡೂ ಸಂಗತಿಗಳನ್ನು ಸಮಚಿತ್ತದಿಂದ ಅವಲೋಕಿಸಿದ್ದು, ಭಾಷೆಯಲ್ಲಿ ಮೇಲು ಕೀಳೆಂದು ಹುಡುಕುವುದೇ ಸಮಂಜಸವಲ್ಲ. ಕನ್ನಡವನ್ನು ಅವಮಾನಿಸುವ ಉದ್ದೇಶದಿಂದ ಹಾಗೆ ಹಾಕಿರುವುದು ಖಂಡನೀಯ. ಹಾಗೆಯೇ, ಎಲ್ಲರಿಗೂ ಅವರವರ ಭಾಷೆಯೇ ಮೇಲಾಗಿರುವುದರಿಂದ ಕನ್ನಡವೇ ಭಾಷೆಗಳ ರಾಣಿ ಎಂದು ನಾವು ಸಾಧಿಸುವುದೂ ಬೇಕಿಲ್ಲ. ಕನ್ನಡಿಗರ ಪಾಲಿಗೆ ಕನ್ನಡ ಶ್ರೇಷ್ಠ ಅದು ನಮ್ಮ ಭಾಷಾಭಿಮಾನ. ಆ ಪ್ರೀತಿಯನ್ನು ತೋರಿಸುತ್ತಾ ಎಲ್ಲಾ ಭಾಷೆಗಳನ್ನೂ ಗೌರವಿಸೋಣ. ಬೇರೆಯವರು ಮಾಡಿದ ತಪ್ಪನ್ನು ಕನ್ನಡಿಗರು ಮಾಡುವುದಿಲ್ಲ, ಮಾಡಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News