MoreScrollTop NewsUncategorizedರಾಜ್ಯ-ರಾಜಧಾನಿ

ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ಎತ್ತಂಗಡಿ.. ಮೈಸೂರು ಮಲ್ಲಯುದ್ಧ ಅಂತ್ಯ..

ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಂಡಿದೆ. ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಶಿಲ್ಪಾನಾಗ್ ಅಧಿಕಾರಿಗಳ ಕಿತ್ತಾಟ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಸರ್ಕಾರವೂ ಸಹ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು.

ಈ ನಿಟ್ಟಿನಲ್ಲಿ ಸರ್ಕಾರ 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದು, ಮೈಸೂರು ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ಹಾಗೂ ಶಿಲ್ಪಾ ನಾಗ್ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದ್ದು, ಈ ಮೂಲಕ ಏರ್ಪಟ್ಟಿದ್ದ ಬೀದಿ ಜಗಳಕ್ಕೆ ರಾಜ್ಯ ಸರ್ಕಾರ ಇತಿಶ್ರೀ ಹಾಡಿದೆ.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಸ್ಥಾನಕ್ಕೆ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತರಾಗಿದ್ದ ಡಾ.ಬಗಾದಿ ಗೌತಮ್ ಅವರನ್ನು ನೇಮಿಸಲಾಗಿದೆ. ಈವರೆಗೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರೋಹಿಣಿ ಸಿಂಧೂರಿಯವರನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾಯಿಸಲಾಗಿದೆ. ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಲಾಗಿದ್ದು, ಮೈಸೂರು ಪಾಲಿಕೆ ಆಹಾರ ಮತ್ತು ನಾಗರೀಕ ಪೂರೈಕೆ ನಿಗಮದ ಎಂಡಿಯಾಗಿದ್ದ ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ಆಯುಕ್ತರಾಗಿ ನೇಮಿಸಲಾಗಿದೆ

ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್ ನಡುವೆ ಕೆಲವು ದಿನಗಳಿಂದ ಶೀತಲ ಸಮರ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ವರ್ಗಾಯಿಸಿ ಆದೇಶಿಸಲಾಗಿದೆ. ಜೊತೆಗೆ ಬಿಬಿಎಂಪಿಯ ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸ್ಪೆಷಲ್ ಕಮೀಷನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪಿ. ರಾಜೇಂದ್ರ ಚೋಳನ್ ಅವರಿಗೆ ಹೆಚ್ಚುವರಿಯಾಗಿ ಬೆಸ್ಕಾಂ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಯ ಜವಬ್ದಾರಿಯನ್ನು ಸಹ ವಹಿಸಲಾಗಿದೆ.

ಈ ಹಿಂದೆ ತುರ್ತು ಸುದ್ದಿಗೋಷ್ಠಿ ನಡೆಸಿದ್ದ ಶಿಲ್ಪಾನಾಗ್, ಇಂತಹ  ದುರಂಹಕಾರಿ ಜಿಲ್ಲಾಧಿಕಾರಿ ಯಾರಿಗೂ ಸಿಗುವುದು ಬೇಡ ಎಂದು ಮೈಸೂರು ಮಹಾನಗರಪಾಲಿಕೆ ಆಯುಕ್ತೆ ನೇರವಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಒಬ್ಬ ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿಗೆ ತೊಂದರೆ ಕೊಡುವುದು ಸರಿಯಲ್ಲ. ಜಿಲ್ಲಾಧಿಕಾರಿ ನನ್ನ ಮೇಲಿನ ಕೋಪಕ್ಕೆ ಬೇರೆ ಅಧಿಕಾರಿಗಳಿಗೆ ತೊಂದರೆ ಕೊಡುತ್ತಿದ್ದಾರೆ. ಒಬ್ಬ ಅಧಿಕಾರಿಯ ಅಹಂನಿಂದ ಪರ್ಸನಲ್‌ ಆಗಿ ಟಾರ್ಗೆಟ್ ಮಾಡಲಾಗಿದೆ ಎಂದು ದೂರಿದ್ದರು. ಎಲ್ಲರಿಗೂ ಒಂದು ಸಹನೆ ಇರುತ್ತದೆ. ಪ್ರತಿದಿನ ನಮ್ಮ ಅಧಿಕಾರಿಗಳನ್ನು ಸಭೆಗೆ ಕರೆದು ಅವಮಾನ‌ ಮಾಡಲಾಗುತ್ತಿದೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಆಯುಕ್ತೆ ಶಿಲ್ಪಾ ನಾಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಶಿಲ್ಪಾ ನಾಗ್ ಆರೋಪದ ಬೆನ್ನಲ್ಲೇ ರೋಹಿಣಿ ಸಿಂಧೂರಿ ಕೂಡ ಸುದ್ದಿಗೋಷ್ಠಿ ನಡೆಸಿದ್ದು, ನಾನು ಕಿರುಕುಳ ನೀಡಿದ್ದೇನೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ಸುಳ್ಳು ಹೇಳಿದ್ದಾರೆ. ಅಲ್ಲದೆ ಯಾವ ರೀತಿಯ ಕಿರುಕುಳ ಎಂಬುದನ್ನು ಸಹ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿಲ್ಲ ಎಂದಿದ್ದಾರೆ. ಜಿಲ್ಲಾಧಿಕಾರಿಯಾಗಿ ಕೊರೊನಾ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವ ಕೆಲಸದಲ್ಲಿ ಹಾಗೂ ನಿಯಂತ್ರಿಸುವ ಸಂದರ್ಭದಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ನನ್ನ ಗುರಿ ಹಾಗೂ ಕ್ರಮಗಳು ಕೊರೊನಾ ನಿರ್ವಹಣೆಗಾಗಿ ಮಾತ್ರ ಎಂದು ಸ್ಪಷ್ಟಪಡಿಸಿದ್ದರು. ಒಟ್ಟಾರೆ ಈ ಇಬ್ಬರು ಅಧಿಕಾರಿಗಳ ಕಿತ್ತಾಟಕ್ಕೆ ಸರ್ಕಾರ ಇದೀಗ ಫುಲ್‌ಸ್ಟಾಪ್ ಇಟ್ಟಿದೆ.

Spread the love

Related Articles

Leave a Reply

Your email address will not be published.

Back to top button
Flash News