“ಬೀದಿನಾಯಿಗಳಿಗೆ ಪ್ರಾಮಾಣಿಕವಾಗಿ ಆಹಾರ ಪೂರೈಸಿದ್ದೇವೆ..ಮೂಕ ಪ್ರಾಣಿಗಳ ಆಹಾರ ಕಸಿಯುವಷ್ಟು ವಿಕೃತರು ನಾವಲ್ಲ”..ಆರೋಪಕ್ಕೆ ಬೆಂಗಳೂರಿನ ಪ್ರಾಣಿಪ್ರಿಯರ ಸ್ಪಷ್ಟನೆ.
ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವುದಕ್ಕಾಗಿ ರಾಜ್ಯ ಸರ್ಕಾರ ವಿಧಿಸಿದ್ದ ಲಾಕ್ಡೌನ್ನಿಂದ ಮನುಷ್ಯರಷ್ಟೇ ಅಲ್ಲ, ಮೂಖ ಪ್ರಾಣಿಗಳೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದವು. ಹೋಟೆಲ್, ಬೇಕರಿಗಳಲ್ಲಿ ಜನರು ಹಾಕುವ ಆಹಾರದಿಂದ ಬದುಕುತ್ತಿದ್ದ ಬೀದಿ ನಾಯಿಗಳು ಲಾಕ್ಡೌನ್ನಿಂದಾಗಿ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದವು.
ಈ ವೇಳೆ ಹಸಿವಿನಿಂದ ಬಳಲುತ್ತಿದ್ದ ಬೀದಿ ನಾಯಿಗಳು ಹಾಗೂ ಪ್ರಾಣಿಗಳಿಗೆ, ಪ್ರಾಣಿಪ್ರಿಯರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಹಾರ ನೀಡಿತ್ತು. ಈ ಹಿಂದೆ ಬೀದಿನಾಯಿಗಳಿಗೆ, ಹಾಗೂ ಪ್ರಾಣಿಗಳಿಗೆ ಬಿಬಿಎಂಪಿ ವತಿಯಿಂದ 15 ಲಕ್ಷ ರೂಪಾಯಿ ಖರ್ಚು ಮಾಡಿರುವ ಬಗ್ಗೆ ಅಪಸ್ವರ ಕೇಳಿಬಂದಿತ್ತು.
ಅದು ಎಷ್ಟರ ಮಟ್ಟಿಗೆಂದ್ರೆ ಲಾಕ್ಡೌನ್ ಸಮಯದಲ್ಲಿ ಆಹಾರದ ಮೂಲಗಳಿಲ್ಲದೆ ಬಳಲುತ್ತಿದ್ದ ಬೀದಿನಾಯಿಗಳಿಗೆ ಆಹಾರ ಪೂರೈಸಿರುವುದೇ ಅನುಮಾನ ಎನ್ನುವ ರೀತಿ ಆರೋಪಗಳು ಕೇಳಿ ಬಂದಿದ್ದವು. ಬಿಬಿಎಂಪಿ ಮಾನವನ್ನ ಹರಾಜಾಕಿದ್ದ ಈ ಆರೋಪ, ಬೀದಿನಾಯಿಗಳ ಕ್ಷೇಮಾಭಿವೃದ್ಧಿಗಾಗಿ ದುಡಿಯುತ್ತಿರುವ ಪ್ರಾಣಿಪ್ರಿಯರ ಪ್ರಾಮಾಣಿಕತೆ ಹಾಗೂ ಕಾಳಜಿಯನ್ನು ಪ್ರಶ್ನಿಸಿತ್ತಲ್ಲದೇ, ಈ ಆರೋಪದಿಂದ ಅವರು ವಿಚಲಿತರಾಗಿದ್ದಾರೆ.
ಕೆಲಸ ಮಾಡಿದ್ರೂ ಇಂತಹ ಆಪಾದಿತ ಸ್ಥಾನದಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಕೆಲಸಗಳ ಬಗ್ಗೆ ಸಾರ್ವಜನಿಕವಾಗಿ ತಪ್ಪು ತಿಳುವಳಿಕೆ ಬರಬಾರದೆನ್ನುವ ಕಾರಣಕ್ಕಾಗಿ ಇಂದು ಹತ್ತಾರು ಸಂಘಟನೆಗಳು ಒಂದೆಡೆ ಸೇರಿ ಸ್ಪಷ್ಟನೆ ನೀಡಿವೆ.
ಲಾಕ್ಡೌನ್ ಸಮಯದಲ್ಲಿ ಬೀದಿನಾಯಿಗಳು ಮತ್ತು ಕೆಲವು ಪ್ರಾಣಿಗಳು ಹಸಿವಿನಿಂದ ಒದ್ದಾಡುತ್ತದ್ದವು. ಈ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಬಿಬಿಎಂಪಿ ಪಶುಪಾಲನಾ ವಿಭಾಗ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಆಹಾರ ಪೂರೈಸುವ ಕೆಲಸಕ್ಕೆ ಮುಂದಾಗಿತ್ತು.
ಜೊತೆಗೆ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾಂಸ ನೀಡುವ ಹೊಣೆಯನ್ನು ಬಿಬಿಎಂಪಿ, 8 ವಲಯಗಳಲ್ಲಿ ಕೆಲಸ ಮಾಡುತ್ತಿರುವ ಅನೇಕ ಎನ್ ಜಿಓಗಳಿಗೆ ವಹಿಸಿ ಕೊಟ್ಟಿತ್ತು. ಹಣ ಕೈಗೆ ಬಾರದಿದ್ದರೂ ಪ್ರಾಣಿಪ್ರಿಯರು ಪ್ರತಿದಿನ ತಮ್ಮ ಲಿಮಿಟ್ಸ್ ನಲ್ಲಿ ಮಾಂಸ ಬೆರೆಸಿದ ಅಹಾರ ಪೂರೈಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಮೂಕ ಪ್ರಾಣಿಗಳ ಆಹಾರ ಕಸಿಯುವಷ್ಟು ವಿಕೃತರು ನಾವಲ್ಲ ಎಂದು ಸಾಕ್ಷ್ಯ ಸಮೇತ ಸ್ಪಷ್ಟಪಡಿಸಿದರು.
ಸರ್ವೋದಯ ಸೇವಾಭಾವಿ ,ಕೂಪಾ, ಆಸ್ರಾ ಸೇರಿದಂತೆ 15ಕ್ಕೂ ಹೆಚ್ಚು ಪ್ರಾಣಿಪ್ರಿಯರ ಸಂಘಟನೆಗಳು ಬೆಳಗ್ಗೆ 5 ಯಿಂದ ರಾತ್ರಿ 1ರವರೆಗೂ ನಾಯಿಗಳನ್ನು ಹುಡ್ಕೊಂಡು ಹೋಗಿ ಆಹಾರ ಪೂರೈಸಿವೆ. ಇದಕ್ಕೆ ಪೂರಕವಾದ ಫೋಟೋ ಮತ್ತು ವೀಡಿಯೋಗಳನ್ನು ಸಾಕ್ಷಿಯನ್ನಾಗಿಟ್ಟುಕೊಂಡಿವೆ .ಎಂದು,ಯಾವ ಸಮಯದಲ್ಲಿ,ಯಾವ ಪ್ರದೇಶದಲ್ಲಿ ಎಷ್ಟು ನಾಯಿಗಳಿಗೆ ಆಹಾರ ನೀಡಲಾಗಿದೆ. ಎನ್ನುವ ಅಂಶಗಳಿಂದ ಹಿಡಿದು ಎಷ್ಟೆಷ್ಟು ಪ್ರಮಾಣದಲ್ಲಿ ಅನ್ನ,ಮಾಂಸ ನೀಡಲಾಗಿದೆ ಎನ್ನುವುದರ ಮಾಹಿತಿ ಎಲ್ಲವೂ ತಮ್ಮ ಬಳಿಯಿದೆ ಎಂದು ಪ್ರಾಣಿಪ್ರಿಯರು ಹೇಳುತ್ತಿದ್ದಾರೆ.
ಬೀದಿನಾಯಿಗಳ ಹಸಿವನ್ನು ನೀಗಿಸುವ ಉದ್ದೇಶದಲ್ಲಿ ಮಾಡಲಾದ ಕೆಲಸದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪದ ಬಗ್ಗೆ ಮನ ನೊಂದಿರುವ ಪ್ರಾಣಿಪ್ರಿಯರು ತಪ್ಪು ವದಂತಿ ಹಬ್ಬಿಸಿರುವವರ ವಿರುದ್ದ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ನಿರ್ಧರಿಸಿದ್ದಾರೆ.