ಬುಡಕಟ್ಟು ಜನಾಂಗದ ಅನಾಥ ಮಕ್ಕಳ ನೈಜ ಜೀವನದ ಕಥೆಯನ್ನಾಧರಿಸಿದ ಹಿಂದಿ ಸಿನಿಮಾ ‘ಜಂಗಲ್ ಕ್ರೈಂ’ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಪ್ರಶಸ್ತಿಯನ್ನು ಪಡೆದ ನಿರ್ದೇಶಕ ಸಾಗರ ಬಳ್ಳಾರಿಯವರು ಮೂಲತಃ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದವರು. ‘ಜಂಗಲ್ ಕ್ರೈಂ’ ಒಡಿಸ್ಸಾದ ಕಳಿಂಗ ಸೋಷಿಯಲ್ ಸೈನ್ಸ್ ಸಂಸ್ಥೆಯ ಬಾಲಕ 2007ರಲ್ಲಿ ಯುಕೆಯಲ್ಲಿ ನಡೆದ ರಗ್ಬಿ ಆಟದಲ್ಲಿ ಚಾಂಪಿಯನ್ ಆದ ಘಟನೆಯನ್ನು ಆಧರಿಸಿದ ಚಿತ್ರ.
ದೇಶದ ರಾಜಧಾನಿ ದೆಹಲಿ ಹಾಗೂ ದೆಹಲಿ ಹೊಂದಿಕೊಂಡಿರುವ ನಗರಗಳಲ್ಲಿ, ದಾದಾಸಾಹೇಬ್ ಫಾಲ್ಕೆ ಅವರ ಜನ್ಮದಿನದಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಚರಿಸಲಾಗುತ್ತದೆ. ಅಂತೆಯೇ ಈ ಬಾರಿಯೂ ಆಚರಿಸಲಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಾಗರ ಬಳ್ಳಾರಿ ಅವರ ನಿರ್ದೇಶನದ ಜಂಗಲ್ಕ್ರೈಂ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರೆತಿರುವುದು ಇಡೀ ಹಾವೇರಿ ಜಿಲ್ಲೆಗೆ ಹೆಮ್ಮೆಯ ವಿಚಾರ.
ಸುಮಾರು ವರ್ಷಗಳಿಂದ ಮುಂಬೈನಲ್ಲೆ ವಾಸ್ತವ್ಯ ಹೂಡಿರೋ ನಿರ್ದೇಶಕ ಸಾಗರ ಬಳ್ಳಾರಿಯವರಿಗೆ ತಮ್ಮ ಊರು ಮೋಟೆಬೆನ್ನೂರೆಂದರೆ ತುಂಬಾ ಪ್ರೀತಿಯಂತೆ. ವರ್ಷದಲ್ಲಿ ಒಮ್ಮೆಯಾದ್ರೂ ತಮ್ಮ ಕುಟುಂಬದವರ ಜೊತೆ ಮೋಟೆಬೆನ್ನೂರಿಗೆ ಭೇಟಿ ನೀಡಿ ಹೋಗುತ್ತಾರಂತೆ. ಮುಂಬೈಯಲ್ಲೇ ತಮ್ಮ ವ್ಯಾಸಾಂಗ ನಡೆಸಿರುವ ಇವರು ಮುಂಬೈನ ಸತ್ಯಜೀತ್ ರೇ ಇನ್ಸ್ಟಿಟ್ಯೂಟ್ನಲ್ಲಿ ಅಧ್ಯಯನ ಮಾಡಿದ್ದಾರೆ. ಸಾಗರ ಬಳ್ಳಾರಿಯವರು ಇದುವರೆಗೂ ಐದು ಸೃಜನಾತ್ಮಕ ಚಿತ್ರಗಳನ್ನು ನಿರ್ದೇಶಿಸಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.