1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನದಲ್ಲಿ ಪ್ರತಿದಿನ ವಿಡಿಯೋ ಪಾಠಗಳ ಪ್ರಸಾರ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ..
ಬೆಂಗಳೂರು : 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನದಲ್ಲಿ ಪ್ರತಿದಿನ ವಿಡಿಯೋ ಪಾಠಗಳ ಪ್ರಸಾರ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ಇದೇ ಜುಲೈ1ರಿಂದ ದೂರದರ್ಶನದ ಚಂದನ ವಾಹಿನಿ ಮೂಲಕ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ವಿಡಿಯೋ ಪಾಠಗಳನ್ನು ಪ್ರಸಾರ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕನ್ನಡ, ಇಂಗ್ಲಿಷ್ ಮತ್ತು ಉರ್ದು ಮಾಧ್ಯಮದ ಪಾಠಗಳು ಪ್ರಸಾರವಾಗಲಿವೆ. ಈ ತರಗತಿಗಳು ಬೆಳಗಿನ 8 ಗಂಟೆಯಿಂದ ಸಂಜೆ 4ರವರೆಗೆ ನಡೆಯಲಿದ್ದು, ಮರಾಠಿ ಮಾಧ್ಯಮದ ಪಾಠಗಳನ್ನು ಯೂ-ಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗುವುದು. ಸಂವೇದಾ ದೂರದರ್ಶನ ಪಾಠ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಮೂಡಿ ಬರಲಿದೆ. ತರಗತಿ ವೇಳಾಪಟ್ಟಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ನಾಳೆ ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾಗಲಿದೆ ಎನ್ನಲಾಗುತ್ತಿರುವ ಡಾ.ದೇವಿಶೆಟ್ಟಿ ಅವರ ವರದಿಯು ತಮ್ಮ ಕೈಸೇರಿದ ಬಳಿಕ ಅದನ್ನು ಕೂಲಂಕಶವಾಗಿ ಪರಿಶೀಲಿಸಿ, ಶಾಲಾ ಚಟುವಟಿಕೆಗಳ ಕುರಿತಂತೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದೆಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.